ಇಸ್ರೇಲ್ ನಾಯಕರನ್ನು ಗುಪ್ತವಾಗಿ ಭೇಟಿಯಾದ ಬ್ರಿಟನ್ ಸಚಿವೆ ರಾಜೀನಾಮೆ

Update: 2017-11-09 16:17 GMT

ಲಂಡನ್, ನ. 9: ಕುಟುಂಬ ಸಮೇತ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾಗ, ತನ್ನ ಸರಕಾರದ ಉನ್ನತ ನಾಯಕರಿಗೆ ತಿಳಿಸದೆ ಇಸ್ರೇಲ್ ನಾಯಕರನ್ನು ಭೇಟಿ ಮಾಡಿರುವುದಕ್ಕಾಗಿ ಬ್ರಿಟನ್‌ನ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿ ಪ್ರೀತಿ ಪಟೇಲ್ ಬುಧವಾರ ರಾಜೀನಾಮೆ ನೀಡಿದ್ದಾರೆ.

 45 ವರ್ಷದ ಪ್ರೀತಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಪ್ರಧಾನಿ ತೆರೇಸಾ ಮೇಯನ್ನು ಭೇಟಿಯಾದ ಬಳಿಕ ತನ್ನ ರಾಜೀನಾಮೆ ಸಲ್ಲಿಸಿದರು. ಆಫ್ರಿಕದ ಅಧಿಕೃತ ಪ್ರವಾಸದಿಂದ ಪ್ರೀತಿಯನ್ನು ಅರ್ಧದಲ್ಲೇ ಲಂಡನ್‌ಗೆ ಕರೆಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

ಆಗಸ್ಟ್‌ನಲ್ಲಿ ಇಸ್ರೇಲ್‌ಗೆ ಖಾಸಗಿ ಪ್ರವಾಸ ಕೈಗೊಂಡಿದ್ದ ಪ್ರೀತಿ ಪಟೇಲ್, ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಆ ದೇಶದ ಹಲವಾರು ಹಿರಿಯ ನಾಯಕರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಇದು ಕಳೆದ ವಾರ ಬೆಳಕಿಗೆ ಬಂದ ಬಳಿಕ ಅವರ ರಾಜಕೀಯ ಬದುಕು ಅನಿಶ್ಚಿತತೆಯಲ್ಲಿತ್ತು.

ಈ ಭೇಟಿಗಳ ಬಗ್ಗೆ ವಿದೇಶ ಕಚೇರಿಗೆ ಮುಂಚಿತವಾಗಿ ತಿಳಿಸುವ ಮೂಲಕ ಸಂಪ್ರದಾಯವನ್ನು ಪಾಲಿಸಲಾಗಿರಲಿಲ್ಲ. ಅದೂ ಅಲ್ಲದೆ, ಈ ಭೇಟಿಗಳ ಮೂಲಕ ಸಚಿವರ ನೀತಿ ಸಂಹಿತೆಯನ್ನೂ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News