ಲಂಕಾ ಸೈನಿಕರಿಂದ ಚಿತ್ರಹಿಂಸೆ, ಅತ್ಯಾಚಾರ: ತಮಿಳರ ಆರೋಪ

Update: 2017-11-09 16:49 GMT

ಲಂಡನ್, ನ. 9: ಪೊಲೀಸರು ಅಥವಾ ಸೈನಿಕರು ತಮ್ಮನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂಬುದಾಗಿ ಶ್ರೀಲಂಕಾದ 50ಕ್ಕೂ ಅಧಿಕ ತಮಿಳರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಶ್ರೀಲಂಕಾ ಹೇಳಿದೆ.

ಶ್ರೀಲಂಕಾದಲ್ಲಿ ಆಂತರಿಕ ಯುದ್ಧ ಮುಕ್ತಾಯಗೊಂಡ ಹಲವಾರು ವರ್ಷಗಳ ಬಳಿಕ ಈ ಘಟನೆ ನಡೆದಿದೆ.

ಕಸ್ಟಡಿಯಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸಲಾಗಿದೆ, ಬರೆ ಹಾಕಲಾಗಿದೆ ಹಾಗೂ ಪದೇ ಪದೇ ಹೊಡೆಯಲಾಗಿದೆ ಎಂಬುದಾಗಿ 20 ತಮಿಳರು ನೀಡಿರುವ ಹೇಳಿಕೆಯನ್ನು ಚಿತ್ರಗಳ ಸಮೇತ ಅಸೋಸಿಯೇಟಡ್ ಪ್ರೆಸ್ ಬುಧವಾರ ಪ್ರಕಟಿಸಿದೆ.

 ಈ ತಮಿಳರು ಈಗ ಯುರೋಪ್‌ನಲ್ಲಿ ರಾಜಕೀಯ ಆಶ್ರಯ ಕೋರಿದ್ದಾರೆ. ಅವರ ಸಂಬಂಧಿಗಳು ಈಗಲೂ ಶ್ರೀಲಂಕಾದಲ್ಲಿ ಇದ್ದು, ಅವರ ವಿರುದ್ಧ ಸರಕಾರ ಪ್ರತೀಕಾರ ಕೈಗೊಳ್ಳುವ ಭೀತಿಯಿಂದಾಗಿ ಈ ತಮಿಳರ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ.

ಹಿಂಸೆಯನ್ನು ಸರಕಾರ ‘ಪ್ರಬಲವಾಗಿ ಖಂಡಿಸುತ್ತದೆ’ ಎಂದು ಎಪಿಗೆ ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ಶ್ರೀಲಂಕಾ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.

ಇಂತಹ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ. ದೌರ್ಜನ್ಯ ನಡೆದ ಪುರಾವೆಯಿರುವವರು ಮುಂದೆ ಬಂದು ದೂರು ನೀಡುವಂತೆ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News