ನೋಟು ರದ್ದತಿ ವಿರುದ್ಧ ಹರಿಹಾಯ್ದ ಬಿಜೆಪಿ ಸಂಸದ

Update: 2017-11-10 05:13 GMT

ಹೊಸದಿಲ್ಲಿ, ನ.10: ನೋಟು ಅಮಾನ್ಯೀಕರಣದಿಂದ ಅಸಂಘಟಿತ ವಲಯ ತೀವ್ರ ಸಂಕಷ್ಟಕ್ಕೀಡಾಗಿದ್ದು ನಿರುದ್ಯೋಗ, ಆತ್ಮಹತ್ಯೆಗೆ ಇದು ಕಾರಣವಾಗಿದೆ ಎಂದು ಬಿಜೆಪಿ ಸಂಸದ ಹಾಗೂ ಬೀಡಿ ಉದ್ಯಮಿ ಶ್ಯಾಮ್ ಚರಣ್ ಗುಪ್ತಾ ಗುರುವಾರ ನಡೆದ ಸಂಸದೀಯ ಸಮಿತಿ ಸಭೆಯೊಂದರಲ್ಲಿ ಹೇಳಿ ತಮ್ಮದೇ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನೋಟು ಅಮಾನ್ಯೀಕರಣದ ಬಗ್ಗೆ ಚರ್ಚಿಸಲು ಸಂಸದ ಎಂ.ವೀರಪ್ಪ ಮೊಯ್ಲಿ ನೇತೃತ್ವದ ವಿತ್ತ ಸ್ಥಾಯಿ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಗುಪ್ತಾ ಮೇಲಿನಂತೆ ಹೇಳಿದ್ದಾರೆ.

ಹಲವು ಕೇಂದ್ರ ಸಚಿವರು ದೇಶಾದ್ಯಂತ ಸಂಚರಿಸಿ ಅಮಾನ್ಯೀಕರಣದ ಪ್ರಯೋಜನಗಳನ್ನು ಹಾಗೂ ಈ ಕ್ರಮ ಕಾಳಧನವನ್ನು ಹೇಗೆ ನಿಯಂತ್ರಿಸಿದೆಯೆಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.

ನೋಟು ಅಮಾನ್ಯೀಕರಣದ ನಂತರ ಅಸಂಘಟಿತ ವಲಯದಲ್ಲಿ ಸಂಭವಿಸಿದ ಆತ್ಮಹತ್ಯೆಗಳ ವಿವರಗಳನ್ನು ಸಂಗ್ರಹಿಸಲಾಗಿದೆಯೇ ಎಂದು ಸಭೆಯಲ್ಲಿ ಗುಪ್ತಾ ಅಧಿಕಾರಿಗಳನ್ನು ಪ್ರಶ್ನಸಿದ್ದಾರೆನ್ನಲಾಗಿದೆ. ಅಸಂಘಟಿತ ವಲಯದಲ್ಲಿ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಹಾಗೂ ಜನರು ಹೇಗೆ ಹಸಿವಿನಿಂದ ನರಳುತ್ತಿದ್ದಾರೆಂಬುದರ ಅರಿವಿದೆಯೇ ಎಂದು ಅಧಿಕಾರಿಗಳನ್ನು ಗುಪ್ತಾ ಕೇಳಿದರೆಂದು ಸಮಿತಿಯ ಇನ್ನೊಬ್ಬ ಸದಸ್ಯ ಮಾಹಿತಿ ನೀಡಿದ್ದಾರೆ.

ರೂ.250 ಕೋಟಿ ವ್ಯವಹಾರವಿರುವ ಬೀಡಿ ಉದ್ದಿಮೆಯೊಂದರ ಒಡೆತನ ಹೊಂದಿರುವ ಗುಪ್ತಾ, ತಾವು ಹೊಂದಿದಂತಹ ಉದ್ದಿಮೆಗಳ ಮೇಲೆ ಅಮಾನ್ಯೀಕರಣ ಬೀರಿರುವ ದುಷ್ಪರಿಣಾಮವನ್ನು ವಿವರಿಸಿದ್ದಾರೆ. ಅಮಾನ್ಯೀಕರಣದಿಂದ ಬೀಡಿ ಉದ್ದಿಮೆಯಲ್ಲಿ ಉದ್ಯೋಗ ಕಡಿತವಾಗಿದ್ದರೆ ಇದೀಗ ಈ ಕ್ರಮಕ್ಕೆ ಒಂದು ವರ್ಷವಾಗುತ್ತಿದ್ದಂತೆಯೇ ಶೇ.28 ಜಿಎಸ್ಟಿ ಬೀಡಿಯ ಬೇಡಿಕೆಯನ್ನು ಮತ್ತಷ್ಟು ತಗ್ಗಿಸಿದೆ.

ಸಭೆಯಲ್ಲಿ ತಾವೇನು ಹೇಳಿದ್ದೆಂಬುದರ ಬಗ್ಗೆ ಮಾಹಿತಿ ನೀಡಲು ಗುಪ್ತಾ ನಿರಾಕರಿಸಿದರೂ ತಾವು ಸಭೆಯಲ್ಲಿ ಎತ್ತಿದ ಪ್ರಶ್ನೆಗಳ ಬಗ್ಗೆ ಉಲ್ಲೇಖಿಸಿದಾಗ ಅದನ್ನು ಅಲ್ಲಗಳೆದಿಲ್ಲ. ಸಭೆಯಲ್ಲಿದ್ದ ಇತರ ಬಿಜೆಪಿ ಸದಸ್ಯರು ಸುಮ್ಮನೆ ಕುಳಿತಿದ್ದು ಸರಕಾರವನ್ನು ಸಮರ್ಥಿಸುವ ಗೋಜಿಗೆ ಹೋಗಿಲ್ಲವೆನ್ನಲಾಗಿದೆ.

ಸಭೆಯಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್, ವಿತ್ತ ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್, ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ಸುಶೀಲ್ ಚಂದ್ರ ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News