100ಕ್ಕೂ ಅಧಿಕ ಮಂದಿಯನ್ನು ಅಪಾಯಕಾರಿ ಔಷಧ ನೀಡಿ ಕೊಂದ ನರ್ಸ್!

Update: 2017-11-10 07:16 GMT

ಬರ್ಲಿನ್, ನ.10: ಬೋರ್ ಹೊಡೆಯುತ್ತಿದೆ ಎಂಬ ಕಾರಣಕ್ಕೆ ಅಪಾಯಕಾರಿ ಔಷಧಿಗಳನ್ನು ರೋಗಿಗಳಿಗೆ ನೀಡಿದ ಜರ್ಮನ್ ನರ್ಸ್ ಒಬ್ಬ 106 ಜನರ ಸಾವಿಗೆ ಕಾರಣನಾಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 41 ವರ್ಷದ ನೀಲ್ಸ್ ಹೋಗೆಲ್ ಎಂಬ ಹೆಸರಿನ ಈ ವ್ಯಕ್ತಿಯನ್ನು ಎರಡು ಕೊಲೆ ಹಾಗೂ ನಾಲ್ಕು ಕೊಲೆ ಯತ್ನ ಪ್ರಕರಣಗಳಲ್ಲಿ 2015ರಲ್ಲಿ ದೋಷಿಯೆಂದು ಘೋಷಿಸಲಾಗಿತ್ತು. ಬ್ರೆಮೆನ್ ನಗರದ ಸಮೀಪದ ಡೆಲ್ಮೆನ್‌ಹೋಸ್ಟ್ ಆಸ್ಪತ್ರೆಯ ಐಸಿಯು ರೋಗಿಗಳನ್ನು ಆತ ಬಲಿಪಶುವಾಗಿಸಿದ್ದನೆಂದು ಹೇಳಲಾಗಿತ್ತು.

ಆದರೆ ಇದರ ನಂತರ ತನಿಖಾಧಿಕಾರಿಗಳು ಆಸ್ಪತ್ರೆಯಲ್ಲಿ ಸಾವಿಗೀಡಾದವರ ಶವಗಳನ್ನು ಮೇಲೆತ್ತಿ ತನಿಖೆ ನಡೆಸಿದ ಫಲವಾಗಿ ಆತ 90ಕ್ಕೂ ಅಧಿಕ ಜನರ ಸಾವಿಗೆ ಕಾರಣನಾಗಿದ್ದಾನೆ ಎಂದು ಆಗಸ್ಟ್ ತಿಂಗಳಲ್ಲಿ ಹೇಳಿದ್ದರು. ಆತ ಇನ್ನೂ 16 ಸಾವುಗಳಿಗೆ 1995ರಿಂದ 2005 ತನಕ ಸೇವೆಯಲ್ಲಿದ್ದ ಎರಡು ಆಸ್ಪತ್ರೆಗಳಲ್ಲಿ ಕಾರಣನಾಗಿದ್ದಾನೆ ಎಂಬುದನ್ನು ಗುರುವಾರ ತನಿಖಾಧಿಕಾರಿಗಳು ದೃಢೀಕರಿಸಿದ್ದಾರೆ. ಪೊಲೀಸರು ಇನ್ನೂ ಐದು ಸಾವು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಈ ಆಸ್ಪತ್ರೆಗಳಲ್ಲಿ ಸಾವಿಗೀಡಾದ ಮೂವರು ಮಾಜಿ ರೋಗಿಗಳ ಶವಗಳನ್ನು ಮೇಲೆತ್ತಿ ತನಿಖೆ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ.

ಹೃದಯ ವೈಫಲ್ಯ ಅಥವಾ ರಕ್ತ ಪರಿಚಲನೆಯ ಕುಸಿತ ಉಂಟು ಮಾಡಬಹುದಾದ ಔಷಧಿಗಳ ಚುಚ್ಚುಮದ್ದುಗಳನ್ನು ಆತ ರೋಗಿಗಳಿಗೆ ನೀಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ತನಗೆ ಬೋರ್ ಆಗುತ್ತಿರುವುದರಿಂದ ಹೀಗೆ ಮಾಡುತ್ತಿದ್ದೆ. ರೋಗಿ ತೊಂದರೆಗೀಡಾದಾಗ ಚಿಕಿತ್ಸೆ ನೀಡಿ ಮತ್ತೆ ಚೇತರಿಸಿಕೊಂಡಾಗ ಇತರರಿಂದ ಹೊಗಳಿಕೆ ಗಿಟ್ಟಿಸುವುದರಲ್ಲಿ ಸಂತಸವಿತ್ತು ಆದರೆ ವಿಫಲನಾದಾಗ ಆಘಾತಗೊಳ್ಳುತ್ತಿದ್ದೆ ಎಂದೂ ಆತ ತನಿಖಾಧಿಕಾಧಿಕಾರಿಗಳಿಗೆ ಹೇಳಿದ್ದಾನೆ. ಹೆಚ್ಚಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳ ಮೇಲೆ ಆತ ಇಂತಹ ಹಾನಿಕಾರಕ ಔಷಧಗಳನ್ನು ಪ್ರಯೋಗಿಸುತ್ತಿದ್ದ.

ಆತ ರೋಗಿಯೊಬ್ಬನಿಗೆ ಇಂಜೆಕ್ಷನ್ ನೀಡುತ್ತಿದ್ದಾಗ ದಾದಿಯೊಬ್ಬಳು ನೋಡಿದ ನಂತರ ಆತನನ್ನು ಬಂಧಿಸಲಾಗಿತ್ತು. ಜೂನ್ 2008ರಲ್ಲಿ ಆತನಿಗೆ ನ್ಯಾಯಾಲಯ ಏಳೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 2015ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News