ಅಮೆರಿಕ: ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಭಾರತೀಯ ವಿದ್ಯಾರ್ಥಿನಿಯ ಬಂಧನ

Update: 2024-04-26 06:29 GMT

ಅಚಿಂತ್ಯಾ ಶಿವಲಿಂಗಮ್ (Photo credit: indiatoday.in)

ವಾಷಿಂಗ್ಟನ್: ಕ್ಯಾಂಪಸ್ ಆವರಣದಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಅಚಿಂತ್ಯಾ ಶಿವಲಿಂಗಮ್ ಎಂಬವರನ್ನು ಅಮೆರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯ ಉಚ್ಚಾಟಿಸಿದ್ದು, ಶಿಸ್ತುಕ್ರಮ ಪ್ರಕ್ರಿಯೆ ಕಾಯ್ದಿರಿಸಿದೆ. ಗಾಝಾದಲ್ಲಿ ಇಸ್ರೇಲ್- ಹಮಾಸ್ ನಡುವಿನ ಯುದ್ಧದ ವಿರುದ್ಧ ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಸಂಭವಿಸಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದ ಶಿವಲಿಂಗಮ್ ಓಹಿಯೊದ ಕೊಲಂಬಸ್‍ನಲ್ಲಿ ಬೆಳೆದರು. ಅವರನ್ನು ಇತರ ಸಹಪಾಠಿಗಳ ಜತೆ ಗುರುವಾರ ಬಂಧಿಸಲಾಗಿದೆ ಎಂದು ಪ್ರಿನ್ಸ್ ಟನ್ ಅಲ್ಯುಮ್ನಿ ವೀಕ್ಲಿ ವರದಿ ಮಾಡಿದೆ. ಪ್ರತಿಭಟನೆ ಆಯೋಜಿಸಿದವರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು, ಈ ದಾಖಲೆಯನ್ನು ಉಲ್ಲೇಖಿಸಿ, ಬಂಧನಕ್ಕೊಳಗಾದವರು ಭಾರತೀಯ ವಿದ್ಯಾರ್ಥಿನಿ ಎಂದು ದೃಢಪಡಿಸಿದೆ.

ಗುರುವಾರ ಬೆಳಿಗ್ಗೆ ಪ್ರಿನ್ಸ್ ಟನ್ ವಿವಿಯ ಮೆಕ್‍ಗೋಶ್ ಕಂಟ್ರಿಯಾರ್ಡ್‍ನಲ್ಲಿ ಅಧಿಕಾರಿಗಳ ಎಚ್ಚರಿಕೆಯನ್ನು ದಿಕ್ಕರಿಸಿ ಪ್ರತಿಭಟನಾ ಡೇರೆಯನ್ನು ಹಾಕಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಆ ಬಳಿಕ ಪ್ರತಿಭಟನಾಕಾರರು ತಮ್ಮ ಡೇರೆಗಳನ್ನು ತೆರವುಗೊಳಿಸಿದರೂ, ಧರಣಿ ಮುಂದುವರಿಸಿದರು ಎನ್ನಲಾಗಿದೆ.

ಆರಂಭದಲ್ಲಿ ಧರಣಿಗೆ 110 ವಿದ್ಯಾರ್ಥಿಗಳು ಇದ್ದರು. ಬಳಿಕ ಮಧ್ಯಾಹ್ನದ ವೇಳೆಗೆ 300 ಮಂದಿಗೆ ಈ ಸಂಖ್ಯೆ ಹೆಚ್ಚಿತು. ಭಾರತೀಯ ವಿದ್ಯಾರ್ಥಿಯ ಬಂಧನವನ್ನು ದೃಢಪಡಿಸಿರುವ ವಿವಿ ವಕ್ತಾರರಾದ ಜೆನ್ನಿಫರ್ ಮೊರಿಲ್, ಪ್ರತಿಭಟನೆ ನಿಲ್ಲಿಸಿ ಜಾಗ ತೆರವುಗೊಳಿಸುವಂತೆ ಸಾರ್ವಜನಿಕ ಸುರಕ್ಷಾ ವಿಭಾಗ ಪದೇ ಪದೇ ಎಚ್ಚರಿಕೆ ನೀಡಿದ ಬಳಿಕವೂ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News