ನಮ್ಮ ಬ್ಲಡ್ ಗ್ರೂಪ್ ನಮ್ಮ ಆರೋಗ್ಯಕ್ಕೆ ಸಂಭಾವ್ಯ ಅಪಾಯವನ್ನು ಸೂಚಿಸುತ್ತದೆ ಗೊತ್ತೇ?

Update: 2017-11-10 10:22 GMT

ನಮ್ಮ ರಕ್ತದ ಮಾದರಿಯು ನಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ, ಜೊತೆಗೆ ಯಾವ ರಕ್ತದ ಗುಂಪು ನಮಗೆ ಅಪಾಯಕಾರಿಯಾಗಿದೆ ಎನ್ನುವುದನ್ನೂ ಹೇಳುತ್ತದೆ. ನಮಗೆ ಯಾವ ಕಾಯಿಲೆಗಳ ಸಂಭಾವ್ಯ ಅಪಾಯವಿದೆ ಎನ್ನುವುದನ್ನೂ ರಕ್ತದ ಮಾದರಿಯು ಸೂಚಿಸುತ್ತದೆ. ಹೀಗಾಗಿ ನಮ್ಮ ರಕ್ತ ಯಾವ ಗುಂಪಿಗೆ ಸೇರಿದ್ದಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾಗಿದೆ.

ದುರಂತವೆಂದರೆ ಹೆಚ್ಚಿನ ಜನರಿಗೆ ತಮ್ಮ ರಕ್ತದ ಗುಂಪು ಯಾವುದು ಎನ್ನುವುದು ಗೊತ್ತಿರುವುದಿಲ್ಲ, ಅದನ್ನು ತಿಳಿದುಕೊಳ್ಳುವ ಗೋಜಿಗೂ ಅವರು ಹೋಗುವುದಿಲ್ಲ. ತುರ್ತು ಸಂದರ್ಭದಲ್ಲಿ ಶರೀರಕ್ಕೆ ರಕ್ತ ಪೂರೈಸುವಾಗ ವ್ಯಕ್ತಿಯ ರಕ್ತಕ್ಕೆ ಹೊಂದಿಕೊಳ್ಳುವ ರಕ್ತವೇ ಅಗತ್ಯವಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪು ಯಾವುದೆನ್ನುವುದು ಗೊತ್ತಿರಬೇಕು ಎನ್ನುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಸಕಾಲದಲ್ಲಿ ಸರಿಯಾದ ಗುಂಪಿನ ರಕ್ತವನ್ನು ಪಡೆಯುವುದು ಅತ್ಯಂತ ಮುಖ್ಯವಾಗಿದೆ. ಜೊತೆಗೆ ನಮ್ಮ ರಕ್ತಗುಂಪಿನಿಂದಾಗಿ ನಮಗೆ ಯಾವ ಕಾಯಿಲೆಗಳ ಅಪಾಯ ಹೆಚ್ಚಿದೆ ಎನ್ನುವುದನ್ನೂ ತಿಳಿದುಕೊಂಡಿರುವುದು ಒಳ್ಳೆಯದು.

ರಕ್ತವು ‘ಒ’ ಗುಂಪಿಗೆ ಸೇರಿದ್ದಾಗಿದ್ದರೆ ಅಂತಹ ವ್ಯಕ್ತಿಗಳಲ್ಲಿ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯ ಕಡಿಮೆಯಾಗಿದ್ದರೆ, ‘ಎಬಿ’ ರಕ್ತಗುಂಪಿನವರಲ್ಲಿ ಈ ಅಪಾಯ ಶೇ.20ರಷ್ಟು ಅಧಿಕವಾಗಿರುತ್ತದೆ. ಎ,ಬಿ ಮತ್ತು ಎಬಿ ರಕ್ತಗುಂಪು ಹೊಂದಿರುವವರಲ್ಲಿ ಜೀವಮಾನ ಪರ್ಯಂತ ರಕ್ತಸ್ರಾವ ಸಮಸ್ಯೆಗೆ ಒಳಗಾಗುವ ಅಪಾಯ ಶೇ.30ರಷ್ಟು ಅಧಿಕವಾಗಿರುತ್ತದೆ.

‘ಒ’ ಪಾಸಿಟಿವ್ ಅಥವಾ ನೆಗೆಟಿವ್ ರಕ್ತಗುಂಪು ಹೊಂದಿರುವವರಿಗೆ ಹಲವಾರು ಕಾಯಿಲೆಗಳ ಸಂಭಾವ್ಯ ಅಪಾಯ ಕಡಿಮೆಯಾಗಿರುತ್ತದೆ. ಈ ರಕ್ತಗುಂಪಿನವರಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯವೂ ಕಡಿಮೆ. ‘ಎ’ ಅಥವಾ ‘ಎಬಿ’ ರಕ್ತಗುಂಪನ್ನು ಹೊಂದಿರುವುದರ ಲಾಭವೆಂದರೆ ಇಂತಹ ವ್ಯಕ್ತಿಗಳಲ್ಲಿ ‘ಒ’ ಗುಂಪಿಗೆ ಹೋಲಿಸಿದರೆ ಪೆಪ್ಟಿಕ್ ಅಲ್ಸರ್ ಅಥವಾ ಜಠರದ ಹುಣ್ಣು ಆಗುವ ಸಾಧ್ಯತೆಯು ಕಡಿಮೆಯಾಗಿರುತ್ತದೆ. ಈ ರೋಗದ ಸಾಧ್ಯತೆ ‘ಒ’ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ. ‘ಒ’ ಗುಂಪಿನ ರಕ್ತ ಹೊಂದಿದವರು ಇತರರಿಗೆ ಹೋಲಿಸಿದರೆ ಹೃದ್ರೋಗಗಳಿಗೆ ಗುರಿಯಾಗುವ ಸಾಧ್ಯತೆಯು ಶೇ.23ರಷ್ಟು ಕಡಿಮೆಯಾಗಿರುತ್ತದೆ. ‘ಎಬಿ’ ಮತ್ತು ‘ಬಿ’ ರಕ್ತಗುಂಪು ಹೊಂದಿರುವವರು ಅತ್ಯಂತ ಹೆಚ್ಚಿನ ಆರೋಗ್ಯ ಅಪಾಯವನ್ನು ಎದುರಿಸುತ್ತಿರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

‘ಒ’ ರಕ್ತಗುಂಪು ಹೊಂದಿದವರಿಗೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಆಗುವ ಸಾಧ್ಯತೆಯು ಕಡಿಮೆ. ‘ಎ’ ರಕ್ತಗುಂಪಿಗೆ ಸೇರಿದವರಿಗೆ ಈ ಅಪಾಯ ಶೇ.32ರಷ್ಟು ಮತ್ತು ‘ಎಬಿ’ ರಕ್ತಗುಂಪಿಗೆ ಸೇರಿದವರಲ್ಲಿ ಈ ಅಪಾಯ ಶೇ.51ರಷ್ಟು ಹೆಚ್ಚಾಗಿರುತ್ತದೆ. ‘ಬಿ’ ರಕ್ತಗುಂಪಿನವರಲ್ಲಿ ಈ ಅಪಾಯ ಶೇ.72ರಷ್ಟು ಅಧಿಕವಾಗಿರುತ್ತದೆ.

ಹೃದ್ರೋಗಗಳ ಅಪಾಯ ‘ಎಬಿ’ ರಕ್ತಗುಂಪಿನವರಲ್ಲಿ ಶೇ.23ರಷ್ಟು ಮತ್ತು ‘ಬಿ’ ರಕ್ತಗುಂಪಿನವರಲ್ಲಿ ಶೇ.11ರಷ್ಟು ಹೆಚ್ಚಾಗಿರುತ್ತದೆ. ‘ಒ’ ರಕ್ತಗುಂಪು ಹೊಂದಿದವರಿಗೆ ಹೋಲಿಸಿದರೆ ಎ,ಬಿ ಮತ್ತು ಎಬಿ ರಕ್ತಗುಂಪಿನವರು ಹೊಟ್ಟೆಯ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ತಜ್ಞರು.

‘ಒ’ ರಕ್ತಗುಂಪು ಹೊಂದಿದವರಿಗೆ ಹೋಲಿಸಿದರೆ ‘ಎ’ ಮತ್ತು ‘ಬಿ’ ರಕ್ತಗುಂಪಿನವರಲ್ಲಿ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಯು ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News