ಹೃದಯಾಘಾತದ ಎಚ್ಚರಿಕೆಯನ್ನು ಕಣ್ಣುಗುಡ್ಡೆಗಳು ನೀಡುತ್ತವೆ ಗೊತ್ತೇ?

Update: 2017-11-11 09:36 GMT

 ಶೀರ್ಷಿಕೆಯನ್ನೋದಿ ನಿಮಗೆ ಅಚ್ಚರಿಯಾಗಬಹುದು. ನಮ್ಮ ಕಣ್ಣುಗುಡ್ಡೆಗಳು ಹೃದಯಾಘಾತದ ಎಚ್ಚರಿಕೆಯನ್ನು ನೀಡುತ್ತವೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಸಾಮಾನ್ಯವಾಗಿ ಕಣ್ಣುಗುಡ್ಡೆಗಳ ಮೇಲೆ ಅಥವಾ ಅವುಗಳ ಸುತ್ತಮುತ್ತ ಚರ್ಮದ ಕೆಳಗೆ ಕಾಣಿಸಿಕೊಳ್ಳುವ ಹಳದಿ ಬಣ್ಣದ, ಕೊಬ್ಬಿನಿಂದ ರೂಪುಗೊಂಡ ಸಣ್ಣ ಗಡ್ಡೆಯಂತಹ ರಚನೆಯನ್ನು ಜೆಂಥೆಲಾಸ್ಮಾ ಎನ್ನುತ್ತಾರೆ. ಕನ್ನಡದಲ್ಲಿ ಇದನ್ನು ಪೀತ ಅರ್ಬುದ ಎನ್ನಬಹುದು. ಈ ಜೆಂಥೆಲಾಸ್ಮಾಕ್ಕೂ ಹೃದ್ರೋಗಕ್ಕೂ ನಂಟು ಇದೆ ಎನ್ನುವುದನ್ನು ಅಧ್ಯಯನವು ಬೆಟ್ಟುಮಾಡಿದೆ. ಈ ಹಳದಿ ಗಂಟುಗಳು ಕಣ್ಣುಗುಡ್ಡೆಗಳ ಮೇಲ್ಭಾಗ ಅಥವಾ ಕೆಳಭಾಗದಲ್ಲಿ, ಕಣ್ಣಿನ ಒಳಮೂಲೆಗಳ ಬಳಿ ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಕಣ್ಣುಗುಡ್ಡೆಗಳ ಮೇಲ್ಭಾಗದಲ್ಲಿ ಏಳುತ್ತವೆ.

 40 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರಲ್ಲಿ ಈ ಪೀತ ಅರ್ಬುದಗಳು ಕಾಣಿಸಿಕೊಳ್ಳುತ್ತವೆ. ಕೊಲೆಸ್ಟ್ರಾಲ್ ಶೇಖರಣೆಯ ಪರಿಣಾಮವಾಗಿ ಈ ಗಡ್ಡೆಗಳು ಏಳುತ್ತವೆ. ಹೀಗಾಗಿ ಇವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸುತ್ತವೆ.

ಪೀತ ಅರ್ಬುದ ಗಂಟುಗಳು ಮೃದುವಾಗಿದ್ದು, ಒತ್ತಿದರೆ ನೋಯುವುದಿಲ್ಲ ಮತ್ತು ಕಣ್ಣಿನ ದೃಷ್ಟಿಗೂ ಅಡ್ಡಿಯನ್ನುಂಟು ಮಾಡುವುದಿಲ್ಲ. ಈ ಗಂಟುಗಳು ಅನಾಕರ್ಷಕವಾ ಗಿರುವುದರಿಂದ ಜನರು ಅವನ್ನು ತೆಗೆಸಲು ವೈದ್ಯರ ಬಳಿಗೆ ಹೋಗುತ್ತಾರೆ. ಸೌಂದರ್ಯದ ವಿಷಯ ಬಿಡಿ, ಈ ಗಂಟುಗಳು ಗಂಭೀರ ಅಪಾಯವನ್ನು ಸೂಚಿಸುವುದಂತೂ ಹೌದು.

ಪೀತ ಅರ್ಬುದಕ್ಕೂ ಹೃದ್ರೋಗಕ್ಕೂ ನಂಟು ಇದೆ ಎನ್ನುವುದನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ಈ ಗಡ್ಡೆಗಳು ಕಾಣಿಸಿಕೊಂಡಿರುವ ಪುರುಷರಲ್ಲಿ ಹೃದಯಾಘಾತದ ಅಪಾಯ ಇತರರಿಗಿಂತ ಶೇ.12ರಷ್ಟು ಮತ್ತು ಮಹಿಳೆಯರಲ್ಲಿ ಶೇ.8ರಷ್ಟು ಅಧಿಕವಾಗಿರುತ್ತದೆ. 70 ವರ್ಷ ದಾಟಿದವರಲ್ಲಿ ಈ ಅಪಾಯ ಇನ್ನೂ ಅಧಿಕವಾಗುತ್ತದೆ.

ಪೀತ ಅರ್ಬುದವು ಹೃದಯಾಘಾತ, ಗಂಭೀರ ಅಪಧಮನಿ ಕಾಠಿಣ್ಯ, ಹೃದ್ರೋಗ ಮತ್ತು ಸಾವನ್ನೂ ಸೂಚಿಸಬಹುದು ಎನ್ನುತ್ತಾರೆ ಸಂಶೋಧಕರು. ಅಧಿಕ ಕೊಲೆಸ್ಟ್ರಾಲ್, ಧೂಮ್ರಪಾನ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡಂತಹ ಇತರ ಅಂಶಗಳು ಇದರಲ್ಲಿ ಸೇರಿಲ್ಲ.

ತಮ್ಮ ಕಣ್ಣುಗುಡ್ಡೆಗಳ ಮೇಲೆ ಇಂತಹ ಗಡ್ಡೆಗಳಿರುವ ಪುರುಷರು ಮತ್ತು ಮಹಿಳೆಯರು ಹೃದಯಾಘಾತಕ್ಕೊಳಗಾಗಬಹುದು. ಮಹಿಳೆಯರಿಗಿಂತ ಪುರುಷರು ಹೃದ್ರೋಗಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದೂ ರುಜುವಾತಾಗಿದೆ. ಕಣ್ಣುಗುಡ್ಡೆಗಳ ಮೇಲೆ ಇಂತಹ ಹಳದಿ ಗಡ್ಡೆಗಳು ಕಾಣಿಸಿಕೊಂಡರೆ ಕೊಲೆಸ್ಟ್ರಾಲ್ ಮಟ್ಟಗಳನ್ನು ತಪಾಸಣೆ ಮಾಡಿಸಿಕೊಳ್ಳುವುದು ತುಂಬ ಮುಖ್ಯವಾಗಿದೆ.

ಜೆಂಥೆಲಾಸ್ಮಾ ಅಥವಾ ಪೀತ ಅರ್ಬುದವಿರುವವರಲ್ಲಿ ಅರ್ಧದಷ್ಟು ಜನರು ಅಧಿಕ ಕೊಲೆಸ್ಟ್ರಾಲ್ ಹೊಂದಿರುತ್ತಾರೆ. ಅಧಿಕ ಎಲ್‌ಡಿಎಲ್ ಅಥವಾ ಕಡಿಮೆ ಎಚ್‌ಡಿಎಲ್ ಕೊಲೆಸ್ಟ್ರಾಲ್, ಆನುವಂಶಿಕವಾಗಿರುವ ಅಧಿಕ ಕೊಲೆಸ್ಟ್ರಾಲ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಪ್ರೈಮರಿ ಬಿಲಿಯರಿ ಸಿರೋಸಿಸ್ ಎಂಬ ಕಾಯಿಲೆ ಪೀತ ಅರ್ಬುದ ಸೃಷ್ಟಿಯಾಗಲು ಕೆಲವು ಕಾರಣಗಳಾಗಿವೆ.

ಕಣ್ಣುಗುಡ್ಡೆಗಳ ಸುತ್ತಲಿನ ಈ ಹಳದಿ ಗುಡ್ಡೆಗಳನ್ನು ತಗ್ಗಿಸಲು ಬಯಸಿದ್ದರೆ ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಧೂಮ್ರಪಾನ ವರ್ಜನೆ, ಹಿತಮಿತವಾದ ದೇಹತೂಕ, ನಾರಿನಂಶ ಸಮೃದ್ಧವಾಗಿರುವ ಆಹಾರ ಸೇವನೆಯ ಮೂಲಕ ಇದನ್ನು ಸಾಧಿಸಬಹುದು. ಜೊತೆಗೆ ಕೆಂಪು ಮಾಂಸ ಮತ್ತು ಡೇರಿ ಉತ್ಪನ್ನಗಳ ಸೇವನೆ ಹಾಗೂ ಮದ್ಯಪಾನವನ್ನು ಕಡಿಮೆ ಮಾಡಿ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News