ಆರನೇ ದಿನಕ್ಕೆ ವೈದ್ಯರ ಮುಷ್ಕರ: ರಾಜಸ್ಥಾನದಲ್ಲಿ 11 ವೈದ್ಯರ ಬಂಧನ

Update: 2017-11-11 13:35 GMT

ಜೈಪುರ, ನ.11: ವೇತನ ಹೆಚ್ಚಳ, ಭಡ್ತಿ ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟು ರಾಜಸ್ಥಾನದಲ್ಲಿ ವೈದ್ಯರು ನಡೆಸುತ್ತಿರುವ ಮುಷ್ಕರವು ಆರನೇ ದಿನವೂ ಮುಂದುವರಿದಿದ್ದು ಏಳು ಜಿಲ್ಲೆಗಳಲ್ಲಿ ಹನ್ನೊಂದು ವೈದ್ಯರನ್ನು ರಾಜಸ್ಥಾನ್ ಅಗತ್ಯ ಸೇವೆ ನಿರ್ವಹಣಾ ಕಾಯಿದೆ (ರೆಸ್ಮ) ಯಡಿ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಟೊಂಕ್, ಜೈಪುರ್, ಸ್ವಾಯಿ ಮಾಧೋಪುರ್, ಭರತ್‌ಪುರ್, ಜಲವರ್ ಮತ್ತು ಬನ್ಸ್ವಾರ ಜಿಲ್ಲೆಗಳಲ್ಲಿ ಪ್ರತಿಭಟನಾ ನಿರತರಾಗಿದ್ದ ವೈದ್ಯರನ್ನು ಬಂಧಿಸಿರುವುದಾಗಿ ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎನ್‌ಆರ್‌ಕೆ ರೆಡ್ಡಿ ತಿಳಿಸಿದ್ದಾರೆ.

ಪ್ರತಿಭಟನಾನಿರತ ವೈದ್ಯರು ಸೇವೆಗೆ ಮರಳಲು ಸರಕಾರವು ನಿಗದಿಪಡಿಸಿದ್ದ ಗಡುವು ಮುಗಿದರೂ ಮುಷ್ಕರದಲ್ಲಿ ತೊಡಗಿದ್ದ ವೈದ್ಯರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 43 ವೈದ್ಯರು ಬಂಧನ ಭೀತಿಯಿಂದ ಸೇವೆಗೆ ವಾಪಸಾಗಿರುವುದಾಗಿ ರೆಡ್ಡಿ ತಿಳಿಸಿದ್ದಾರೆ.

 ತಾವು ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಅದನ್ನು ನಿಲ್ಲಿಸಿ ಶುಕ್ರವಾರದ ಒಳಗಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಮುಷ್ಕರನಿರತ ವೈದ್ಯರನ್ನುದ್ದೇಶಿಸಿ ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೊರಡಿಸಿದ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.

ಅಖಿಲ ರಾಜಸ್ಥಾನ ಸೇವಾನಿರತ ವೈದ್ಯರ ಸಂಘದ ಅಧ್ಯಕ್ಷ ಡಾ. ಅಜಯ್ ಚೌದರಿ ಮತ್ತು ಜೈಪುರ ಸ್ಥಳೀಯ ವೈದ್ಯರ ಸಂಘದ ಅಧ್ಯಕ್ಷ ಡಾ. ರವಿ ಝಾಕರ್ ಸದ್ಯ ನಡೆದಿರುವ ಬಂಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯ ಆರೋಗ್ಯ ಸಚಿವ ಕಾಲಿಚರಣ್ ಸರಫ್ ಈ ಪ್ರತಿಭಟನೆಗೆ ಡಾ. ಚೌದರಿಯೇ ಕಾರಣ ಎಂದು ಆರೋಪಿಸಿದ್ದಾರೆ. ಡಾ. ಚೌದರಿಗೆ ಯಾವುದೋ ವೈಯಕ್ತಿಕ ಆಸಕ್ತಿ ಇದ್ದಂತೆ ಕಾಣುತ್ತದೆ. ಅವರು ಮಾತುಕತೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಸರಫ್ ಅನುಮಾನ ವ್ಯಕ್ತಪಡಿಸಿದ್ದಾರೆ.

33 ಅಂಶಗಳ ಬೇಡಿಕೆಯನ್ನು ಮುಂದಿಟ್ಟು ಕಳೆದ ಸೋಮವಾರದಿಂದ ವೈದ್ಯರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಅವರ ಜೊತೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಆದರೆ ಅವರು ತಮ್ಮ ಪಟ್ಟು ಬಿಡದ ಕಾರಣ ಮಾತುಕತೆ ವಿಫಲವಾಗಿದೆ ಎಂದು ಸರಫ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News