ಕಾಲೇಜ್ ಕುಮಾರ್: ಅಪ್ಪ ಮಗನ ಕತೆಯ ಅಪರೂಪದ ಚಿತ್ರ

Update: 2017-11-12 11:29 GMT

ಮಗ ದೊಡ್ಡ ಕೆಲಸ ಗಳಿಸಲೆಂದು ಕಷ್ಟಪಟ್ಟು ಕಾಲೇಜ್ ಗೆ ಕಳಿಸುವ ತಂದೆ, ಆದರೆ ಕ್ಲಾಸ್ ತಪ್ಪಿಸಿ ಪಾರ್ಕು, ಪ್ರೇಮ, ಸಿಗರೇಟು ಎಂದು ಹಾಳಾಗುವ ಮಗನ ಕತೆಯಿರುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಎಲ್ಲ ಚಿತ್ರಗಳ ಅಂತ್ಯದಲ್ಲಿಯೂ ಮಕ್ಕಳಿಗೆ ತಂದೆಯ ತ್ಯಾಗದ ಬದುಕು ಅರ್ಥವಾಗುತ್ತದೆ. ಆದರೆ ಪ್ರ್ಯಾಕ್ಟಿಕಲ್ಲಾಗಿ ತಂದೆಯ ಬದುಕನ್ನು ಬಾಳಲು ಮುಂದಾಗುವ ಮಗ ಮತ್ತು ಮಗನ ಬದುಕನ್ನು ಛಾಲೆಂಜಾಗಿ ಸ್ವೀಕರಿಸುವ ತಂದೆಯ ಕತೆಯನ್ನು ಹೇಳುವ ಚಿತ್ರ ಕಾಲೇಜ್ ಕುಮಾರ್.

 ಚಿತ್ರದಲ್ಲಿ ಕುಮಾರ್ ಕಾಲೇಜು ವಿದ್ಯಾರ್ಥಿ. ಆತ ಕಾಲೇಜ್‌ಗೆಂದು ಹೊರಟು ಸ್ನೇಹಿತರೊಂದಿಗೆ ಗೋಲ್ ಮಾಲ್ ನಡೆಸಿ ಹಣ ಮಾಡುತ್ತಿರುತ್ತಾನೆ. ಆತನ ಜ್ಯೂನಿಯರ್ ಆಗಿ ಕಲಿಯುತ್ತಿರುತ್ತಾಳೆ ಕೀರ್ತಿ ಎಂಬ ಹುಡುಗಿ. ಸಿನೆಮಾದ ಖಳನಟರಿಗೆ ಅಭಿಮಾನಿಯಾಗಿರುವ ಕೀರ್ತಿಗೆ ಕುಮಾರ ಇಷ್ಟವಾಗುತ್ತಾನೆ. ಕುಮಾರ್ ರಾತ್ರಿ ಆಕೆಯ ಮನೆಯ ಹೊರಗೆ ಬೈಕಲ್ಲಿ ಬಂದು ಕಿರಿಕ್ ಮಾಡುತ್ತಾನೆ. ಅಲ್ಲಿಗೆ ಚಿತ್ರ ‘ಕಿರಿಕ್ ಪಾರ್ಟಿ’ಯ ಹಾಗಿದೆ ಎಂದು ತೀರ್ಮಾನಿಸಬೇಡಿ. ಕತೆಯ ತಿರುವು ಶುರುವಾಗುವುದು ಅಲ್ಲಿಂದಲೇ. ಕೀರ್ತಿ ಆತನಲ್ಲಿ ಮುನಿಸುತ್ತಾಳೆ. ಮಗ ಕಾಲೇಜ್‌ನಿಂದ ಡಿಬಾರ್ ಆದಾಗ ತಂದೆ ತಾಯಿಯೂ ಬೇಸರಿಸುತ್ತಾರೆ. ‘‘ಇದನ್ನೇ ಕಲಿ, ಓದು ಎಂದು ಒತ್ತಡ ಹೇರುವುದು ಸುಲಭ. ಆದರೆ ಓದಿ ಪಾಸಾಗೋದು ಕಷ್ಟ. ಕೆಲಸಕ್ಕೆ ಕಾಲೇಜ್‌ಗೆ ಕಳಿಸಲು ನನ್ನಿಂದಲೂ ಸಾಧ್ಯ. ಆದರೆ ಕಾಲೇಜ್‌ಗೆ ಹೋಗಿ ಪಾಸಾಗಲು ಅಪ್ಪನಿಂದ ಸಾಧ್ಯವೇ..?’’ ಎಂದು ಪ್ರಶ್ನಿಸು ತ್ತಾನೆ ಕುಮಾರ. ಅದನ್ನು ಛಾಲೆಂಜಾಗಿ ಸ್ವೀಕರಿಸುವ ತಂದೆ ಶಿವಕುಮಾರ ಕಾಲೇಜ್‌ಗೆ ಸೇರಿಕೊಳ್ಳುತ್ತಾರೆ! ಅಲ್ಲಿಂದ ಮುಂದೇನಾಗುತ್ತದೆ ಎನ್ನುವುದನ್ನು ಕಲ್ಪಿಸುವುದು ಸುಲಭವಾದರೂ ಕಲ್ಪನೆಗಳಾಚೆಗೂ ಸೊಗಸಾದ ದೃಶ್ಯಗಳ ಮೂಲಕ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಚಿತ್ರದಲ್ಲಿ ಪುತ್ರ ಕುಮಾರನಾಗಿ ವಿಕ್ಕಿ ವರುಣ್ ನಟಿಸಿದ್ದಾರೆ. ಕೆಂಡ ಸಂಪಿಗೆಯ ಮುಗ್ಧನಾಗಿ ಮನಗೆದ್ದಿದ್ದ ಅವರು ಇಲ್ಲಿ ಅದರ ವಿರುದ್ಧ ಭಾವವನ್ನು ಚೆನ್ನಾಗಿ ನಟಿಸಿದ್ದಾರೆ. ತಂದೆ ಶಿವಕುಮಾರ್ ಪಾತ್ರದಲ್ಲಿ ರವಿಶಂಕರ್ ಚಿತ್ರದ ಜೀವಾಳವಾಗಿದ್ದಾರೆ. ಕೀರ್ತಿಯ ಪಾತ್ರದಲ್ಲಿ ಸಂಯುಕ್ತಾ ಹೆಗ್ಡೆ ನಟನಾ ಶೈಲಿಯಿಂದಲೇ ನೆನಪುಳಿಯುತ್ತಾರೆ. ರವಿಶಂಕರ್‌ಗೆ ಜೋಡಿಯಾಗಿ ಶ್ರುತಿ ತಮ್ಮ ಅಮೋಘ ನಟನೆಯಿಂದ ಪಾತ್ರವೇ ಆಗಿದ್ದಾರೆ.

  ‘‘ಕಷ್ಟಪಟ್ಟು ವಿದ್ಯಾರ್ಜನೆಗೆ ಕಳಿಸಿದಾಗ ಕಲಿಕೆಯೊಂದನ್ನೇ ಗುರಿಯಾಗಿಸುವ ವಿದ್ಯಾರ್ಥಿಗೆ ಅದು ಕಷ್ಟವಲ್ಲ’’ ಎನ್ನುವುದನ್ನು ಇದೇ ಮಾದರಿಯಲ್ಲಿ ತೋರಿಸುವ ಚಿತ್ರ ಕಳೆದ ವರ್ಷ ಹಿಂದಿಯಲ್ಲಿ ಬಂದಿತ್ತು. ‘ನಿಲ್ ಬತ್ತೆ ಸನ್ನಾತ’ ಎಂಬ ಆ ಚಿತ್ರದಲ್ಲಿ ಕಷ್ಟಪಟ್ಟು ದುಡಿಯುವ ತಾಯಿ ಮತ್ತು ವಿದ್ಯಾರ್ಥಿನಿಯಾದ ಮಗಳ ನಡುವಿನ ಕತೆಯಿದ್ದರೆ, ಇಲ್ಲಿ ತಂದೆ ಮಗನ ಕತೆಯಿದೆ. ನಗರದ ಬದುಕು ಕಂಡಿರುವ ಕುಮಾರ ಹಳ್ಳಿಯಲ್ಲಿ ರೈತನಾಗಿ ದುಡಿಯುವ ದೃಶ್ಯಗಳು ‘ನೀನೆಲ್ಲೋ ನಾನಲ್ಲೇ’ ಚಿತ್ರದ ಸಂದರ್ಭವನ್ನು ನೆನಪಿಸುವಂತಿವೆ. ಆದರೆ ನಿರ್ದೇಶಕರು ಆ ಸಿನೆಮಾಗಳಿಂದ ಸ್ಫೂರ್ತಿಯನ್ನಷ್ಟೇ ಪಡೆದಿದ್ದು ಚಿತ್ರವನ್ನು ಹೊಸತನದಿಂದ ಕಟ್ಟಿಕೊಟ್ಟಿರುವುದು ಪ್ರಶಂಸಾರ್ಹ. ’ಅಲೆಮಾರಿ’ ಚಿತ್ರದಿಂದಲೇ ಭರವಸೆ ಮೂಡಿಸಿದ್ದ ನಿರ್ದೇಶಕ ಸಂತು, ಪ್ರಸ್ತುತ ಚಿತ್ರದ ಮೂಲಕ ತಾವು ಒಬ್ಬ ಪ್ರಬುದ್ಧ ನಿರ್ದೇಶಕನೆಂದು ಸಾಬೀತು ಪಡಿಸಿದ್ದಾರೆ. ಅನಗತ್ಯವೆನಿಸುವಂಥ ಹಾಡು, ಹೊಡೆದಾಟಗಳನ್ನು ತುರುಕದಿರುವುದು ಅದಕ್ಕೆ ಉದಾಹರಣೆ. ಅದೇ ರೀತಿ ಸಾಧು ಕೋಕಿಲ ಬಂದರೆ ಡಬಲ್ ಮೀನಿಂಗ್ ಮಾತನಾಡಲೇಬೇಕು ಎನ್ನುವ ನಿಯಮಕ್ಕೂ ಇಲ್ಲಿ ಕಡಿವಾಣ ಹಾಕಲಾಗಿದೆ. ಆದರೆ ನಾಯಕಿಯ ತಾಯಿ ತಂದೆಯಾಗಿ ನಟಿಸಿರುವ ಅಚ್ಯುತ್ ಕುಮಾರ್ ಮತ್ತು ಸುಚಿತ್ರಾ ಬಾಯಲ್ಲಿ ಬ್ಯಾಟು ಬಾಲು ಮುಂತಾದ ಪದಗಳನ್ನು ಹೇಳಿಸಿರುವುದು ವಿಪರ್ಯಾಸ. ಎಂದಿನಂತೆ ತಣ್ಣಗಿನ ವರ್ತನೆಯ ಖಳನಾಗಿ ಪ್ರಕಾಶ್ ಬೆಳವಾಡಿ ಮತ್ತು ಇತರ ಪಾತ್ರಗಳಲ್ಲಿ ಸುಧಾಕರ್, ಸುಂದರ್ ರಾಜ್, ರಮೇಶ್ ಪಂಡಿತ್ ಗಮನ ಸೆಳೆಯುತ್ತಾರೆ. ಎರಡು ಹಾಡುಗಳು ಕತೆಗೆ ಪೂರಕವಾಗಿದ್ದು, ಅರ್ಜುನ್ ಜನ್ಯ ಸಂಗೀತದಲ್ಲಿ ಮೆಲುಕು ಹಾಕುವಂತಿವೆ.

ವಾಸ್ತವದ ಆಧಾರದಲ್ಲಿ ನೋಡಿದರೆ ಒಟ್ಟು ಕತೆಯೇ ಲಾಜಿಕ್‌ನಿಂದ ಹೊರಗಿದೆ. ಅದರಲ್ಲೂ ಚಿತ್ರದ ನಾಯಕಿ ಆಕೆಗಿಂತ ಜೂನಿಯರ್ ಆಗಿ ಬರುವ ಶಿವಕುಮಾರರ ಕ್ಲಾಸ್‌ನಲ್ಲಿ ಕಾಣಿಸುವುದಂತೂ ಅರ್ಥಹೀನ. ಆದರೆ ಒಳಿತಿನ ಸಂದೇಶ, ಕಳೆ ತುಂಬುವ ಸಂಭಾಷಣೆ, ಕೌಟುಂಬಿಕ ಕಳಕಳಿ ಸೇರಿ ಸಿನೆಮಾ ಮ್ಯಾಜಿಕ್ ಸೃಷ್ಟಿಸಿದೆ. ಹಾಗಾಗಿ ಮನೆಮಂದಿ ಜತೆಯಾಗಿ ನೋಡಿದರೂ ಖುಷಿ ಪಡಬಹುದಾದ ಚಿತ್ರ ಕಾಲೇಜ್ ಕುಮಾರ್.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News