ಸ್ವಹಿತಾಸಕ್ತಿ ಸಂಘರ್ಷ ಎದುರಿಸುತ್ತಿರುವ ಗಂಭೀರ್

Update: 2017-11-11 18:34 GMT

ಹೊಸದಿಲ್ಲಿ,ನ.11: ಭಾರತದ ಹಿರಿಯ ಆರಂಭಿಕ ಆಟಗಾರ ಗೌತಮ್ ಗಂಭೀರ್ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಆಡಳಿತ ಸಮಿತಿಗೆ ಸರಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ಪ್ರಸ್ತುತ ದೇಶಿಯ ಕ್ರಿಕೆಟ್‌ನಲ್ಲಿ ಸಕ್ರಿಯ ಕ್ರಿಕೆಟಿಗನಾಗಿರುವ ಗಂಭೀರ್ ಮತ್ತೊಂದು ಹುದ್ದೆ ಪಡೆಯುವ ಮೂಲಕ ಸ್ವಹಿತಾಸಕ್ತಿ ಸಂಘರ್ಷ ಎದುರಿಸುತ್ತಿದ್ದಾರೆ.

ತನ್ನನ್ನು ಡಿಡಿಸಿಎ ಆಡಳಿತ ಸಮಿತಿಗೆ ನಾಮನಿರ್ದೇಶನ ಮಾಡಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋರ್‌ಗೆ ಶುಕ್ರವಾರ ಟ್ವಿಟರ್‌ನ ಮೂಲಕ ಗಂಭೀರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟಿರುವ ಜಸ್ಟಿಸ್ ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಕ್ರಿಕೆಟಿಗ ಎರಡು ಹುದ್ದೆಯನ್ನು ಹೊಂದಿರುವಂತಿಲ್ಲ. ಎರಡು ಹುದ್ದೆ ಇದ್ದರೆ ಅದು ಸ್ವಹಿತಾಸಕ್ತಿ ಸಂಘರ್ಷವಾಗುತ್ತದೆ.

ಡಿಡಿಸಿಎ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದ ನಂತರ ಕೋಚ್ ಹಾಗೂ ಆಯ್ಕೆ ಸಮಿತಿಯನ್ನು ನಿರ್ಧರಿಸಲಿದೆ. ಗಂಭೀರ್ ದಿಲ್ಲಿ ತಂಡದಲ್ಲಿ ಸಕ್ರಿಯ ಕ್ರಿಕೆಟಿಗನಾಗಿ ಮುಂದುವರಿದರೆ ಅವರೇ ನೇರ ಫಲಾನುಭವಿಯಾಗುತ್ತಾರೆ.

‘‘ಗೌತಮ್ ಗಂಭೀರ್ ನೇಮಕಾತಿಯ ಬಗ್ಗೆ ನಾನು ಈತನಕ ಯಾವುದೇ ಅಧಿಸೂಚನೆ ಸ್ವೀಕರಿಸಿಲ್ಲ. ಯಾವುದೇ ಆಡಳಿತ ಸಮಿತಿಯ ಬಗ್ಗೆ ಮಾಹಿತಿಯಿಲ್ಲ. ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಸಚಿವರಿಗೆ ಪತ್ರ ಬರೆಯುವೆ. ಗಂಭೀರ್ ಸಕ್ರಿಯ ಕ್ರಿಕೆಟಿಗ. ಲೋಧಾ ಸಮಿತಿಯ ಶಿಫಾರಸು ಗಂಭೀರ್‌ಗೆ ಆಡಳಿತಾಧಿಕಾರಿ ಹುದ್ದೆ ಪಡೆಯಲು ಅವಕಾಶ ನೀಡುತ್ತದೆಯೋ ಎಂಬ ಬಗ್ಗೆ ತನಗೇನೂ ಗೊತ್ತಿಲ್ಲ’’ ಎಂದು ಜಸ್ಟಿಸ್(ನಿವೃತ್ತ)ವಿಕ್ರಮ್‌ಜಿತ್ ಸೇನ್ ಹೇಳಿದ್ದಾರೆ.

‘‘ಸ್ವಹಿತಾಸಕ್ತಿ ಸಂಘರ್ಷ ಎದುರಾದರೆ ಗಂಭೀರ್ ಡಿಡಿಸಿಎಯಲ್ಲಿ ಹುದ್ದೆ ಸ್ವೀಕರಿಸುವ ಸಾಧ್ಯತೆಯಿಲ್ಲ. ಗಂಭೀರ್ ನಿವೃತ್ತಿಯಾಗುವ ಯೋಚನೆಯಲ್ಲಿಲ್ಲ. ಅವರು ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ’’ ಎಂದು ಗಂಭೀರ್ ಸ್ನೇಹಿತರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News