ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ಯಾಕೆ ನೆಹರೂರವರ ಬಗ್ಗೆ ಅಸಮಾಧಾನಗೊಂಡಿದ್ದರು?

Update: 2017-11-12 18:49 GMT

ಮತ್ತು ಅವರ ಬಗ್ಗೆ ಸಾರ್ವಜನಿಕವಾಗಿ ಕೂಡ ಯಾಕೆ ಟೀಕಿಸಿದ್ದರು?

ಭಾಗ-1

ಭೌತವಿಜ್ಞಾನಿ ಚಂದ್ರಶೇಖರ್ ವೆಂಕಟರಮಣನ್ 1930ರಲ್ಲಿ ತನ್ನ 42ರ ಹರೆಯದಲ್ಲೇ ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊತ್ತ ಮೊದಲ ಏಶ್ಯನ್ ಎನ್ನುವ ಪ್ರಶಂಸೆಗೆ ಪಾತ್ರರಾದರು. ಆ ವೇಳೆಗೆ ಸಿ.ವಿ.ರಾಮನ್ ಓರ್ವ ವೃತ್ತಿಪರ ವಿಜ್ಞಾನಿಯಾಗಿ ಕೇವಲ 13 ವರ್ಷಗಳಷ್ಟೇ ಆಗಿದ್ದವು ಎಂಬುದನ್ನು ಪರಿಗಣಿಸಿದರೆ ಅವರ ಈ ಸಾಧನೆ ಇನ್ನಷ್ಟು ಅಸಾಮಾನ್ಯ ಎನ್ನಲೇಬೇಕಾಗುತ್ತದೆ. ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಪಾಲಿಟ್ ಪ್ರಾಧ್ಯಾಪಕ ಹುದ್ದೆ (ಪ್ರೊಫೆಸರ್‌ಶಿಪ್)ಯನ್ನು ಸ್ವೀಕರಿಸಲಿಕ್ಕಾಗಿ ಅವರು 1917ರಲ್ಲಿ ಇಂಡಿಯನ್ ಫೈನಾನ್ಸ್ ಡಿಪಾರ್ಟ್‌ಮೆಂಟ್ (ಭಾರತೀಯ ಹಣಕಾಸು ಇಲಾಖೆ)ನ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ತುಂಬ ಸಮಯ ಅವರು ‘ಇಂಡಿಯನ್‌ಅಸೋಸಿಯೇಶನ್ ಫಾರ್ ದಿ ಕಲ್ಟಿವೇಶನ್ ಆಫ್ ಸಯನ್ಸ್’ ಎಂಬ ಸಂಸ್ಥೆಯಲ್ಲಿ ಸಂಶೋಧನೆಯಲ್ಲಿ ತೊಡಗಿದ್ದರು.

ನೊಬೆಲ್ ಪ್ರಶಸ್ತಿ ಪಡೆದ ನಂತರದ ದಶಕಗಳಲ್ಲಿ ಅವರು ಭಾರತದಲ್ಲಿ ವೈಜ್ಞಾನಿಕ ಸಂಸ್ಥೆಗಳನ್ನು ಕಟ್ಟಲು ಮತ್ತು ವಿಜ್ಞಾನ ಸಂಸ್ಥೆಗಳಿಗೆ ಒಂದು ಸೂಕ್ತವಾದ ಸ್ವರೂಪ ನೀಡಲು ಪ್ರಯತ್ನಿಸಿದ್ದರ ಪರಿಣಾಮವಾಗಿ ಆ ದಶಕಗಳು ಅವರ ಆಡಳಿತಾತ್ಮಕ ಸಾಮರ್ಥ್ಯಗಳಿಗೆ ಕಠಿಣ ಸವಾಲುಗಳನ್ನೊಡ್ಡಿದ, ಅವರ ಸತ್ವಪರೀಕ್ಷೆ ಮಾಡಿದ ದಶಕಗಳಾಗಿ ಪರಿಣಮಿಸಿದವು.

1932ರಲ್ಲಿ, ರಾಮನ್ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ (ಭಾರತೀಯ ವಿಜ್ಞಾನ ಸಂಸ್ಥೆಯ) ಮೊತ್ತ ಮೊದಲ ಭಾರತೀಯ ನಿರ್ದೇಶಕರಾಗಿ ಆಯ್ಕೆಯಾದರು. ಅವರು ಕಲ್ಕತ್ತಾದಲ್ಲಿನ ತನ್ನ ಕೆಲಸಗಳನ್ನು ಮುಗಿಸಿ ಬೆಂಗಳೂರಿಗೆ ಹೊರಡಲು ಸಿದ್ಧರಾಗುತ್ತಿದ್ದಂತೆಯೆ, ಅವರು ಬಂಗಾಲಿಗಳಿಗಿಂತ ಮಿಗಿಲಾಗಿ ದಕ್ಷಿಣ ಭಾರತೀಯರನ್ನು ಇಷ್ಟಪಡುತ್ತಾರೆ, ದಕ್ಷಿಣ ಭಾರತೀಯರಿಗೇ ಅವರು ಆದ್ಯತೆ ನೀಡುತ್ತಾರೆ ಮತ್ತು ಹಾಗೆಯೇವಿಜ್ಞಾನದ ಇತರ ಶಾಖೆಗಳಿಗಿಂತ ಮಿಗಿಲಾಗಿ ಭೌತಶಾಸ್ತ್ರಕ್ಕೇ ಹೆಚ್ಚು ಒಲವು ತೋರುತ್ತಾರೆ, ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ಅವರ ಮೇಲೆ ಆರೋಪ ಹೊರಿಸಿರುವ ಬೇನಾಮಿ (ಅನಾಮಧೇಯ) ಪತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಹೊಸತಾಗಿ ಸೃಷ್ಟಿಸಲಾದ ಮಹೇಂದರ್ ಲಾಲ್ ಸರ್ಕಾರ್ ಪ್ರೊಫೆಸರ್‌ಶಿಪ್ ಹುದ್ದೆಗೆ ಕೆ.ಎಸ್.ಕೃಷ್ಣನ್‌ರವರನ್ನು ನೇಮಿಸುವ ಅವರ ನಿರ್ಧಾರ ಕೂಡ ಟೀಕೆಗೆ ಗುರಿಯಾಯಿತು. ರಾಮನ್ ಮತ್ತು ಕೃಷ್ಣನ್ ಇಬ್ಬರೂ ಜೊತೆಯಾಗಿಯೇ ತಥಾಕಥಿತ ‘ರಾಮನ್ ಇಫೆಕ್ಟ್’ ಅನ್ನು ಕಂಡು ಹಿಡಿದರು. (ಇದಕ್ಕಾಗಿಯೇ ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿತ್ತು). ಅಲಹಾಬಾದ್‌ನಲ್ಲಿದ್ದ ಮೇಘನಾದ್ ಸಹಾರವರು, ಕೃಷ್ಣನ್‌ರವರ ಬದಲಾಗಿ, ತನ್ನನ್ನು ಆ ಹುದ್ದೆಗೆ ಆಯ್ಕೆ ಮಾಡಬೇಕೆಂದು ಬಯಸಿದ್ದರು. ಹೀಗೆ ತಾನು ಆಯ್ಕೆಯಾಗುತ್ತಿದ್ದಲ್ಲಿ, ಆಗ ವಸಾಹತುಶಾಹಿ ಜಗತ್ತಿನಲ್ಲಿ ಭೌತಶಾಸ್ತ್ರದ ಮಹಾನಗರ ಎಂದು ಪ್ರಸಿದ್ಧವಾಗುತ್ತಾ ಇದ್ದ ಕಲ್ಕತ್ತಾಗೆ ಹೋಗಿ ಸಂಶೋಧನೆ ನಡೆಸುವುದು ಸಾಧ್ಯವಾಗುತ್ತಿತ್ತು ಎಂಬ ಲೆಕ್ಕಾಚಾರ ಸಹಾರವರದಾಗಿತ್ತು.

 ಮುಂದಿನ ವರ್ಷ ಮತ್ತೊಮ್ಮೆ ರಾಮನ್ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡರು. ‘ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸಯನ್ಸ್’ನ ಸದಸ್ಯತ್ವವನ್ನು ನಿಯಂತ್ರಿಸುವ ಅವರ ಯೋಜನೆಗಳು ಪತ್ರಿಕೆಗಳಲ್ಲಿ ಸೋರಿಕೆಯಾದದ್ದೇ ಇದಕ್ಕೆ ಕಾರಣವಾಗಿತ್ತು. ಈ ಅಸೋಸಿಯೇಷನ್‌ನ ಮುಂದಿನ ವಾರ್ಷಿಕ ಮಹಾಸಭೆಯಲ್ಲಿ, ಶ್ಯಾಮ ಪ್ರಸಾದ್ ಮುಖರ್ಜಿಯವರು ಮಂಡಿಸಿದ ಒಂದು ನಿಲುವಳಿಯ ಮೂಲಕ, ರಾಮನ್‌ರವರ ಕಾರ್ಯದರ್ಶಿ ಹುದ್ದೆಯನ್ನು ಅವರಿಂದ ಕಿತ್ತುಕೊಳ್ಳಲಾಯಿತು. ‘ಸಿ.ವಿ.ರಾಮನ್: ಆ್ಯನ್ ಅಟೋಬಯೊಗ್ರಫಿ’ ಯಲ್ಲಿ ಅವರ ಜೀವನ ಚರಿತ್ರೆಯ ಲೇಖಕಿ ಉಮಾ ಪರಮೇಶ್ವರನ್ ಹೀಗೆ ಬರೆದಿದ್ದಾರೆ: ‘‘ಬಾಂಗ್ಲಾ ರಾಷ್ಟ್ರೀಯತೆ ಮತ್ತು ವೈಯಕ್ತಿಕ ಪ್ರತಿಸ್ಪರ್ಧಿಗಳು ರಾಮನ್‌ರವರನ್ನು ಅವರು ತನ್ನದೇ ಎಂದು ತಿಳಿದಿದ್ದ ನಗರದಿಂದ ಅವರನ್ನು ಹೊರಗೆ ಕಳುಹಿಸಿದರು’’.

ಖ್ಯಾತ ರಸಾಯನ ಶಾಸ್ತ್ರಜ್ಞ ಪಿ.ಸಿ.ರೇಯವರು ರಾಮನ್‌ರವರು ಪತ್ನಿಯೊಡನೆ ಆ ಕುರಿತಾದ ತನ್ನ ಅನುಕಂಪವನ್ನು ಹೀಗೆ ಹಂಚಿಕೊಂಡರು: ‘‘ಬಾಂಗ್ಲಾ ರಾಷ್ಟ್ರೀಯತೆಯು ಒಂದು ವಿವಾದವಾದಾಗಲೆಲ್ಲ ನನ್ನ ರಕ್ತ ಕುದಿಯುತ್ತದೆ. ನನಗೇ ಹೀಗೆ ಅನಿಸಬೇಕಾದರೆ, ಬಾಂಗ್ಲಾ ರಾಷ್ಟ್ರೀಯತೆಯನ್ನು ಅಮುಖ್ಯಗೊಳಿಸಲಾಗುತ್ತಿದೆ ಎಂದು ಅನ್ನಿಸಿದಾಗ ಇತರ ಎಲ್ಲರಿಗೆ ಏನು ಅನ್ನಿಸಬಹುದೆಂದು ನಿಮಗೆ ಅರ್ಥವಾದೀತು’’.

1909ರಲ್ಲಿ ಆಗ ಪ್ರಚಲಿತವಿದ್ದ ರಸಾಯನ ಶಾಸ್ತ್ರ ಮತ್ತು ವಿದ್ಯುತ್, ಎರಡನೆಯ ಔದ್ಯೋಗಿಕ ಕ್ರಾಂತಿಯನ್ನು ತರುತ್ತವೆ ಎಂಬ ಉನ್ನತ ತತ್ವಕ್ಕನುಗುಣವಾಗಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್‌ನಲ್ಲಿ ನಾಲ್ಕು ವಿಭಾಗಗಳಿದ್ದವು: ಅನ್ವಯಿಕ ರಸಾಯನ ಶಾಸ್ತ್ರ, ಸಾವಯವ ರಸಾಯನ ಶಾಸ್ತ್ರ, ಜೈವಿಕ ರಸಾಯನ ಶಾಸ್ತ್ರ ಮತ್ತು ವಿದ್ಯುತ್-ತಂತ್ರಜ್ಞಾನ (ಇಲೆಕ್ಟ್ರೋ ಟೆಕ್ನಾಲಜಿ). ಯುದ್ಧದ ಮಧ್ಯದ ಅವಧಿಯಲ್ಲಿ ಭೌತಶಾಸ್ತ್ರದ ಪ್ರತಿಷ್ಠೆ ಹೆಚ್ಚುತ್ತಿದ್ದಂತೆಯೇ, ಐಐಎಸ್‌ಸಿಯಲ್ಲಿ ಭೌತಶಾಸ್ತ್ರ ವಿಭಾಗವನ್ನು ತೆರೆಯುವ ಒಂದು ಸ್ಪಷ್ಟ ಉದ್ದೇಶದೊಂದಿಗೆ ರಾಮನ್‌ರವರನ್ನು ಅದರ ನಿರ್ದೇಶಕರಾಗಿ ನೇಮಿಸಲಾಯಿತು. ಆ ವೇಳೆಯಲ್ಲಿ ಜರ್ಮನಿಯ ನವನಾಝಿ ಆಡಳಿತದಿಂದ ತಪ್ಪಿಸಕೊಂಡು ದೇಶ ಬಿಟ್ಟು ತೆರಳುತ್ತಿದ್ದ ಜರ್ಮನ್ ಭೌತವಿಜ್ಞಾನಿಗಳನ್ನು ಆ ಹೊಸ ವಿಭಾಗದಲ್ಲಿ ನೇಮಿಸಿಕೊಳ್ಳಲು ರಾಮನ್ ಪ್ರಯತ್ನಿಸಿದರು. 1935ರಲ್ಲಿ ಓರ್ವ ಹಂಗಾಮಿ ಪ್ರಾಧ್ಯಾಪಕರಾಗಿ ಖ್ಯಾತ ವಿಜ್ಞಾನಿ ಮ್ಯಾಕ್ಸ್ ಬಾರ್ನ್‌ರವರನ್ನು ತನ್ನ ವಿಭಾಗಕ್ಕೆ ಕರೆತರುವಲ್ಲಿ ಅವರು ಯಶಸ್ವಿಯಾದರು. ಆ ಹುದ್ದೆಯನ್ನು ಮೆಥಮ್ಯಾಟಿಕ್ ಫಿಸಿಕ್ಸ್‌ನಲ್ಲಿ ಒಂದು ಹೊಸ ಅಧ್ಯಯನ ಪೀಠವಾಗಿ ಬದಲಿಸುವುದು ರಾಮನ್‌ರವರ ಉದ್ದೇಶವಾಗಿತ್ತು.

ಆ ನೇಮಕಾತಿಯು ವಿಭಾಗದ ಅಧ್ಯಾಪಕ ವೃಂದದಲ್ಲಿ ತೀವ್ರ ಅಸಮಾಧಾನಕ್ಕೆ ಗುರಿಯಾಯಿತು. ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಬಾರ್ನ್‌ರವರನ್ನು ಓರ್ವ ‘‘ದ್ವಿತೀಯ ದರ್ಜೆಯ ವಿದೇಶಿಗ’’ ಎಂದು ಕರೆದರು. ರಾಷ್ಟ್ರೀಯತೆಯ ಬದ್ಧತೆಯಿಂದ ಇತರರು ಆ ಹುದ್ದೆಗೆ ಓರ್ವ ಭಾರತೀಯನ ನೇಮಕವಾಗಬೇಕು ಎಂದರು. ಐಐಎಸ್‌ಸಿ ಸಮಿತಿಯಲ್ಲಿದ್ದ ಮುಖರ್ಜಿಯವರು ಆ ಹುದ್ದೆಗೆ ಒಬ್ಬ ಬಂಗಾಲಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದರು.

ಆದರೆ ಆ ತಿಕ್ಕಾಟಕ್ಕೆ ನಿಜವಾದ ಕಾರಣ ರಾಮನ್‌ರವರು ಭೌತಶಾಸ್ತ್ರಕ್ಕೆ ನೀಡಿದ್ದ ವಿಶೇಷವಾದ ಒತ್ತು ಆಗಿತ್ತು. ಮಹಾ ಆರ್ಥಿಕ ಕುಸಿತದ ಯುಗದಲ್ಲಿ ಬಜೆಟ್‌ನ ಮೇಲೆ ಕಡಿತಗಳು ಆಗುತ್ತಿದ್ದ ಆ ಕಾಲದಲ್ಲಿ, ಭೌತಶಾಸ್ತ್ರ ವಿಭಾಗವನ್ನು ಸ್ಥಾಪಿಸಲು ಎಷ್ಟೊಂದು ಬಂಡವಾಳ ವಿನಿಯೋಗಿಸಲಾಗಿತ್ತು ಎಂದರೆ, ಅದು ಸುಮಾರಾಗಿ ಟಾಟಾ ಸಂಸ್ಥೆಗಳು, ಭಾರತ ಸರಕಾರ ಮತ್ತು ಮೈಸೂರು ಸರಕಾರ ಸಂಸ್ಥೆಗೆ ನೀಡುವ ವಾರ್ಷಿಕ ದೇಣಿಗೆಗಳ ಒಟ್ಟು ಮೊತ್ತಕ್ಕೆ ಸಮನಾಗಿತ್ತು.

(ಮುಂದುವರಿಯುವುದು)

Writer - ಕಪಿಲ್ ಸುಬ್ರಮಣಿಯನ್

contributor

Editor - ಕಪಿಲ್ ಸುಬ್ರಮಣಿಯನ್

contributor

Similar News

ಜಗದಗಲ
ಜಗ ದಗಲ