ನೆಹರೂ ಆರ್ಥಿಕ ನೀತಿಯ ದೂರದೃಷ್ಟಿ

Update: 2017-11-13 18:43 GMT

ದೇಶಕ್ಕೆ ಕೈಗಾರಿಕಾ ತಳಹದಿಯನ್ನು ನಿರ್ಮಿಸುವ ಕಠಿಣವಾದ ಕಾರ್ಯವನ್ನು ದೇಶದ ಬಂಡವಾಳಶಾಹಿ ವರ್ಗಕ್ಕೆ ವಹಿಸಲು ಇಚ್ಛಿಸದ ನೆಹರೂ ಆ ಹೊರೆಯನ್ನು ಸಂಪೂರ್ಣವಾಗಿ ಸಾರ್ವಜನಿಕರಂಗದ ಮೇಲೆ ಹೊರಿಸಿದ್ದರು. ಇದರ ಜೊತೆಗೆ ವಿದೇಶಿ ಮಾರುಕಟ್ಟೆಗಳು ಹಾಗೂ ವಿದೇಶಿ ತಂತ್ರಜ್ಞಾನ ಕೈಗಾರಿಕೀಕರಣಕ್ಕೆ ಆಧಾರವಾಗುವುದಕ್ಕೆ ಆಸ್ಪದ ನೀಡಲು ಅವರು ನಿರಾಕರಿಸಿದ್ದರು.

ಅರ್ಥಿಕ ನೀತಿಯಲ್ಲಿ ನೆಹರೂ ಓರ್ವ ಅಪ್ರಬುದ್ಧರೆಂದು ಭಾರತದಲ್ಲಿ ಇಂದು ಬಹುತೇಕ ಮಂದಿ ವ್ಯಾಖ್ಯಾನಿಸುತ್ತಿದ್ದಾರೆ. ಪ್ರತಿಷ್ಠಿತ ವಿವಿ ಸಮೂಹಗಳ ನವಉದಾರವಾದಿ ಭಾರತೀಯ ಅರ್ಥಶಾಸ್ತ್ರಜ್ಞರು ಹಾಗೂ ಅವರಿಂದ ಪ್ರಭಾವಿತರಾದ ಕೆಲವರು, ಸಮಾಜವಾದದ ಜೊತೆ ನೆಹರೂ ಅವರ ವಿನಾಶಕಾರಿಯಾದ ಸಲ್ಲಾಪದಿಂದಾಗಿ ಭಾರತವು ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳಿಗೆ ಸರಿಸಮವಾಗುವ ಅವಕಾಶವನ್ನು ಕಳೆದುಕೊಂಡಿತು. ಸಮಾಜವಾದದ ಮೇಲಿನ ನೆಹರೂ ಅವರ ವ್ಯಾಮೋಹವು, ಭಾರತದ ಖಾಸಗಿ ಉದ್ಯಮರಂಗದ ಆವೇಶಭರಿತ ಹುಮ್ಮಸ್ಸಿಗೆ ಮೊಳೆಬಡಿಯಿತು, ವಿಶ್ವವ್ಯಾಪಾರದಿಂದ ಲಭಿಸುವ ಪ್ರಯೋಜನಗಳಿಂದ ದೇಶವನ್ನು ದೂರವಿರಿಸಿತು ಹಾಗೂ ದಶಕಗಳವರೆಗೆ ದೇಶವನ್ನು ಅಸಮರ್ಥ ಹಾಗೂ ಭ್ರಷ್ಟ ಸಾರ್ವಜನಿಕರಂಗದ ಸಂಸ್ಥೆಗಳ ಹಿಡಿತದಲ್ಲಿ ಸಿಲುಕುವಂತೆ ಮಾಡಿತು ಎಂದು ಅವರ ವಾದವಾಗಿದೆ.

ನೆಹರೂ ಬೆಂಬಲಿಗರು ಕೂಡಾ, ಅವರ ವೈಜ್ಞಾನಿಕ ಮನೋಭಾವವನ್ನು ಹಾಗೂ ಕೈಗಾರಿಕೀಕರಣದ ಬಗ್ಗೆ ಅವರಿಗಿದ್ದ ಒಲವನ್ನು ಮೆಚ್ಚಿಕೊಳ್ಳುತ್ತಾರಾದರೂ, ಅವರ ಆರ್ಥಿಕ ನೀತಿಯಲ್ಲಿನ ಪ್ರಮಾದಗಳನ್ನು ಕೂಡಾ ಒಪ್ಪಿಕೊಳ್ಳುತ್ತಾರೆ. ‘‘ಒಂದು ಕಾಲದಲ್ಲಿ ಭಾರತೀಯ ಬ್ರಾಹ್ಮಣ, ಆಂಗ್ಲ ಮನಸ್ಥಿತಿಯ ಶ್ರೀಮಂತ ಹಾಗೂ ಯುರೋಪಿಯನ್ ಸಾಮಾಜಿಕ ಪ್ರಜಾಪ್ರಭುತ್ವವಾದಿ ಇವೆಲ್ಲವೂ ಆಗಿದ್ದ ನೆರೂ ಅವರಿಗೆ ಸಹಜವಾಗಿಯೇ ಹಣದ ಬಗ್ಗೆ ಹಾಗೂ ಖಾಸಗಿ ಉದ್ಯಮಗಳ ಲಾಭಗಳಿಕೆಯ ಉದ್ದೇಶದ ಬಗ್ಗೆ ತಿರಸ್ಕಾರ ಮೂಡಿತ್ತು ’’ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಬರೆದಿದ್ದಾರೆ.

1991ರ ಮುಕ್ತ ಆರ್ಥಿಕ ಸುಧಾರಣೆಗಳ ಬಳಿಕ ಭಾರತವು, ಬಂಡವಾಳ ಹಾಗೂ ಸರಕುಗಳ ಅಂತಾರಾಷ್ಟ್ರೀಯ ವ್ಯಾಪಾರವನ್ನು ಗಣನೀಯವಾಗಿ ಉದಾರೀಕರಣಗೊಳಿಸಿತು. ಮುಕ್ತ ಆರ್ಥಿಕ ನೀತಿಗೆ ಭಾರತವು ನಾಂದಿ ಹಾಡಿದ ವರ್ಷವಾದ 1991ನೇ ಇಸವಿಯು, ಭಾರತದ ತನ್ನ ಆರ್ಥಿಕ ನೀತಿಗಳಲ್ಲಿನ ಜಟಿಲತೆಯನ್ನು ಕಡಿಮೆಗೊಳಿಸಿತು. 1991ನೇ ಇಸವಿಗಿಂತ ಮೊದಲಿದ್ದ ಸಮಾಜವಾದದ ಬದಲಿಗೆ ಮುಕ್ತ ಆರ್ಥಿಕ ನೀತಿಯನ್ನು ಅದು ಬಲವಾಗಿ ಅಪ್ಪಿಕೊಂಡಿತು.

ಕೈಗಾರಿಕೆಗಳ ನಿರ್ಮಾಣ:

ಆದರೆ ನೆಹರೂವಾದವು ವಸಾಹತುಶಾಹಿವಾದ, ಲಾಭದಾಯಕ ಆರ್ಥಿಕತೆ, ಸರಕುಗಳು ಮತ್ತು ಬಂಡವಾಳದ ಸುಗಮ ಚಲನೆ ಇವೆಲ್ಲವೂ ಒಂದೆಡೆ ಕೇಂದ್ರೀಕರಿಸಲ್ಪಟ್ಟ ರಾಷ್ಟ್ರವನ್ನು ನಿರ್ಮಿಸಿತು. ಆದಾಗ್ಯೂ, ತಾನು ಬಹುಮಟ್ಟಿಗೆ ಕೃಷಿ ಆರ್ಥಿಕತೆಯ ರಾಷ್ಟ್ರವಾಗಿಯೇ ಉಳಿಯುವುದಕ್ಕಾಗಿ ಭಾರತವು ಅವುಗಳನ್ನು ತನ್ನ ಸಾಧನಗಳಾಗಿ ಬಳಸಿಕೊಂಡಿತು. ವಿಪರೀತವಾದ ನಿರ್ಬಂಧಿತ ವ್ಯಾಪಾರವು ಭಾರತದ ಉತ್ಪಾದನಾರಂಗವನ್ನು ಸ್ಪರ್ಧಾತ್ಮಕತೆರಹಿತವಾಗುವಂತೆ ಮಾಡಿತು.

ಸ್ವಾತಂತ್ರ ಸಮಯದಲ್ಲಿ ಭಾರತದ ವಾರ್ಷಿಕ ಆರ್ಥಿಕ ಬೆಳವಣಿಗೆ ಕೇವಲ ಶೇ.1ರಷ್ಟಿತ್ತು. ಸ್ವಾತಂತ್ರ. ದೊರೆತಾಗ ನೆಹರೂ ಹಾಗೂ ದೇಶದ ಇತರ ಸ್ಥಾಪಕ ನಾಯಕರಿಗೆ ಈ ಆರ್ಥಿಕ ಬೆಳವಣಿಗೆಯನ್ನು ಚುರುಕುಗೊಳಿಸುವ ದೊಡ್ಡ ಭಾರ ಹೆಗಲ ಮೇಲೆ ಬಿದ್ದಿತ್ತು. ಹೀಗಾಗಿ ನೆಹರೂ ಅವರ ಆರ್ಥಿಕ ಕಾರ್ಯನೀತಿಯು, ಒಟ್ಟು ಹೂಡಿಕೆಯಲ್ಲಿ ಕೃತಕವಾದ ಏರಿಕೆಯನ್ನು ದಾಖಲಿಸುವ ಸಾಹಸಕ್ಕೆ ಮುಂದಾಯಿತು. ವಿಸ್ತೃತವಾದ ಆರ್ಥಿಕ ಯೋಜನೆಯ ಮೂಲಕ ಹೂಡಿಕೆಯ ಸೂಕ್ಷ್ಮ ನಿರ್ವಹಣೆ ಹಾಗೂ ಖಾಸಗಿ ಉದ್ಯಮಗಳಿಗೆ ಪರವಾನಿಗೆ ನೀಡಿಕೆ , ಇಂತಹ ಕೈಗಾರಿಕೆಗಳ ರಕ್ಷಣೆಗಾಗಿ ಅಧಿಕ ತೆರಿಗೆ ವಿಧಿಸುವುದು ಮತ್ತು ಮೂಲಸೌಕರ್ಯ ಹೂಡಿಕೆಯನ್ನು ಉತ್ತೇಜಿಸುವುದು ಹಾಗೂ ಕೃಷಿ ಉತ್ಪಾದನೆಗಾಗಿ ಭೂಸುಧಾರಣೆ ಇವು ನೆಹರೂವಾದದ ಆರ್ಥಿಕಕಾರ್ಯನೀತಿಯಾಗಿತ್ತು. ಆದರೆ ಇವುಗಳಲ್ಲಿ ಹೆಚ್ಚಿನವುಗಳನ್ನು ಅಸಮರ್ಪಕವಾಗಿ ಜಾರಿಗೊಳಿಸಲಾಗಿತ್ತು. ವಿಶೇಷವಾಗಿ ಭೂಸುಧಾರಣೆಗಳನ್ನು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸಿದ್ದರಿಂದ ಅವುಗಳು ಕೂಡಾ ಬಾಧಿತವಾದವು.ಭೂ ಸುಧಾರಣೆಗಾಗಿ ತಾವು ಗುರಿಯಿಡಲು ಯತ್ನಿಸಿದ್ದ ಭೂಮಾಲಕರ ವೋಟ್‌ಬ್ಯಾಂಕ್‌ಗಳನ್ನೇ ರಾಜ್ಯ ಸರಕಾರಗಳು ನೆಚ್ಚಿಕೊಂಡಿದ್ದರಿಂದ ಭೂಸುಧಾರಣಾ ಕ್ರಮಗಳು ತೀವ್ರ ಹಿನ್ನಡೆಯನ್ನು ಕಾಣಬೇಕಾಯಿತು.
ಆದರೆ ನೆಹರೂ ಅವರ ಕಾರ್ಯತಂತ್ರವು ದೇಶಕ್ಕೊಂದು ಕೈಗಾರಿಕಾ ನೆಲೆಗಟ್ಟನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತೇ?. ಖಂಡಿತವಾಗಿಯೂ ಹೌದು. 1947-1965ರ ಅವಧಿಯಲ್ಲಿ ಸರಾಸರಿ ಬೆಳವಣಿಗೆ ದರವು ಶೇ.3ರಷ್ಟು ಏರಿಕೆಯನ್ನು ಕಂಡಿತು. ಆದಾಗ್ಯೂ, ಪೂರ್ವ ಏಶ್ಯ ಆರ್ಥಿಕತೆಗಳಿಗೆ ಹೋಲಿಸಿದರೆ ಈ ಬೆಳವಣಿಗೆ ದರವು ತೀರಾ ಕಡಿಮೆಯಾಗಿತ್ತು.

ಆಡಳಿತದ ಬೆಂಬಲ:

 ಆದಾಗ್ಯೂ ಈ ಅವಧಿಯಲ್ಲಿ ಪೂರ್ವ ಏಶ್ಯಾದ ಬಲಾಢ್ಯ ದೇಶಗಳಾದ ಜಪಾನ್, ಕೊರಿಯಾ ಹಾಗೂ ತೈವಾನ್‌ಗಳು ತಮ್ಮ ಆರ್ಥಿಕತೆಗೆ ಉತ್ತೇಜನ ನೀಡಲು ಸರಕಾರದ ಹಸ್ತಕ್ಷೇಪ ನಡೆಸುವ ಪದ್ಧತಿಯನ್ನು ಅನುಸರಿಸಿದವು. ರಫ್ತು ಪ್ರಮಾಣದ ಆಧಾರದಲ್ಲಿ ಕೈಗಾರಿಕೆಗಳಿಗೆ ಸರಕಾರಿ ಸಬ್ಸಿಡಿ ನೀಡುವುದನ್ನು ಪ್ರೋತ್ಸಾಹಿಸಿದವು.

ಕೊರಿಯಾದ ಉದ್ಯಮಿ ಚುಂಗ್ ಜು ಯುಂಗ್ ಅವರ ಯಶೋಗಾಥೆ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಕಾರು ತಯಾರಿಕೆಯ ಹಿನ್ನೆಲೆಯೇ ಇಲ್ಲದ ಚುಂಗ್ ಜು ಯುಂಗ್, 1960ರಲ್ಲಿ ಹ್ಯುಂಡೈ ಮೋಟಾರ್ ಕಂಪೆನಿಯನ್ನು ಸ್ಥಾಪಿಸಿದ್ದರು. ಕೊರಿಯಾದ ಆಗಿನ ಅಧ್ಯಕ್ಷರಾಗಿದ್ದ ಪಾರ್ಕ್ ಹಿ, ಅವರು ತನ್ನ ದೇಶಕ್ಕೆ ಬಲಿಷ್ಠವಾದ ದೇಶೀಯ ಕೈಗಾರಿಕಾ ತಳಹದಿ ಇರುವ ಅಗತ್ಯವನ್ನು ಆಗ ಮನಗಂಡಿದ್ದರು. ಹೀಗಾಗಿ ಹ್ಯುಂಡೈಗೆ ಕೊರಿಯಾ ಸರಕಾರವು ಯಥೇಚ್ಛವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಸಬ್ಸಿಡಿ ಸೌಲಭ್ಯವನ್ನು ನೀಡಿತು. ಆಡಳಿತದಿಂದ ದೊರೆತ ಇಂತಹ ಸಂರಕ್ಷಣೆಯು ಹ್ಯುಂಡೈಗೆ ವೈಫಲ್ಯಗಳನ್ನು ಮೀರಿ ನಿಲ್ಲಲು, ಮಾರುಕಟ್ಟೆಯ ಪಾಠಗಳನ್ನು ಕಲಿಯಲು ಹಾಗೂ ಉದ್ಯಮರಂಗದಲ್ಲಿ ಮೇಲೆ ಬರಲು ನೆರವಾಯಿತು. ಒಂದು ವೇಳೆ ಕೊರಿಯಾ ಸರಕಾರವು ಪರಂಪರಾಗತ ಆರ್ಥಿಕ ನೀತಿಯನ್ನು ಅನುಸರಿಸುತ್ತಿದ್ದಲ್ಲಿ, ಅದು ಈಗಲೂ ತನ್ನ ಸಾಂಪ್ರದಾಯಿಕ ಉದ್ಯಮಗಳಾದ ಜವಳಿ, ಮೀನು ಹಾಗೂ ಉಕ್ಕನ್ನು ಮಾತ್ರವೇ ಮಾರಾಟ ಮಾಡುತ್ತಿರಬೇಕಾಗಿತ್ತು.

ಅದೇ ರೀತಿ, ಸರಕಾರ ಹಾಗೂ ಬಂಡವಾಳದ ನಡುವಿನ ಜೊತೆಗಾರಿಕೆಯು, ಚೀನಾದ ಆರ್ಥಿಕ ಬೆಳವಣಿಗೆಗೆ ಕಾರಣವಾಯಿತು. ಸರಕಾರಿ ಸಬ್ಸಿಡಿಗಳು, ಆದ್ಯತೆಯ ಆರ್ಥಿಕ ನೆರವು ಹಾಗೂ ಆಡಳಿತದ ಮಧ್ಯಪ್ರವೇಶವು, ಚೀನಾವು ಜಗತ್ತಿನ ಅತ್ಯಂತ ಬೃಹತ್ ಉಕ್ಕು ಹಾಗೂ ಸೌರ ಫಲಕಗಳ ತಯಾರಕನಾಗಿ ರೂಪುಗೊಳ್ಳಲು ಕಾರಣವಾಯಿತೆಂದು, ಅರ್ಥಶಾಸ್ತ್ರಜ್ಞರಾದ ಉಷಾ ಹಾಗೂ ಜಾರ್ಜ್‌ಹ್ಯಾಲೆ ಅವರ ಸಂಶೋಧನಾ ಪ್ರಬಂಧಗಳು ಸಾಬೀತುಪಡಿಸಿವೆ.

ಸ್ಪರ್ಧಾತ್ಮಕ ಅಭಿಯಾನ

ಹಾಗಾದರೆ ಭಾರತದಲ್ಲಿ ಏನು ಪ್ರಮಾದವಾಗಿತ್ತು?. ದೇಶಕ್ಕೆ ಕೈಗಾರಿಕಾ ತಳಹದಿಯನ್ನು ನಿರ್ಮಿಸುವ ಕಠಿಣವಾದ ಕಾರ್ಯವನ್ನು ದೇಶದ ಬಂಡವಾಳಶಾಹಿವರ್ಗಕ್ಕೆ ವಹಿಸಲು ಇಚ್ಛಿಸದ ನೆಹರೂ ಆ ಹೊರೆಯನ್ನು ಸಂಪೂರ್ಣವಾಗಿ ಸಾರ್ವಜನಿಕರಂಗದ ಮೇಲೆ ಹೊರಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ವಿದೇಶಿ ಮಾರುಕಟ್ಟೆಗಳು ಹಾಗೂ ವಿದೇಶಿ ತಂತ್ರಜ್ಞಾನ ಕೈಗಾರಿಕೀಕರಣಕ್ಕೆ ಆಧಾರವಾಗುವುದಕ್ಕೆ ಆಸ್ಪದ ನೀಡಲು ಅವರು ನಿರಾಕರಿಸಿದರು. ಭಾರತದ ಹೊರತಾಗಿ ಅಂದು ಪೂರ್ವ ಏಶ್ಯಾದ ಉಳಿದೆಲ್ಲಾ ದೇಶಗಳು ಅತ್ಯಂತ ಕಟ್ಟುನಿಟ್ಟಾದ ರಫ್ತು ನೀತಿಗೆ ಒಳಪಟ್ಟಿದ್ದವು. ಹೀಗಾಗಿ ಆ ದೇಶಗಳ ಕಂಪೆನಿಗಳ ನಡುವೆ ಉನ್ನತಮಟ್ಟದ ಸ್ಪರ್ಧಾತ್ಮಕತೆಯೇರ್ಪಟ್ಟಿತ್ತು.

ದುರದೃಷ್ಟಕರವೆಂದರೆ ನೆಹರೂ ಆಡಳಿತದ ವರ್ಷಗಳ ಬಗ್ಗೆ ಬಹುತೇಕ ಜನರಲ್ಲಿ ತಪ್ಪು ಅಭಿಪ್ರಾಯಗಳಿವೆ. ಒಂದು ವೇಳೆ ಉದ್ಯಮರಂಗದ ಮೇಲೆ ಸರಕಾರದ ಹಸ್ತಕ್ಷೇಪ ಇಲ್ಲದೆ ಇರುತ್ತಿದ್ದಲ್ಲಿ, ಆಗ ಕಾರ್ಮಿಕ ಕಾನೂನು, ತಂತ್ರಜ್ಞಾನ, ನೈಪುಣ್ಯದ ಕೊರತೆಯನ್ನು ದೇಶದಲ್ಲಿನ ಉತ್ಪಾದನಾ ವೈಫಲ್ಯಕ್ಕೆ ದೂರುವ ಸಾಧ್ಯತೆಯಿರುತ್ತಿತ್ತು.

ಪ್ರಸ್ತುತ ದೇಶದ ಹಾಗೂ ವಿದೇಶಗಳಲ್ಲಿನ ಅರ್ಥಶಾಸ್ತ್ರದ ಪಂಡಿತರ ದೃಷ್ಟಿಯಲ್ಲಿ ಆರ್ಥಿಕ ಸುಧಾರಣೆಯೆಂದರೆ, ಉದ್ಯಮಗಳ ಮೇಲಿನ ನಿರ್ಬಂಧ ಸಡಿಲಿಕೆ, ಖಾಸಗೀಕರಣ ಹಾಗೂ ಉದಾರೀಕರಣವಷ್ಟೇ ಆಗಿದೆ.

ಜವಾಹರಲಾಲ್ ನೆಹರೂ ಅವರು 125ನೇ ಜನ್ಮದಿನಾಚರಣೆ ಯಂದು ಭಾರತವು ಇತಿಹಾಸದಿಂದ ಸಮರ್ಪಕವಾದ ಪಾಠಗಳನ್ನು ಕಲಿಯಬೇಕಾದ ಅಗತ್ಯವಿದೆ. ಪ್ರಾಯಶಃ ನೆಹರೂ ಪ್ರತಿಪಾದಿಸುವ ಯೋಜನೆ, ಕೈಗಾರಿಕಾ ಸಂರಕ್ಷಣಾತ್ಮಕತೆಯಂತಹ ಕೆಲವು ಕ್ರಮಗಳನ್ನು ಅಳವಡಿಸಿಕೊಂಡು, ಅಗಾಧವಾದ ಉದ್ಯೋಗಗಳನ್ನು ಹಾಗೂ ಗಣನೀಯವಾದ ಆರ್ಥಿಕ ಬೆಳವಣಿಗೆಗೆ ಸೂಕ್ತ ಕ್ರಮಗಳನ್ನು ಕೈಗೊಂಡಲ್ಲಿ ಖಂಡಿತವಾಗಿಯೂ ಅದು ಭಾರತದ ಪ್ರಗತಿಗೆ ಹೊಸ ದಾರಿಯನ್ನು ತೋರಲಿದೆ.

Writer - ಅಕ್ಷತ್ ಖಂಡೇಲ್‌ವಾಲ್

contributor

Editor - ಅಕ್ಷತ್ ಖಂಡೇಲ್‌ವಾಲ್

contributor

Similar News

ಜಗದಗಲ
ಜಗ ದಗಲ