ಇಬ್ಬರು ದಲಿತರನ್ನು ಕೆಸರು ನೀರಿನಲ್ಲಿ ಮುಳುಗಿಸಿದ ಬಿಜೆಪಿ ನಾಯಕ: ಆರೋಪಿ ಸೇರಿದಂತೆ ಮೂವರೂ ನಾಪತ್ತೆ

Update: 2017-11-14 15:39 GMT

ನಿಝಾಮಾಬಾದ್, ನ.14: ಸ್ಥಳೀಯ ಬಿಜೆಪಿ ನಾಯಕನೊಬ್ಬ ಇಬ್ಬರು ದಲಿತರನ್ನು ಕೆಸರು ನೀರಿನಲ್ಲಿ ಮುಳುಗೇಳುವಂತೆ ಮಾಡಿದ ವೀಡಿಯೊ ತುಣುಕು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿ ಸಹಿತ ಇಬ್ಬರು ದಲಿತರು ಕೂಡಾ ನಾಪತ್ತೆಯಾಗಿರುವ ಘಟನೆ ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

 ಅಭಂಗಪಟ್ಣಂ ಎಂಬ ಗ್ರಾಮದಲ್ಲಿ ನಡೆದ ಘಟನೆ ಇದಾಗಿದ್ದು ದೃಶ್ಯಾವಳಿಯಲ್ಲಿ ಆರೋಪಿ ಬಿಜೆಪಿಯ ಭರತ್ ರೆಡ್ಡಿ ತನ್ನ ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಬೈಗುಳಗಳನ್ನು ಹರಿಸುತ್ತಾ ಇಬ್ಬರು ದಲಿತರನ್ನು ಕೆಸರು ನೀರಿನಲ್ಲಿ ಮುಳುಗಿ ಮೇಲೇಳುವಂತೆ ಶಿಕ್ಷಿಸುತ್ತಿರುವುದು ಕಂಡು ಬಂದಿದೆ.

ವರದಿಗಳ ಪ್ರಕಾರ ಭರತ್ ರೆಡ್ಡಿಯು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದು ಇದನ್ನು ಪ್ರಶ್ನಿಸಲೆಂದೇ ರಾಜೇಶ್ವರ್ ಮತ್ತು ಲಕ್ಷ್ಮಣ್ ಎಂಬ ಇಬ್ಬರು ದಲಿತರು ಆತನ ಕಾರನ್ನು ನಿಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಈ ಕೃತ್ಯ ಎಸಗಿದ್ದಾನೆ.

ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಆರೋಪಿ ಹಾಗೂ ಇಬ್ಬರು ಸಂತ್ರಸ್ತರು ಕೂಡಾ ನಾಪತ್ತೆಯಾಗಿದ್ದಾರೆ. ಪೊಲೀಸರು ಸಂತ್ರಸ್ತರ ಕುಟಂಬಸ್ಥರ ಬಳಿ ಪ್ರಶ್ನಿಸಿದಾಗ ಅವರಿಬ್ಬರೂ ನವೆಂಬರ್ 12ರಂದು ಕೆಲಸಕ್ಕೆಂದು ತೆರಳಿದ್ದು ಬಳಿಕ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ ಈ ಘಟನೆಯು ಕಳೆದ ತಿಂಗಳು ದಸರಾದ ಸಮಯದಲ್ಲಿ ನಡೆದಿದ್ದು ಅದರ ವೀಡಿಯೊ ಮಾತ್ರ ನವೆಂಬರ್ 12ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದೆ. ಆರೋಪಿಯನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ ಮತ್ತು ಸಂತ್ರಸ್ತರನ್ನು ಪತ್ತೆಹಚ್ಚಲು ಕೂಡಾ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನವಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ನಿಝಾಮಾಬಾದ್ ಎಸಿಪಿ ಸುದರ್ಶನ್ ಪ್ರಕರಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವುದಾಗಿ ಪೊಲೀಸ್ ಆಯುಕ್ತರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆಯ ಎಸ್‌ಸಿ/ಎಸ್‌ಟಿ (ದೌರ್ಜನ್ಯತಡೆ) ಕಾಯ್ದೆ ಮತ್ತು ಸೆಕ್ಷನ್ 506 (ಅಪರಾಧಿ ಬೆದರಿಕೆ) ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

 ಘಟನೆಯನ್ನು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು ಬಿಜೆಪಿ ನಾಯಕನನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿವೆ. ಇನ್ನೊಂದೆಡೆ ದಲಿತ ಸಂಘಟನೆಗಳು ನವೆಂಬರ್ 19ರಂದು ಚಲೋ ಅಭಂಗಪಟ್ಣಂ ಚಳವಳಿ ನಡೆಸಲು ಕರೆ ನೀಡಿವೆ.

ತೆಲಂಗಾಣ ಬಿಜೆಪಿಯು ವೀಡಿಯೊ ತುಣುಕಿನಲ್ಲಿ ಕಾಣಿಸುವ ವ್ಯಕ್ತಿ ಪಕ್ಷದ ನಾಯಕನಾಗಿದ್ದಾನೆ ಎಂಬ ಆರೋಪವನ್ನು ತಳ್ಳಿಹಾಕಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಕೃಷ್ಣಸಾಗರ್ ರಾವ್, ನಿಝಾಮಾಬಾದ್‌ನಲ್ಲಿ ನಡೆದ ಘಟನೆಯ ವೀಡಿಯೊ ದೃಶ್ಯಾವಳಿ ಬಗ್ಗೆ ಕೆಲವು ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ತಪ್ಪು ಸುದ್ದಿಯನ್ನು ಬಿಜೆಪಿ ಖಂಡಿಸುತ್ತದೆ. ದಲಿತರ ಮೇಲೆ ಈ ರೀತಿ ಅನಾಗರಿಕ ಮತ್ತು ಸ್ವೀಕಾರಾರ್ಹವಲ್ಲದ ದೌರ್ಜನ್ಯವನ್ನು ಎಸಗುತ್ತಿರುವವನು ಬಿಜೆಪಿ ಮುಖಂಡನಲ್ಲ ಮತ್ತು ಆತ ಪಕ್ಷದಲ್ಲಿ ಯಾವುದೇ ಸ್ಥಾನವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News