ಭಾರತದ ನಗರಗಳಲ್ಲಿ ವಾಸಿಸುವ ಶೇಕಡಾ 60ರಷ್ಟು ಮಹಿಳೆಯರಿಗೆ ಮಧುಮೇಹದ ಅಪಾಯ: ಸಮೀಕ್ಷೆ

Update: 2017-11-14 16:03 GMT

ಹೊಸದಿಲ್ಲಿ, ನ.14: ಭಾರತದ ನಗರಗಳಲ್ಲಿ ಜೀವಿಸುವ ಶೇಕಡಾ 60 ಮಹಿಳೆಯರು ಸರಿಯಾದ ವ್ಯಾಯಾಮ ಕ್ರಮವನ್ನು ಅನುಸರಿಸುವುದಿಲ್ಲ. ಹಾಗಾಗಿ ಅವರು ಮಧುಮೇಹಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಹೊಸ ಸಮೀಕ್ಷೆಯ ವರದಿಯೊಂದು ತಿಳಿಸುತ್ತದೆ.

ನೊವೊ ನೋರ್ಡಿಸ್ಕ್ ಇಂಡಿಯಾ ಎಂಬ ಮಧುಮೇಹ ಚಿಕಿತ್ಸಾ ಸಂಸ್ಥೆ ನಡೆಸಿರುವ ಸಮೀಕ್ಷೆಯ ವರದಿಯು ಮಂಗಳವಾರ ವಿಶ್ವ ಮಧುಮೇಹ ದಿನದಂದು ಬಿಡುಗಡೆಯಾಗಿದ್ದು, ಅದರಲ್ಲಿ ಶೇಕಡಾ 73 ನಗರವಾಸಿ ಮಹಿಳೆಯರಿಗೆ ಗರ್ಭಾವಸ್ಥೆಯ ಮಧುಮೇಹ ಮತ್ತು ಅದರಿಂದ ಮುಂದಿನ ತಲೆಮಾರಿಗೆ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದು ತಿಳಿಸಲಾಗಿದೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಂಟರ್ ಐಎಂಆರ್‌ಬಿ ಸಹಯೋಗದೊಂದಿಗೆ ನಡೆಸಿರುವ ಈ ಸಮೀಕ್ಷೆಯಲ್ಲಿ 18ರಿಂದ 65ರ ಹರೆಯದ ಒಂದು ಸಾವಿರಕ್ಕಿಂತಲೂ ಅಧಿಕ ಮಹಿಳೆಯರನ್ನು ಸಂದರ್ಶನ ನಡೆಸಲಾಗಿದ್ದು, ಮಧುಮೇಹದಿಂದ ಉಂಟಾಗುವ ಅಪಾಯದ ಬಗ್ಗೆ ಅವರಿಗಿರುವ ಅರಿವಿನ ಬಗ್ಗೆ ತಿಳಿದುಕೊಳ್ಳಲಾಯಿತು. ಈ ಸಮೀಕ್ಷೆಯನ್ನು ದಿಲ್ಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್, ಚೆನ್ನೈ, ಅಹ್ಮದಾಬಾದ್, ಭುವನೇಶ್ವರ್, ಲಕ್ನೋ, ಲುಧಿಯಾನಾ, ಇಂದೋರ್, ಗುವಾಹಟಿ, ಕೊಚ್ಚಿ ಮತ್ತು ವಿಜಯವಾಡ ಹೀಗೆ 14 ನಗರಗಳಲ್ಲಿ ನಡೆಸಲಾಗಿದೆ. ಸಂದರ್ಶನ ನಡೆಸಿದ ಮಹಿಳೆಯರ ಪೈಕಿ ಶೇಕಡಾ 78 ಮಂದಿಗೆ ಮಧುಮೇಹದ ಗಂಭೀರ ಪರಿಣಾಮಗಳ ಬಗ್ಗೆ ಅರಿವಿದ್ದರೆ ಶೇಕಡಾ 70 ಮಹಿಳೆಯರು ಆರೋಗ್ಯಪೂರ್ಣ ಜೀವನಶೈಲಿಯಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ನಂಬಿದ್ದಾರೆ. ಶೇಕಡಾ 78 ಮಹಿಳೆಯರಿಗೆ ಮಧುಮೇಹ ಮತ್ತದರ ಪರಿಣಾಮದ ಬಗ್ಗೆ ಅರಿವಿರುವುದು ಸಂತೋಷದ ವಿಷಯವೇ ಆಗಿದ್ದರೂ ಈ ಸಮಸ್ಯೆಯನ್ನು ಎದುರಿಸಲು ಮಹಿಳೆಯರು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಆತಂಕದ ವಿಷಯವಾಗಿದೆ ಎಂದು ನೊವೊ ನೋರ್ಡಿಸ್ಕ್ ಇಂಡಿಯಾದ ವ್ಯವಸ್ಥಾಪನಾ ನಿರ್ದೇಶಕ ಮೆಲ್ವಿನ್ ಡಿಸೋಜಾ ತಿಳಿಸಿದ್ದಾರೆ.

ಲ್ಯಾನ್ಸೆಟ್ ಎಂಬ ಜರ್ನಲ್‌ನಲ್ಲಿ ಉಲ್ಲೇಖಿಸಿರುವ ಒಂದು ಸಮೀಕ್ಷೆಯಂತೆ ದೈಹಿಕ ಚಟುವಟಿಕೆಯ ಕೊರತೆಯು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೆಲವು ಕ್ಯಾನ್ಸರ್‌ಗಳ ನೇರ ಸಂಬಂಧ ಹೊಂದಿದ್ದು ಇದರಿಂದಾಗಿ ವಾರ್ಷಿಕ ಐದು ಮಿಲಿಯನ್ ಸಾವುಗಳು ಸಂಭವಿಸುತ್ತವೆ. ಭಾರತವು 72.9 ಮಿಲಿಯನ್ ಮಧುಮೇಹಿಗಳನ್ನು ಹೊಂದಿದ್ದು ಮಧುಮೇಹದ ರಾಜಧಾನಿಯೆಂದೇ ಕುಖ್ಯಾತಿ ಪಡೆದಿದೆ. 2045ರ ಹೊತ್ತಿಗೆ ಭಾರತದ ಮಧುಮೇಹಿಗಳ ಸಂಖ್ಯೆ 134.3 ಮಿಲಿಯನ್ ತಲುಪುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News