ಕಾರ್ಮಿಕರ ಸಾವುಗಳು ಮತ್ತು ಸರಾಗವಾಗಿ ನಡೆಯುವ ಉದ್ಯಮಗಳು

Update: 2017-11-14 18:31 GMT

‘ಮೇಕ್ ಇನ್ ಇಂಡಿಯಾ’ ಹಾಗೂ ಹೂಡಿಕೆಗಳನ್ನು ಉತ್ತೇಜಿಸುವ ಹೆಸರಿನಲ್ಲಿ ಸರಕಾರವು, ಕಾರ್ಮಿಕರ ಅದರಲ್ಲೂ ಅತ್ಯಂತ ಅಸುರಕ್ಷಿತರಾದ ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರ ಸುರಕ್ಷೆ ಮತ್ತು ಹಕ್ಕುಗಳಿಗೆ ಸಂಬಂಧಪಟ್ಟ ಕಾನೂನುಗಳನ್ನು ಉದ್ಯಮಿಗಳು ಅಟ್ಟಹಾಸದಿಂದ ಮಾಡುತ್ತಿರುವ ಉಲ್ಲಂಘನೆಯ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಉಂಚಹಾರ್‌ನಲ್ಲಿ ನಡೆದ ಅಪಘಾತವು ಈ ಕಟು ವಾಸ್ತವವನ್ನು ಮತ್ತಷ್ಟು ಗಂಭೀರವಾಗಿ ನಮ್ಮ ಮುಂದಿರಿಸಿದೆ.

ಭಾರತದಲ್ಲಿ ಮನುಷ್ಯರ ಜೀವ ಬಲು ಅಗ್ಗವಾಗಿಬಿಟ್ಟಿದೆ. ಎಷ್ಟು ಅಗ್ಗವೆಂದರೆ ಒಬ್ಬ ಬಡವ ಅಥವಾ ಒಬ್ಬ ಕಾರ್ಮಿಕ ಸತ್ತರೆ ಯಾರಿಗೂ ಏನೂ ಅನಿಸುವುದೇ ಇಲ್ಲ. ಮಾಧ್ಯಮಗಳು ಇತರ ಹಲವಾರು ವಿಷಯಗಳ ಬಗ್ಗೆ ಸಾರ್ವಜನಿಕ ಆಕ್ರೋಶವನ್ನು ಕೆರಳಿಸುತ್ತವೆ. ಆದರೆ ನಾವೂ ಕೂಡ ಪರೋಕ್ಷವಾಗಿ ಹೊಣೆಗಾರರಾಗಿರುವ ಸಮಾಜದ ಅತ್ಯಂತ ಅತಂತ್ರ ವರ್ಗಗಳ ಸಾವಿನ ಬಗ್ಗೆ ಮಾತ್ರ ಎಂದಿಗೂ ಮಾಧ್ಯಮಗಳ ಮನ ಮಿಡಿಯುವುದೇ ಇಲ್ಲ. ಹೀಗಾಗಿಯೇ ಇತ್ತೀಚೆಗೆ ಸಾರ್ವಜನಿಕ ವಲಯದ ಉಷ್ಣ ವಿದ್ಯುತ್ ಸ್ಥಾವರವೊಂದರಲ್ಲಿ ನಡೆದ ಅವಘಡವೊಂದರಲ್ಲಿ 32 ಜನ ಕಾರ್ಮಿಕರು ಸತ್ತು ನೂರಕ್ಕೂ ಹೆಚ್ಚು ಕಾರ್ಮಿಕರು ಮಾರಣಾಂತಿಕವಾಗಿ ಗಾಯಗೊಂಡಿದ್ದು ಯಾರ ಗಮನಕ್ಕೂ ಬರದ ಮತ್ತೊಂದು ದುರಂತ ಘಟಿಸಿಹೋಯಿತು. ರಾಜ್ಯ ಸರಕಾರವು ಒಂದಷ್ಟು ಪರಿಹಾರವನ್ನು ಘೋಷಿಸಿತು. ಒಂದು ತನಿಖಾ ಅಯೋಗವನ್ನು ರಚಿಸಲಾಯಿತು. ಅಷ್ಟೆ. ಈ ಪ್ರಕರಣವೇ ಜನಮಾನಸದಿಂದ ಮರೆಯಾಗಿ ಹೋಯಿತು. ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಊಂಛಹಾರದ ನ್ಯಾಶನಲ್ ಥರ್ಮಲ್ ಪವರ್ ಕಾರ್ಪೊರೇಷನ್‌ಗೆ (ಎನ್‌ಟಿಪಿಸಿ)ಸೇರಿದ ಘಟಕವೊಂದರಲ್ಲಿ ನವಂಬರ್ 1ರಂದು ನಡೆದ ಈ ಅವಘಡವು ಕಾರ್ಮಿಕರ ಸುರಕ್ಷತೆಯ ಬಗ್ಗೆ ಇರುವ ಅಮಾನುಷ ನಿರ್ಲಕ್ಷ್ಯವನ್ನೂ ಮತ್ತು ಒಂದು ನಿಯಮದಂತೆ ಈ ದೇಶದಲ್ಲಿ ನಡೆಯುತ್ತಿರುವ ಕಾರ್ಮಿಕ ಕಾನೂನುಗಳ ಉಲ್ಲಂಘನೆಯ ಭೀಕರತೆಯನ್ನು ಬಯಲಿಗೆ ತಂದಿದೆ.

ಎನ್‌ಟಿಪಿಸಿ ಘಟಕದಲ್ಲಿ ನಿರ್ದಿಷ್ಟವಾಗಿ ಏನು ಸಂಭವಿಸಿತೆಂಬ ವಿವರಗಳು ಪ್ರಾಯಶಃ ತನಿಖೆಯ ನಂತರ ಲಭ್ಯವಾಗಬಹುದು. ಆದರೂ ಈಗಾಗಲೇ ಕೆಲವು ವಾಸ್ತವ ಸತ್ಯಗಳು ಬಯಲಾಗಿವೆ. ಊಂಛಹಾರ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಹೊಸದಾಗಿ ನಿರ್ಮಿಸಲಾದ 6ನೆ ಘಟಕದ ಅಧಿಕ ಒತ್ತಡದ ಸ್ಟೀಮ್ ಬಾಯ್ಲರ್‌ನಲ್ಲಿ ತೀವ್ರವಾದ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಅದನ್ನು ನಿವಾರಿಸುವ ಸಲುವಾಗಿ ಬಾಯ್ಲರ್ ಅನ್ನು ಬಂದ್ ಮಾಡಿರಬೇಕಿತ್ತು. ಆದರೂ, ಅದು ಕಾರ್ಯ ನಿರ್ವಹಿಸುತ್ತಲೇ ಇತ್ತು ಮತ್ತು ಬಾಯ್ಲರ್‌ನಲ್ಲಿ ತುಂಬಿಕೊಂಡಿದ್ದ ಕಲ್ಲಿದ್ದಲ ಧೂಳನ್ನು ಕೈಗಳಿಂದಲೇ ತೆಗೆಯಲು ಕಾರ್ಮಿಕರಿಗೆ ಹೇಳಲಾಯಿತು. ಆ ಬಾಯ್ಲರ್‌ನಲ್ಲಿ ಒತ್ತಡವು ತೀವ್ರಗೊಂಡು ಅದು ಸ್ಫೋಟಗೊಳ್ಳುವ ಸಮಯದಲ್ಲಿ ಅದರ ಆಸುಪಾಸಿನಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಕಾರ್ಮಿಕರ ಸುರಕ್ಷತೆಯನ್ನು ಅದ್ಯತೆಯನ್ನಾಗಿ ಮಾಡಿಕೊಂಡಿದ್ದರೆ ಖಂಡಿತಾ ಈ ದುರಂತವನ್ನು ತಡೆಗಟ್ಟಬಹುದಾಗಿತ್ತು.

ನಾವು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಈ ದುರಂತವು ನಡೆದಿರುವುದು ಯಾವುದೋ ಸಣ್ಣಪುಟ್ಟ ಘಟಕದಲ್ಲೋ ಅಥವಾ ಯಾವುದೇ ಕಾರ್ಮಿಕ ಸುರಕ್ಷಾ ಕಾಯ್ದೆ ಮತ್ತು ನಿಯಂತ್ರಣಗಳಿಗೆ ಒಳಪಡದ ಕಾರ್ಖಾನೆಯಲ್ಲೋ ಅಲ್ಲ. ಈ ಅವಘಡವು ನಡೆದಿರುವುದು ದೇಶಾದ್ಯಂತ 48 ಉಷ್ಣ ವಿದ್ಯುತ್ ಘಟಕಗಳ ನಿರ್ವಹಣೆ ಮಾಡುವ ಈ ದೇಶದ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಎನ್‌ಟಿಪಿಸಿಯು ನಡೆಸುವ ಘಟಕವೊಂದರಲ್ಲಿ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಈ ಅವಘಡದಿಂದ ತೀವ್ರವಾಗಿ ಹಾನಿಗೊಳಗಾದವರು ಈ ಕೆಲಸವನ್ನು ತುಂಡುಗುತ್ತಿಗೆಯಲ್ಲಿ ಪಡೆದುಕೊಂಡ ಗುತ್ತಿಗೆದಾರ ಕರೆತಂದಿದ್ದ ವಲಸೆ ಗುತ್ತಿಗೆ ಕಾರ್ಮಿಕರು. ಇದು ದೊಡ್ಡ ದೊಡ್ಡ ಉದ್ಯಮ ಸಂಸ್ಥೆಗಳು ಹೂಡುತ್ತಿರುವ ಕುತಂತ್ರದ ಭಾಗ. ಇದು ಉದ್ಯಮಗಳು ಮತ್ತು ಮಾಲಕರು ಕಾರ್ಮಿಕರ ಬಗ್ಗೆ ತಮಗಿರಬೇಕಾದ ಹೊಣೆಗಾರಿಕೆಯನ್ನು ಕಾರ್ಮಿಕ ಕಾನೂನುಗಳು ಅನ್ವಯವಾಗುವ ಅತಿ ಕಡಿಮೆ ಸಂಖ್ಯೆಯ ಶಾಶ್ವತ ಕಾರ್ಮಿಕರಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಬಹುಪಾಲು ಕೆಲಸಗಳನ್ನು ಅದರಲ್ಲೂ ಇಂತಹ ಅಪಾಯಕಾರಿ ಕೆಲಸಗಳನ್ನು ಹೊರಗುತ್ತಿಗೆಗೆ ಕೊಡಲಾಗುತ್ತದೆ. ಸಾಮಾನ್ಯವಾಗಿ ಅಂಥ ತುಂಡು ಗುತ್ತಿಗೆದಾರರು ದಿನಗೂಲಿಯ ಲೆಕ್ಕದಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಈ ಗುತ್ತಿಗೆ ಕಾರ್ಮಿಕರಿಗೆ ಅವಘಡ ಅಥವಾ ಅಪಾಯಗಳು ಸಂಭವಿಸಿದಾಗ ರಕ್ಷಿಸಿಕೊಳ್ಳಲು ಅರೋಗ್ಯ ವಿಮಾದ ಸೌಲಭ್ಯವಿರುವುದಿಲ್ಲ. ಭಾರತದ ತಥಾಕಥಿತ ಸಂಘಟಿತ ಕ್ಷೇತ್ರದ ಕರಾಳ ಮುಖಗಳು ಇಂಥಾ ಅವಘಡಗಳು ಸಂಭವಿಸಿದಾಗ ಬಯಲಾಗುತ್ತವೆ. ಅತ್ಯುತ್ತಮವಾಗಿ ನಿರ್ವಹಿಸಲ್ಪಡುವ ಕಾರ್ಖಾನೆಗಳಲ್ಲೂ ಅವಘಡಗಳು ಸಂಭವಿಸಬಹುದು. ಆದರೆ ಅವುಗಳ ದೈನಂದಿನ ನಿರ್ವಹಣೆಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದಿದ್ದಲ್ಲಿ ಇಂತಹ ಅವಘಡಗಳನ್ನು ತಡೆಗಟ್ಟಬಹುದು ಮತ್ತು ಅವುಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಭೋಪಾಲ್ ಅನಿಲ ದುರಂತದಲ್ಲಿ ನಾವು ನೋಡಿದಂತೆ ಕಳಪೆ ನಿರ್ವಹಣೆಯ ಕಾರಣದಿಂದಲೇ 1984ರ ನವೆಂಬರ್ 2 ರಂದು ಕಾರ್ಖಾನೆ ಆವರಣದಲ್ಲಿದ್ದ ಮೀಥೈಲ್ ಐಸೊಸೈಯನೈಟ್ ಟ್ಯಾಂಕು ಸ್ಫೋಟಗೊಳ್ಳುವಂತಾಯಿತು. ಅದರಿಂದ ಭೋಪಾಲ್‌ನ ಹಲವು ಭಾಗಗಳನ್ನು ಆವರಿಸಿಕೊಂಡ ಅನಿಲ ಮೋಡಗಳ ಪರಿಣಾಮವನ್ನು ಇವತ್ತಿಗೂ ಭೋಪಾಲ್‌ನ ಜನ ಅನುಭವಿಸುತ್ತಿದ್ದಾರೆ. ಈ ದುರಂತದ ಕಾರಣದಿಂದಾಗಿಯೇ ಭಾರತದಲ್ಲಿ ಸಡಿಲವಾಗಿದ್ದ ಕಾರ್ಮಿಕರ ಸುರಕ್ಷತೆಯ ಬಗೆಗಿನ ಕಾನೂನುಗಳು ಸ್ವಲ್ಪವಾದರೂ ಬಿಗಿಯಾಯಿತು.

ಆದರೆ ಇಂದು ನರೇಂದ್ರ ಮೋದಿ ಸರಕಾರದ ಇಷಾರೆಯ ಮೇರೆಗೆ ‘ಉದ್ಯಮಗಳ ಸರಾಗ ನಿರ್ವಹಣೆ’ಯನ್ನು ಹೆಚ್ಚು ಮಾಡುವ ಹೆಸರಲ್ಲಿ ಹಲವಾರು ರಾಜ್ಯಗಳಲ್ಲಿ ಇಂಥಾ ಕಾನೂನುಗಳನ್ನು ಸಡಿಲಗೊಳಿಸಲಾಗುತ್ತಿದೆ. 2014ರ ನಂತರದಲ್ಲಿ 1970ರ ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿರ್ಮೂಲನೆ ಕಾಯ್ದೆಗೆ, 1948ರ ಕಾರ್ಖಾನೆ ಕಾಯ್ದೆಗೆ, 1947ರ ಕೈಗಾರಿಕಾ ವ್ಯಾಜ್ಯ ಕಾಯ್ದೆಗೂ ಹಲವಾರು ತಿದ್ದುಪಡಿಗಳನ್ನು ಮಾಡುವ ಪ್ರಸ್ತಾಪಗಳನ್ನು ಮಾಡಲಾಗಿದೆ. ಅಷ್ಟು ಮಾತ್ರವಲ್ಲ, ಕೇಂದ್ರೀಯ ಬಾಯ್ಲರ್ ನಿಗಮದಿಂದ ತಪಾಸಣೆ ಮತ್ತು ಅನುಮತಿ ಪತ್ರವನ್ನು ಪಡೆಯುವುದನ್ನು ಕಡ್ಡಾಯ ಮಾಡುತ್ತಿದ್ದ 1950ರ ಭಾರತೀಯ ಬಾಯ್ಲರ್ ನಿಯಂತ್ರಣ ಕಾಯ್ದೆಗೂ ತಿದ್ದುಪಡಿ ತಂದು ಸ್ವಯಂ ಪ್ರಮಾಣೀಕರಣವನ್ನು ಅನುಮತಿಸಲಾಗಿದೆ. ಇನ್‌ಸ್ಪೆಕ್ಟರ್ ರಾಜ್ ಅನ್ನು ಇಲ್ಲದಂತೆ ಮಾಡುವುದೇ ಇದರ ಹಿಂದಿನ ಉದ್ದೇಶವೆಂದು ಇದಕ್ಕೆ ಸಮಜಾಯಿಷಿ ನೀಡಲಾಗುತ್ತಿದೆ. ಆದರೆ ಇದರಿಂದಾಗಿ ಸುರಕ್ಷತೆಯನ್ನು ಖಾತರಿಗೊಳಿಸುವ ನಿಯಂತ್ರಣಗಳಲ್ಲಿ ರಾಜಿಯಾಗದಂತೆ ನೋಡಿಕೊಳ್ಳುವ ಯಾವುದೇ ಕ್ರಮಗಳನ್ನು ಮಾತ್ರ ತೆಗೆದುಕೊಳ್ಳುತ್ತಿಲ್ಲ.

ಮೇಲಾಗಿ, ಊಂಛಹಾರ್‌ನಲ್ಲಿ ನಡೆದಿರುವಂತೆ, ಅಪಾಯಕಾರಿ ಘಟಕಗಳಲ್ಲಿ ಹೆಚ್ಚೆಚ್ಚು ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಅನುಮತಿಕೊಡಬಲ್ಲಂಥ ತಿದ್ದುಪಡಿಗಳನ್ನು ಗುತ್ತಿಗೆ ಕಾರ್ಮಿಕರಿಗೆ ಸಂಬಂಧಪಟ್ಟಂಥ ಕಾಯ್ದೆಗೆ ತರುವ ಪ್ರಸ್ತಾಪಗಳನ್ನು ಮಾಡಲಾಗಿದೆ. ಹಾಲಿ ಇರುವ ಕಾನೂನಿನ ಪ್ರಕಾರ, ಅದರಲ್ಲೂ ಏಷಿಯಾಡ್ ಪ್ರಕರಣದಲ್ಲಿ (ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಮತ್ತು ಭಾರತ ಸರಕಾರ ಹಾಗೂ ಇತರರು, 1982) ಸುಪ್ರೀಂ ಕೋರ್ಟು ನೀಡಿರುವ ಆದೇಶದಂತೆ ಸರಕಾರಿ ಸಂಸ್ಥೆಗಳಲ್ಲಿ ನೇಮಿಸಿಕೊಂಡಿರುವ ಗುತ್ತಿಗೆ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಸರಕಾರವೇ ಅವರನ್ನು ನೇಮಕಾತಿ ಮಾಡಿಕೊಂಡ ಪ್ರಮುಖ ಉದ್ಯೋಗದಾತನಾಗಿರುತ್ತದೆ. ಹೀಗಾಗಿ ಊಂಛಹಾರ್ ಘಟಕದಲ್ಲಿದ್ದ ಎಲ್ಲಾ ಶಾಶ್ವತ ಮತ್ತು ಗುತ್ತಿಗೆ ಕಾರ್ಮಿಕರಿಗೆ ಎನ್‌ಟಿಪಿಸಿಯೇ ಬಾಧ್ಯಸ್ಥನಾಗಿರುತ್ತದೆ. ಸರಕಾರವು ಗಾಯಗೊಂಡ ಕಾರ್ಮಿಕರಿಗೆ ಕೊಡುವ ಪರಿಹಾರವಾಗಲೀ ಅಥವಾ ಸತ್ತ ಕಾರ್ಮಿಕರ ಕುಟುಂಬಗಳಿಗೆ ಕೊಡುವ ಪರಿಹಾರವಾಗಲೀ ಎಲ್ಲಾ ಕಾರ್ಮಿಕರ ಬಗ್ಗೆ ಎನ್‌ಟಿಪಿಸಿ ಗೆ ಇರುವ ಹೊಣೆಗಾರಿಕೆಯನ್ನು ಬದಲಿ ಮಾಡುವುದಿಲ್ಲ ಎಂಬುದನ್ನು ನಾವು ಒತ್ತಿಹೇಳಬೇಕಿದೆ. ದುರದೃಷ್ಟವಶಾತ್ ಗುತ್ತಿಗೆ ಕಾರ್ಮಿಕರಿಗೆ ಸಂಬಂಧಪಟ್ಟ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಗಳು ಗುತ್ತಿಗೆ ಕಾರ್ಮಿಕರ ಈ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ.

ಸರಕಾರವು ಕಾರ್ಮಿಕ ಹಕ್ಕುಗಳ ತಪಾಸಣೆಯನ್ನು ಮಾಡುವ ನಿಯಮಾವಳಿಗಳಲ್ಲೂ ಬದಲಾವಣೆ ಮಾಡಿದೆ. ಆ ಮೂಲಕ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ)ದ 81 ನೇ ಕಲಮನ್ನು ಉಲ್ಲಂಘಿಸಿದೆ. ಏಕೆಂದರೆ ಈ ಒಪ್ಪಂದಕ್ಕೆ ಭಾರತವು ಭಾಗೀದಾರನಾಗಿದೆ. ಈ ಸರಕಾರವು ‘ಶ್ರಮ್ ಸುವಿಧಾ’ ಎಂಬ ಪೋರ್ಟಲ್ ಒಂದನ್ನು ಸ್ಥಾಪಿಸಿದ್ದು ಎಲ್ಲಾ ಉದ್ಯಮಿಗಳು ಆ ಪೋರ್ಟಲ್‌ನಲ್ಲಿ ತಾವು ಕಾರ್ಮಿಕರಿಗೆ ಸಂಬಂಧಪಟ್ಟ ಎಲ್ಲಾ 16 ಕಾಯ್ದೆಗಳನ್ನು ಪಾಲಿಸುತ್ತಿದ್ದೇವೆ ಎಂದು ಸ್ವಯಂ ಪ್ರಮಾಣೀಕರಿಸಿದರೆ ಸಾಕಾಗುತ್ತದೆ. ಇಂತಹ ಸ್ವಯಂ ಪ್ರಮಾಣೀಕರಣಗಳು ಪರಿಸರ ಸಂಬಂಧಿ ಕಾನೂನುಗಳ ಪಾಲನೆಯಲ್ಲೂ ಮೋಸಪೂರಿತವಾಗಿರುತ್ತವೆ. ಹೀಗಿರುವಾಗ ಅವು ಕಾರ್ಮಿಕರ ಕಾನೂನು ಅಥವಾ ಕೈಗಾರಿಕಾ ಸುರಕ್ಷತೆಯ ವಿಷಯದಲ್ಲಿ ಮಾತ್ರ ಹೇಗೆ ಭಿನ್ನವಾಗಿರಲು ಸಾಧ್ಯ? ‘ಮೇಕ್ ಇನ್ ಇಂಡಿಯಾ’ ಹಾಗೂ ಹೂಡಿಕೆಗಳನ್ನು ಉತ್ತೇಜಿಸುವ ಹೆಸರಿನಲ್ಲಿ ಸರಕಾರವು, ಕಾರ್ಮಿಕರ ಅದರಲ್ಲೂ ಅತ್ಯಂತ ಅಸುರಕ್ಷಿತರಾದ ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರ ಸುರಕ್ಷೆ ಮತ್ತು ಹಕ್ಕುಗಳಿಗೆ ಸಂಬಂಧಪಟ್ಟ ಕಾನೂನುಗಳನ್ನು ಉದ್ಯಮಿಗಳು ಅಟ್ಟಹಾಸದಿಂದ ಮಾಡುತ್ತಿರುವ ಉಲ್ಲಂಘನೆಯ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಊಂಛಹಾರ್‌ನಲ್ಲಿ ನಡೆದ ಅವಘಡವು ಈ ಕಟು ವಾಸ್ತವವನ್ನು ಮತ್ತಷ್ಟು ಗಂಭೀರವಾಗಿ ನಮ್ಮ ಮುಂದಿರಿಸಿದೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ