ನೂತನ ನಿಯಮಗಳಂತೆ ಅಮೆರಿಕದ ವಯಸ್ಕರಲ್ಲಿ ಅರ್ಧದಷ್ಟು ಜನರಿಗೆ ಅಧಿಕ ರಕ್ತದೊತ್ತಡ

Update: 2017-11-15 09:42 GMT

ವಾಷಿಂಗ್ಟನ್, ನ. 15: ಅಮೆರಿಕದ ಪ್ರಮುಖ ಹೃದಯತಜ್ಞರು ಇತ್ತೀಚಿಗೆ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ನೂತನ ನಿಯಮಗಳನ್ನು ಹೊರಡಿಸಿದ್ದಾರೆ. ಇದರಂತೆ ಮಿಲಿಯಗಟ್ಟಲೆ ಅಮೆರಿಕನ್ನರು ಅಧಿಕ ರಕ್ತದೊತ್ತಡವನ್ನು ಹೊಂದಿದವರ ವ್ಯಾಪ್ತಿಗೆ ಸೇರಲಿದ್ದಾರೆ. ತಮ್ಮ ರಕ್ತದೊತ್ತಡವನ್ನು ಹತೋಟಿಯಲ್ಲಿರಿಸಲು ಅವರೀಗ ತಮ್ಮ ಜೀವನ ಶೈಲಿಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ ಅಥವಾ ಔಷಧಿಗಳನ್ನು ಸೇವಿಸಬೇಕಾಗುತ್ತದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ರೂಪಿಸಿರುವ ನೂತನ ಮಾರ್ಗಸೂಚಿಗಳಡಿ ಅಧಿಕ ರಕ್ತದೊತ್ತಡವನ್ನು ಹೊಂದಿರುವ 45 ವರ್ಷಕ್ಕಿಂತ ಕೆಳಗಿನ ವಯೋಮಾನದವರ ಸಂಖ್ಯೆ ಮೂರು ಪಟ್ಟುಗಳ ಷ್ಟಾಗಲಿದೆ ಮತ್ತು ಇದೇ ವಯೋಗುಂಪಿನ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಲಿದೆ.

ಈ ಸಂಖ್ಯೆಗಳು ಆತಂಕವನ್ನು ಸೃಷ್ಟಿಸಿವೆ ಎನ್ನುತ್ತಾರೆ ವರ್ಜೀನಿಯಾ ವಿವಿಯ ಔಷಧಿ ವಿಭಾಗದ ಪ್ರೊಫೆಸರ್ ಹಾಗೂ ನೂತನ ಮಾರ್ಗಸೂಚಿಗಳನ್ನು ರೂಪಿಸಿದ ಸಮಿತಿಯ ಸಹ ಅಧ್ಯಕ್ಷ ಡಾ.ರಾಬರ್ಟ್ ಎಂ.ಕ್ಯಾರಿ. ಹಿಂದಿನ ಮಾರ್ಗಸೂಚಿಗಳಂತೆ 71 ಮಿಲಿಯನ್ ಇದ್ದ ಅಧಿಕ ರಕ್ತದೊತ್ತಡ ಹೊಂದಿರುವ ವಯಸ್ಕರ ಸಂಖ್ಯೆ ನೂತನ ಮಾರ್ಗಸೂಚಿಗಳಡಿ 103 ಮಿಲಿಯನ್‌ಗೆ ಹೆಚ್ಚಲಿದೆ.

ಆದರೆ ಅಧಿಕ ರಕ್ತದೊತ್ತಡಕ್ಕಾಗಿ ಔಷಧಿಗಳನ್ನು ಸೇವಿಸುವವರ ಗುಂಪಿಗೆ ಸೇರಲಿರುವ ಹೊಸಬರ ಸಂಖ್ಯೆ ಕೇವಲ ಅಂದಾಜು 4.2 ಮಿಲಿಯನ್‌ಗಳಷ್ಟು ಹೆಚ್ಚಲಿದೆ ಎಂದು ಡಾ.ಕ್ಯಾರಿ ತಿಳಿಸಿದರು.

ಅಮೆರಿಕನ್ನರು ನೂತನ ಮಾರ್ಗಸೂಚಿಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚು ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಅಥವಾ ವೈದ್ಯಕೀಯ ಚಿಕಿತ್ಸೆಯಿಂದ ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಈಗಾಗಲೇ ತಗ್ಗುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಸಾವುಗಳ ಸಂಖ್ಯೆಯನ್ನು ಇನ್ನಷ್ಟು ತಗ್ಗಿಸಲು ಸಾಧ್ಯ ಎನ್ನುತ್ತಾರೆ ತಜ್ಞರು.

ಹಿಂದಿನ ಮಾರ್ಗಸೂಚಿಗಳಂತೆ ರಕ್ತದೊತ್ತಡ 140/90 ಎಂಎಂಎಚ್‌ಜಿಗಿಂತ ಹೆಚ್ಚಿದ್ದರೆ ಅದನ್ನು ಅಧಿಕ ರಕ್ತದೊತ್ತಡವೆಂದು ಪರಿಗಣಿಸಲಾಗುತ್ತಿತ್ತು. ನೂತನ ಮಾರ್ಗಸೂಚಿಯಡಿ ಈ ಮಾನದಂಡವನ್ನು 130/80 ಎಂಎಂಎಚ್‌ಜಿಗೆ ಇಳಿಸಲಾಗಿದೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಆದರೆ ಅಧಿಕ ರಕ್ತದೊತ್ತಡದ ಮಾನದಂಡವನ್ನು ತಗ್ಗಿಸಿರುವ ನೂತನ ಮಾರ್ಗಸೂಚಿಗಳ ಬಗ್ಗೆ ತಜ್ಞರಲ್ಲಿಯೇ ಭಿನ್ನಾಭಪ್ರಾಯಗಳು ಕೇಳಿಬಂದಿವೆ. ಇದು ರಕ್ತದೊತ್ತಡ ಒಂದು ಮಿತಿಯಲ್ಲಿಯೇ ಇರುವವರಿಗೂ ಅಧಿಕ ರಕ್ತದೊತ್ತಡದ ಗುಮ್ಮನನ್ನು ತೋರಿಸಿ ಅವರೂ ಔಷಧಿಗಳನ್ನು ಸೇವಿಸುವಂತೆ ಮಾಡುವ ಮೂಲಕ ತಮ್ಮ ಔಷಧಿಗಳ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಔಷಧಿ ತಯಾರಿಕೆ ಸಂಸ್ಥೆಗಳ ತಂತ್ರವಾಗಿದೆ ಎಂದು ಒಂದು ವರ್ಗವು ಬಲವಾಗಿ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News