ಗುಜರಾತ್ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ!?

Update: 2017-11-15 18:16 GMT

 ರಾಜ್ಯವೊಂದರ ವಿಧಾನಸಭಾ ಚುನಾವಣೆ ಪ್ರಧಾನಿಯೊಬ್ಬರ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವತಃ ಅವರೇ ಪ್ರಚಾರಕ್ಕೆ ಈ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಳ್ಳುವುದು ಅವರು ಅಲಂಕರಿಸಿರುವ ಹುದ್ದೆಗೆ ಘನತೆ ತರುವಂತಹದ್ದೇನೂ ಅಲ್ಲ. ಇಂಡಿಯಾದ ಸಂಸದೀಯ ಪ್ರಜಾಸತ್ತೆಯಲ್ಲಿ ಚುನಾವಣೆಗಳ ಗೆಲುವೇ ಎಲ್ಲದಕ್ಕೂ ಮಾನದಂಡವಾಗಿರುವ ಸನ್ನಿವೇಶದಲ್ಲಿ ಇದೇನು ಅಚ್ಚರಿಯ ವಿಷಯವೂ ಅಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು, ಅಷ್ಟೆ!

2014ರ ಸಾರ್ವತ್ರಿಕ ಚುನಾವಣೆಗಳ ನಂತರ ಮೊದಲ ಬಾರಿಗೆ ಭಾಜಪ ಮತ್ತದರ ರಾಷ್ಟ್ರೀಯ ನಾಯಕರುಗಳಿಗೆ ಸೋಲಿನ ಭೀತಿ ಎದುರಾದಂತೆ ಕಾಣುತ್ತಿದೆ. ರಾಜ್ಯವೊಂದರ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಖುದ್ದು ಪ್ರಧಾನಮಂತ್ರಿಯವರೇ ಚುನಾವಣಾ ಕಣದ ಜಂಗೀ ಕುಸ್ತಿಯ ಅಖಾಡಕ್ಕಿಳಿದು ನಿರಂತರ ಪ್ರಚಾರ ಕೈಗೊಳ್ಳುವುದನ್ನು ನಾವು ಹಿಂದೆಂದೂ ಇತಿಹಾಸದಲ್ಲಿ ನೋಡಿರಲಿಲ್ಲ, ಕೇಳಿರಲಿಲ್ಲ. ಅದೀಗ ನಮ್ಮ ಕಾಲದಲ್ಲೇ ನಡೆಯುತ್ತಿದೆ.

 ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಗಳು ಅಂತಹದೊಂದು ಸಂದರ್ಭಕ್ಕೆ ಸಾಕ್ಷಿಯಾಗುತ್ತಿವೆ. ಕಳೆದ ಎರಡು ದಶಕಗಳಿಂದಲೂ ಸತತವಾಗಿ ಗುಜರಾತಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾಜಪಕ್ಕೆ ಮೊದಲ ಬಾರಿಗೆ ಸೋಲಿನ ಭಯ ಕಾಡುತ್ತಿದ್ದರೆ ಅದಕ್ಕೆ ಹಲವಾರು ಕಾರಣಗಳಿವೆ. ಹೀಗಾಗಿ ಪ್ರಧಾನಿಯವರ ತವರು ರಾಜ್ಯದಲ್ಲಿ ಪಕ್ಷ ಸೋಲುವುದು ರಾಷ್ಟ್ರಮಟ್ಟದಲ್ಲಿ ಅದರ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಂತಾಗುತ್ತದೆ ಮತ್ತು ಅಂತಾರಾಷ್ಟ್ರೀಯವಾಗಿ ಅದು ಪ್ರಧಾನಿಯವರ ಇಮೇಜಿಗೆ ಧಕ್ಕೆಯನ್ನೂ ತರಬಹುದು. ಹೀಗಾಗಿಯೇ ಗುಜರಾತ್ ಚುನಾವಣೆ ಕಾಂಗ್ರೆಸ್‌ಗಿಂತ ಭಾಜಪಕ್ಕೆ ಹೆಚ್ಚು ಪ್ರತಿಷ್ಠೆಯ ಮತ್ತು ಗೆಲ್ಲಲೇ ಬೇಕಾದ ಅನಿವಾರ್ಯತೆಯನ್ನು ತಂದೊಡ್ಡಿದೆ.

 ಹೀಗಾಗಿ ಸ್ವತ: ನರೇಂದ್ರ ಮೋದಿಯವರೇ ಗುಜರಾತ್ ಚುನಾವಣೆಯ ಮುಖ್ಯ ತಾರಾ ಪ್ರಚಾರಕರಾಗಿ ಭಾಜಪವನ್ನು ಗೆಲುವಿನ ದಡ ಸೇರಿಸಲು ಮುಂದಾಗುತ್ತಿದ್ದಾರೆ. ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರೇ ಇದೀಗ ಗುಜರಾತಿನ ಚುನಾವಣಾ ಅಖಾಡಕ್ಕೆ ಇಳಿದು ಪಕ್ಷವನ್ನು ಗೆಲ್ಲಿಸುವ ರಣಕಹಳೆ ಮೊಳಗಿಸಿದ್ದಾರೆ. ಗುಜರಾತಿನ ಭಾಜಪವು ಈಗ ಮೋದಿಯವರ ಹೆಸರನ್ನು ಹೇಳಿಕೊಂಡೇ ಮತಭಿಕ್ಷೆ ಕೇಳುತ್ತಿದೆ. ದಿಲ್ಲಿಯಲ್ಲಿ ಮೋದಿ ಅಧಿಕಾರದಲ್ಲಿ ಉಳಿಯಲು ಗುಜರಾತಿನಲ್ಲಿ ನೀವು ಭಾಜಪವನ್ನು ಗೆಲ್ಲಿಸಬೇಕೆಂಬ ಭಾವನಾತ್ಮಕ ಮನವಿಯನ್ನು ಭಾಜಪ ಮಾಡುತ್ತಿದೆ.

 ಹೀಗಾಗಿಯೇ ಕಳೆದ ಆರು ತಿಂಗಳಲ್ಲಿ ನರೇಂದ್ರ ಮೋದಿಯವರು ವಿವಿಧ ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಸುಮಾರು ಹತ್ತು ಬಾರಿ ಗುಜರಾತ್‌ಗೆ ಬಂದು ಹೋಗಿದ್ದಾರೆ. ಹಾಗೆ ಬಂದು ಹೋದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಅವರು ಹೆಚ್ಚೂ ಕಡಿಮೆ ಚುನಾವಣಾ ಭಾಷಣಗಳನ್ನೇ ಮಾಡಿದ್ದಾರೆ. ನರ್ಮದಾ ಅಣೆಕಟ್ಟು ಉದ್ಘಾಟನಾ ಸಮಾರಂಭ ಮತ್ತು ಬುಲೆಟ್ ರೈಲು ಯೋಜನೆಯ ಶಂಕುಸ್ಥಾಪನೆಯಿಂದ ಹಿಡಿದು ನೂರಾರು ಯೋಜನೆಗಳಿಗೆ ಅಡಿಗಲ್ಲುಗಳನ್ನು ಹಾಕುವ ಕೆಲಸ ಮಾಡಿ ಚುನಾವಣಾ ಸಿದ್ಧತೆಯನ್ನು ಮಾಡುತ್ತಲೇ ಬಂದಿದ್ದಾರೆ. ಇಷ್ಟಲ್ಲದೆ ಕಳೆದ ಮೂರು ತಿಂಗಳಿನಿಂದ ಕೇಂದ್ರ ಸಂಪುಟದ ಸುಮಾರು ಮೂವತ್ತು ಸಚಿವರಿಗೆ ಗುಜರಾತನ್ನು ವಿವಿಧ ಭಾಗಗಳನ್ನಾಗಿ ಮಾಡಿ ಚುನಾವಣಾ ಜವಾಬ್ದಾರಿಯನ್ನು, ಸಂಪನ್ಮೂಲ ಕ್ರೋಡೀಕರಣದ ಹೊಣೆಯನ್ನು ನೀಡಲಾಗಿದೆ. ಇದೀಗ ಭಾಜಪ ಆಡಳಿತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕೆಂಬ ಅಲಿಖಿತ ಆದೇಶ ಹೊರಟಿದ್ದು ಗುಜರಾತಿನ ಮೂಲೆಮೂಲೆಗಳಲ್ಲಿಯೂ ಭಾಜಪದ ನಾಯಕರು ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ, ಪ್ರಕಾಶ್ ಜಾವ್ಡೇಕರ್ ಗುಜರಾತಿನಲ್ಲಿ ಮನೆಮನೆಗೆ ತೆರಳಿ ಪಾದ ಯಾತ್ರೆಯ ಮೂಲಕ ಮತಯಾಚನೆ ಮಾಡಲು ಆರಂಭಿಸಿದ್ದಾರೆ. ಭಾಜಪದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗಾಗಲೇ ಗುಜರಾತಿನ ಮೂಲೆಮೂಲೆಗಳಲ್ಲಿಯೂ ಪ್ರವಾಸ ಮಾಡುತ್ತಾ ಬೂತ್ ಮಟ್ಟದ ಕಾರ್ಯಕ್ರಮಗಳ ಸಭೆಗಳನ್ನು ನಡೆಸುತ್ತಿದ್ದಾರೆ,

 ಇತ್ತೀಚೆಗೆ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿಯವರು ಗುಜರಾತ್ ಪ್ರವಾಸ ಕೈಗೊಳ್ಳಲಿದ್ದು ಜಿಲ್ಲೆಗೆ ಒಂದರಂತೆ ಮುವತ್ತೆರಡು ರ್ಯಾಲಿಗಳಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಈ ರ್ಯಾಲಿಗಳ ಜೊತೆ ಮೋದಿ ಸೂರತ್, ವಡೋದರ, ರಾಜಕೋಟ್ ಮತ್ತು ಅಹ್ಮದಾಬಾದ್ ನಗರಗಳಲ್ಲಿ ಬೃಹತ್ ರೋಡ್ ಶೋಗಳನ್ನು ಸಹ ನಡೆಸಲಿದ್ದಾರೆ. ಭಾಜಪದ ಟಿಕೆಟು ಹಂಚಿಕೆಯ ಕಾರ್ಯ ಬಹುತೇಕ ಈ ತಿಂಗಳ ಹದಿನೈದು ಮತ್ತು ಹದಿನಾರರಂದು ನಡೆಯಲಿದ್ದು ನವೆಂಬರ್ ಇಪ್ಪತ್ತನೆ ತಾರೀಕಿನ ನಂತರ ನರೇಂದ್ರ ಮೋದಿಯವರ ಗುಜರಾತ್ ಯಾತ್ರೆ ಪ್ರಾರಂಭವಾಗುವ ಅಂದಾಜಿದೆ. ಈ ಹಿನ್ನೆಲೆಯಲ್ಲಿ ಅದಾಗಲೇ ಗುಜರಾತ್ ಭಾಜಪದ ನಾಯಕರು ಮೋದಿಯವರ ಹೆಸರಲ್ಲಿ ಮತ ಕೇಳುತ್ತಿದ್ದು, ‘‘ಗುಜರಾತಿಯೊಬ್ಬರು ದೇಶದ ಪ್ರಧಾನಮಂತ್ರಿಯಾಗಿ ಉಳಿಯಲು ಮೊದಲು ಗುಜರಾತ್ ಜನತೆ ಭಾಜಪವನ್ನು ಗೆಲ್ಲಿಸಬೇಕಾಗಿದೆ’’ ಎಂಬ ಭಾವನಾತ್ಮಕ ಮಾತುಗಳನ್ನಾಡುತ್ತ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ದೇಶದ ಪ್ರಧಾನಿಯೊಬ್ಬರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳೇನೋ ಎನ್ನುವಂತೆ ಚುನಾವಣಾ ಪ್ರಚಾರದ ಹೊಣೆಯನ್ನು ಹೊತ್ತುಕೊಂಡು ಪ್ರಚಾರ ಮಾಡುತ್ತ, ಗುಜರಾತ್ ಜನತೆಗೆ ಆಶ್ವಾಸನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಯಾಕೆ ಗುಜರಾತಿನ ಈ ಚುನಾವಣೆಯನ್ನು ಸ್ವತ: ಪ್ರಧಾನಿಗಳು ತಮ್ಮ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡಿದ್ದಾರೆಂಬುದನ್ನು ನೋಡುತ್ತಾ ಹೋದರೆ ಸಿಗುವುದು ಭಾಜಪ ಈ ಬಾರಿ ಸೋಲಬಹುದೆಂಬ ಅವ್ಯಕ್ತ ಭಯ!

ಹಾಗಿದ್ದರೆ ಯಾಕಾಗಿ ಭಾಜಪ ಗುಜರಾತಿನಲ್ಲಿ ಸೋಲಬಹು ದೆಂಬುದನ್ನು ಸಂಕ್ಷಿಪ್ತವಾಗಿ ನೋಡೋಣ:

 ಮೊದಲನೆಯಾಗಿ ಕಳೆದ ಎರಡು ದಶಕಗಳ ಭಾಜಪ ಸರಕಾರದ ಆಡಳಿತ ಸಹಜವಾಗಿಯೇ ಆಡಳಿತ ವಿರೋಧಿ ಅಲೆಯೊಂದನ್ನು ಸೃಷ್ಟಿಸಿದ್ದು, ಕಾಂಗ್ರೆಸ್ ಅದನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ಎರಡನೆಯದಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾಗಿ ದಿಲ್ಲಿಯತ್ತ ಮುಖ ಮಾಡಿದ ನಂತರ ರಾಜ್ಯ ಭಾಜಪದಲ್ಲಿ ಜನಪ್ರಿಯ ನಾಯಕನೊಬ್ಬನ ಕೊರತೆ ಕಾಣುತ್ತಿದೆ. ರಾಜ್ಯದಲ್ಲಿ ಪಕ್ಷವನ್ನು ತನ್ನ ಹೆಗಲ ಮೇಲೆ ಹೊತ್ತು ಚುನಾವಣೆ ಎದುರಿಸಬಲ್ಲ ಒಬ್ಬನೇ ಒಬ್ಬ ಜನಸಮುದಾಯದ ನಾಯಕನೂ ಗುಜರಾತ್ ಭಾಜಪದಲ್ಲಿ ಕಂಡು ಬರುತ್ತಿಲ್ಲ. ಇನ್ನು ಕಳೆದ ಮೂರು ವರ್ಷಗಳಿಂದ ನಡೆಯುತ್ತಾ ಬಂದ ಪಾಟಿದಾರರ ಮೀಸಲಾತಿ ಚಳವಳಿ ಪಟೇಲ್ ಸಮುದಾಯವನ್ನು ಭಾಜಪದಿಂದ ದೂರ ಸರಿಸಿದ್ದು, ಆ ಚಳವಳಿಯ ಯುವ ನಾಯಕ ಹಾರ್ದಿಕ್ ಪಟೇಲ್ ಈಗ ಕಾಂಗ್ರೆಸ್‌ನ ಬೆಂಬಲಕ್ಕೆ ನಿಂತಿರುವುದು ಭಾಜಪಕ್ಕೆ ತಲೆನೋವಿನ ವಿಚಾರವಾಗಿದೆ. ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದನಂತರ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿದ್ದ ದಲಿತ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಗುಜರಾತಿಗೂ ವ್ಯಾಪಿಸಿದ್ದು, ಉನಾದಂತಹ ಪ್ರಕರಣಗಳು ಗುಜರಾತ್ ಜನತೆಯ ಅಸಮಾಧಾನಕ್ಕೆ ಕಾರಣವಾಗುತ್ತ ಹೋದವು. ದಲಿತರ ಮೇಲಿನ ಈ ಹಲ್ಲೆಯನ್ನು ಖಂಡಿಸಿ ನಡೆದ ಚಳವಳಿಯ ನೇತೃತ್ವ ವಹಿಸಿದ ಯುವ ನಾಯಕರಾದ ಜಿಗ್ನೇಶ್ ಮೆವಾನಿಯಂತಹವರು ಸಹ ಭಾಜಪವನ್ನು ಸೋಲಿಸಲೆಂದೇ ಕಾಂಗ್ರೆಸ್‌ಗೆ ಬೆಂಬಲ ಘೋಷಿ ಸಿರುವುದು ಭಾಜಪಕ್ಕೆ ಕಷ್ಟವನ್ನು ತಂದಿಟ್ಟಿದೆ. ಇನ್ನು ಹಿಂದುಳಿದ ವರ್ಗಗಳ ನಾಯಕರಾದ ಅಲ್ಪೇಶ್ ಠಾಕೂರ್ ಈಗಾಗಲೇ ಕಾಂಗ್ರೆಸ್ ಸೇರಿದ್ದು ಭಾಜಪದ ಸಂಕಷ್ಟವನ್ನು ಹೆಚ್ಚಿಸಿದೆ.

 ನೋಟ್ ಬ್ಯಾನಿನ ನಂತರ ಗುಜರಾತಿನ ಸಾಮಾನ್ಯ ಜನತೆ ಮಾತ್ರವಲ್ಲದೆ ಅಲ್ಲಿನ ವ್ಯಾಪಾರಸ್ಥರು ಸಹ ತೀವ್ರ ರೀತಿಯ ಸಂಕಷ್ಟ ಅನುಭವಿಸಬೇಕಾಯಿತು. ಇದರ ಹಿಂದೆಯೇ ಬಂದ ಜಿಎಸ್‌ಟಿ ಕಾಯ್ದೆ ಗುಜರಾತಿನ ಇಡೀ ವರ್ತಕ ಸಮುದಾಯದಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟು ಹಾಕಿತು. ಆ ಸಮುದಾಯ ಅಪಾರ ನಷ್ಬವನ್ನು ಅನುಭವಿಸಬೇಕಾಯಿತು. ಮೋದಿಯವರ ಜೊತೆಯೇ ದಿಲ್ಲಿಯತ್ತ ನಡೆದು ಹೋದ ಅಮಿತ್ ಶಾರ ನಿರ್ಗಮನದಿಂದ ಗುಜರಾತ್ ಭಾಜಪದಲ್ಲಿ ಭಿನ್ನಮತೀಯ ಚಟುವಟಿಕೆಗಳು ಹೆಚ್ಚಾಗಿದ್ದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲವೆಂಬ ಸಂದೇಶ ಜನರಿಗೆ ಈಗಾಗಲೇ ತಲುಪಿದೆ.

 ಈ ಎಲ್ಲಾ ಕಾರಣಗಳು ಭಾಜಪದ ಸತತ ಗೆಲುವಿನ ಓಟಕ್ಕೆ ತಡೆಯೊಡ್ಡಬಹುದೆಂಬ ರಾಜಕೀಯ ವಿಶ್ಲೇಷಕರ ಅನುಮಾನವೇ ಇದೀಗ ಭಾಜಪದ ನಿದ್ದೆಗೆಡಿಸಿದ್ದು, ಪ್ರಧಾನಮಂತ್ರಿಗಳೇ ಗುಜರಾತ್ ಗೆಲುವಿಗೆ ಪಣತೊಟ್ಟು ಮೈದಾನಕ್ಕಿಳಿದಿರುವಂತೆ ಗೋಚರವಾಗುತ್ತಿದೆ. ಆದರೆ ಭಾಜಪದ ಸೋಲಾಗಲಿ ಕಾಂಗ್ರೆಸ್‌ನ ಗೆಲುವಾಗಲಿ ನಾವಂದುಕೊಂಡಷ್ಟು ಸುಲಭವಾಗಿಲ್ಲ. ಯಾಕೆಂದರೆ ಸತತ ಸೋಲುಗಳಿಂದ ಕಂಗೆಟ್ಟಿರುವ ಗುಜರಾತಿನ ಕಾಂಗ್ರೆಸ್ ಹೇಗೆ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ ಭಾಜಪದ ಸೋಲು-ಗೆಲುವು ನಿರ್ಧಾರವಾಗಲಿದೆ ಎನ್ನುವುದಂತು ನಿಜ.

 ಆದರೆ ರಾಜ್ಯವೊಂದರ ವಿಧಾನಸಭಾ ಚುನಾವಣೆ ಪ್ರಧಾನಿಯೊಬ್ಬರ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವತ: ಅವರೇ ಪ್ರಚಾರಕ್ಕೆ ಈ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಳ್ಳುವುದು ಅವರು ಅಲಂಕರಿಸಿರುವ ಹುದ್ದೆಗೆ ಘನತೆ ತರುವಂತಹದ್ದೇನೂ ಅಲ್ಲ. ಇಂಡಿಯಾದ ಸಂಸದೀಯ ಪ್ರಜಾಸತ್ತೆಯಲ್ಲಿ ಚುನಾವಣೆಗಳ ಗೆಲುವೇ ಎಲ್ಲದಕ್ಕೂ ಮಾನದಂಡವಾಗಿರುವ ಸನ್ನಿವೇಶದಲ್ಲಿ ಇದೇನು ಅಚ್ಚರಿಯ ವಿಷಯವೂ ಅಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು, ಅಷ್ಟೆ!

Writer - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Editor - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Similar News

ಜಗದಗಲ
ಜಗ ದಗಲ