ಪ್ರಾಚೀನ ಮಕ್ಕಳ ಆಟಿಕೆಗಳ ವಿಶಿಷ್ಟ ಸಂಗ್ರಹಾಲಯ

Update: 2017-11-15 18:34 GMT

ಪ್ಲಾಸ್ಟಿಕ್ ಯುಗಕ್ಕೆ ಮೊದಲಿನ ಲೋಹದ ಆಟಿಕೆಗಳು, ನೇಪಥ್ಯಕ್ಕೆ ಸೇರಿದ ಸಾಂಪ್ರದಾಯಿಕ ಆಟಿಕೆ ವಸ್ತುಗಳು, ಕೌಶಲ್ಯ ಬೆಳವಣಿಗೆಯ ವಿವಿಧ ರೀತಿಯ ಮಕ್ಕಳ ಆಟಗಳು ಸೇರಿದಂತೆ ವಿವಿಧ ರೀತಿಯ ಆಟಿಕೆಗಳ ಸಂಗ್ರಹಗಳನ್ನೊಳಗೊಂಡ ವಿಶಿಷ್ಟ ವಸ್ತು ಸಂಗ್ರಹಾಲಯವೊಂದು ಇದೀಗ ಮಕ್ಕಳಿಗಾಗಿ ಮಣಿಪಾಲ ಅನಂತನಗರದಲ್ಲಿರುವ ಹಸ್ತಶಿಲ್ಪ ಸಂಸ್ಕೃತಿಯ ಮನೆ ಯಲ್ಲಿ ತೆರೆದುಕೊಂಡಿವೆ.

ಮಣಿಪಾಲದ ಹಸ್ತಶಿಲ್ಪ ಸಂಸ್ಕೃತಿ ಗ್ರಾಮದ ಸಂಸ್ಥಾಪಕ ಕಾರ್ಯದರ್ಶಿ ವಿಜಯನಾಥ ಶೆಣೈ ಅವರ ಪ್ರಮುಖ ಯೋಜನೆಯಾದ ಹಸ್ತಶಿಲ್ಪ ಸಂಸ್ಕೃತಿ ಮನೆಯಲ್ಲಿ ಈ ವಸ್ತು ಸಂಗ್ರಹಾಲಯವನ್ನು ಆರಂಭಿಸಲಾಗಿದ್ದು, ಸುಮಾರು 15 ವರ್ಷಗಳ ಕಾಲ ಮುಚ್ಚಿದ್ದ ಈ ಮನೆಯನ್ನು ಮಕ್ಕಳ ಆಕರ್ಷಣೀಯ ಕೇಂದ್ರ ವಾಗಿ ಪುನರ್ ನವೀಕರಿಸಲಾಗಿದೆ.

ಸಂಸ್ಕೃತಿ ಮನೆ ಇತಿಹಾಸ: ವಿಜಯನಾಥ ಶೆಣೈ ತನ್ನ ಕುಟುಂಬದೊಂದಿಗೆ ವಾಸಿಸಲು ಈ ಹಸ್ತಶಿಲ್ಪ ಸಂಸ್ಕೃತಿಯ ಮನೆಯನ್ನು 1985-90ರಲ್ಲಿ ನಿರ್ಮಿಸಿದ್ದರು. ಅವಿಭಜಿತ ದ.ಕ. ಜಿಲ್ಲೆಯ ಬೀಳುವ ಸ್ಥಿತಿಯಲ್ಲಿದ್ದ ಸುಮಾರು 60 ವಿವಿಧ ರೀತಿಯ ಮನೆಗಳ ಪಾರಂಪರಿಕ ಪರಿಕರಗಳನ್ನು ಈ ಮನೆಯಲ್ಲಿ ಜೋಡಿಸಿ ಜನಾಕರ್ಷಣೆಯ ಕೇಂದ್ರವನ್ನಾಗಿಸಿದರು. ಈ ಮನೆ ಅವರ ಮೊದಲ ಪ್ರಯೋಗ ಸ್ಥಳವಾಗಿತ್ತು. ಈ ಮನೆಯಲ್ಲಿ ಅವರು ಸಂಗ್ರಹಿಸಿದ ಪ್ರಾಚೀನ ವಸ್ತುಗಳನ್ನು ರಕ್ಷಿಸಿ ಪ್ರದರ್ಶಿಸಿದ್ದರು.

ಕ್ರಮೇಣ ಹಸ್ತಶಿಲ್ಪ ಎಂಬ ಈ ವಿಶಿಷ್ಟ ಮನೆಯನ್ನು ನೋಡಲು ಕುತೂಹಲದಿಂದ ಬರುವವರ ಸಂಖ್ಯೆ ಹೆಚ್ಚಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಮನೆ ಹೆಸರು ಗಳಿಸಿತು. ಇದರಿಂದ ಶೆಣೈ ಮತ್ತು ಅವರ ಕುಟುಂಬದವರ ಖಾಸಗಿತನಕ್ಕೆ ತೊಂದರೆ ಉಂಟಾಯಿತು. ಅದಕ್ಕೆ ಅವರು ನಿರ್ಮಿಸಿದ ಕೆಲವೇ ದಿನಗಳಲ್ಲಿ ಆ ಮನೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಿ ಬೇರೆ ಮನೆಯಲ್ಲಿ ವಾಸ ಮಾಡಿದರು. ಆ ಬಳಿಕ ಅವರು ಮಣ್ಣಪಳ್ಳ ಪಕ್ಕದಲ್ಲಿ ‘ಹೆರಿಟೇಜ್ ವಿಲೇಜ್’ ಎಂಬ ಅದ್ಭುತ ಪ್ರಪಂಚವೊಂದನ್ನು ನಿರ್ಮಿಸಿದ್ದರು.

ಕೇವಲ ಮನೆಗಳ ಅವಶೇಷಗಳನ್ನು ಸಂಗ್ರಹಿಸುವ ಬದಲು ಇಡೀ ಮನೆಗಳನ್ನೇ ಸ್ಥಳಾಂತರಿಸಿ ನಿರ್ಮಿಸುವ ಯೋಜನೆ ಹಾಕಿಕೊಂಡ ಶೆಣೈ, ಸರಕಾರದಿಂದ ಮಣಿಪಾಲದಲ್ಲಿ ಜಾಗ ಪಡೆದುಕೊಂಡು ಅಲ್ಲಿ ಹಸ್ತಶಿಲ್ಪ ಸಂಸ್ಕೃತಿ ಗ್ರಾಮವನ್ನು ಹುಟ್ಟು ಹಾಕಿದರು. ಆನಂತರ ಇವರು ಬಹುತೇಕ ತಮ್ಮ ಶ್ರಮವನ್ನು ಈ ಗ್ರಾಮ ನಿರ್ಮಿಸಲು ವ್ಯಯಿಸಿದರು. ಹೀಗಾಗಿ ಹಸ್ತಶಿಲ್ಪ ಸಂಸ್ಕೃತಿ ಮನೆಯು ಸುಮಾರು 15-18 ವರ್ಷಗಳ ಕಾಲ ಮುಚ್ಚಲ್ಪಟ್ಟಿತ್ತು.

‘‘ಇದೀಗ ಮತ್ತೆ ಈ ಮನೆಯನ್ನು ಪುನರ್ ನವೀಕರಿಸಿ, ಹಸ್ತಶಿಲ್ಪ ಸಂಸ್ಕೃತಿ ಗ್ರಾಮದಲ್ಲಿದ್ದ ಮಕ್ಕಳಿಗೆ ಸಂಬಂಧಿಸಿದ ಆಟಿಕೆ ವಸ್ತುಗಳ ಸಂಗ್ರಹವನ್ನು ಇಲ್ಲಿಗೆ ವರ್ಗಾಯಿಸಿ ವಸ್ತುಸಂಗ್ರಹಾಲಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಯಿತು’’ ಎನ್ನುತ್ತಾರೆ ಹಸ್ತಶಿಲ್ಪ ಟ್ರಸ್ಟ್‌ನ ಟ್ರಸ್ಟಿ ಹರೀಶ್ ಪೈ.

ಅದ್ಭುತ ಮಕ್ಕಳ ಪ್ರಪಂಚ: ಇಲ್ಲಿರುವ ಬಹುತೇಕ ಆಟಿಕೆ ವಸ್ತುಗಳು ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿದ್ದ ಸಾಂಪ್ರದಾಯಿಕ ಆಟಿಕೆಗಳಾಗಿವೆ. ಪ್ರಾಣಿ, ಪಕ್ಷಿಗಳ ಸಣ್ಣ ಗಾತ್ರದ ತಾಮ್ರದ ಆಟಿಕೆಗಳು, ಮಕ್ಕಳ ಮನೆ ಯಾಟದ ಅಡುಗೆ ಪಾತ್ರೆಯ ತಾಮ್ರದ ಪರಿಕರಗಳು, ಕೈಪಂಪ್, ಗಿಳಿಪಂಜರ, ಫ್ಯಾನ್, ಪಾರಂಪರಿಕ ಮಕ್ಕಳ ಬಟ್ಟೆ ಬರೆಗಳ ಸಂಗ್ರಹವು ಅತ್ಯಾಕರ್ಷಕವಾಗಿದೆ.

ಇಲ್ಲಿರುವ ಆಟಿಕೆಗಳು ಕೆಲವು ಮಕ್ಕಳ ಕೌಶಲ್ಯದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಮೋಟಾರು, ವೈಜ್ಞಾನಿಕ ಮತ್ತು ಅರಿವಿನ ಕೌಶಲ್ಯವನ್ನು ಬೆಳೆಸುವ ಆಟಿಕೆಗಳು ಅದ್ಭುತವಾಗಿವೆ. ದಕ್ಷಿಣ ಕರ್ನಾಟಕದಲ್ಲಿ ಕಂಡು ಬರುವ ವಿವಿಧ ಅಪರೂಪದ ಆಟಗಳಾದ ಪಂಚ ಕೆಳಿಯ, ಚದುರಂಗ, ಹಾವು ಏಣಿ ಆಟ, ಹುಲಿಯನ್ನು ಹಿಡಿಯುವ ಹುಲಿ ಕಟ್ಟು ಆಟ, ಹಸು ಚಿರತೆ ಆಟ, ಅನ್ಯ ಕಟ್ಟು, ದಶಗುಟ್ಟ ಆಟ, ಸಾಂಪ್ರಾದಾಯಿಕ ಮಣೆಯಾಟಗಳ ಸಂಗ್ರಹವೇ ಇಲ್ಲಿದೆ.

ಅಲ್ಲದೆ ಮಕ್ಕಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಪಂಚದ ಬೇರೆ ಬೇರೆ ಭಾಗಗಳ ಆಕರ್ಷಕ ಆಟಿಕೆಗಳು ಕೂಡ ಇಲ್ಲಿ ಇಡಲಾಗಿದೆ. ಚೆನ್ನಪಟ್ಟಣದ ಮರದ ಆಟಿಕೆಗಳು ಗಮನ ಸೆಳೆಯುತ್ತವೆ. ಇಲ್ಲಿರುವ ಬಹುತೇಕ ಆಟಿಕೆಗಳು ಇಂದಿನ ಆಧುನಿಕ ಯುಗದಲ್ಲಿ ನೇಪಥ್ಯಕ್ಕೆ ಸೇರಿವೆ. 30 ವರ್ಷಗಳ ಹಿಂದೆ ಮಕ್ಕಳ ಚಿತ್ರಕಲೆ ಸ್ಪರ್ಧೆಯಲ್ಲಿ ಬಿಡಿಸಿದ ಗಣೇಶನ ಕಲಾಕೃತಿಗಳನ್ನು ಈವರೆಗೆ ಸಂಗ್ರಹಿಸಿ ಇಡಲಾಗಿದೆ. ಅದೇ ರೀತಿ ಇಲ್ಲಿ ಹಳೆಯ ವಸ್ತುಗಳನ್ನು ಜೋಡಿಸಿ ಅಡುಗೆ ಮನೆಯ ಕಲ್ಪನೆಯನ್ನು ನಿರ್ಮಿಸಲಾಗಿದೆ. ಚಿತ್ತಾಕರ್ಷಕವಾಗಿ ಕೆತ್ತಲ್ಪಟ್ಟ ಮರದ ಸುಂದರ ತೊಟ್ಟಿಲು ಕೂಡ ಇಲ್ಲಿದೆ. ಈ ಅಭೂತಪೂರ್ವ ಮಕ್ಕಳ ಆಟಿಕೆ ವಸ್ತುಗಳ ಸಂಗ್ರಹಾಲಯವು ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ವಿಜಯನಾಥ ಶೆಣೈಯವರ ಪುತ್ರಿ ಅನುರೂಪಾ ಶೆಣೈ ಮಾಹಿತಿ ನೀಡಿದ್ದಾರೆ.

ಇತಿಹಾಸ ಹೇಳುವ ಸಂಗ್ರಹಾಲಯ: ಡಿಸಿ

ಮಕ್ಕಳ ದಿನಾಚರಣೆಯಂದು ಈ ವಸ್ತುಸಂಗ್ರಹಾಲಯ ವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಿ, ‘‘ಈ ಸಂಗ್ರಹಾಲಯದ ಕಲ್ಪನೆ ಅದ್ಭುತವಾಗಿದೆ. ಇಲ್ಲಿರುವ ಪ್ರತಿಯೊಂದು ಕೆತ್ತನೆ ಕೂಡ ಇತಿಹಾಸವನ್ನು ಹೇಳುತ್ತದೆ. ಇದರಿಂದ ಮಕ್ಕಳು ಇತಿಹಾಸವನ್ನು ಅರಿತುಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಇಂದು ಮೊಬೈಲ್, ವೀಡಿಯೊ ಗೇಮ್‌ಗಳಲ್ಲಿ ಮುಳುಗಿರುವ ಮಕ್ಕಳಿಗೆ ಇಲ್ಲಿರುವ ವಿವಿಧ ಸಾಂಪ್ರದಾಯಿಕ ಆಟಗಳ ಪರಿಚಯವಾಗುತ್ತದೆ’’ ಎಂದಿದ್ದಾರೆ.

ವಾರದಲ್ಲಿ ಮೂರು ದಿನ ವೀಕ್ಷಣೆ

ಮಕ್ಕಳ ಆಟಿಕೆಗಳ ಸಂಗ್ರಹಾಲಯವು ವಿಶೇಷವಾಗಿ ಶಾಲಾ ಮಕ್ಕಳಿಗೆ ಮೀಸಲಿರಿಸಿದ್ದು, ಈ ತಿಂಗಳಿನಿಂದ ಫೆಬ್ರವರಿ ತಿಂಗಳ ಕೊನೆಯವರೆಗೆ ವಾರದಲ್ಲಿ ಮಂಗಳವಾರ, ಗುರುವಾರ ಹಾಗೂ ಶನಿವಾರ ತೆರೆದಿರುತ್ತದೆ.
ಪ್ರತಿಯೊಬ್ಬರಿಗೆ 50ರೂ. ಪ್ರವೇಶ ಶುಲ್ಕವನ್ನು ವಿಧಿಸಲು ತೀರ್ಮಾನಿಸಲಾಗಿದೆ. ಸರಕಾರಿ ಶಾಲೆಯ ಮಕ್ಕಳಿಗೆ ರಿಯಾಯಿತಿ ನೀಡಲಾಗುವುದು. ಇದರ ಉಸ್ತುವಾರಿಯನ್ನು ವಿಜಯನಾಥ ಶೆಣೈ ಅವರ ಮಗಳು ಅನುರೂಪಾ ಶೆಣೈ ವಹಿಸಿಕೊಳ್ಳಲಿದ್ದಾರೆ. ಮೊಬೈಲ್ ಸಂಖ್ಯೆ- 9483634576ಗೆ ಕರೆ ಮಾಡಿ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ನೀಡಲಾಗಿದೆ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News

ಜಗದಗಲ
ಜಗ ದಗಲ