ಲಿಂಗತ್ವ ಅಸಮಾನತೆ ನಿವಾರಣೆ ಯಾವಾಗ?

Update: 2017-11-15 18:53 GMT

‘ಬೆೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆ ಈಗ ದೇಶದ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ, ಲಿಂಗತ್ವದ ಅಸಮಾನತೆಯಲ್ಲಿ ಭಾರತ 144 ರಾಷ್ಟ್ರಗಳ ಪೈಕಿ 108ನೇ ಸ್ಥಾನದಲ್ಲಿದೆ. ಕಳೆದ ವರ್ಷ ಈ ಸೂಚ್ಯಂಕದಲ್ಲಿ ಭಾರತದ ಸ್ಥಾನ 87ರಲ್ಲಿತ್ತು. ಅಂದರೆ, ಮತ್ತೆ 21 ಸ್ಥಾನಗಳಷ್ಟು ಇಳಿಕೆ ಈಗ ಕಂಡುಬಂದಿದೆ. ವಿಶ್ವ ಆರ್ಥಿಕ ವೇದಿಕೆ ಕಳೆದವಾರ ಬಿಡುಗಡೆ ಮಾಡಿದ 2017ನೇ ಜಾಗತಿಕ ಲಿಂಗ ಅಸಮಾನತೆಯ ಸೂಚ್ಯಂಕದಲ್ಲಿ ಈ ಅಂಶ ವ್ಯಕ್ತವಾಗಿದೆ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ಮಹಿಳಾ ಸಮಾನತೆಯ ಬಗ್ಗೆ ನಮ್ಮ ಮಾಧ್ಯಮಗಳಲ್ಲಿ ಅದರಲ್ಲೂ ವಿದ್ಯುನ್ಮಾನ ವಾಹಿನಿಗಳಲ್ಲಿ ನಿತ್ಯವೂ ಧಾರಾಳವಾಗಿ ಚರ್ಚೆ ನಡೆಯುತ್ತಿದೆ.

ಆದರೆ, ವಾಸ್ತವ ಸಂಗತಿ ವಿಭಿನ್ನವಾಗಿದೆ. ಜಾಗತಿಕ ಆರ್ಥಿಕ ವೇದಿಕೆ ಈ ಸೂಚ್ಯಂಕ ತಯಾರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ. ಲಿಂಗತ್ವ ಅಸಮಾನತೆ ಹೆಚ್ಚಿರುವುದು ಜಾಗತಿಕ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯಲು ಕಾರಣ ಎಂದು ಈ ವರದಿ ಹೇಳಿದೆ. ಭಾರತದಲ್ಲಿ ಮಗು ಗರ್ಭದಲ್ಲಿರುವಾಗಲೇ ಅದರ ಲಿಂಗವನ್ನು ಪತ್ತೆ ಹಚ್ಚಿ ಅಲ್ಲೇ ನಾಶ ಮಾಡುವ ನೀಚತನ ನಮ್ಮ ಸಮಾಜದಲ್ಲಿ ಎದ್ದುಕಂಡುಬರುತ್ತದೆ. ದೇಶ ಆಧುನಿಕವಾಗಿ ಸಾಕಷ್ಟು ಮುಂದುವರಿದರೂ ಗಂಡು ಮತ್ತು ಹೆಣ್ಣಿನ ಜನಸಂಖ್ಯಾ ಪ್ರಮಾಣದಲ್ಲಿ ಹರ್ಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಾಕಷ್ಟು ಏರುಪೇರು ಕಂಡುಬರುತ್ತಿದೆ. ಹೆಣ್ಣು ಮಕ್ಕಳು ಮೇಲ್ನೋಟಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದಾರೆ. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.

ಲಿಂಗತ್ವ ಅಸಮಾನತೆ ಅಂದರೆ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಬೌದ್ಧಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಇರುವ ಅಂತರ ಮುಂದುವರಿದ ದೇಶಗಳಲ್ಲಿ ಅಷ್ಟೊಂದು ಎದ್ದು ಕಾಣುವಷ್ಟಿಲ್ಲ. ಆದರೂ ಪುರುಷ ಮತ್ತು ಮಹಿಳೆಯರ ನಡುವಿನ ತಾರತಮ್ಯ ಎಲ್ಲ ದೇಶಗಳಲ್ಲೂ ಕಂಡುಬರುತ್ತಿದೆ. ಜಾಗತಿಕವಾಗಿ ಈ ಪರಿಸ್ಥಿತಿ ಸುಧಾರಿಸಲು ಪುರುಷರು ಹಾಗೂ ಮಹಿಳೆಯರು ಎಲ್ಲ ರಂಗಗಳಲ್ಲೂ ಸಮಾನರು ಎಂಬಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಇನ್ನೂ 100 ವರ್ಷಗಳಾದರೂ ಕಾಯಬೇಕಾಗುತ್ತದೆ ಎಂದು ಜಾಗತಿಕ ಆರ್ಥಿಕ ವೇದಿಕೆಯ ಅಧ್ಯಯನ ವರದಿಯಿಂದ ತಿಳಿದುಬರುತ್ತದೆ.

ಇನ್ನು ಕೆಲಸದ ಸ್ಥಳದಲ್ಲಿ ಮಹಿಳೆಯರು ಹಾಗೂ ಪುರುಷರ ನಡುವೆ ತಾರತಮ್ಯ ಸಂಪೂರ್ಣವಾಗಿ ನಿವಾರಣೆಯಾಗಬೇಕಾದರೆ ಇನ್ನು ಎರಡು ಶತಮಾನವಾದರೂ ಬೇಕಾಗುತ್ತದೆ ಎಂದು ಈ ವರದಿ ತಿಳಿಸಿದೆ. ಭಾರತದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಕಾನೂನು ಹೇಳುತ್ತದೆ. ಆದರೆ, ಇಂದಿಗೂ ಈ ಕಾನೂನು ಕಾರ್ಯಗತಗೊಂಡಿಲ್ಲ ಎಂದು ಅಂಕಿಅಂಶಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಇನ್ನು ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಮಾಧಾನಕರವಾಗಿಲ್ಲ. 2004-2005 ಹಾಗೂ 2011-2012 ಈ ಕಾಲಾವಧಿಯಲ್ಲಿ ಸುಮಾರು 1.96 ಕೋಟಿ ಮಹಿಳೆಯರು ಉದ್ಯೋಗ ಕ್ಷೇತ್ರದಿಂದ ಹೊರಗೆ ಹೋಗಿದ್ದಾರೆ.

ಮಹಿಳೆಯರು ಮಾಡುವ ಕೆಲಸಕ್ಕೆ ಸೂಕ್ತವಾದ ಸಂಬಳ ಎಲ್ಲಿಯೂ ಸಿಗುತ್ತಿಲ್ಲ. ಪುರುಷರಿಗೆ ಸರಿಸಮಾನವಾಗಿ ಕೆಲಸಮಾಡಿದರೂ ಮಹಿಳೆಯರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ. ಮನೆಯಲ್ಲಿ, ಹೊಲಗಳಲ್ಲಿ ಮತ್ತು ಶಿಶು ಪಾಲನೆಯಲ್ಲಿ ಮಹಿಳೆಯರು ಪಡುತ್ತಿರುವ ಶ್ರಮ ಯಾರ ಕಣ್ಣಿಗೂ ಕಾಣುವುದಿಲ್ಲ. ಈ ಮಾನವ ಸಂಪನ್ಮೂಲ ಲೆಕ್ಕಕ್ಕೆ ಬರುವುದೇ ಇಲ್ಲ. ಕೃಷಿ ಕ್ಷೇತ್ರದ ಬಿಕ್ಕಟ್ಟು ಹಾಗೂ ಕಳೆದ ವರ್ಷದ ಅಧಿಕ ವೌಲ್ಯದ ನೋಟು ಅಮಾನ್ಯದ ಪರಿಣಾಮವಾಗಿ ಪುರುಷರು ಮತ್ತು ಮಹಿಳೆಯರ ನಡುವಿನ ಅಂತರ ಇನ್ನಷ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಮಹಿಳೆಯರು ಮಾಡುವ ಶೇ.66ರಷ್ಟು ಕೆಲಸಗಳಿಗೆ ಸಂಬಳವೇ ಸಿಗುವುದಿಲ್ಲ. ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯ ನಿವಾರಣೆಗೆ ಭಾರತದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಸಮಾನತೆಯ ಕನಸು ಇನ್ನೂ ನನಸಾಗುತ್ತಲೇ ಇಲ್ಲ.

ಲಿಂಗತ್ವ ಅಸಮಾನತೆಯ ನಿವಾರಣೆಯಲ್ಲಿ ನಮ್ಮ ನೆರೆಯ ಬಾಂಗ್ಲಾದೇಶ ಹಾಗೂ ಚೀನಾಗಳು ಸಾಕಷ್ಟು ಮುಂದೆ ಸಾಗಿವೆ. ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿದ ಜಾಗತಿಕ ಸೂಚ್ಯಂಕದ ಪ್ರಕಾರ ಬಾಂಗ್ಲಾದೇಶ 47ನೇ ಸ್ಥಾನದಲ್ಲಿದೆ. ಅಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶೇ.45ರಷ್ಟು ಮಹಿಳೆಯರಿದ್ದಾರೆ. ಬಾಂಗ್ಲಾ ಸಂಸತ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.20ಕ್ಕೂ ಹೆಚ್ಚಿದೆ. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಸಂಸತ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.12ರಷ್ಟು ಮಾತ್ರ ಇದೆ. ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಒದಗಿಸುವ ವಿಧೇಯಕ ಇನ್ನೂ ಕಡತ ಬಿಟ್ಟು ಹೊರಗೆ ಬಂದಿಲ್ಲ. ಎಡ ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳು ಮಹಿಳೆಯರಿಗೆ ಸಂಸತ್‌ನಲ್ಲಿ ಮೀಸಲಾತಿ ಒದಗಿಸಲು ಪರೋಕ್ಷವಾಗಿ ಅಡ್ಡಿ ಉಂಟುಮಾಡುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಲಿಂಗಾನುಪಾತದ ಅಂತರ ಕಡಿಮೆಯಾಗಬೇಕಾಗಿದೆ. ಈಗ ದೇಶದಲ್ಲಿ ಒಂದು ಸಾವಿರ ಪುರುಷರಿಗೆ ಒಂಬೈನೂರ ನಲ್ವತ್ಮೂರು ಮಹಿಳೆಯರಿದ್ದಾರೆ. ಈ ಅಂತರವನ್ನು ನಿವಾರಿಸಬೇಕಾದರೆ ಹೆಣ್ಣು ಭ್ರೂಣಹತ್ಯೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕಾಗಿದೆ. ಇದು ಬರೀ ಸರಕಾರದ ಕೆಲಸವಲ್ಲ. ಸಾರ್ವಜನಿಕರೂ ಈ ಬಗ್ಗೆ ಆಸಕ್ತಿ ವಹಿಸಬೇಕು. ಧಾರ್ಮಿಕ ಗುರುಗಳು ಮತ್ತು ಮಠಾಧಿಪತಿಗಳು ಹೆಣ್ಣು ಭ್ರೂಣಹತ್ಯೆ ತಡೆಯಲು ಜನಜಾಗೃತಿಯನ್ನು ಮೂಡಿಸಲು ಮುಂದಾಗಬೇಕಾಗಿದೆ. ನಮ್ಮ ದೇಶದಲ್ಲಿ ಅನೇಕ ಮಠಾಧಿಪತಿಗಳು ಮತ್ತು ಧರ್ಮ ರಕ್ಷಣೆಗಾಗಿ ಹುಟ್ಟಿಕೊಂಡ ಸಂಘಟನೆಗಳು ಗೋರಕ್ಷಣೆಯ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತವೆ. ಆದರೆ, ಹೆಣ್ಣು ಮಕ್ಕಳ ಭ್ರೂಣಹತ್ಯೆ ತಡೆಯುವಲ್ಲಿ ಈ ಸಂಘಟನೆಗಳು ಮುಂದಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಡೆಯಲಿರುವ ಧರ್ಮಸಂಸತ್ ಸಭೆಯಲ್ಲಿ ಹೆಣ್ಣು ಭ್ರೂಣಹತ್ಯೆ ತಡೆಯಲು ನಿರ್ಣಯ ಕೈಗೊಳ್ಳುವರೇ ಎಂದು ನಾವು ಪ್ರಶ್ನಿಸಬೇಕಾಗಿದೆ. ಲಿಂಗತ್ವ ಅಸಮಾನತೆಯಿಂದಾಗಿ ಲಿಂಗಾನುಪಾತದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಅಸಮಾನತೆಯನ್ನು ನಿವಾರಿಸಲು ಪಕ್ಷಭೇದ ಜಾತಿಭೇದ ಮತ್ತು ಧರ್ಮಭೇದವನ್ನು ಮೀರಿ ಎಲ್ಲರೂ ಒಂದಾಗಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಪುರುಷರು ಹಾಗೂ ಮಹಿಳೆಯರ ನಡುವಿನ ಅಸಮಾನತೆಯ ಅಂತರವನ್ನು ಮುಚ್ಚಲು ಶತಮಾನಗಳೇ ಬೇಕಾಗಬಹುದು ಎಂಬ ಸಂಗತಿ ಆತಂಕಕಾರಿಯಾಗಿದೆ. ಈ ಅಸಮಾನತೆಯ ನಿವಾರಣೆಗೆ ಭಾರತದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಈ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವೌಲ್ಯಮಾಪನ ಮಾಡುವ ಬಗ್ಗೆ ಆಸಕ್ತಿ ತೋರುವುದಿಲ್ಲ.

ದೇಶದ ಅನೇಕ ಕಡೆ ಹೆಣ್ಣು ಮತ್ತು ಗಂಡು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಅಸುನೀಗುತ್ತಿರುವ ವರದಿಗಳು ಬರುತ್ತಲೇ ಇವೆ. ಕರ್ನಾಟಕದಲ್ಲಿ ರಾಯಚೂರು, ಕಲಬುರಗಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಹೆಣ್ಣು ಮಕ್ಕಳು ಬಳಲುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಿಂದ ಅವರ ಹಸಿವು ಕೊಂಚ ಇಂಗಿದ್ದರೂ ಪೌಷ್ಟಿಕ ಆಹಾರದ ಅಗತ್ಯ ಎದ್ದು ಕಾಣುತ್ತದೆ. ಲಿಂಗತ್ವ ಸಮಾನತೆ ಇರುವ ಸಮಾಜದ ನಿರ್ಮಾಣಕ್ಕಾಗಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಾಗಿದೆ. ಇದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಮಹಿಳಾ ನಾಯಕ್ವತದ ಪ್ರಮಾಣ ಹೆಚ್ಚಾಗಬೇಕು. ಲಿಂಗತ್ವ ಅಸಮಾನತೆ ನಿವಾರಣೆಯಲ್ಲಿ ನಮ್ಮ ನೆರೆಹೊರೆಯ ದೇಶಗಳಿಂದ ನಾವು ಪಾಠ ಕಲಿಯಬೇಕಾಗಿದೆ.

ಈ ನಿಟ್ಟಿನಲ್ಲಿ ನಮ್ಮ ಚುನಾಯಿತ ಪ್ರತಿನಿಧಿಗಳ ಮೇಲೆ ಜನಪರ ಸಂಘಟನೆಗಳು ಒತ್ತಡವನ್ನು ಹಾಕಬೇಕಾಗುತ್ತದೆ. ಮೇಲ್ನೋಟಕ್ಕೆ ಲಿಂಗತ್ವ ಅಸಮಾನತೆ ನಿವಾರಣೆಯಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುವುದು ಕಂಡುಬರುತ್ತದೆ. ಆದರೆ, ವಾಸ್ತವ ಸಂಗತಿ ಭಿನ್ನವಾಗಿದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಶ್ರಮ ಪರಿಗಣನೆಗೆ ಬರುತ್ತಿಲ್ಲ. ಕೃಷಿ ಕ್ಷೇತ್ರದ ಬಿಕ್ಕಟ್ಟು ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಲೇ ಇದೆ. ಉದ್ಯೋಗ ಅವಕಾಶಗಳ ಪ್ರಮಾಣ ಕಡಿಮೆಯಾಗುತ್ತಿದೆ. ಎಲ್ಲರಿಗೂ ಉದ್ಯೋಗ ನೀಡುವುದಾಗಿ ಮೂರು ವರ್ಷಗಳ ಹಿಂದೆ ಭರವಸೆ ನೀಡಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಆದರೆ, ಅವರು ಬಂದ ಆನಂತರ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ ದೇಶದ 125 ಕೋಟಿ ಜನರಿಗೆ ಉದ್ಯೋಗ ಕೊಡಲು ಹೇಗೆ ಸಾಧ್ಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೆಡೆ ಉದ್ಯೋಗದ ಕೊರತೆ ಇನ್ನೊಂದೆಡೆ ಉದ್ಯೋಗದಲ್ಲಿ ಅಸಮಾನತೆ ಈ ಎರಡೂ ಬಿಕ್ಕಟ್ಟಿನ ಸುಳಿಗೆ ಸಿಲುಕಿ ಮಹಿಳೆಯರು ಅವಕಾಶ ವಂಚಿತರಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News