ಮ್ಯಾನ್ಮಾರ್ ಸೈನಿಕರಿಂದ ರೊಹಿಂಗ್ಯಾ ಮಹಿಳೆಯರ, ಬಾಲಕಿಯರ ಸಾಮೂಹಿಕ ಅತ್ಯಾಚಾರ
ವಿಶ್ವಸಂಸ್ಥೆ, ನ. 16: ರಖೈನ್ ರಾಜ್ಯದಲ್ಲಿ ನಡೆಸಿದ ದಮನ ಕಾರ್ಯಾಚರಣೆ ವೇಳೆ ಮ್ಯಾನ್ಮಾರ್ ಸೈನಿಕರು ಅಸಂಖ್ಯಾತ ರೊಹಿಂಗ್ಯಾ ಮಹಿಳೆಯರು ಮತ್ತು ಬಾಲಕಿಯರ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ ಗುರುವಾರ ಹೇಳಿದೆ.
ಮ್ಯಾನ್ಮಾರ್ ಸೈನಿಕರ ಅಮಾನುಷ ಕ್ರೌರ್ಯಕ್ಕೆ ಬೆದರಿ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್ ತೊರೆದು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಮ್ಯಾನ್ಮಾರ್ ಭದ್ರತಾ ಪಡೆಗಳು ನಡೆಸಿರುವ ಲೈಂಗಿಕ ಹಿಂಸೆ ಹಾಗೂ ಇತರ ದೌರ್ಜನ್ಯಗಳು ಮಾನವತೆಯ ವಿರುದ್ಧದ ಅಪರಾಧಗಳಿಗೆ ಸಮವಾಗಿದೆ ಎಂದು ಅಮೆರಿಕದ ಮಾನವಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆಯರು, ನೆರವು ಸಂಘಟನೆಗಳು ಮತ್ತು ಬಾಂಗ್ಲಾದೇಶದ ಆರೋಗ್ಯ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಗಳ ಆಧಾರದಲ್ಲಿ ಹ್ಯೂಮನ್ ರೈಟ್ಸ್ ವಾಚ್ ವರದಿಯೊಂದನ್ನು ಸಿದ್ಧಪಡಿಸಿದೆ.
ಸೈನಿಕರು ರೊಹಿಂಗ್ಯಾ ಮಹಿಳೆಯರನ್ನು ಸುತ್ತುವರಿದು ಸಾಮೂಹಿಕ ಅತ್ಯಾಚಾರ ನಡೆಸಿರುವ ಹಲವಾರು ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘‘ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ಜನಾಂಗೀಯ ನಿರ್ಮೂಲನೆ ಅಭಿಯಾನದಲ್ಲಿ ಮ್ಯಾನ್ಮಾರ್ ಭದ್ರತಾ ಪಡೆಗಳು ಅತ್ಯಾಚಾರವನ್ನು ಪ್ರಮುಖ ಹಾಗೂ ವಿನಾಶಕಾರಿ ಆಯುಧವನ್ನಾಗಿ ಬಳಸಿಕೊಂಡಿವೆ’’ ಎಂದು ಹ್ಯೂಮನ್ ರೈಟ್ಸ್ ವಾಚ್‌ನಲ್ಲಿ ಸಂಶೋಧಕಿ ಹಾಗೂ ವರದಿಯ ಲೇಖಕಿ ಸ್ಕೈ ವೀಲರ್ ಹೇಳಿದ್ದಾರೆ.
‘‘ಬರ್ಮಾ ಸೈನಿಕರ ಅಮಾನುಷ ಹಿಂಸಾಚಾರದಿಂದ ಅಸಂಖ್ಯಾತ ಮಹಿಳೆಯರು ಮತ್ತು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಆಘಾತಗೊಂಡಿದ್ದಾರೆ’’ ಎಂದು ವರದಿ ತಿಳಿಸಿದೆ.
5 ಅಥವಾ ಹೆಚ್ಚು ಸೈನಿಕರಿಂದ ಅತ್ಯಾಚಾರ
ಹ್ಯೂಮನ್ ರೈಟ್ಸ್ ಸಂದರ್ಶನ ನಡೆಸಿದ 29 ಮಹಿಳೆಯರ ಪೈಕಿ, ಒಬ್ಬರನ್ನು ಹೊರತುಪಡಿಸಿ ಎಲ್ಲರ ಮೇಲೂ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಅತ್ಯಾಚಾರ ನಡೆಸಿದ್ದಾರೆ. ಎಂಟು ಪ್ರಕರಣಗಳಲ್ಲಿ, ತಮ್ಮ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂಬುದಾಗಿ ಮಹಿಳೆಯರು ಹಾಗೂ ಬಾಲಕಿಯರು ಹೇಳಿದ್ದಾರೆ.
ತಮ್ಮ ಮೇಲೆ ಅತ್ಯಾಚಾರ ನಡೆಸುವ ಮೊದಲು, ಸೈನಿಕರು ತಮ್ಮ ಚಿಕ್ಕ ಮಕ್ಕಳು, ಗಂಡಂದಿರು ಮತ್ತು ಹೆತ್ತವರನ್ನು ಕೊಂದಿದ್ದಾರೆ ಎಂದು ಮಹಿಳೆಯರು ಹೇಳಿದ್ದಾರೆ.