×
Ad

ಲಿಬಿಯದಲ್ಲಿ ಗುಲಾಮರಾಗಿ ಮಾರಾಟವಾಗುತ್ತಿದ್ದಾರೆ ವಲಸಿಗರು

Update: 2017-11-16 22:41 IST

ಲಂಡನ್, ನ. 16: ‘ವಿಕ್ಟರಿ’ ಎಂಬ ಹೆಸರಿನ 21 ವರ್ಷದ ನೈಜೀರಿಯ ವಲಸಿಗ ಯುರೋಪ್‌ನಲ್ಲಿ ಉತ್ತಮ ಬದುಕನ್ನು ಅರಸುತ್ತಾ ತನ್ನ ಮನೆ ತೊರೆದರು. ಅವರು ಲಿಬಿಯ ತಲುಪಿದರು. ಆದರೆ ಅವರನ್ನು ಕಾರ್ಮಿಕನಾಗಿ ಹಲವು ಬಾರಿ ಮಾರಾಟ ಮಾಡಲಾಯಿತು.

‘‘ಇಲ್ಲಿರುವ ಹೆಚ್ಚಿನ ಜನರನ್ನು ಪರೀಕ್ಷಿಸಿದರೆ ಅವರ ಶರೀರಗಳಲ್ಲಿ ಗುರುತುಗಳಿವೆ. ಅವರಿಗೆ ಹೊಡೆಯಲಾಗುತ್ತದೆ ಮತ್ತು ಅಂಗಾಂಗಗಳನ್ನು ಊನಗೊಳಿಸಲಾಗುತ್ತದೆ’’ ಎಂದು ವಿಕ್ಟರಿ ಹೇಳುತ್ತಾರೆ. ಕಳ್ಳಸಾಗಾಣಿಕೆದಾರರಿಂದ ತನ್ನನ್ನು ಬಿಡಿಸಲು ತನ್ನ ಕುಟುಂಬ ಸಾಲ ಮಾಡಿ ಹಣ ಪಡೆಯಿತು ಹಾಗೂ ಅಂತಿಮವಾಗಿ ತಾನು ನೈಜೀರಿಯಕ್ಕೆ ವಾಪಸಾದೆ ಎಂದು ಅವರು ಹೇಳುತ್ತಾರೆ.

ಲಿಬಿಯ ರಾಜಧಾನಿ ಟ್ರಿಪೋಲಿಯಲ್ಲಿ ಕಳ್ಳಸಾಗಾಣಿಕೆದಾರರು ವಲಸಿಗರನ್ನು 400 ಡಾಲರ್ (ಸುಮಾರು 26,125 ರೂಪಾಯಿ)ಗಳ ಜುಜುಬಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವುದು ಸಿಎನ್‌ಎನ್ ನಡೆಸಿದ ತನಿಖೆಯಿಂದ ಹೊರಬಿದ್ದಿದೆ.

ವಯಸ್ಸಿನ 20ರ ದಶಕದಲ್ಲಿರುವ ಇನ್ನೋರ್ವ ನೈಜೀರಿಯ ಯುವಕನನ್ನು ಆಗಸ್ಟ್‌ನಲ್ಲಿ ಹರಾಜು ಹಾಕುತ್ತಿರುವ ವೀಡಿಯೊವೊಂದು ಹೊರಬಿದ್ದಿದೆ. ‘ಹೊಲದ ಕೆಲಸ ಮಾಡಲು ಗಟ್ಟಿಮುಟ್ಟಾದ ಹುಡುಗ’ ಎಂಬುದಾಗಿ ಹರಾಜಿನ ವೇಳೆ ಬಣ್ಣಿಸಲಾಗಿತ್ತು.

ಅಪಾಯಕಾರಿ ಮೆಡಿಟರೇನಿಯನ್ ಸಮುದ್ರ ಪ್ರಯಾಣದ ವೇಳೆ ಹೆಚ್ಚಿನವರು ಸಾಯುತ್ತಾರೆ. ಬದುಕುಳಿದವರನ್ನು ಗುಲಾಮ ಕಾರ್ಮಿಕರಾಗಿ ಮಾರಾಟ ಮಾಡಲಾಗುತ್ತಿದೆ.

‘ಗುಂಡಿ ತೋಡುವವರ’ ಹರಾಜು!

‘‘ಯಾರಿಗಾದರೂ ಗುಂಡಿ ತೋಡುವವ ಬೇಕಾಗಿದ್ದಾನೆಯೇ? ಇಲ್ಲೊಬ್ಬ ಗುಂಡಿ ತೋಡುವವನಿದ್ದಾನೆ. ದೊಡ್ಡ ಗಟ್ಟಿಮುಟ್ಟಾದ ಆಳು. ಅವನು ಗುಂಡಿ ತೋಡುತ್ತಾನೆ’’ ಎಂಬುದಾಗಿ ಹರಾಜು ಮಾಡುವವನು ಕೂಗುತ್ತಾನೆ. ಪತ್ರಕರ್ತರ ಸಮ್ಮುಖದಲ್ಲೇ ಈ ಹರಾಜು ನಡೆಸಲಾಗಿತ್ತು. 500 (32,656 ರೂಪಾಯಿ)ರಿಂದ 650 ಡಾಲರ್ (42,453 ರೂಪಾಯಿ)ಗೆ ಮಾರಾಟವಾದವರನ್ನು ಬಳಿಕ ಅವರ ಹೊಸ ಯಜಮಾನರುಗಳಿಗೆ ಹಸ್ತಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News