ಜಿಎಸ್‌ಟಿ ‘ಅಕ್ರಮ ಲಾಭ ನಿಗ್ರಹ ಪ್ರಾಧಿಕಾರ’ಕ್ಕೆ ಸಂಪುಟ ಅನುಮೋದನೆ
ಹೊಸದಿಲ್ಲಿ, ನ.16: ಜಿಎಸ್‌ಟಿ ಅನುಷ್ಠಾನದ ಬಳಿಕ ದರ ಇಳಿಕೆಯ ಲಾಭವನ್ನು ಗ್ರಾಹಕರು ಪಡೆಯುವುದನ್ನು ಖಾತರಿ ಪಡಿಸುವ ಉದ್ದೇಶದಿಂದ ‘ರಾಷ್ಟ್ರೀಯ ಅಕ್ರಮಲಾಭ ನಿಗ್ರಹ ಪ್ರಾಧಿಕಾರ’ವನ್ನು ರಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಜಿಎಸ್‌ಟಿ ಜಾರಿಗೊಂಡ ಬಳಿಕ ಕೇವಲ 50 ವಸ್ತುಗಳಿಗೆ ಮಾತ್ರ ಗರಿಷ್ಟ ಶೇ.28 ತೆರಿಗೆ ವಿಧಿಸಲಾಗುತ್ತಿದೆ. ಹಲವು ವಸ್ತುಗಳ ತೆರಿಗೆ ದರವನ್ನು ಶೇ.5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ದೇಶದ ಗ್ರಾಹಕರ ಪಾಲಿಗೆ ಈ ಪ್ರಾಧಿಕಾರ ಹೊಸ ಭರವಸೆಯಾಗಿದೆ. ತೆರಿಗೆ ದರ ಕಡಿತದ ಲಾಭ ತಮಗೆ ಸಿಗುತ್ತಿಲ್ಲ ಎಂದು ಭಾವಿಸುವ ಗ್ರಾಹಕರು ಈ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು . ಜನಸಾಮಾನ್ಯರಿಗೆ ಅನುಕೂಲ ಆಗಬೇಕೆಂಬುದು ಜಿಎಸ್‌ಟಿ ಜಾರಿಗೊಳಿಸಿದ ಉದ್ದೇಶವಾಗಿದ್ದು ಇದನ್ನು ಈಡೇರಿಸಲು ಪ್ರಾಧಿಕಾರದ ಸ್ಥಾಪನೆಯಾಗಿದೆ ಎಂದು ಸಚಿವರು ತಿಳಿಸಿದರು.
ಕೆಲ ದಿನದ ಹಿಂದೆ ಜಿಎಸ್‌ಟಿ ಸಮಿತಿಯು ಐದು ಸದಸ್ಯರುಳ್ಳ ‘ಅಕ್ರಮಲಾಭ ನಿಗ್ರಹ ಪ್ರಾಧಿಕಾರ’ ಸ್ಥಾಪಿಸುವ ಪ್ರಸ್ತಾವನೆಗೆ ಅಂಗೀಕಾರ ನೀಡಿತ್ತು. ಸಂಪುಟ ಕಾರ್ಯದರ್ಶಿ ವಿ.ಕೆ.ಸಿನ್ಹ, ಆದಾಯತೆರಿಗೆ ಇಲಾಖೆ ಕಾರ್ಯದರ್ಶಿ ಹಸ್‌ಮುಖ್ ಅಧಿಯಾ, ಸಿಬಿಇಸಿ ಅಧ್ಯಕ್ಷೆ ವನಜಾ ಸಾರ್ನ ಹಾಗೂ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುವ ತಂಡವು ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಿದೆ. ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರು 62 ವರ್ಷಕ್ಕಿಂತ ಕೆಳಹರೆಯದವರಾಗಿರಬೇಕು. ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ದಿನದಿಂದ ಎರಡು ವರ್ಷದವರೆಗೆ ಅಧಿಕಾರಾವಧಿ ಇರುತ್ತದೆ .