ಪ್ರಿ ಡಯಾಬಿಟಿಸ್‌ನ ಐದು ಸಂಕೇತಗಳು

Update: 2017-11-17 09:27 GMT

‘ಮಧುಮೇಹ ರಾಜಧಾನಿ’ ಎಂಬ ಜಾಗತಿಕ ಕುಖ್ಯಾತಿಗೊಳಗಾಗಿರುವ ಭಾರತದಲ್ಲಿ ಈ ರೋಗಕ್ಕೆ ತುತ್ತಾಗುತ್ತಿರುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಮಧುಮೇಹ ರೋಗಕ್ಕೆ ಒಂದು ಕರುಳಬಳ್ಳಿಯೂ ಇದ್ದು, ಅದನ್ನು ಪ್ರಿ ಡಯಾಬಿಟಿಸ್ ಅಥವಾ ಪೂರ್ವ ಮಧುಮೇಹವೆಂದು ಹೆಸರಿಸಲಾಗಿದೆ. ದುರಂತವೆಂದರೆ ಸೆಂಟರ್ಸ್‌ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಶನ್(ಸಿಡಿಸಿ)ನ ಅಂಕಿಅಂಶಗಳಂತೆ ಇಂದು ದೇಶದಲ್ಲಿ ಪ್ರತಿ ಮೂವರಲ್ಲಿ ಒಬ್ಬರಿಗೆ ಪ್ರಿ ಡಯಾಬಿಟಿಸ್ ಕಾಡುತ್ತಿದ್ದರೂ, ಈ ಪೈಕಿ ಶೇ.90 ರಷ್ಟು ಜನರಿಗೆ ತಮ್ಮ ಸ್ಥಿತಿಯ ಅರಿವಿಲ್ಲ.

ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಿದ್ದು, ಆದರೆ ಅದು ಮಧುಮೇಹ ಎಂದು ಖಚಿತ ಪಡಿಸುವ ಮಟ್ಟದಲ್ಲಿರದ ಸ್ಥಿತಿಯನ್ನು ಪ್ರಿ ಡಯಾಬಿಟಿಸ್ ಎಂದು ಕರೆಯುತ್ತಾರೆ. ಅದೊಂದು ರೀತಿ ಕತ್ತಲಲ್ಲಿ ನಿಂತು ಹೊಂಚು ಹಾಕುತ್ತಿರುವ ದೆವ್ವದಂತೆ. ತನ್ನ ಆಕ್ರಮಣಕ್ಕೆ ನಮ್ಮ ಶರೀರ ಸುಲಭದ ತುತ್ತಾಗಿದೆ ಎಂದು ಗೊತ್ತಾದ ತಕ್ಷಣ ನಮ್ಮ ಮೇಲೆ ಮುಗಿ ಬೀಳುತ್ತದೆ.

ಮಧುಮೇಹದ ಕಿರಿಯ ತಮ್ಮನಾಗಿರುವ ಪೂರ್ವ ಮಧುಮೇಹ ಅಷ್ಟು ಸುಲಭದಲ್ಲಿ ಪತ್ತೆಯಾಗುವುದಿಲ್ಲ. ಹೀಗಾಗಿ ಒಂದು ರೀತಿಯಲ್ಲಿ ಅದು ಮಧುಮೇಹಕ್ಕಿಂತ ಒಂದು ಕೈ ಹೆಚ್ಚೇ ಅಪಾಯಕಾರಿಯಾಗಿದೆ. ಹೀಗಿದ್ದರೂ ಕೆಲವು ಸಂಕೇತಗಳನ್ನು ಗಮನಿಸಿದರೆ ಪ್ರಿ ಡಯಾಬಿಟಿಸ್‌ನ ಜಾಡನ್ನು ಹಿಡಿಯಬಹುದಾಗಿದೆ.

 ► ಸಂಶೋಧಕರ ಪ್ರಕಾರ ಕುಟುಂಬದ ಇತಿಹಾಸದಲ್ಲಿ ಯಾರಿಗಾದರೂ ಟೈಪ್ 2 ಮಧುಮೇಹವಿದ್ದಿದ್ದರೆ ಅಂತಹ ವ್ಯಕ್ತಿಗಳು ಪ್ರಿ ಡಯಾಬಿಟಿಸ್‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.

 ► ಮಧುಮೇಹ ಒಂಟಿಯಾಗಿ ದಾಳಿಯಿಡುವುದಿಲ್ಲ. ಅದು ನಿಮ್ಮನ್ನು ಅಮರಿಕೊಂಡಾಗ ತನ್ನ ಸ್ನೇಹಿತರಾದ ಇತರ ಕಾಯಿಲೆಗಳನ್ನೂ ಜೊತೆಗೇ ತರುತ್ತದೆ. ಹೀಗಾಗಿ ನಿಮಗೆ ಮಧುಮೇಹವಿಲ್ಲದಿದ್ದರೂ ಅದರ ಸಹವರ್ತಿಗಳಾದ ಬೊಜ್ಜು, ಹೃದಯ ಸಮಸ್ಯೆಗಳು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು/ಅಥವಾ ಪಾಲಿಸಿಸ್ಟಿಕ್ ಅಂಡಾಶಯ ಕಾಯಿಲೆ(ಪಿಸಿಒಡಿ)ಯಿದ್ದರೆ ನೀವು ಪ್ರಿ ಡಯಾಬಿಟಿಸ್‌ನಿಂದಲೂ ಬಳಲುತ್ತಿರಬಹುದು.

 ► ಪ್ರಿ ಡಯಾಬಿಟಿಸ್‌ನ ಲಕ್ಷಣಗಳು ಫಕ್ಕನೆ ಗೊತ್ತಾಗುವುದಿಲ್ಲ, ಹೀಗಾಗಿ ಜನರಿಗೆ ಇಂತಹ ರೋಗ ತಮ್ಮನ್ನು ಹಿಡಿದುಕೊಂಡಿದೆಯೆಂದು ಗೊತ್ತಾಗದಿರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಇದಕ್ಕೂ ಅಪವಾದಗಳಿವೆ. ಕೆಲವು ಪ್ರಕರಣಗಳಲ್ಲಿ ಮಧುಮೇಹದ ಲಕ್ಷಣಗಳು ಕಂಡು ಬರಬಹುದು ಮತ್ತು ಇವುಗಳನ್ನೂ ಪ್ರಿಡಯಾಬಿಟಿಸ್‌ನ ಲಕ್ಷಣಗಳೆಂದು ಪರಿಗಣಿಸಲಾಗಿದೆ. ಹೆಚ್ಚಿನ ಬಾಯಾರಿಕೆ, ಕಾರಣವಿಲ್ಲದೆ ಆಯಾಸ, ಪದೇ ಪದೇ ಮೂತ್ರ ವಿಸರ್ಜನೆ ಇತ್ಯಾದಿಗಳು ಈ ಲಕ್ಷಣಗಳಲ್ಲಿ ಸೇರಿವೆ.

 ► ಚರ್ಮದ ಮೇಲೆ ಕಲೆಗಳು ಕಾಣಿಸಿಕೊಂಡರೆ ಮತ್ತು ಅವುಗಳು ಹೆಚ್ಚುತ್ತಿದ್ದರೆ ಆ ಬಗ್ಗೆ ಗಮನ ವಹಿಸುವುದು ಅಗತ್ಯ. ಅವು ಕಪ್ಪುಬಣ್ಣಕ್ಕೆ ತಿರುಗಿದ್ದರೆ ಮತ್ತು ಸುಕ್ಕುಗಳಿಂದ ಕೂಡಿದ್ದರೆ ಪ್ರಿ ಡಯಾಬಿಟಿಸ್‌ನ ಸಂಕೇತವಾಗಿರಬಹುದು. ಪ್ರಿ ಡಯಾಬಿಟಿಸ್ ಹೊಂದಿರುವವರು ಅಕಾಂಥೋಸಿಸ್ ನಿಗಾರಿಕನ್ಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುತ್ತಾರೆ ಮತ್ತು ಈ ಸ್ಥಿತಿಯಲ್ಲಿ ಕುತ್ತಿಗೆ, ಮೊಣಕೈಗಳು, ಕಂಕುಳು, ಗೆಣ್ಣು ಅಥವಾ ಮೊಣಕಾಲುಗಳ ಹಿಂಭಾಗದಲ್ಲಿ ದಪ್ಪ, ಕಪ್ಪುಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆ.

 ► ಯಾವುದೇ ಕಾರಣವಿಲ್ಲದೆ ನೀವು ಏಕಾಏಕಿಯಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ನೀವು ಪ್ರಿ ಡಯಾಬಿಟಿಸ್‌ನ ಹಿಡಿತಕ್ಕೆ ಸಿಲುಕಿರಬಹುದು ಎನ್ನುತ್ತಾರೆ ತಜ್ಞರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News