ಸುಧಾರಣಾ ಪ್ರಕ್ರಿಯೆಗೆ ದೊರೆತ ಜಾಗತಿಕ ಮನ್ನಣೆ: ಅರುಣ್ ಜೇಟ್ಲಿ

Update: 2017-11-17 15:07 GMT

ಹೊಸದಿಲ್ಲಿ, ನ.17: ಜಾಗತಿಕ ವೌಲ್ಯಾಂಕನ ಸಂಸ್ಥೆಯು ಭಾರತದ ‘ಕ್ರೆಡಿಟ್ ರೇಟಿಂಗ್’ ಅನ್ನು ಉನ್ನತೀಕರಿಸಿರುವುದು ದೇಶದಲ್ಲಿ ವಿಶೇಷವಾಗಿ ಕಳೆದ ನಾಲ್ಕೈದು ವರ್ಷದಿಂದ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಗೆ ದೊರೆತಿರುವ ಗೌರವ ಮತ್ತು ಮನ್ನಣೆಯಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜಾಗತಿಕ ವೌಲ್ಯಾಂಕನ ಸಂಸ್ಥೆ ‘ಮೂಡೀಸ್ ಇನ್ವೆಸ್ಟರ್ಸ್‌ ಸರ್ವಿಸ್’ ಭಾರತದ ‘ಕ್ರೆಡಿಟ್ ರೇಟಿಂಗ್’ ಅನ್ನು ಉನ್ನತೀಕರಿಸಿದ ಹಿನ್ನೆಲೆಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

  ‘ಮೂಡೀಸ್ ಇನ್ವೆಸ್ಟರ್ಸ್‌ ಸರ್ವಿಸ್’ ಪ್ರಕಟಿಸಿರುವ ಅಂಕಿಅಂಶದ ಪ್ರಕಾರ ಭಾರತದ ಕ್ರೆಡಿಟ್ ರೇಟಿಂಗ್ ಬಿಎಎ2ಕ್ಕೆ ಉನ್ನತೀಕರಣವಾಗಿದೆ.(2004ರಲ್ಲಿ ದೇಶದ ಸ್ಥಾನ ಬಿಎಎ 3ರಲ್ಲಿತ್ತು). ಈ ಉನ್ನತೀಕರಣ 13 ವರ್ಷದ ಬಳಿಕ ಸಾಧ್ಯವಾಗಿದೆ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಕೈಗೊಂಡಿರುವ ರಚನಾತ್ಮಕ ಕಾರ್ಯಗಳಿಗೆ ವಿಳಂಬವಾಗಿ ದೊರೆತ ಮನ್ನಣೆ ಇದಾಗಿದೆ. ದೇಶದಲ್ಲಿ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಗಳ ಬಗ್ಗೆ ಸಂದೇಹ ಇರುವ ಜನರು ಇದೀಗ ಆತ್ಮಶೋಧನೆ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಜೇಟ್ಲಿ ಹೇಳಿದರು.

   ಅರ್ಥವ್ಯವಸ್ಥೆಗೆ ಸ್ಥಿರತೆ ತಂದಿರುವ ದೂರದೃಷ್ಟಿಯುಳ್ಳ ಕ್ರಿಯಾತ್ಮಕ ಆರ್ಥಿಕ ನೀತಿಯನ್ನು ದೇಶ ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ದೊರೆತ ಮಾನ್ಯತೆ ಇದಾಗಿದೆ. ನೋಟು ನಿಷೇಧ ಸೇರಿದಂತೆ ಸರಕಾರ ಕೈಗೊಂಡಿರುವ ಹಲವು ಸರಣಿ ಕ್ರಮಗಳು ದೇಶದ ಅರ್ಥವ್ಯವಸ್ಥೆಯನ್ನು ಸೂಕ್ತ ದಿಕ್ಕಿನೆಡೆಗೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯತ್ತ ಸಾಗಿಸುತ್ತಿರುವುದನ್ನು ವಿಶ್ವವೇ ಗಮನಿಸುತ್ತಿದೆ ಎಂದು ಜೇಟ್ಲಿ ಹೇಳಿದರು. ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಒಂದು ಗಮನಾರ್ಹ ಸುಧಾರಣಾ ಪ್ರಕ್ರಿಯೆ ಎಂದು ಜಿಎಸ್‌ಟಿ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿದೆ. ಈ ಉನ್ನತೀಕರಣವನ್ನು ಸರಕಾರ ಸ್ವಾಗತಿಸುತ್ತದೆ. ಸರಕಾರದ ಕಾರ್ಯನೀತಿಯ ನಿರ್ದೇಶನಕ್ಕೆ ದೊರೆತ ಮಾನ್ಯತೆ ಇದಾಗಿದೆ. ನಾವು ಆರಂಭಿಸಿರುವ ನಿರ್ದಿಷ್ಟ ಕಾರ್ಯನೀತಿಯನ್ನು ಮುಂದುವರಿಸಿಕೊಂಡು ಹೋಗಲು ದೊರೆತ ಪ್ರೋತ್ಸಾಹವಾಗಿದೆ ಎಂದು ಜೇಟ್ಲಿ ನುಡಿದರು.

ಇದೆಲ್ಲಾ ಏಕಾಏಕಿ ನಡೆದಿಲ್ಲ. ಕಳೆದ ಮೂರು ವರ್ಷದಿಂದ ಭಾರತವು ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿತ್ತು. ವಿಶ್ವಬ್ಯಾಂಕ್‌ನ ಶ್ರೇಯಾಂಕ ಪಟ್ಟಿಯಲ್ಲಿ ‘ವ್ಯಾಪಾರ ನಿರ್ವಹಿಸಲು ಅನುಕೂಲಕರವಾದ ರಾಷ್ಟ್ರಗಳ’ ಪಟ್ಟಿಯಲ್ಲಿ ಭಾರತ ಮೇಲ್ಮಟ್ಟಕ್ಕೆ ತೇರ್ಗಡೆಗೊಂಡಿತ್ತು. ಇವೆಲ್ಲವನ್ನೂ ನಗಣ್ಯ ಸಾಧನೆ ಎಂದು ಹೇಳುವಂತಿಲ್ಲ. ಕಳೆದ ಮೂರು ವರ್ಷದ ಸಾಧನೆ ದೇಶದ ಅರ್ಥವ್ಯವಸ್ಥೆಯ ಇತಿಹಾಸದಲ್ಲಿ ದಾಖಲಾಗಿರುವ ಅತ್ಯುತ್ತಮ ಸಾಧನೆ ಎಂದು ಪರಿಗಣಿತವಾಗಿದೆ ಎಂದ ಜೇಟ್ಲಿ, ಇದೀಗ ಅಭಿವೃದ್ಧಿ ಪ್ರಕ್ರಿಯೆಯ ಫಲ ಪಡೆಯುವ ಸಮಯ ಸನ್ನಿಹಿತವಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಮೂಲಭೂತ ಸೌಕರ್ಯದ ಅಭಿವೃದ್ಧಿ ಮುಂತಾದ ಪ್ರಕ್ರಿಯೆಗಳನ್ನು ಇದೀಗ ಜಾರಿಗೊಳಿಸಬೇಕಿದೆ ಎಂದರು.

 ಈ ವಿಶಿಷ್ಟ ಸಾಧನೆಯನ್ನು ಚುನಾವಣೆ ಜೊತೆ ಜೋಡಿಸಲು ನಾವು ಬಯಸುವುದಿಲ್ಲ ಎಂದ ಜೇಟ್ಲಿ, ತಮ್ಮ ಉತ್ಪನ್ನಗಳನ್ನು ದೇಶದಾದ್ಯಂತ ಸುಲಭದಲ್ಲಿ ಮಾರಾಟ ಮಾಡಲು ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಜಿಎಸ್‌ಟಿ ಅವಕಾಶ ಮಾಡಿಕೊಟ್ಟಿದೆ. ನೋಟು ನಿಷೇಧ ಕ್ರಮವು ನಗದುರಹಿತ ವ್ಯವಹಾರ ಹೆಚ್ಚಲು ಕಾರಣವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News