ಕಾಶ್ಮೀರ ಮಾಜಿ ಸಿಎಂ ವಿರುದ್ಧ ದೇಶದ್ರೋಹದ ದೂರು !

Update: 2017-11-18 04:22 GMT

ಕಾಶ್ಮೀರ, ನ. 18: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ನಟ ರಿಶಿ ಕಪೂರ್ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ದೇಶದ್ರೋಹದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ಧ ಪ್ರಮುಖ ನಾಗರಿಕರ ಸಲಹಾ ಸಮಿತಿಯ ಮಾಜಿ ಸದಸ್ಯ ಸುಕೇಶ್ ಖಜಾರಿಯಾ ದೂರು ನೀಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ಭಾರತ ಒಪ್ಪಿಕೊಳ್ಳಬೇಕು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅಪರಾಧ ದಂಡಸಂಹಿತೆಯ ಸೆಕ್ಷನ್ 196ರ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಬ್ಬರ ವಿರುದ್ಧ ರಣಬೀರ್ ದಂಡಸಂಹಿತೆಯ ಸೆಕ್ಷನ್ 124-ಎ (ದೇಶದ್ರೋಹ) ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ನವೆಂಬರ್ 11ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, "ಪಾಕ್ ಆಕ್ರಮಿತ ಕಾಶ್ಮೀರ, ಪಾಕಿಸ್ತಾನಕ್ಕೆ ಸೇರಿದ್ದು. ಭಾರತ ಹಾಗೂ ಪಾಕಿಸ್ತಾನ ನಡುವೆ ಎಷ್ಟು ಯುದ್ಧ ನಡೆದರೂ ಇದು ಬದಲಾಗದು" ಎಂದು ಹೇಳಿದ್ದರು. ಇದನ್ನು ಬೆಂಬಲಿಸಿ ರಿಶಿ ಕಪೂರ್ ಟ್ವೀಟ್ ಮಾಡಿದ್ದರು. "ಜಮ್ಮು ಕಾಶ್ಮೀರ ನಮ್ಮದು. ಪಾಕ್ ಆಕ್ರಮಿತ ಕಾಶ್ಮೀರ ಅವರದ್ದು. ಈ ಮೂಲಕ ಮಾತ್ರ ನಾವು ಸಮಸ್ಯೆ ಬಗೆಹರಿಸಲು ಸಾಧ್ಯ" ಎಂದು ಟ್ವೀಟಿಸಿದ್ದರು.

ಈ ಎರಡು ಹೇಳಿಕೆಗಳು ಹಿಂಸೆಗೆ ಪ್ರಚೋದನೆ ನೀಡುವಂಥದ್ದು ಹಾಗೂ ಸಾರ್ವಜನಿಕ ಅವ್ಯವಸ್ಥೆಗೆ ಕಾರಣವಾಗುತ್ತದೆ. ಆದ್ದರಿಂದ ಇದು ಆರ್‌ಪಿಸಿಯ ಸೆಕ್ಷನ್ 124ಎ ಅಡಿ ಬರುತ್ತದೆ ಎಂದು ಅವರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News