ಟರ್ಕಿಯ ವೇಯ್ಟ್ ಲಿಫ್ಟಿಂಗ್ ದಂತಕತೆ ನಯೀಮ್ ಸುಲೈಮಾನ್ ನಿಧನ

Update: 2017-11-18 18:17 GMT

ಇಸ್ತಾಂಬುಲ್, ನ.18: ಟರ್ಕಿಯ ‘ಹ್ಯಾಟ್ರಿಕ್’ ಒಲಿಂಪಿಕ್ಸ್ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್ ನಯೀಮ್ ಸುಲೈಮಾನ್(50) ಲಿವರ್ ವೈಫಲ್ಯದಿಂದಾಗಿ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಲ್ಗೇರಿಯದಲ್ಲಿ ಜನವರಿ 23,1967ರಲ್ಲಿ ಜನಿಸಿದ್ದ ನಯೀಮ್ ಲಿವರ್ ಸಮಸ್ಯೆಯ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಲ್ಲಿ ಇಸ್ತಾಂಬುಲ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು. ಶನಿವಾರ ಅವರು ಮೃತಪಟ್ಟಿದ್ದಾರೆ ಎಂದು ‘ಅನಾಡೊಲು’ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ನಯೀಮ್ 1998ರ ಸಿಯೊಲ್, 1992ರ ಬಾರ್ಸಿಲೋನ ಹಾಗೂ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿ ಹ್ಯಾಟ್ರಿಕ್ ಸಾಧಿಸಿದ್ದರು. ಈ ಸಾಧನೆಯ ಮೂಲಕ ಟರ್ಕಿಯ ರಾಷ್ಟ್ರೀಯ ಹೀರೋವಾಗಿ ಹೊರಹೊಮ್ಮಿದ್ದರು. ದೇಶದ ಇತಿಹಾಸದಲ್ಲಿ ಓರ್ವ ಶ್ರೇಷ್ಠ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು. ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಪೂರೈಸಿದ ಬಳಿಕ 2000ರಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ವೇಯ್ಟ್‌ಲಿಫ್ಟಿಂಗ್‌ಗೆ ವಾಪಸಾಗಲು ಪ್ರಯತ್ನಿಸಿದ್ದರು. ಆದರೆ ಅಲ್ಲಿ ವೈಫಲ್ಯ ಅನುಭವಿಸಿದ ನಂತರ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News