ರ‍್ಯಾಗಿಂಗ್ ಗೆ ಬೆಲೆ ತೆತ್ತ ವಿದ್ಯಾರ್ಥಿಗಳು!

Update: 2017-11-19 04:02 GMT

ದರ್ಭಾಂಗ್, ನ.19: ಇಲ್ಲಿನ ವೈದ್ಯಕೀಯ ಕಾಲೇಜಿನ 54 ವಿದ್ಯಾರ್ಥಿನಿಯರು ರ‍್ಯಾಗಿಂಗ್ಗೆ ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಕಿರಿಯ ವಿದ್ಯಾರ್ಥಿಗಳನ್ನು ಪದೇ ಪದೇ ರ್ಯಾಗಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇವರಿಗೆ 13.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಆಡಳಿತ ವರ್ಗ ಸ್ಪಷ್ಟಪಡಿಸಿದೆ.

ಕಾಲೇಜು ಆಡಳಿತವರ್ಗ ಪ್ರತಿ ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಸಂತ್ರಸ್ತ ಕಿರಿಯ ವಿದ್ಯಾರ್ಥಿಗಳು ಭಾರತದ ವೈದ್ಯಕೀಯ ಮಂಡಳಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಇವರ ವಿರುದ್ಧ ಕ್ರಮಕ್ಕೆ ಎಂಸಿಐ ಸೂಚನೆ ನೀಡಿತ್ತು. ಈ ಸಂಬಂಧ ಎಂಸಿಐನಿಂದ ಇ-ಮೇಲ್ ಸಂದೇಶ ಬಂದಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ ಕುಮಾರ್ ಸಿನ್ಹಾ ಹೇಳಿದ್ದಾರೆ. ಆದ್ದರಿಂದ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ವಿವರಿಸಿದ್ದಾರೆ.

ಆದರೆ ಕಾಲೇಜಿನ ರ‍್ಯಾಗಿಂಗ್ ತಡೆ ಸಮಿತಿ ಆರೋಪಿಗಳ ಅಥವಾ ಸಂತ್ರಸ್ತ ವಿದ್ಯಾರ್ಥಿಗಳ ಹೆಸರು ಬಹಿರಂಗಪಡಿಸಿಲ್ಲ. ವಿದ್ಯಾರ್ಥಿನಿಯರ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ಈ ಘಟನೆಗಳು ಸಂಭವಿಸಿದ್ದು, ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಗಿಂಗ್ ಮಾಡಿದ ಆರೋಪ ಬಂದಿತ್ತು ಎಂದು ಸದಸ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ. ಮೊದಲ ಸೆಮಿಸ್ಟರ್‌ನ 27 ವಿದ್ಯಾರ್ಥಿನಿಯರು ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ವಿವರಿಸಿದ್ದಾರೆ.

ರ‍್ಯಾಗಿಂಗ್ ಮಾಡಿದ ಹಾಗೂ ರ‍್ಯಾಗಿಂಗ್ ಪ್ರಕರಣಗಳನ್ನು ವರದಿ ಮಾಡದ ಕಾರಣಕ್ಕೆ ಆರೋಪಿ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನವೆಂಬರ್ 11ರಂದು ಎಂಸಿಐಗೆ ಇ-ಮೇಲ್ ಮೂಲಕ ದೂರು ನೀಡಿದ ಮೊದಲ ವರ್ಷದ ವಿದ್ಯಾರ್ಥಿನಿಯನ್ನು ಮತ್ತೆ ರ‍್ಯಾಗಿಂಗ್ಗೆ ಒಳಪಡಿಸಿರುವುದು ಕೂಡಾ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News