ಕ್ರಿಕೆಟಿಗರು ಉದ್ದೀಪನಾ ಮದ್ದು ಪರೀಕ್ಷೆಗೆ ಒಳಗಾದರೆ ಕೇಂದ್ರ ಸರಕಾರದ ಅಭ್ಯಂತರವಿಲ್ಲ: ರಾಥೋರ್

Update: 2017-11-19 05:57 GMT

ಹೊಸದಿಲ್ಲಿ, ನ.19: ‘‘ಭಾರತದ ಕ್ರಿಕೆಟಿಗರು ವಿಶ್ವ ಉದ್ದೀಪನಾ ತಡೆ ಘಟಕ(ವಾಡಾ)ದಿಂದ ಉದ್ದೀಪನಾ ಮದ್ದು ಪರೀಕ್ಷೆಗೆ ಒಳಗಾಗುವುದಕ್ಕೆ ಕೇಂದ್ರ ಸರಕಾರದಿಂದ ಯಾವುದೇ ಅಭ್ಯಂತರವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ವಾಡಾದೊಂದಿಗೆ ನೋಂದಣಿಯಾಗಿದೆ. ಐಸಿಸಿ ಡೋಪಿಂಗ್ ಪರೀಕ್ಷೆಯನ್ನು ಗೌರವಿಸಬೇಕಾಗುತ್ತದೆ. ಕ್ರಿಕೆಟಿಗರನ್ನು ಡೋಪಿಂಗ್ ಟೆಸ್ಟ್‌ಗೆ ಒಳಪಡಿಸುವುದು ವಾಡಾಗೆ ಬಿಟ್ಟ ವಿಚಾರ’’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋರ್ ಹೇಳಿದ್ದಾರೆ.

ರಾಷ್ಟ್ರೀಯ ಉದ್ದೀಪನಾ ತಡೆ ಘಟಕಕ್ಕೆ(ನಾಡಾ)ಭಾರತದ ಕ್ರಿಕೆಟಿಗರನ್ನು ಪರೀಕ್ಷೆ ನಡೆಸುವ ಅಧಿಕಾರವಿಲ್ಲ. ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗೆ ಸೇರಿಲ್ಲ. ಕ್ರಿಕೆಟಿಗರ ಡೋಪಿಂಗ್ ಪರೀಕ್ಷೆಯನ್ನು ನಡೆಸುವ ಅಧಿಕಾರ ವಾಡಾಕ್ಕೆ ಇದೆ ಎಂದು ಬಿಸಿಸಿಐ ಇತ್ತೀಚೆಗೆ ವಾದ ಮಂಡಿಸಿತ್ತು. ಬಿಸಿಸಿಐ ವಾದಕ್ಕೆ ರಾಥೋರ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

‘‘ನಮಗೆ ಆಟಗಾರರು, ಕೋಚ್‌ಗಳು ಹಾಗೂ ಅಭಿಮಾನಿಗಳು ಅತ್ಯಂತ ಮುಖ್ಯ. ಆಟಗಾರ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ ಅದು ಅಭಿಮಾನಿಗಳ ನಂಬಿಕೆ ದ್ರೋಹ ವಾಗುತ್ತದೆ. ಅಭಿಮಾನಿಗಳು ಕ್ರೀಡಾಪಟುಗಳನ್ನು ಐಕಾನ್ ಹಾಗೂ ಸ್ಫೂರ್ತಿಯಾಗಿ ನೋಡುತ್ತಾರೆ. ಹಾಗಾಗಿ ಪ್ರತಿಯೊಂದು ಕ್ರೀಡಾಮಂಡಳಿಗಳು ಕ್ರೀಡೆಯಲ್ಲಿ ಮೋಸ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕ್ರಿಕೆಟಿಗರು ವಾಡಾದಿಂದ ಪರೀಕ್ಷೆಗೆ ಒಳಪಡುವುದಕ್ಕೆ ಕ್ರೀಡಾ ಸಚಿವಾಲಯದಿಂದ ಯಾವುದೇ ಸಮಸ್ಯೆಯಿಲ್ಲ’’ ಎಂದು ರಾಥೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News