ಎಚ್ಚರಿಕೆ....ಸದಾ ಟಿವಿಗೆ ಅಂಟಿಕೊಂಡಿದ್ದರೆ ಈ ರೋಗದ ಅಪಾಯ ಹೆಚ್ಚುತ್ತದೆ

Update: 2017-11-19 09:37 GMT

ನಿಮಗೆ ಹೆಚ್ಚು ಕಾಲ ಟಿವಿಯ ಮುಂದೆ ಕುಳಿತುಕೊಳ್ಳುವುದು ಅಭ್ಯಾಸವಾಗಿದ್ದರೆ ಅದನ್ನು ತಕ್ಷಣವೇ ಬಿಡುವುದು ಒಳ್ಳೆಯದು. ಸುದೀರ್ಘ ಅವಧಿಗೆ ಟಿವಿಯ ಮುಂದೆ ಕುಳಿತುಕೊಂಡು ಅದನ್ನು ವೀಕ್ಷಿಸುವುದು ಶರೀರದ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನೂತನ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಟಿವಿ ವೀಕ್ಷಿಸುವ ಜೊತೆಗೆ ಜನರು ಕುರುಕುಲು ತಿಂಡಿಗಳನ್ನೂ ತಿನ್ನುತ್ತಿರುತ್ತಾರೆ ಮತ್ತು ಇದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಾಲುಗಳು, ತೋಳುಗಳು, ಸೊಂಟ ಮತ್ತು ಶ್ವಾಸಕೋಶಗಳ ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟುವ ಸ್ಥಿತಿಯನ್ನು ವೇನಸ್ ಥ್ರೊಂಬೊಎಂಬಾಲಿಸಂ(ವಿಟಿಇ) ಎಂದು ಕರೆಯುತ್ತಾರೆ. ಜನರು ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ಹೊಂದಿದ್ದರೂ ಅವರು ಟಿವಿಯ ಮುಂದೆ ಕಳೆಯುವ ಸಮಯ ಹೆಚ್ಚುತ್ತಿದ್ದಂತೆ ವಿಟಿಇ ಅಪಾಯವೂ ಹೆಚ್ಚುತ್ತ ಹೋಗುತ್ತದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

ಸಂಶೋಧಕರು 45ರಿಂದ 64 ವರ್ಷ ವಯೋಮಾನದ 15,158 ಜನರನ್ನು ಸಮೀಕ್ಷೆಗೊಳಪಡಿಸಿದ್ದರು. ಆಗಾಗ್ಗೆ ಟಿವಿಯನ್ನು ವೀಕ್ಷಿಸುವವರಲ್ಲಿ ಎಂದೂ ಟಿವಿಯನ್ನೇ ನೋಡದ ಅಥವಾ ಅಪರೂಪಕ್ಕೊಮ್ಮೆ ಅದನ್ನು ನೋಡುವವರಿಗೆ ಹೋಲಿಸಿದರೆ ವಿಟಿಇಗೆ ತುತ್ತಾಗುವ ಅಪಾಯ 1.7 ಪಟ್ಟಿನಷ್ಟು ಹೆಚ್ಚಾಗಿರುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿತ್ತು. ಶಿಫಾರಸು ಮಾಡಲಾದ ಮಟ್ಟದಲ್ಲಿ ದೈಹಿಕ ಚಟುವಟಿಕೆಗಳನ್ನು ಹೊಂದಿದ್ದ ಮತ್ತು ಹೆಚ್ಚು ಸಮಯ ಟಿವಿಯನ್ನು ವೀಕ್ಷಿಸುವವರಲ್ಲಿ ಈ ಅಪಾಯ 1.8 ಪಟ್ಟು ಹೆಚ್ಚಾಗಿತ್ತು.

 ಇತ್ತೀಚಿಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ವೈಜ್ಞಾನಿಕ ಅಧಿವೇಶನದಲ್ಲಿ ಈ ಅಧ್ಯಯನ ವರದಿಯನ್ನು ಮಂಡಿಸಲಾಗಿತ್ತು.

ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಕೆಲವು ನೈಸರ್ಗಿಕ ಪರಿಹಾರಗಳಿವೆ. ಇಲ್ಲಿವೆ ಅಂತಹ ಪರಿಹಾರಗಳ ಕುರಿತು ಮಾಹಿತಿ...

ಯಥೇಚ್ಛ ನೀರಿನ ಸೇವನೆ

ನಿಮ್ಮ ಶರೀರದಲ್ಲಿ ನೀರಿನ ಕೊರತೆಯುಂಟಾಗಿದ್ದರೆ ಅಥವಾ ನಿರ್ಜಲೀಕರಣದಿಂದ ಬಳಲುತ್ತಿದ್ದರೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಹೆಚ್ಚಿನ ಸಾಧ್ಯತೆಗಳಿವೆ. ಹೀಗಾಗಿ ಯಥೇಚ್ಛವಾಗಿ, ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರನ್ನು ಸೇವಿಸುವುದು ಅತ್ಯಗತ್ಯವಾಗಿದೆ. ಇದು ರಕ್ತ ಹೆಪ್ಪುಗಟ್ಟುವುದರ ವಿರುದ್ಧ ರಕ್ಷಣೆ ನೀಡುವ ಜೊತೆಗೆ ಇತರ ಹಲವಾರು ಕಾಯಿಲೆಗಳನ್ನೂ ತಡೆಯುತ್ತದೆ.

ದ್ರಾಕ್ಷಿಯ ರಸ

ದ್ರಾಕ್ಷಿ ಹಲವಾರು ಆರೋಗ್ಯಲಾಭಗಳನ್ನು ನೀಡುವ ಹಣ್ಣಾಗಿದೆ. ಕೇವಲ ಹಣ್ಣು ಮಾತ್ರವಲ್ಲ, ಅದರ ರಸವು ಕೂಡ ಅಷ್ಟೇ ಆರೋಗ್ಯಕರವಾಗಿದೆ. ನೇರಳೆ ಬಣ್ಣದ ದ್ರಾಕ್ಷಿ ಫ್ಲೇವನಾಯ್ಡಿಗಳನ್ನು ಒಳಗೊಂಡಿದ್ದು, ಇದು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಜೊತೆಗೆ ರಕ್ತದಲ್ಲಿ ಪ್ಲೇಟ್ಲೆಟ್‌ಗಳ ಉತ್ಪತ್ತಿಗೂ ನೆರವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಅಲಿಸಿನ್ ಎಂಬ ಸಂಯುಕ್ತವನ್ನು ಒಳಗೊಂಡಿದ್ದು, ಇದು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಬೆಳ್ಳುಳ್ಳಿಯು ರಕ್ತವನ್ನು ತೆಳುವಾಗಿಸುವ ಗುಣವನ್ನು ಹೊಂದಿದೆ. ಆಹಾರದಲ್ಲಿ ಬೆಳ್ಳುಳ್ಳಿಯ ನಿಯಮಿತ ಬಳಕೆ ಅಥವಾ ಬೆಳಿಗ್ಗೆ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ತಿನ್ನುವುದು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ನೆರವಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯು ಶರೀರದ ಆರೋಗ್ಯಕ್ಕೆ ಲಾಭದಾಯಕವಾದ ಒಳ್ಳೆಯ ಕೊಬ್ಬನ್ನು ಒಳಗೊಂಡಿದೆ. ಶುದ್ಧವಾದ ಆಲಿವ್ ಎಣ್ಣೆಯಲ್ಲಿರುವ ಫಿನಾಲ್‌ಗಳು ರಕ್ತ ಹೆಪ್ಪುಗಟ್ಟುವು ದನ್ನು ತಡೆಯುತ್ತವೆ. ಆಲಿವ್ ಎಣ್ಣೆಯ ನಿಯಮಿತವಾದ ಬಳಕೆಯು ರಕ್ತ ಸಂಚಾರವನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ ಮತ್ತ ತನ್ಮೂಲಕ ರಕ್ತ ಹೆಪ್ಪುಗಟ್ಟುವಿಕೆಯ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಕಿವಿ ಹಣ್ಣು

ಕಿವಿ ಹಣ್ಣು ಅತ್ಯುತ್ತಮ ಆರೋಗ್ಯ ಲಾಭಗಳನ್ನು ನೀಡುತ್ತದೆ. ಅದರ ಸೇವನೆಯು ಹೃದಯಕ್ಕೆ ಒಳ್ಳೆಯದು. ಅದು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಕಡಿಮೆ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News