ಅಫ್ಘಾನ್: 30.50 ಲಕ್ಷ ಮಕ್ಕಳು ಶಾಲಾ ಶಿಕ್ಷಣ ವಂಚಿತ
ಕಾಬೂಲ್,ನ.19: ಅಫ್ಘಾನಿಸ್ತಾನದಲ್ಲಿ ಮಕ್ಕಳ ದುಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ರವಿವಾರ ತೀವ್ರ ಆತಂಕ ಪಡಿಸಿದೆ. ಭಾರೀ ಸಂಖ್ಯೆಯ ಅಫ್ಘಾನ್ ಮಕ್ಕಳಿಗೆ ಶಾಲಾ ಶಿಕ್ಷಣ ದೊರೆಯುತ್ತಿಲ್ಲ ಹಾಗೂ ಅಪೌಷ್ಟಿಕತೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಅಫ್ಘಾನಿಸ್ತಾನದ ಮಕ್ಕಳ ಶಿಕ್ಷಣದ ಕುರಿತು ನಾವು ಗಂಭೀರ ಆತಂಕವನ್ನು ಹೊಂದಿದ್ದೇವೆ. ಯಾಕೆಂದರೆ ಶಾಲೆಗೆ ಹೋಗಬೇಕಾಗಿರುವ ಸುಮಾರು 30.50 ಲಕ್ಷ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗುಳಿದಿದ್ದಾರೆ ಎಂದುಪ ಅಪ್ಘಾನಿಸ್ತಾನದಲ್ಲಿನ ಯುನಿಸೆಫ್ ಪ್ರತಿನಿಧಿ ಅದೆಲ್ ಖೊದ್ರ್, ಕ್ಸಿನುವಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈಗ ಶಾಲೆಗೆ ಹೋಗುತ್ತಿರುವ ಹುಡುಗಿಯರಲ್ಲಿಯೂ ಹೆಚ್ಚಿನವರು 12 ಅಥವಾ 15 ವರ್ಷ ವಯಸ್ಸಿನ ಹೊತ್ತಿಗೆ ಶಾಲೆಯನ್ನು ತೊರೆಯುತ್ತಾರೆ’’ ಎಂದವರು ತಿಳಿಸಿದ್ದಾರೆ. ಮಕ್ಕಳ ಬೋಧನೆಯ ಗುಣಮಟ್ಟ ಹಾಗೂ ಅವರ ಕಲಿಕಾ ಮಟ್ಟದ ಬಗ್ಗೆ ಖೋದ್ರ್ ಆತಂಕ ವ್ಯಕ್ತಪಡಿಸಿದ್ದಾರೆ. 2001ರಲ್ಲಿ ತಾಲಿಬಾನ್ ಆಡಳಿತ ಪತನಗೊಂಡ ಬಳಿಕ ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಪರಿಸ್ಥಿತಿ ಸುಧಾರಣೆಗೊಂಡಿತ್ತು. ತಾಲಿಬಾನ್ ಆಡಳಿತದಲ್ಲಿ 10 ಲಕ್ಷಕ್ಕೂ ಕಡಿಮೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. 2016ರಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳ ಸಂಖ್ಯೆ 19.50 ಲಕ್ಷಕ್ಕೇರಿದ್ದು, ಅವರಲ್ಲಿ ಶೇ.40 ಮಂದಿ ಬಾಲಕಿಯರು ಎಂದು ಅದೆಲ್ ಖೋದ್ರ್ ತಿಳಿಸಿದ್ದಾರೆ.
ಅಪೌಷ್ಟಿಕತೆಯು ಅಫ್ಘಾನ್ ಮಕ್ಕಳು ಎದುರಿಸುತ್ತಿರುವ ಇನ್ನೊಂದು ಪ್ರಮುಖ ಸವಾಲಾಗಿದೆ. ಅಪ್ಘಾನಿಸ್ತಾನದಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.