ಮುಗಾಬೆಗೆ ಪಕ್ಷಾಧ್ಯಕ್ಷ ಹುದ್ದೆಯಿಂದ ಖೊಕ್

Update: 2017-11-19 17:42 GMT

ಹರಾರೆ,ನ.19: ಕಳೆದ ವಾರ ನಡೆದ ಸೇನಾಕ್ರಾಂತಿಯ ಬಳಿಕ ವಸ್ತುಶಃ ಅಧಿಕಾರವಿಲ್ಲದೆ, ಹುದ್ದೆಯಲ್ಲಿ ಉಳಿದುಕೊಂಡಿರುವ ಝಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಪದಚ್ಯುತಿಗೆ ಕ್ಷಣಗಣನೆ ಆರಂಭವಾಗಿದೆ. ರವಿವಾರ ಆಡಳಿತಾರೂಢ ಝಡ್‌ಎಎನ್‌ಯು-ಪಿಎಫ್ ಪಕ್ಷವು ತುರ್ತು ಸಭೆ ನಡೆಸಿ, 93 ವರ್ಷ ವಯಸ್ಸಿನ ಮುಗಾಬೆ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಿದೆ.

ಕಳೆದ ವಾರ ಜಿಂಬಾಬ್ವೆಯಲ್ಲಿ ನಡೆದ ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ಸೇನೆಯು ಮುಗಾಬೆ ಅವರ ಎಲ್ಲಾ ಅಧಿಕಾರಗಳನ್ನು ಕಸಿದುಕೊಂಡು ಗೃಹಬಂಧನದಲ್ಲಿರಿಸಿತ್ತು. 93 ವರ್ಷ ವಯಸ್ಸಿನ ಮುಗಾಬೆ ತನ್ನ ಪತ್ನಿ ಗ್ರೇಸ್ ಅವರನ್ನು ಉತ್ತರಾಧಿಕಾರಿಯಾಗಿಸಲು ಹವಣಿಸಿದ್ದೇ ಸೇನೆಯ ಕೆಂಗಣ್ಣಿಗೆ ಕಾರಣವಾಯಿತೆನ್ನಲಾಗಿದೆ.

  ಇಂದು ಹರಾರೆಯಲ್ಲಿ ನಡೆದ ಝಡ್‌ಎಎನ್‌ಯು-ಪಿಎಫ್ ಪಕ್ಷದ ಸಭೆಯ ಬಳಿಕ ವಕ್ತಾರರೊಬ್ಬರು ವಿದೇಶಿ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ, ಪಕ್ಷದ ಅಧ್ಯಕ್ಷ ಹುದ್ದೆಯಿಂದ ಮುಗಾಬೆ ಅವರನ್ನು ಉಚ್ಚಾಟಿಸಲಾಗಿದೆ. ಗ್ರೇಸ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಎಮ್ಮರ್ಸನ್ ಮನಗಾವಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಹುದ್ದೆಯಿಂದ ಗ್ರೇಸ್ ಅವರನ್ನು ತೆಗೆದುಹಾಕಲಾಗಿದೆಯೆಂದವರು ಹೇಳಿದ್ದಾರೆ.

 ಕಳೆದ 37 ವರ್ಷಗಳಿಂದ ಝಿಬಾಂಬ್ವೆ ಅಧ್ಯಕ್ಷನಾಗಿ ವಸ್ತುಶಃ ಸರ್ವಾಧಿಕಾರಿ ಆಳ್ವಿಕೆ ನಡೆಸಿದ್ದರು. ಪತ್ನಿ ಗ್ರೇಸ್ ಹಾಗೂ ಅವರ ನಿಕಟವರ್ತಿಗಳು,ಮುಗಾಬೆಯವರ ವೃದ್ಧಾಪ್ಯದ ಪರಿಸ್ಥಿತಿಯನ್ನು ದುರ್ಬಕೆ ಮಾಡಿಕೊಂಡು ಅಧಿಕಾರವನ್ನು ಕಬಳಿಸಲು ಸಂಚು ನಡೆಸುತ್ತಿದ್ದಾರೆ ಹಾಗೂ ದೇಶದ ಸಂಪನ್ಮೂಲಗಳನ್ನು ಲೂಟಿಗೈಯುತ್ತಿದ್ದಾರೆಂದು ಝಡ್‌ಎಎನ್‌ಯು-ಪಿಎಫ್ ಪಕ್ಷದ ಪದಾಧಿಕಾರಿ ಓಬರ್ಟ್ ಮಪೊಫು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News