ದೇಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದ ಕುಟುಂಬಗಳಿಗೆ ದಿಕ್ಕಿಲ್ಲ

Update: 2017-11-19 18:38 GMT

ಭಾರತದ ರಾಜಧಾನಿಯಾದ ದಿಲ್ಲಿಯನ್ನು, ಭಾರತದ ಹೃದಯವೆಂದು ಬಣ್ಣಿಸಲಾಗುತ್ತದೆ. ಆದರೆ ವಾಸ್ತವವಾಗಿ ಅದೊಂದು ಹೃದಯಹೀನ ನಗರವಾಗಿದೆ. ಮಹಾನಗರದ ಈ ಗುಣವನ್ನು ಸಮರ್ಥಿಸುವಂತಹ ನಾಚಿಕೆಗೇಡಿನ ಘಟನೆಗಳ ಕೊನೆಯಿಲ್ಲದ ಪಟ್ಟಿಯೇ ಇದೆ. ಈ ಪಟ್ಟಿಯು ತ್ವರಿತ ವೇಗದಲ್ಲಿ ವಿಸ್ತಾರಗೊಳ್ಳುತ್ತದೆ. ಸಂಯುಕ್ತ ಪ್ರಾಂತವೆಂದೇ ಸ್ವಾತಂತ್ರಾ ನಂತರ ಹೆಸರು ಪಡೆದ, ವಿಶಾಲವಾದ ಪ್ರದೇಶವನ್ನು ಆಳಿದ್ದ ಹಾಗೂ 1857ರ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ವೀರೋಚಿತ ಪಾತ್ರ ವಹಿಸಿದ್ದ ಅವಧ್ ರಾಜಕುಟುಂಬದ ಕಟ್ಟಕಡೆಯ ‘ಯುವರಾಜ’ನು ಹಸಿವು ಮತ್ತಿತರ ಸಮಸ್ಯೆಗಳಿಂದಾಗಿ ಮೃತಪಟ್ಟ ಘಟನೆಯು ಇವುಗಳಲ್ಲಿ ಹೊಚ್ಚ ಹೊಸದಾಗಿದೆ. ಭಾರತೀಯ ಆಡಳಿತಗಾರರು, ರಾಜತಾಂತ್ರಿಕರು, ಉದ್ಯಮಿಗಳು ಹಾಗೂ ಸಾಹಿತಿಗಳು ಸೇರಿದಂತೆ ದಿಲ್ಲಿಯ ಪ್ರತಿಷ್ಠಿತ ವ್ಯಕ್ತಿಗಳ ನಿವಾಸಗಳ ಪಕ್ಕದಲ್ಲೇ ಇರುವ ಶಿಥಿಲಗೊಂಡ ಮನೆಯೊಂದರಲ್ಲಿ ಈ ಯುವರಾಜ ತನ್ನ ಅಂತಿಮ ದಿನಗಳನ್ನು ಕಳೆದಿದ್ದನು.

ಪತ್ರಿಕಾ ವರದಿಗಳ ಪ್ರಕಾರ, ‘‘ಕಡುಬಡತನದಲ್ಲಿ ಬದುಕಿದ್ದ ಅವಧ್‌ನ ಕಟ್ಟಕಡೆಯ ಯುವರಾಜನು, 2017ರ ಸೆಪ್ಟಂಬರ್ 2ರಂದು ದಿಲ್ಲಿಯ ಲ್ಲಿರುವ ತುಘಲಕ್ ಆಳ್ವಿಕೆ ಕಾಲದ ಬೇಟೆ ವಿಶ್ರಾಂತಿಗೃಹ ‘ಮಾಲ್ಚಾ ಮಹಲ್’ನಲ್ಲಿ ಶವವಾಗಿ ಪತ್ತೆಯಾಗಿದ್ದ. ಕುರುಚಲು ಕಾಡಿನೊಳಗೆ ಇರುವ ಈ ವಿಶ್ರಾಂತಿಗೃಹ ದುರಸ್ತಿಗೊಳ್ಳದೆ ಪಾಳುಬಿದ್ದ ಸ್ಥಿತಿಯಲ್ಲಿತ್ತು’’. ಆಘಾತಕಾರಿಯೆಂದರೆ, 14ನೇ ಶತಮಾನದ ಈ ಕಟ್ಟಡದಲ್ಲಿ ಆತ ನಿರ್ಜೀವ ಸ್ಥಿತಿಯಲ್ಲಿ ಬಿದ್ದಿರುವುದನ್ನು ಪೊಲೀಸ್ ಅಧಿಕಾರಿಗಳ ತಂಡವು ಪತ್ತೆ ಮಾಡಿದ ಎರಡು ತಿಂಗಳುಗಳ ಬಳಿಕ ಆತನ ಸಾವಿನ ಸುದ್ದಿಯನ್ನು ಒಂದು ವರ್ಗದ ಮಾಧ್ಯಮಗಳಿಗೆ ಬಿತ್ತರಿಸಲಾಯಿತು.
ಸೈರಸ್ ಎಂದೇ ಜನಪ್ರಿಯನಾಗಿದ್ದ ಅಲಿ ರಝಾ ಹಾಗೂ ಆತನ ಸಹೋದರಿ ಸಕೀನಾ, ತಮ್ಮ ತಾಯಿ ಬೇಗಂ ವಿಲಾಯತ್ ಮಹಲ್‌ರೊಂದಿಗೆ 1970ರ ದಶಕದಲ್ಲಿ ದಿಲ್ಲಿಗೆ ಆಗಮಿಸಿದ್ದರು. ಬೇಗಂ ಅವರು ಲಕ್ನೋದಲ್ಲಿರುವ ತಮ್ಮ ಪೂರ್ವಿಕರ ಆಸ್ತಿಯನ್ನು ವಾಪಸ್ ಪಡೆಯುವುದಕ್ಕಾಗಿ ದೀರ್ಘವಾದ ಕಾನೂನುಸಮರವನ್ನೇ ನಡೆಸಿದ್ದರು ಹಾಗೂ ಸಿಪಾಯಿದಂಗೆಯೆಂಬುದಾಗಿ ಬ್ರಿಟಿಷರಿಂದ ಬಣ್ಣಿಸಲ್ಪಟ್ಟ 1857ರ ಸ್ವಾತಂತ್ರ ಸಂಗ್ರಾಮದಲ್ಲಿ ತನ್ನ ಕುಟುಂಬ ಮಾಡಿದ ತ್ಯಾಗಗಳಿಗೆ ಮಾನ್ಯತೆ ನೀಡಬೇಕೆಂದು ಆಕೆ ಆಗ್ರಹಿಸಿದ್ದರು. ಲಕ್ನೋದಲ್ಲಿನ ತನ್ನ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರೆಯದೇ ಇದ್ದಾಗ, ದಿಲ್ಲಿ ಆಗಮಿಸಿದ ಬೇಗಂ ಅವರು ಹೊಸದಿಲ್ಲಿಯ ರೈಲು ನಿಲ್ದಾಣದಲ್ಲಿರುವ ಪ್ರಥಮ ದರ್ಜೆಯ ನಿರೀಕ್ಷಣಾ ಕೊಠಡಿ (ವೈಟಿಂಗ್ ರೂಂ)ಯಲ್ಲಿ ಮೊಕ್ಕಾಂ ಹೂಡಿದರು.
 ಆದಾಗ್ಯೂ 1985ರಲ್ಲಿ, ಆಕೆಗೆ ‘ಮಾಲ್ಚಾ ಮಹಲ್’ನ್ನು ಬಿಟ್ಟುಕೊಡಲಾಯಿತು ಜೊತೆಗೆ 500 ರೂ.ಗಳ ಮಾಸಾಶನವನ್ನು ಕೂಡಾ ನೀಡಲಾಯಿತು. ಆವಾಗಿನಿಂದ ಈ ಕುಟುಂಬ ಅಲ್ಲಿಯೇ ವಾಸಿಸುತ್ತಿದೆ.
ಸಚಿವರು, ಕೈಗಾರಿಕೋದ್ಯಮಿಗಳು, ರಾಜತಾಂತ್ರಿಕರು, ಸಾಹಿತಿಗಳು ಹಾಗೂ ಆಡಳಿತಾಧಿಕಾರಿಗಳು ಸೇರಿದಂತೆ ಪ್ರತಿಷ್ಠಿತರ ನಿವಾಸಗಳ ಪರಿಸರದಲ್ಲೇ ವಾಸವಾಗಿದ್ದರೂ, ಈ ಕುಟುಂಬವು ಏಕಾಂಗಿತನದ ಬದುಕನ್ನು ಬಯಸುತ್ತಿತ್ತು ಹಾಗೂ ಅದು ಹೊರಗಿನವರೊಂದಿಗೆ ಒಡನಾಟವಿರಿಸಿಕೊಂಡಿದ್ದುದು ತೀರಾ ಅಪರೂಪ. 700 ವರ್ಷಗಳಷ್ಟು ಹಳೆಯದಾದ, ಈಗ ಶಿಥಿಲಾವಸ್ಥೆಯಲ್ಲಿರುವ ‘ಮಾಲ್ಚಾಮಹಲ್’ಗೆ ಯಾವುದೇ ವಿದ್ಯುತ್ ಸಂಪರ್ಕವಿಲ್ಲ. ಅದಕ್ಕೆ ಬಾಗಿಲುಗಳಾಗಲಿ, ಕಿಟಕಿಗಳಾಗಲಿ ಹಾಗೂ ನಳ್ಳಿನೀರಿನ ಸೌಲಭ್ಯವಾಗಲಿ ಇಲ್ಲ.

1997ರಲ್ಲಿ ‘ ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಗೆ ನೀಡಿದ ಸಂದರ್ಶನದಲ್ಲಿ, ಯುವರಾಜ ಅಲಿ ರಝಾ , ತಾಯಿಯ ನಿಧನಾನಂತರ ತನ್ನ ಸಹೋದರಿ ತೀವ್ರವಾಗಿ ಖಿನ್ನತೆಗೊಳಗಾದು ದನ್ನು ಹಾಗೂ ಆತ್ಮಹತ್ಯೆಗೆ ಆಕೆ ಹಾತೊರೆ ಯುತ್ತಿದ್ದುದರ ಬಗ್ಗೆ ಹೇಳಿಕೊಂಡಿದ್ದರು. ‘‘ಬೇಗಂ ಮೃತಪಟ್ಟ ಬಳಿಕ ನನ್ನ ಸೋದರಿ ತೀವ್ರ ವಾಗಿ ನೊಂದಿದ್ದಳು. ಆಕೆ ಕಪ್ಪು ಬಟ್ಟೆಯನ್ನೇ ಧರಿಸುತ್ತಿದ್ದಳು. ಆಕೆ ಒಮ್ಮೆಯೂ ತನ್ನ ಕೂದಲನ್ನು ಬಾಚಿಕೊಂಡಿ ರಲಿಲ್ಲ’’ ಎಂದು ಆತ ಸಂದರ್ಶನದಲ್ಲಿ ತಿಳಿಸಿದ್ದರು. ಸಕೀನಾ ಕೆಲವು ತಿಂಗಳುಗಳ ಹಿಂದೆ ನಿಧನರಾಗಿದ್ದರು. ಆ ಸಮಯದಲ್ಲಿ ಅವರ ತಾಯಿಯ ಚಿತಾಭಸ್ಮವನ್ನು, ಮನೆಯ ವಿಶಾಲವಾದ ಕೊಠಡಿಯಮಧ್ಯದಲ್ಲಿ, ಸ್ಪಟಿಕದ ಸೀಸೆ ಯೊಂದರಲ್ಲಿ ಇರಿಸಲಾಗಿತ್ತು. ಯುವರಾಜನ ಹೇಳಿದ ಪ್ರಕಾರ 1993ರಲ್ಲಿ, ಆತನ ತಾಯಿಯು, ಆಕೆ ಎಂದೂ ಧರಿಸಿರದ ತನ್ನ ಆಭರಣದಲ್ಲಿದ್ದ ವಜ್ರಗಳನ್ನು ಪುಡಿಮಾಡಿ ಸೇವಿಸಿ ಸಾವಿಗೆ ಶರಣಾಗಿದ್ದರು.

ಮುರುಕಲು ಮೇಜಿನ ಮೇಲೆ ಇರಿಸಲಾಗಿದ್ದ ನೀಲಿಬಣ್ಣದ ಸೆರಾಮಿಕ್‌ನಲ್ಲಿ ನಿರ್ಮಿತವಾದ ಚಹಾದ ಕಪ್‌ಗಳಿಗೆ ಯುವರಾಜನು ನೀರನ್ನು ಸುರಿಯುತ್ತಿರುವುದು ಆಗಾಗ್ಗೆ ಕಾಣ ಸಿಗುತ್ತಿತ್ತು. ಸ್ಥಳೀಯ ಪೊಲೀಸರು ಹೇಳುವ ಪ್ರಕಾರ, ಯುವರಾಜನು ಸಾವನ್ನಪ್ಪುವ ಮುನ್ನ ಚಾಣಕ್ಯಪುರಿ ಸಮೀಪದ ಅರಣ್ಯಪ್ರದೇಶಗಳಲ್ಲಿ ಅಲೆದಾಡು ತ್ತಿದ್ದುದನ್ನು ಕಂಡವರಿದ್ದಾರೆ. ಆತನ ಚಲನವಲನದಲ್ಲಿ ಶಂಕಾಸ್ಪದವೆನಿಸುವಂತಹ ಯಾವುದೇ ಅಂಶವು ಕಂಡುಬಂದಿರಲಿಲ್ಲ. ಬಳಿಕ ಪೊಲೀಸರು ಆತ ತನ್ನ ಮನೆಯ ನೆಲದ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆತನನ್ನು ಸಮೀಪದ ಸರಕಾರಿ ಆಸ್ಪತ್ರೆ (ಆರ್‌ಎಂಎಲ್)ಗೆ ಕೊಂಡೊಯ್ಯಲಾಗಿತ್ತು. ಆತನ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಇರಲಿಲ್ಲ. ಕೆಲವು ಸಂಪರ್ಕದ ದೂರವಾಣಿ ಸಂಖ್ಯೆಗಳು ಸ್ಥಳ ದಲ್ಲಿ ಪತ್ತೆಯಾಗಿತ್ತಾದರೂ, ಅವುಗಳನ್ನು ಸಂಪರ್ಕಿ ಸಲು ಸಾಧ್ಯವಾಗಿರಲಿಲ್ಲ. ನಿಯಮದ ಪ್ರಕಾರ 72 ತಾಸುಗಳ ಕಾಲ ಕಾದ ಬಳಿಕ, ಯಾರೂ ಕೂಡಾ ಶವವನ್ನು ಪಡೆಯಲು ಮುಂದೆ ಬಾರದಿದ್ದಾಗ, ಶವವನ್ನು ದಿಲ್ಲಿ ವಕ್ಫ್ ಮಂಡ ಳಿಗೆ ಹಸ್ತಾಂತರಿಸಲಾಯಿತು. ಸೆಪ್ಟೆಂಬರ್ 5ರಂದು ವಕ್ಫ್ ಮಂಡಳಿಯು ದಿಲ್ಲಿ ಗೇಟ್ ಕಬರಿಸ್ತಾನದಲ್ಲಿ , .ಯುವರಾಜನ ಪಾರ್ಥಿವ ಶರೀರವನ್ನು ದಫನಮಾಡಿತು.
ಸೈರಸ್ ಎಂದೇ ಕರೆಯಲ್ಪಡುತ್ತಿದ್ದ ಅವಧ್ ರಾಜವಂಶದ ಕೊನೆಯ ಯುವರಾಜನ ದಾರುಣ ಸಾವು ಹೀಗಾಯಿತು. ವಿಪರ್ಯಾಸವೆಂದರೆ, ಚಕ್ರವರ್ತಿ ಸೈರಸ್ (ಕ್ರಿ.ಪೂ.600-530), ಜಾಗತಿಕ ಇತಿಹಾಸದ ಮಹಾನ್ ಸಾಮ್ರಾಜ್ಯಗಳಲ್ಲಿ ಒಂದೆನಿಸಿದ್ದ ಅಕಾಯೆಮೆನಿದ್ ಸಾಮ್ರಾಜ್ಯವನ್ನು ಆಳಿದ್ದನು. ಆದರೆ ಅವಧ್ ಈ ಮಾಜಿ ಯುವರಾದ ಸೈರಸ್, ನಿರ್ಗತಿಕನಾಗಿ ಸಾವನ್ನಪ್ಪಿದ್ದಾನೆ.
ಪ್ರಸ್ತುತ, ಬೇಗಂ ಹಝ್ರತ್ ಮಹಲ್ ಹಾಗೂ ಆಕೆಯ ಪುತ್ರ ಬ್ರಿಜಿಸ್ ಖಾದರ್ ಜೊತೆ ಬೇಗಂ ವಿಲಾಯತ್ ಮಹಲ್ ಅವರಿಗೆ ಇರುವ ಸಂಬಂಧದ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ. ಈಸ್ಟ್ ಇಂಡಿಯಾ ಕಂಪೆನಿಯ ಆಳ್ವಿಕೆ ವಿರುದ್ಧ 1857ರಲ್ಲಿ ನಡೆದ ಸ್ವಾತಂತ್ರ ಸಂಗ್ರಾಮವನ್ನು ಮುನ್ನಡೆಸುವಲ್ಲಿ ಬೇಗಂ ಹಝ್ರತ್ ಮಹಲ್ ಪ್ರಮುಖ ಪಾತ್ರ ವಹಿಸಿದ್ದರು. 1860ರವರೆಗೆ ಸಶಸ್ತ್ರ ಸಮರವನ್ನು ನಡೆಸಿದ ಆಕೆ, ಬ್ರಿಟಿಷರಿಗೆ ಶರಣಾಗದೆ ನೇಪಾಳದಲ್ಲಿ ಆಶ್ರಯಪಡೆದುಕೊಂಡಿದ್ದರು. ಸ್ವಾತಂತ್ರ ಸೇನಾನಿಗಳ ಕುಟುಂಬದ ಸದಸ್ಯೆಯಾದ ತನಗೆ ಪರಿಹಾರ ದೊರೆಯಬೇಕೆಂದು ಆಕೆ ಸ್ವತಂತ್ರ ಭಾರತದ ಸರಕಾರವನ್ನು ಆಗ್ರಹಿಸಿರುವುದಂತೂ ವಾಸ್ತವ ಹಾಗೂ ಆಕೆಯ ಬೇಡಿಕೆಯನ್ನು ಯಾರೂ ತಿರಸ್ಕರಿಸಿರಲಿಲ್ಲ.
1857ರಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಸಮರವನ್ನು ನಡೆಸಿದ ರಾಜಕುಟುಂಬಕ್ಕೆ ಸೇರಿದವರಾದ ಬೇಗಂ ವಿಲಾಯತ್ ಮಹಲ್ ಹಾಗೂ ಆಕೆಯ ಮಕ್ಕಳು ನಿರ್ಗತಿಕರಾಗಿ ಸಾವನ್ನಪ್ಪಿರುವ ಘಟನೆಯೂ ವಿರಳವಾದುದೇನೂ ಅಲ್ಲ. ಯಾವುದೇ ಇತಿಹಾಸಕಾರನೂ ಗಮನ ಹರಿಸದೇ ಇರುವ ಇಂತಹ ಸಾವಿರಾರು ಕಥೆಗಳಿವೆ.
ವಿಷಾದಕರವೆಂದರೆ, ಸ್ವಾತಂತ್ರದ ಸಂದರ್ಭದಲ್ಲಾಗಲಿ ಅಥವಾ ಪ್ರಥಮ ಸ್ವಾತಂತ್ರ ಸಮರದ ಶತಮಾನೋತ್ಸವನ್ನು 1956-57ರಲ್ಲಿ ಆಚರಿಸುವಾಗಲೂ ಭಾರತ ಸರಕಾರವು, ಈ ಮಹಾನ್ ಹೋರಾಟದಲ್ಲಿ ತನ್ನ ಸರ್ವಸ್ವವನ್ನೂ ಕಳೆದುಕೊಂಡ ಕುಟುಂಬಗಳಿಗಾದ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ಭಾರತ ಸರಕಾರವು ಚಿಂತಿಸಲೇ ಇಲ್ಲ. ಸ್ವತಂತ್ರ ಭಾರತದ ಸರಕಾರವು ಹುತಾತ್ಮರ ಕುಟುಂಬಗಳ ಸದಸ್ಯರಿಗೆ ಪರಿಹಾರವ್ನ ನೀಡಬೇಕಿತ್ತು ಹಾಗೂ ಸಿಪಾಯಿದಂಗೆಯಲ್ಲಿ ಪಾಲ್ಗೊಂಡಿದ್ದ ‘ಅಪರಾಧ’ಕ್ಕಾಗಿ ವಶಪಡಿಸಿಕೊಳ್ಳಲಾದ ಆಸ್ತಿಗಳು ಹಾಗೂ ಸಂಪತ್ತನ್ನು ಮರಳಿಸಬೇಕಾಗಿತ್ತು. ಇದುವೇ ಸ್ವತಂತ್ರ ಭಾರತ ಸರಕಾರದ ಮೊದಲ ಆದೇಶವಾಗಿರಬೇಕಾಗಿತ್ತು.
ಆದರೆ ಹಾಗೆ ನಡೆಯಲಿಲ್ಲ. ಆದಕ್ಕಿಂತಲೂ ಘೋರವಾದ ಕ್ರಿಮಿನಲ್ ಆಚರಣೆಯನ್ನು ಮುಂದುವರಿಸಲು ಅವಕಾಶ ನೀಡಲಾ ಯಿತು. ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರಿಗೆ ನೆರವಾದ ಗ್ವಾಲಿಯರ್, ಹೈದರಾಬಾದ್, ಭೋಪಾಲ್, ರಾಮಪುರ್, ಕಾಶ್ಮೀರ, ಪಾಟಿಯಾಲ, ಪಟೌಡಿ, ನಭ ಹಾಗೂ ಇನ್ನೂ ಹಲವು ರಾಜ್ಯಗಳ ಸಂಸ್ಥಾನಗಳ ಕುಟುಂಬಗಳಿಗೆ ಅವರ ಆಸ್ತಿಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಯಿತು. ಬಂಡಾಯವೆದ್ದ ಸಂಸ್ಥಾನಗಳ ದೊರೆಗಳಿಂದ ವಶಪಡಿಸಿಕೊಂಡ ಆಸ್ತಿ, ಸಂಪತ್ತುಗಳನ್ನು ಬ್ರಿಟಿಷರು, ಈ ರಾಜ್ಯಗಳ ಯುವರಾಜರುಗಳಿಗೆ ಉಡುಗೊರೆಯಾಗಿ ನೀಡಿದ್ದು, ಅದನ್ನು ಆ ಕುಟುಂಬಗಳು ಈಗಲೂ ಅನುಭವಿಸುತ್ತಾ ಬಂದಿವೆ. ದುರಂತವೆಂದರೆ, ಇನ್ನೊಂದೆಡೆ ಸ್ವಾತಂತ್ರ ಹೋರಾಟಗಾರರ ಮಕ್ಕಳು/ಕುಟುಂಬಿಕರು ಬೇಗಂ ವಿಲಾಯತ್ ಮಹಲ್‌ರ ಕುಟುಂಬದಂತೆ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸಿ, ನಿರ್ಗತಿಕರಾಗಿ ಸಾಯುತ್ತಿದ್ದಾರೆ. ಇನ್ನೊಂದೆಡೆ ಬ್ರಿಟಿಷರ ಭಟ್ಟಂಗಿಗಳಾಗಿ ವರ್ತಿಸಿದ ರಾಜಕುಟುಂಬಗಳ ಸದಸ್ಯರು ಸ್ವತಂತ್ರ ಭಾರತದ ಸಚಿವರಾಗಿ,ಮುಖ್ಯಮಂತ್ರಿಗಳಾಗಿ, ರಾಜ್ಯಪಾಲರಾಗಿ ಅಧಿಕಾರವನ್ನು ಅನುಭವಿಸುತ್ತಿರುವ ಆಘಾತಕಾರಿ ನೋಟ ನಮಗೆ ಕಾಣುತ್ತಿದೆ. ಮೊದಲ ಸ್ವಾತಂತ್ರ ಸಂಗ್ರಾಮವನ್ನು ಮುನ್ನಡೆಸಿದವರ ನೂರಾರು ನಿವಾಸಗಳು ಪಾಳುಬಿದ್ದಿರುವುದನ್ನು ನೋಡುತ್ತಿದ್ದೇವೆ. ಬಹಾದೂರ್ ಜಫರ್ ಶಾ (ಕೆಂಪುಕೋಟೆ), ರಾಣಿ ಲಕ್ಷ್ಮೀ ಬಾಯಿ (ಝಾನ್ಸಿ ಕೋಟೆ), ಬೇಗಂ ಹಝ್ರತ್ ಮಹಲ್ (ಲಕ್ನೋ ಅರಮನೆ) ಇವುಗಳಲ್ಲಿ ಕೆಲವು ಉದಾಹರಣೆಯಾಗಿದ್ದು, ಅವನ್ನು ಜೀಣೋದ್ಧಾರಗೊಳಿಸಲಾಗಿಲ್ಲ. ಇವೆಲ್ಲವೂ ರಾಷ್ಟ್ರೀಯ ಆಸ್ತಿಗಳಾಗಿ ಮಾರ್ಪಟ್ಟಿವೆ. ಜಫರ್ ಶಾ ಕುಟುಂಬವು, ಬರ್ಮಾದಲ್ಲಿ ಭಿಕ್ಷುಕರಾಗಿ ಜೀವನಸಾಗಿಸಬೇಕಾಯಿತು. ಆದರೆ ಬ್ರಿಟಿಷ್ ಆಡಳಿತದ ಜೊತೆ ಕೈಜೋಡಿಸಿಕೊಂಡ ರಾಜಕುಟುಂಬಗಳ ಎಸ್ಟೇಟ್‌ಗಳಲ್ಲಿ ಹಲವಾರು ಈಗ ರಾಶಿರಾಶಿ ಹಣ ತಂದುಕೊಡುವ ರೆಸಾರ್ಟ್‌ಗಳಾಗಿ ಮಾರ್ಪಟ್ಟಿವೆ.
ಹೀಗೆ ಬ್ರಿಟಿಷರ ಕಾಲದಲ್ಲೂ ಆಳ್ವಿಕೆ ನಡೆಸಿದ ಕೈಗೊಂಬೆ ರಾಜರುಗಳ ಕುಟುಂಬಿಕರು, ಸ್ವತಂತ್ರ ಭಾರತದಲ್ಲೂ ಆಳ್ವಿಕೆಯನ್ನು ಮುಂದುವರಿಸಿದ್ದಾರೆ. ಭಾರತದ ಸ್ವಾತಂತ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರ ಕುಟುಂಬಗಳು ನಿರ್ಗತಿಕರಾಗಿ ಬದುಕುತ್ತಿದ್ದಾರೆ. ಭಾರತ್ ಮಾತಾ ಕಿ ಜೈ !.

ಕೃಪೆ: ಟುಸರ್ಕಲ್ಸ್.ನೆಟ್

Writer - ಶಂಸುಲ್ ಇಸ್ಲಾಮ್

contributor

Editor - ಶಂಸುಲ್ ಇಸ್ಲಾಮ್

contributor

Similar News

ಜಗದಗಲ
ಜಗ ದಗಲ