ಐದು ರೂ.ಸ್ಟಾಂಪ್‌ನ ಮೇಲೆ ನಿಮ್ಮ ಚಿತ್ರ ಬೇಕೇ? ಹಾಗಿದ್ದರೆ ಹೊರಡಿ ಶಬರಿಮಲೆಗೆ....

Update: 2017-11-20 10:39 GMT

ಐದು ರೂ.ಸ್ಟಾಂಪ್‌ನ ಮೇಲೆ ತಮ್ಮ ಚಿತ್ರವನ್ನು ಬಯಸುವವರು ನೇರವಾಗಿ ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ತೆರಳಬಹುದು. ಅಲ್ಲಿಯ ಅಂಚೆ ಕಚೇರಿಯು ಈ ಇಚ್ಛೆಯನ್ನು ಪೂರೈಸುತ್ತದೆ.

ಇದೇ ಮೊದಲ ಬಾರಿಗೆ ಇಲಾಖೆಯು ಈ ಸೇವೆಯನ್ನು ಒದಗಿಸುತ್ತಿದೆ. ನ.16ರಂದು ಈ ವರ್ಷದ ಎರಡು ತಿಂಗಳ ಅವಧಿಯ ಶಬರಿಮಲೆ ಯಾತ್ರೆ ಆರಂಭಗೊಂಡಾಗ ಈ ಸೇವೆಗೆ ಚಾಲನೆ ನೀಡಲಾಗಿದೆ.

ಆದರೆ ಯಾತ್ರಿಗಳಿಗೆ ಈ ಸೌಲಭ್ಯದ ಅರಿವಿದ್ದಂತಿಲ್ಲ. ಈವರೆಗೆ ಸುಮಾರು 50 ಜನರು ಈ ಅಂಚೆಕಚೇರಿಗೆ ಭೇಟಿ ನೀಡಿ ತಮ್ಮ ಚಿತ್ರವಿರುವ ಅಂಚೆಚೀಟಿಗಳನ್ನು ಮಾಡಿಸಿ ಕೊಂಡಿದ್ದಾರೆ.

ಐದು ರೂ.ಸ್ಟಾಂಪ್‌ನ ಮೇಲೆ ತಮ್ಮ ಚಿತ್ರವನ್ನು ಬಯಸುವವರು ನಿಗದಿತ ಅರ್ಜಿ ಫಾರ್ಮ್ ತುಂಬಿದರೆ ಅವರ ಚಿತ್ರವನ್ನು ತೆಗೆದುಕೊಂಡು ಹತ್ತು ನಿಮಿಷಗಳಲ್ಲಿ ಸ್ಟಾಂಪ್‌ನ್ನು ನೀಡಲಾಗುತ್ತದೆ. ಒಂದು ಬಾರಿಗೆ ಐದು ರೂ.ಗಳ ಇಂತಹ 12 ಸ್ಟಾಂಪ್‌ಗಳನ್ನು ಮಾಡಿಸಿಕೊಳ್ಳಬಹುದು, ಆದರೆ ಇದಕ್ಕಾಗಿ 300 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಅಂಚೆಚೀಟಿಗಳು ಕಾನೂನುಬದ್ಧವಾಗಿದ್ದು ಅಂಚೆ ಲಕೋಟೆಗಳಿಗೆ ಹಚ್ಚಲು, ಇತರ ಅಂಚೆಕಾರ್ಯಗಳಿಗೆ ಬಳಸಬಹುದಾಗಿದೆ.

ಶಬರಿಮಲೆ ಅಂಚೆ ಕಚೇರಿ ಬಹುಶಃ ವರ್ಷವಿಡೀ ಕಾರ್ಯಾಚರಿಸದ ದೇಶದ ಏಕೈಕ ಕಚೇರಿಯಾಗಿರಬಹುದು. ಪ್ರತಿ ವರ್ಷ ನವಂಬರ್‌ನಲ್ಲಿ ಶಬರಿಮಲೆ ಯಾತ್ರೆ ಆರಂಭಗೊಂಡ ದಿನ ಬಾಗಿಲು ತೆರೆದುಕೊಳ್ಳುವ ಈ ಅಂಚೆ ಕಚೇರಿ ಜನವರಿ ಮಧ್ಯಭಾಗ ದಲ್ಲಿ ಯಾತ್ರೆಯು ಅಂತ್ಯಗೊಂಡಾಗ ಬಾಗಿಲನ್ನೆಳೆದುಕೊಳ್ಳುತ್ತದೆ. ವಿಷು ಋತುವಿನಲ್ಲಿಯೂ ಈ ಅಂಚೆಕಚೇರಿಯನ್ನು ತೆರೆಯಲಾಗುತ್ತದೆ.

ಈ ಅಂಚೆಕಚೇರಿಯು ಇನ್ನೊಂದು ವೈಶಿಷ್ಟವನ್ನು ಹೊಂದಿದೆ. ಇಲ್ಲಿಗೆ ಬರುವ ಮತ್ತು ಇಲ್ಲಿಂದ ರವಾನೆಯಾಗುವ ಪ್ರತಿಯೊಂದು ಟಪಾಲಿನ ಮೇಲೂ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲುಗಳ ಅಂಚೆ ಮುದ್ರೆಯನ್ನು ಒತ್ತಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News