ಸಮೀಕ್ಷೆಗಳಲ್ಲಿ ಮೋಸದಾಟ ನಡೆಯುತ್ತಿದೆಯೇ?

Update: 2017-11-20 18:38 GMT

ಭಾರತದ ರೇಟಿಂಗ್ ಹೆಚ್ಚಿಸುವಂತೆ ಮೋದಿ ಸರಕಾರ ಮಂಡಿಸಿದ್ದ ವಾದದಲ್ಲಿ ನೋಟು ರದ್ದತಿ, ಜಿಎಸ್‌ಟಿ, ಆಧಾರ್, ಬ್ಯಾಂಕುಗಳ ಮರುಬಂಡವಾಳೀಕರಣ, ಸೌಲಭ್ಯಗಳ ನೇರ ವರ್ಗಾವಣೆ ಮುಂತಾದ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹೇಳಲಾಗಿತ್ತು. ಈಗ ಭವಿಷ್ಯದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಇನ್ನಷ್ಟು ಉತ್ತಮವಾಗಲಿದೆ ಎಂದು ಹೇಳಿರುವ ಮೂಡೀಸ್ ಹೂಡಿಕೆದಾರರ ಸೇವಾ ಸಂಸ್ಥೆಯ ಅಸಲಿ ಚರಿತ್ರೆ ಏನು?

ಇತ್ತೀಚಿನ ಕೆಲವು ಬೆಳವಣಿಗೆಗಳು ಇಂತಹದೊಂದು ಸಂದೇಹಕ್ಕೆ ಕಾರಣವಾಗಿವೆ. ಇತ್ತೀಚೆಗೆ ವಿಶ್ವ ಬ್ಯಾಂಕ್, ಪ್ಯೂ ಸಂಶೋಧನಾ ಕೇಂದ್ರ ಮತ್ತು ಮೂಡೀಸ್ ಹೂಡಿಕೆದಾರರ ಸೇವಾ ಸಂಸ್ಥೆಗಳು ಭಾರತಕ್ಕೆ ಸಂಬಂಧಿಸಿದ ಸಮೀಕ್ಷಾ ವರದಿಗಳನ್ನು ಬಿಡುಗಡೆಮಾಡಿವೆ. ವಿಶ್ವ ಬ್ಯಾಂಕ್‌ನ ವರದಿ ಭಾರತದಲ್ಲಿ ವಾಣಿಜ್ಯ ವ್ಯವಹಾರ, ಉದ್ದಿಮೆಗಳ ಸುಲಭತೆ ಕುರಿತಾಗಿದೆ. ಪ್ಯೂ ಕೇಂದ್ರದ ವರದಿ ಪ್ರಧಾನಿ ಮೋದಿಯವರ ಜನಪ್ರಿಯತೆ ಕುರಿತಾಗಿದೆ. ಮೂಡೀಸ್ ಸಂಸ್ಥೆಯ ವರದಿ ಭಾರತದ ಆರ್ಥಿಕ ವ್ಯವಸ್ಥೆ ಕುರಿತಾಗಿದೆ. ಹತ್ತರಲ್ಲಿ ಒಂಬತ್ತು ಮಂದಿ ಭಾರತೀಯರು ಮೋದಿ ಪರವಾದ ಅಭಿಪ್ರಾಯ ಹೊಂದಿದ್ದಾರೆಂದು ಪ್ಯೂ ಸಮೀಕ್ಷೆ ತಿಳಿಸಿದರೆ, ಮೂಡೀಸ್ ಸಂಸ್ಥೆ ಭಾರತದ ಸಾಲ ಮರುಪಾವತಿ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಿದೆ. ಸುದ್ದಿ ತಿಳಿದಾಕ್ಷಣ ಮೋದಿ ಸರಕಾರದ ಮಂತ್ರಿಮಹೋದಯರು ಹಿಗ್ಗಿ ಹೀರೇಕಾಯಿಯಾಗಿದ್ದಾರೆ. ವಿತ್ತಮಂತ್ರಿ ಅರುಣ್ ಜೇಟ್ಲಿಯ ಆನಂದಕ್ಕೆ ಪಾರವೇ ಇಲ್ಲವಾಗಿದೆ. ಅತ್ತ ಸಂಘಿಗಳಂತೂ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ನಲಿದಾಡುತ್ತಿದ್ದಾರೆ. ಮೋದಿ ಭಕ್ತರು ಮತ್ತೊಂದು ಸುತ್ತಿನ ಮೋದಿ ಭಜನೆ ಪ್ರಾರಂಭಿಸಿದ್ದಾರೆ. ಭಟ್ಟಂಗಿ ಮಾಧ್ಯಮಗಳು ಯಥಾಪ್ರಕಾರ ಈ ವರದಿಗಳಿಗೆ ಎಲ್ಲಿಲ್ಲದ ಪ್ರಚಾರ ನೀಡುತ್ತಿವೆ. ಈ ಸಂಭ್ರಮಾಚರಣೆಗಳನ್ನೆಲ್ಲಾ ಕೊಂಚ ಬದಿಗಿಟ್ಟು ವಾಸ್ತವ ಏನೆಂದು ನೋಡಹೊರಟರೆ ತೀರಾ ಭಿನ್ನ ಚಿತ್ರಣವೊಂದು ಎದುರಾಗುತ್ತದೆ.

ಪ್ಯೂ ಕೇಂದ್ರದ ಸಮೀಕ್ಷೆ

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಯಕನೊಬ್ಬನನ್ನು ಶೇಕಡಾ 90ಕ್ಕೂ ಅಧಿಕ ಜನ ಬೆಂಬಲಿಸಿದ ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ಹೆಚ್ಚುಕಡಿಮೆ ಇಲ್ಲವೆಂದೇ ಹೇಳಬಹುದು. ಇಲ್ಲಿ ನಾವು ಮಾತನಾಡುತ್ತಿರುವುದು ಸಾಚಾ ಸಮೀಕ್ಷೆಗಳ ಬಗ್ಗೆ. ಖೊಟ್ಟಿ ಸಮೀಕ್ಷೆಗಳ ಮಾತು ಬೇರೆ. ಉದಾಹರಣೆಗೆ ಈಜಿಪ್ಟಿನ ಮಾಜಿ ಅಧ್ಯಕ್ಷ ಜನರಲ್ ಅಲ್ ಸಿಸಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರ್ರಫ್ ಪ್ರಜಾಸತ್ತಾತ್ಮಕ ಸರಕಾರಗಳನ್ನು ಉರುಳಿಸಿದ ಬಳಿಕ ಚುನಾವಣೆ ನಡೆಸಿ ತಮಗೆ ಅಭೂತಪೂರ್ವ ಜಯ ದೊರಕಿತ್ತೆಂದು ಹೇಳಿಕೊಂಡಿದ್ದರು. ಮುಷರ್ರಫ್ ತನಗೆ ಶೇಕಡಾ 97ಕ್ಕೂ ಅಧಿಕ ಮತಗಳು ಬಿದ್ದವು ಎಂದು ಹೇಳಿಕೊಂಡರೆ ಅಲ್ ಸಿಸಿ ಪ್ರಕಾರ ಶೇಕಡಾ 96.1ರಷ್ಟು ಪ್ರಜೆಗಳು ಅವರ ಪರವಾಗಿ ಮತ ಚಲಾಯಿಸಿದ್ದರಂತೆ! ಪ್ಯೂ ಸಂಸ್ಥೆ ತನ್ನ ಈ ತಥಾಕಥಿತ ಸಮೀಕ್ಷೆಯನ್ನು ಇದೇ ಫೆಬ್ರವರಿ 21ರಿಂದ ಮಾರ್ಚ್ 10ರ ತನಕ ನಡೆಸಿತ್ತು ಎನ್ನಲಾಗಿದೆ. ಬರೀ 2,464 ಜನರನ್ನು ಮಾತನಾಡಿಸಿರುವ ಸಂಸ್ಥೆ ಅದನ್ನು ಇಡೀ ಭಾರತದ 130 ಕೋಟಿಗೂ ಅಧಿಕ ಜನರ ಅಭಿಪ್ರಾಯವೆಂಬಂತೆ ಬಿಂಬಿಸಿದೆ! ಗಮನಿಸಬೇಕಿರುವ ಅಂಶವೆಂದರೆ ಈ 2,464 ಮಂದಿಯಲ್ಲಿಯೂ ಹೆಚ್ಚಿನ ವರು ನಗರವಾಸಿಗಳು! ಇದಕ್ಕಿಂತ ಹಾಸ್ಯಾಸ್ಪದವಾದ ವಿಷಯ ಇನ್ಯಾವುದಿದೆ ಹೇಳಿ! ಅದೇ ವೇಳೆ ಈ ವರದಿ ಎರಡು ರಾಜ್ಯ ಚುನಾವಣೆಗಳು ಸನ್ನಿಹಿತವಾಗುತ್ತಿರುವ ಕಾಲದಲ್ಲೇ ಪ್ರಕಟವಾಗಿರುವುದು ಕಾಕತಾಳೀಯವೇ ಎಂಬ ಗಂಭೀರ ಪ್ರಶ್ನೆಯೂ ಇದೆ. ಕಾರಣವೇನೆಂದರೆ ನೋಟು ರದ್ದತಿ ಮತ್ತು ಜಿಎಸ್‌ಟಿಗಳಿಂದ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿ ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳು, ನಿರುದ್ಯೋಗಿಗಳು ಮತ್ತು ಜನಸಾಮಾನ್ಯರು ಮೋದಿ ಸರಕಾರಕ್ಕೆ ಹಿಡಿಶಾಪ ಹಾಕುತ್ತಿರುವ ಸನ್ನಿವೇಶದಲ್ಲಿ, ಬಿಜೆಪಿ ಎರಡು ಭಾರೀ ಪ್ರತಿಷ್ಠೆಯ ಚುನಾವಣೆಗಳನ್ನು ಎದುರಿಸಬೇಕಾದ ಸಂಕಷ್ಟದ ಸ್ಥಿತಿಯಲ್ಲಿತ್ತು. ಈಗ ವರದಿಯ ನಂತರ ವಾತಾವರಣ ಅನುಕೂಲಕರವಾಗಿ ಮಾರ್ಪಾಡಾಗಬಹುದೆಂಬ ನಿರೀಕ್ಷೆ ಅದರದು. ಆಂಧ್ರ, ಕರ್ನಾಟಕ, ತಮಿಳ್ನಾಡು, ಮಹಾರಾಷ್ಟ್ರ, ಗುಜರಾತ್, ಛತ್ತೀಸ್‌ಗಡ ರಾಜ್ಯಗಳಲ್ಲಿ ಶೇಕಡಾ 90ರಷ್ಟು ಮತ್ತು ಬಿಹಾರ, ಜಾರ್ಖಂಡ್, ಒಡಿಶಾ, ಪ. ಬಂಗಾಲ, ದಿಲ್ಲಿ, ಹರ್ಯಾಣ, ಮ. ಪ್ರದೇಶ, ಪಂಜಾಬ್, ರಾಜಸ್ಥಾನ, ಉ.ಪ್ರದೇಶಗಳಲ್ಲಿ ಶೇಕಡಾ 80ಕ್ಕೂ ಹೆಚ್ಚು ಜನ ಮೋದಿ ಪರ ಇದ್ದಾರೆ ಎನ್ನುತ್ತದೆ ಪ್ಯೂ ಸಮೀಕ್ಷೆ. ಆದರೆ ನೆಲದ ವಾಸ್ತವವೇನು?

ಕರ್ನಾಟಕ, ತಮಿಳುನಾಡುಗಳಲ್ಲಿರುವುದು ಬಿಜೆಪಿಯೇತರ ಸರಕಾರಗಳು. ಅಲ್ಲಿ ಈಗಾಗಲೇ ಬಿಜೆಪಿ ವಿರೋಧಿ ಅಲೆ ಗೋಚರಿಸತೊಡಗಿದೆ. ಆಂಧ್ರದಲ್ಲಿ ಬಿಜೆಪಿ ದುರ್ಬಲವಾಗಿದೆ. ಕರ್ನಾಟಕದಲ್ಲಿ ಅಮಿತ್ ಶಾ ನೀಡಿದ ಇಂಜೆಕ್ಷನ್‌ಗಳ ಹೊರತಾಗಿಯೂ ಬಿಜೆಪಿಯ ಆರೋಗ್ಯ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ತಮಿಳುನಾಡಿನಲ್ಲಿ ಕಳೆದ ವರ್ಷದ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಗೆ ಒಂದಾದರೂ ಸ್ಥಾನ ದಕ್ಕಿರಲಿಲ್ಲ. ಅಷ್ಟೇ ಅಲ್ಲ, ಹೆಚ್ಚುಕಡಿಮೆ ಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

2014ರಲ್ಲಿ ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಪರ ಬಿದ್ದಿರುವ ಮತಗಳು ಶೇಕಡಾ 42.4 ಮಾತ್ರ. ಈಗಂತೂ ಆರ್ಥಿಕ ದುಸ್ಥಿತಿ, ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗ ನಾಶ ಇತ್ಯಾದಿಗಳು ಬಿಜೆಪಿ ವಿರೋಧಿ ಭಾವನೆಯನ್ನು ಹೆಚ್ಚಿಸಿರುವಾಗ ಏಕಾಏಕಿಯಾಗಿ ಮೋದಿಯ ಜನಪ್ರಿಯತೆ ಹೆಚ್ಚಾಗಿರುವುದು ಅಸಂಭವ. ಮೋದಿ ಅಲೆ ಎದ್ದಿತ್ತೆನ್ನಲಾದ 2014ರ ಮಹಾ ಚುನಾವಣೆಗಳ ಕಾಲದಲ್ಲಿ ಗುಜರಾತಿನಲ್ಲಿ ಬಿಜೆಪಿ ಎಲ್ಲಾ 26 ಸ್ಥಾನಗಳನ್ನು ಗೆದ್ದಿತ್ತಾದರೂ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದವರು ಬರೀ 45 ಪ್ರತಿಶತ ಜನ. ಛತ್ತೀಸ್‌ಗಡದಲ್ಲಿ ಬಿಜೆಪಿ 11ರ ಪೈಕಿ 10 ಸ್ಥಾನಗಳನ್ನು ತನ್ನದಾಗಿಸಿಕೊಂಡರೂ ಬಿಜೆಪಿ ಅಭ್ಯರ್ಥಿಗಳಿಗೆ ಬಿದ್ದ ಮತಗಳು ಶೇಕಡಾ 50ಕ್ಕಿಂತ ಕಮ್ಮಿ. 2016ರ ಅಕ್ಟೋಬರ್‌ನಲ್ಲಿ ಮೋದಿಯ ಸುನಾಮಿ ಪ್ರಚಾರದ ಹೊರತಾಗಿಯೂ ಬಿಹಾರದಲ್ಲಿ ಬಿಜೆಪಿ ದಯನೀಯ ಸೋಲುಂಡ ವಿಷಯವನ್ನು ಯಾರು ತಾನೆ ಮರೆಯಲು ಸಾಧ್ಯ? ಇನ್ನು ಒಡಿಶಾ, ಪ. ಬಂಗಾಲಗಳಲ್ಲಿಯೂ ಮೋದಿ ಪರ ಅಲೆ ಇದೆ ಎಂದರೆ ಅದನ್ನು ಕಟ್ಟುಕತೆ ಎಂದೇ ಕರೆಯಬೇಕಾಗುತ್ತದೆ.

2015ರ ದಿಲ್ಲಿಯ ಚುನಾವಣೆಯಲ್ಲಿ, ಮಧ್ಯ ಪ್ರದೇಶದಲ್ಲಿ ಈಗಷ್ಟೇ ನಡೆದ ಚಿತ್ರಕೂಟ ಉಪಚುನಾವಣೆಗಳಲ್ಲಿ ಮತ್ತು ಇತ್ತೀಚೆಗಿನ ಬವಾನಾ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿರುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. 2014ರಲ್ಲಿ ರಾಜಸ್ಥಾನದಲ್ಲಿ ನಡೆದ ಚುನಾವಣೆಗಳಲ್ಲಿ ಶೇಕಡಾ 54ರಷ್ಟು ಜನ ಬಿಜೆಪಿ ಪರ ಮತ ಚಲಾಯಿಸಿದ್ದರೆ ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಗೆ ಸಿಕ್ಕಿರುವುದು ಕೇವಲ 40 ಪ್ರತಿಶತ ಮತಗಳು. ಗುಜರಾತಿನಲ್ಲಿ ಈಗಾಗಲೇ ಮೋದಿ ವಿರೋಧಿ ಅಲೆಯೊಂದು ಏಳತೊಡಗಿದೆ. ಇದನ್ನು ಭಟ್ಟಂಗಿ ಮಾಧ್ಯಮಗಳು ಪ್ರಕಟಿಸದೇ ಇದ್ದರೂ ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದೆಲ್ಲೆಡೆ ಪ್ರಚುರವಾಗಿದೆ. ನಿಜಸ್ಥಿತಿ ಹೀಗಿರುವಾಗ ಪ್ಯೂ ಸಮೀಕ್ಷೆಯ ಅಂಕಿಅಂಶವನ್ನು ಯಾರಾದರೂ ನಂಬಲು ಸಾಧ್ಯವೇ? ಮೋದಿ ಜನಪ್ರಿಯತೆ ಹೆಚ್ಚಾಗಿದೆಯೆಂದು ಸಮೀಕ್ಷೆ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.

ಮೂಡೀಸ್ ಸಂಸ್ಥೆಯ ವರದಿ

13 ವರ್ಷಗಳ ಬಳಿಕ ಭಾರತದ ಸಾಲ ಮರುಪಾವತಿ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಿರುವ ಮೂಡೀಸ್ ಹೂಡಿಕೆದಾರರ ಸೇವಾ ಸಂಸ್ಥೆ, ಆರ್ಥಿಕ ಸುಧಾರಣೆಗಳ ಫಲವಾಗಿ ಭಾರತ ಸತತ ಬೆಳವಣಿಗೆ ಕಾಣಲಿದೆ ಎಂದಿದೆ. ಸಾಲ ಮರುಪಾವತಿ ಸಾಮರ್ಥ್ಯದ ಮಾಪಕ ಎನ್ನಲಾದ ಮೂಡೀಸ್ ಅರ್ಹತಾ ಅಂಕ (ರೇಟಿಂಗ್) ಹೂಡಿಕೆದಾರರಿಗೆ ಉಪಯುಕ್ತ ಎನ್ನಲಾಗುತ್ತದೆ.

ಭಾರತದ ರೇಟಿಂಗ್ ಹೆಚ್ಚಿಸುವಂತೆ ಮೋದಿ ಸರಕಾರ ಮಂಡಿಸಿದ್ದ ವಾದದಲ್ಲಿ ನೋಟು ರದ್ದತಿ, ಜಿಎಸ್‌ಟಿ, ಆಧಾರ್, ಬ್ಯಾಂಕುಗಳ ಮರುಬಂಡವಾಳೀಕರಣ, ಸೌಲಭ್ಯಗಳ ನೇರ ವರ್ಗಾವಣೆ ಮುಂತಾದ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹೇಳಲಾಗಿತ್ತು. ಈಗ ಭವಿಷ್ಯದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಇನ್ನಷ್ಟು ಉತ್ತಮವಾಗಲಿದೆ ಎಂದು ಹೇಳಿರುವ ಮೂಡೀಸ್ ಹೂಡಿಕೆದಾರರ ಸೇವಾ ಸಂಸ್ಥೆಯ ಅಸಲಿ ಚರಿತ್ರೆ ಏನು? ಮೂಡೀಸ್ ಸಂಸ್ಥೆಯ ಹಿನ್ನೆಲೆಯನ್ನು ಸ್ವಲ್ಪ ಕೆದಕಿದಾಗ ದೊಡ್ಡ ಹೆಗ್ಗಣಗಳೇ ಹೊರಬೀಳುತ್ತವೆ. ಅದು ಈ ಹಿಂದೆ ಅಮೆರಿಕದಲ್ಲಿ ದತ್ತಾಂಶಗಳನ್ನು ಬದಲಾಯಿಸಿ ಭವಿಷ್ಯವಾಣಿ ನುಡಿದು 864 ಮಿಲಿಯ ಡಾಲರ್ ದಂಡ ತೆತ್ತ ಸಂಸ್ಥೆಯಾಗಿದೆ. ಅಮೆರಿಕದಲ್ಲಿ 2008ರಲ್ಲಾದ ಆರ್ಥಿಕ ಕುಸಿತಕ್ಕೆ ಮುನ್ನ ತಾನು ದತ್ತಾಂಶ ಬದಲಾವಣೆ ಮಾಡಿ ಸುಳ್ಳು ಭವಿಷ್ಯ ನೀಡಿರುವುದನ್ನು ಮೂಡೀಸ್ ಅಮೆರಿಕದ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಬಳಿಕ ಸಂಸ್ಥೆಯ ಮೇಲೆ ದೋಷಾರೋಪಣೆ ಹೊರಿಸಲಾಗಿತ್ತು. ಅಮೆರಿಕ ಸರಕಾರ ಮೂಡೀಸ್ ವಿರುದ್ಧ ಕಾನೂನುಕ್ರಮ ಜರಗಿಸಲು ಸಿದ್ಧವಾಗಿತ್ತು. ಆಗ ನ್ಯಾಯಾಂಗ ಇಲಾಖೆ, 21 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆ ಜೊತೆ ಒಪ್ಪಂದ ಮಾಡಿಕೊಂಡ ಮೂಡೀಸ್ ಒಟ್ಟು 864 ಮಿಲಿಯ ಡಾಲರ್ ದಂಡ ಪಾವತಿಸಿತ್ತು.

ಮೂಡೀಸ್ ತಾನೊಂದು ಸ್ವತಂತ್ರ ಮತ್ತು ವಸ್ತುನಿಷ್ಠವಾಗಿ ಕಾರ್ಯಾಚರಿಸುವ ಸಂಸ್ಥೆ ಎಂದು ಹೇಳಿಕೊಂಡರೂ ಅದರ ಅಂಕಿಅಂಶಗಳ ಮೇಲೆ ಹಣದ ಪ್ರಭಾವ ಕೆಲಸ ಮಾಡುತ್ತದೆ; ಅದು ನಷ್ಟಸಂಭವ ಉಳ್ಳ ಅಡಮಾನ ಪತ್ರಗಳನ್ನು ಮೇಲ್ದರ್ಜೆಗೇರಿಸುವ ಕೆಲಸವನ್ನೂ ಮಾಡುತ್ತದೆ ಎಂದು ಮತ್ತೊಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಅಮೆರಿಕದ ಕನೆಕ್ಟಿಕಟ್ ರಾಜ್ಯದ ಪ್ರಧಾನ ಸರಕಾರಿ ವಕೀಲ ಜಾರ್ಜ್ ಜೆಪ್ಸನ್ ಪ್ರಕಾರ ಹೂಡಿಕೆ ಬ್ಯಾಂಕುಗಳು ಮೂಡೀಸ್ ನೀಡುವ ಸಾಲ ಮರುಪಾವತಿ ಸಾಮರ್ಥ್ಯದ ಅರ್ಹತಾ ಅಂಕಗಳ ಮೇಲೆ ನೇರ ಪ್ರಭಾವ ಬೀರುತ್ತವೆ. ಅದು ಹೇಗೆಂದರೆ ಬಂಡವಾಳ ಪತ್ರಗಳನ್ನು ಹೊರಡಿಸಿದ ಬಳಿಕ ಅದೇ ಬ್ಯಾಂಕುಗಳು ಮೂಡೀಸ್‌ಗೆ ದುಡ್ಡು ಸಂದಾಯ ಮಾಡುತ್ತವೆ! ಮೂಡೀಸ್ ಸಂಸ್ಥೆ ಇದೇ ಜೂನ್ ತಿಂಗಳಲ್ಲಿ ಇನ್ನೊಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಜಾಗತಿಕ ಸಂಸ್ಥೆಗಳ ಆರ್ಥಿಕ ಆರೋಗ್ಯದ ಕುರಿತು ಮೂಡೀಸ್ ಒಂದರ ಹಿಂದೆ ಇನ್ನೊಂದೆಂಬಂತೆ ಅರ್ಹತಾ ಅಂಕಗಳನ್ನು ಹೇಗೆ ತಯಾರಿಸಿತು ಎಂಬ ಪ್ರಶ್ನೆಗೆ ಸಾರ್ವಜನಿಕವಾಗಿ ವಿವರಣೆ ನೀಡಲು ವಿಫಲವಾದಾಗ ಐರೋಪ್ಯ ಒಕ್ಕೂಟ ಕೂಡಾ ಮೂಡೀಸ್‌ಗೆ 1.24 ಮಿಲಿಯ ಯೂರೊಗಳ ದಂಡ ವಿಧಿಸಿರುವ ಘಟನೆ ನಡೆದಿದೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಅರ್ಹತಾ ಅಂಕವನ್ನು ಏರಿಸುವಂತೆ ಮೂಡೀಸ್‌ಗೆ ದುಂಬಾಲು ಬಿದ್ದಿರುವ ರಹಸ್ಯ ಮಾಹಿತಿಯನ್ನು ರಾಯ್ಟರ್ಸ್‌ ಸುದ್ದಿಸಂಸ್ಥೆ ಕಳೆದ ವರ್ಷವೇ ಬಹಿರಂಗಪಡಿಸಿತ್ತು.

ವಿಶ್ವ ಬ್ಯಾಂಕ್‌ನ ವರದಿ

ವಿಶ್ವ ಬ್ಯಾಂಕ್ ಇತ್ತೀಚೆಗೆ ಭಾರತದಲ್ಲಿ ವಾಣಿಜ್ಯ ವಹಿವಾಟು ಸುಗಮವಾಗಿದೆ ಎನ್ನುವ ವರದಿಯೊಂದನ್ನು ಪ್ರಕಟಿಸಿತ್ತು. ಆದರೆ ನಿಜವಾಗಿ ಇದು ಕೂಡ ಮತ್ತೊಂದು ದಿಕ್ಕುತಪ್ಪಿಸುವ ವರದಿ ಏಕೆಂದರೆ ಇದು ಮುಂಬಯಿ, ದಿಲ್ಲಿ ನಗರಗಳ ಬರೀ 516 ಜನರ ಅಭಿಪ್ರಾಯಗಳನ್ನು ಆಧರಿಸಿದೆ!

ಕನಿಷ್ಠ ಎರಡು ರಾಜ್ಯಗಳು ಚುನಾವಣೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಬಂದಿರುವ ವಿಶ್ವ ಬ್ಯಾಂಕ್ ವರದಿಯ ಬೆನ್ನಲ್ಲೆ ಪ್ಯೂ ಸಮೀಕ್ಷೆಯ ವರದಿ ಬಂದಿದೆ. ಇದರ ಮರುದಿನ ಮೂಡೀಸ್ ಅಂಕಿಅಂಶ ಹೊರಬಿದ್ದಿದೆ. ವಿಶ್ವ ಬ್ಯಾಂಕ್ ಮತ್ತು ಪ್ಯೂ ಸಂಸ್ಥೆಗಳ ಸಮೀಕ್ಷಾ ವೈಖರಿ ಮತ್ತು ಮೂಡೀಸ್‌ನ ಚರಿತ್ರೆಗಳನ್ನು ಗಮನಿಸಿದಾಗ ಏನೋ ಒಂದು ಮೋಸದಾಟ ನಡೆಯುತ್ತಿದೆ ಎಂಬ ಅನುಮಾನವೊಂದು ಮೂಡುತ್ತದೆ. ಈ ತಥಾಕಥಿತ ವರದಿಗಳು ಪಾವತಿ ಸುದ್ದಿಯ ಥರ ಪಾವತಿ ವರದಿಗಳಾಗಿರುವ ಸಾಧ್ಯತೆಗಳನ್ನು ಸಾರಾಸಗಟಾಗಿ ತಳ್ಳಿಹಾಕುವ ಹಾಗಿಲ್ಲ.

***

(ಆಧಾರ: ಜನತಾ ಕಾ ರಿಪೋರ್ಟರ್‌ನಲ್ಲಿ ರಿಫಾತ್ ಜಾವೇದ್ ಮತ್ತು ಸಿಬ್ಬಂದಿ ಲೇಖನಗಳು; ಇತರ ಮೂಲಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ