ಉ. ಕೊರಿಯ ‘ಭಯೋತ್ಪಾದನೆ ಪ್ರಾಯೋಜಕ ದೇಶ’: ಅಮೆರಿಕ ಘೋಷಣೆ

Update: 2017-11-21 16:34 GMT

ವಾಶಿಂಗ್ಟನ್, ನ. 21: ಉತ್ತರ ಕೊರಿಯ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.

ಉತ್ತರ ಕೊರಿಯವು ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ. ಆ ದೇಶದ ವಿರುದ್ಧ ಇನ್ನಷ್ಟು ದಿಗ್ಬಂಧನಗಳು ಮತ್ತು ದಂಡಗಳನ್ನು ವಿಧಿಸಲು ಈ ಘೋಷಣೆಯು ಅಮೆರಿಕಕ್ಕೆ ಅವಕಾಶ ನೀಡಿದೆ.

ಉತ್ತರ ಕೊರಿಯ ವಿರುದ್ಧದ ಹೆಚ್ಚುವರಿ ದಿಗ್ಬಂಧನಗಳನ್ನು ಖಜಾನೆ ಇಲಾಖೆಯು ಮಂಗಳವಾರ ಪ್ರಕಟಿಸುವುದು ಎಂದು ಟ್ರಂಪ್ ತಿಳಿಸಿದರು.

ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಟ್ರಂಪ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಇತ್ತೀಚೆಗೆ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದುದನ್ನು ಸ್ಮರಿಸಬಹುದಾಗಿದೆ.

ಏಶ್ಯದ ಐದು ದೇಶಗಳಿಗೆ ನೀಡಿದ 12 ದಿನಗಳ ಪ್ರವಾಸದಿಂದ ಹಿಂದಿರುಗಿದ ಒಂದು ವಾರದ ಬಳಿಕ ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದಾರೆ.

‘‘ಉತ್ತರ ಕೊರಿಯವು ಭಯೋತ್ಪಾದನೆ ಪ್ರಾಯೋಜಿಸುವ ದೇಶವಾಗಿದೆ ಎಂಬುದಾಗಿ ಇಂದು ಅಮೆರಿಕ ಘೋಷಿಸುತ್ತಿದೆ’’ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಹೇಳಿದರು.

‘‘ಇದು ತುಂಬಾ ಸಮಯದ ಹಿಂದೆಯೇ ಆಗಬೇಕಾಗಿತ್ತು, ವರ್ಷಗಳ ಹಿಂದೆಯೇ ಆಗಬೇಕಾಗಿತ್ತು’’ ಎಂದರು.

ಜಪಾನ್, ದಕ್ಷಿಣ ಕೊರಿಯ ಸ್ವಾಗತ

 ಉತ್ತರ ಕೊರಿಯವನ್ನು ಭಯೋತ್ಪಾದನೆ ಪ್ರಾಯೋಜಿಸುವ ದೇಶಗಳ ಪಟ್ಟಿಯಲ್ಲಿ ಸೇರಿಸುವ ಅಮೆರಿಕದ ನಿರ್ಧಾರವನ್ನು ದಕ್ಷಿಣ ಕೊರಿಯ ಮತ್ತು ಜಪಾನ್‌ಗಳು ಮಂಗಳವಾರ ಸ್ವಾಗತಿಸಿವೆ. ಇದು ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ಯಾಂಗ್‌ಯಾಂಗ್ ಮೇಲೆ ಒತ್ತಡ ಹೇರಲಿದೆ ಎಂದು ಈ ದೇಶಗಳು ಹೇಳಿವೆ.

‘‘ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಇದು ಉತ್ತರ ಕೊರಿಯದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ’’ ಎಂದು ಜಪಾನ್ ಪ್ರಧಾನಿ ಶಿಂರೊ ಅಬೆ ಮಂಗಳವಾರ ಸುದ್ದಿಗಾರರಿಗೆ ಹೇಳಿದರು.

ಅಮೆರಿಕದ ಈ ಕ್ರಮವು ವಲಯವನ್ನು ಶಾಂತಿಯುತವಾಗಿ ಪರಮಾಣುಮುಕ್ತಗೊಳಿಸುವ ಸಾಧ್ಯತೆಗೆ ಪೂರಕವಾಗಿದೆ ಎಂದು ದಕ್ಷಿಣ ಕೊರಿಯದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News