ಬಿಹಾರದಲ್ಲಿ ಅನೇಕರು ಪ್ರಧಾನಿಯ ತಲೆಕಡಿಯಲು ಸಿದ್ಧರಿದ್ದಾರೆ: ರಾಬ್ರಿದೇವಿ

Update: 2017-11-21 18:00 GMT

ಪಟ್ನಾ, ನ.21: ಬಿಹಾರದಲ್ಲಿ ಬಹಳಷ್ಟು ಜನರು ಪ್ರಧಾನಿ ಮೋದಿಯ ಕುತ್ತಿಗೆಯನ್ನು ಸೀಳಲು ಮತ್ತು ತಲೆಕಡಿಯಲು ಸಿದ್ಧವಾಗಿದ್ದಾರೆ ಎನ್ನುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ವಿವಾದ ಸೃಷ್ಠಿಸಿದ್ದಾರೆ.

 ಬಿಹಾರದ ಬಿಜೆಪಿ ಮುಖುಸ್ಥ ನಿತ್ಯಾನಂದ ರಾಯ್ ಯಾರಾದರೂ ಪ್ರಧಾನಿ ಮೋದಿಯನ್ನು ಟೀಕಿಸಿದರೆ ಅಂಥವರ ಬೆರಳನ್ನು ಮತ್ತು ಕೈಯನ್ನು ಕಡಿಯುವಂತೆ ಪಕ್ಷದ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಕರೆ ನೀಡಿದ ಮರುದಿನವೇ ರಾಬ್ರಿದೇವಿ ಅದಕ್ಕುತ್ತರವಾಗಿ ತಲೆಕಡಿಯುವ ಮಾತನ್ನಾಡಿದ್ದಾರೆ.

ಆರ್‌ಜೆಡಿಯ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್‌ರನ್ನು ಸತತ 10ನೇ ಬಾರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾದ ನಂತರ ಮಾತನಾಡಿದ ರಾಬ್ರಿದೇವಿ, ಪ್ರಧಾನಿ ಮೋದಿಯ ವಿರುದ್ಧ ಕೈತೋರಿಸಿದರೆ ಅಂಥವರ ಬೆರಳನ್ನು ಮತ್ತು ಕೈಯನ್ನು ಕಡಿಯಲಾಗುವುದು ಎಂದು ಬಿಹಾರದ ಕೆಲವು ಬಿಜೆಪಿ ನಾಯಕರು ಹೇಳಿದ್ದಾರೆ. ಬಿಹಾರದ ಜನರ ಬೆರಳನ್ನು ಮತ್ತು ಕೈಯನ್ನು ಕಡಿಯುವಂತೆ ನಾನವರಿಗೆ ಸವಾಲು ಹಾಕುತ್ತೇನೆ. ಬಿಹಾರದ ಜನರು ಸುಮ್ಮನೆ ಕುಳಿತುಕೊಳ್ಳುತ್ತಾರೆಯೇ? ಅವರ ಕೈಯನ್ನು ಕಡಿಯಲು ಇಲ್ಲಿ ಅನೇಕರು ಕಾದು ಕುಳಿತಿದ್ದಾರೆ. ಪ್ರಧಾನಿ ಮೋದಿಯ ಕುತ್ತಿಗೆ ಸೀಳಿ ಅವರ ತಲೆಯನ್ನು ಕಡಿಯಲು ಸಿದ್ಧವಾಗಿರುವ ಜನರೂ ಇಲ್ಲಿ ಅನೇಕರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ನುಡಿದರು.

ಸದ್ಯ ಲಾಲೂ ಪ್ರಸಾದ್ ಯಾದವ್ ಮತ್ತವರ ಪುತ್ರ ತೇಜಸ್ವಿ ಯಾದವ್ ಮೇಲೆ ಭಷ್ಟಾಚಾರ ಪ್ರಕರಣ ದಾಖಲಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಾಬ್ರಿದೇವಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಕುಟುಂಬದ ಮೇಲೆ ವಿನಾಕಾರಣ ಆರೋಪ ಹೊರಿಸಲಾಗುತ್ತಿದೆ. ಇದು ಅವರ ಪಿತೂರಿಯ ಭಾಗವಾಗಿದೆ. ನಮ್ಮ ಸುಖಾಸುಮ್ಮನೆ ಭ್ರಷ್ಟಾಚಾರ ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿರುವ ರಾಬ್ರಿದೇವಿ ರೈಲ್ವೇ ಟೆಂಡರ್ ಹಗರಣದಲ್ಲಿ ಸಿಬಿಐ ಮತ್ತು ಇಡಿ ಪಟ್ನಾಕ್ಕೆ ಬಂದು ತನ್ನನ್ನು ವಿಚಾರಿಸಲಿ ಎಂದು ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News