ಮಾಧ್ಯಮಗಳ ಸಂಖ್ಯೆಗಳಲ್ಲಿ ನೋಟು ಅಮಾನ್ಯ!

Update: 2017-11-21 18:23 GMT

ನೋಟು ರದ್ದತಿಗಾಗಿ ತಗಲಿದ ವೆಚ್ಚಗಳು ಮತ್ತು ಈ ವೆಚ್ಚಗಳಿಗಾಗಿ ಬಡವರು ತೆರಬೇಕಾಗಿ ಬಂದ ಭಾರೀ ಬೆಲೆ. ಅದೇನಿದ್ದರೂ, ದೊಡ್ಡ ದೊಡ್ಡ ಚರ್ಚೆಗಳಲ್ಲಿ ಕೆಲವು ಆಳವಾದ ಪ್ರಶ್ನೆಗಳನ್ನು ಯಾರೂ ಕೇಳಲೇ ಇಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಒಂದು ಸರಕಾರವು ಸಂಸತ್ತಿನಲ್ಲಿ ಚರ್ಚೆಗಳನ್ನು ನಡೆಸದೆಯೇ, ತನ್ನನ್ನು ಅಧಿಕಾರಕ್ಕೆ ತಂದ ಜನರ ವರ್ತನೆ ಸ್ವೀಕಾರಾರ್ಹವಲ್ಲ ಮತ್ತು ಆದ್ದರಿಂದ ಅದು ಬದಲಾಯಿಸಲು ತಕ್ಕುದಾಗಿದೆ, ಫಿಟ್ ಆಗಿದೆ ಎಂದು ತನ್ನ ಪಾಡಿಗೆ ತಾನೇ ಹೇಗೆ ನಿರ್ಧರಿಸಲು ಸಾಧ್ಯ ಎಂದು ನಾವು ಕೇಳಲೇ ಇಲ್ಲ. ಹಾಗೆಯೇ, ಕೇಳಲೇ ಬೇಕಾಗಿದ್ದ ಹಲವಾರು ಪ್ರಶ್ನೆಗಳನ್ನು ಒಂದೋ ಕೇಳಲಾಗಲಿಲ್ಲ ಅಥವಾ ಗುಟ್ಟಾಗಿ ಕೇಳಲಾಯಿತು, ಅಮುಖ್ಯಗೊಳಿಸಿ ಕೇಳಲಾಯಿತು.

2016ರ ನವೆಂಬರ್ 8ರಂದು ಹಳೆಯ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದತಿ ಬಿಜೆಪಿಗೆ 2017ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಗಳಲ್ಲಿ ಭಾರೀ ಗೆಲುವು ಸಾಧಿಸಲು ನೆರವಾಯಿತೆಂದು ಹೇಳಲಾಗಿದೆ. ಈಗ ಒಂದು ವರ್ಷದ ಬಳಿಕ, ದೇಶವು ನೋಟು ರದ್ದತಿ ನೀಡಿದ ಆರ್ಥಿಕ ಆಘಾತದಿಂದ ಚೇತರಿಸಿಕೊಳ್ಳುತ್ತ, ಸರಕಾರದ ಆತುರದ ಕ್ರಮದ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಚರ್ಚಿಸಲಾಗುತ್ತಿದೆ. ನೋಟು ರದ್ಧ್ದತಿಯ ವಾರ್ಷಿಕ ದಿನಾಚರಣೆಯ ವೇಳೆ ಅಂಕಿ ಸಂಖ್ಯೆಗಳ ದೃಷ್ಟಿಯಿಂದ ಪ್ರಕಟವಾದ ಹಲವು ಅಭಿಪ್ರಾಯಗಳ ಸಾರಾಂಶ ಇಲ್ಲಿದೆ.

 ‘ಸುದ್ದಿಗಳು’

ಹಲವು ಮಾಧ್ಯಮ ಸುದ್ದಿಗಳು ಮುಖ್ಯ ಸುದ್ದಿಗಳಲ್ಲಿ ಅಂಕಿ ಸಂಖ್ಯೆಗಳನ್ನೇ ಬಳಸಿಕೊಂಡವು: ‘‘ಒಂದು ವರ್ಷದಲ್ಲಿ ಸಿಬಿಐ 396 ಕೋಟಿ ರೂಪಾಯಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಣವನ್ನು ಪತ್ತೆಹಚ್ಚಿತು.’’

ಇನ್ನೊಂದು ಸುದ್ದಿಯ ಪ್ರಕಾರ, ‘‘ನೋಟು ರದ್ದತಿಯಿಂದಾಗಿ ಜಿಡಿಪಿ ಶೇ. 2ರಷ್ಟು ಕುಸಿಯಿತು. ಆದರೆ, ಈ ಕುಸಿತಕ್ಕೆ ನೋಟು ರದ್ದತಿಯೇ ಕಾರಣವೆಂದು ಹೇಳುವಂತಿಲ್ಲ.’’

ಈ ಸುದ್ದಿಯನ್ನು ಪ್ರಕಟಿಸಿದ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಶೇ. 7 ಬೇಸ್‌ಲೈನನ್ನು ಹೊಂದಿಕೊಂಡು ಕುಸಿತವು 0.25 ಮತ್ತು 0.5 ಮಧ್ಯೆ ಇರಬಹುದು ಎಂದು ಹೇಳಿದೆ.

 ಇದಕ್ಕೆ ವ್ಯತಿರಿಕ್ತವಾಗಿ, ‘ಟೈಮ್ಸ್ ಆಫ್ ಇಂಡಿಯಾ’ದ ಆಗಸ್ಟ್ 31ರ ಸಂಚಿಕೆಯು ಸಂಪೂರ್ಣವಾಗಿ ನೋಟು ರದ್ದತಿಯ ಧನಾತ್ಮಕ ಅಂಶಗಳ ಬಗ್ಗೆ ಗಮನ ಹರಿಸಿತು. ‘‘ತೆರಿಗೆ ಪಾವತಿಯಲ್ಲಿ ಹಿಂದೆಂದೂ ಕಂಡಿರದ ಹೆಚ್ಚಳ’’ ಎಂಬುವುದು ಅದರ ಮುಖ್ಯ ಸುದ್ದಿಗಳಲ್ಲಿ ಒಂದಾಗಿತ್ತು. ಆದರೆ, ‘ಹಿಂದೆಂದೂ ಕಂಡಿರದ’ ಎಂಬ ಮಾತು ನೋಟು ರದ್ದತಿ ಹಿಂದಿನವರೆಗೂ ಚಾಚುತ್ತದೆ! ‘‘ಭಾರತದಲ್ಲಿ ಪತ್ತೆಯಾದ ಕಪ್ಪು ಹಣ ಅತ್ಯಂತ ದೊಡ್ಡ ಮೊತ್ತ’’ ಎಂಬ ಇನ್ನೊಂದು ಸುದ್ದಿಗೆ ಯಾವುದೇ ಹೋಲಿಕೆಯ ಆಧಾರವಿಲ್ಲ. ‘ಅತ್ಯಂತ ದೊಡ್ಡ’ ಎನ್ನಬೇಕಾದರೆ ಕನಿಷ್ಠ ಮೂರು ವರ್ಷಗಳ ಹೋಲಿಕೆ ಬೇಕು.

  ವಿಶೇಷಣಗಳ ಬೇಕಾಬಿಟ್ಟಿ ಬಳಕೆ ಮತ್ತು ಸಂದರ್ಭದ ಹೊರತಾಗಿ ನೀಡುವ ಅಂಕಿ ಸಂಖ್ಯೆಗಳು ಯಶಸ್ಸಿನ ಒಂದು ಭ್ರಮೆಯನ್ನು ಸೃಷ್ಟಿಸುತ್ತವೆ. ಈ ಸುದ್ದಿಯಲ್ಲಿರುವ ಇನ್ನೊಂದು ಸಾಲು ಹೀಗಿದೆ: ‘‘ನೋಟು ರದ್ದತಿಯ ಬಳಿಕ 16,000 ಕೋಟಿ ರೂಪಾಯಿ ಕಪ್ಪು ಹಣ ಮರಳಿ ಬಂದಿಲ್ಲ.’’ ಸರಕಾರಿ ಏಜನ್ಸಿಗಳು ಅದನ್ನು ಅಧಿಕೃತವಾಗಿ ಕಪ್ಪು ಹಣವೆಂದು ಪತ್ತೆ ಹಚ್ಚುವ ಮೊದಲೇ ಆ ಹಣಕ್ಕೆ ‘ಕಪ್ಪು ಹಣ’ವೆಂದು ಲೇಬಲ್ ಯಾಕೆ ಅಂಟಿಸಬೇಕೋ ಸ್ಪಷ್ಟವಾಗುವುದಿಲ್ಲ. ‘ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ಟೈಮ್ಸ್ ಆಫ್ ಇಂಡಿಯಾ’ ಆಗಸ್ಟ್ 31ರ ಸಂಚಿಕೆಯಲ್ಲಿ ನೋಟು ರದ್ದತಿ ಬಗ್ಗೆ ನೀಡಿರುವ ವರದಿಗಳ ನಡುವಿನ ವ್ಯತ್ಯಾಸ ಢಾಳಾಗಿ ಎದ್ದು ಕಾಣುತ್ತದೆ. ‘‘ಕರೆನ್ಸಿ ಚಲಾವಣೆಯಲ್ಲಿ ರೂಪಾಯಿ 8,99,700 ಕೋಟಿ ರೂ. ಕುಸಿತ’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದರೆ, ಕರೆನ್ಸಿ ಚಲಾವಣೆಯಲ್ಲಿ ‘21% ಇಳಿಕೆ’ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಡಿದೆ.

‘ಅಲ್ಪ-ಕಾಲಿಕ’ ನೋವು

  ನವೆಂಬರ್ 8ರಂದು ಪ್ರಕಟವಾದ ಒಂದು ವರದಿಯು (ಸತೀಶ್ ದಿಯೋಧರ್, ಲಿವ್‌ಮಿಂಟ್) ಅಂಕಿ ಸಂಖ್ಯೆಗಳ ಮೂಲಕ ನೋಟು ರದ್ದತಿಯ ಹೆಗ್ಗಳಿಕೆಯನ್ನು ಮತ್ತು ಸರಕಾರ ಮಂಡಿಸಿರುವ ವಾದಗಳನ್ನು ಅನುಮೋದಿಸುವ ರೀತಿಯಲ್ಲೇ ಅದು ಸರಕಾರ ಪಕ್ಷಪಾತಿ ಎಂದು ತಿಳಿದುಬಿಡುತ್ತದೆ. ಅದು ನೋಟು ರದ್ದತಿಯು ‘‘ನಿರೀಕ್ಷಿಸಿದಂತೆಯೇ, ಸ್ವಲ್ಪ ಕಾಲದವರೆಗೆ ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿತು.’’ ಎಂಬ ಮಾತಿನಿಂದಲೇ ಆರಂಭವಾಗುತ್ತದೆ. ಜಿಡಿಪಿ ಶೇ. 6ಕ್ಕಿಂತ ಕಡಿಮೆಯಾಯಿತು, ಕುಸಿತಗೊಂಡಿತು ಎನ್ನುವವರಿಗೆ ‘‘ಅದೇನಿದ್ದರೂ ಭಾರತವೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಒಂದು’’ ಎಂಬ ಸಮಜಾಯಿಸಿ ನೀಡುತ್ತದೆ. ಮುಂದುವರಿದ ದೇಶಗಳಲ್ಲಿ ಹಾಗೂ ಉದಯಿಸುತ್ತಿರುವ ಮಾರುಕಟ್ಟೆಗಳಲ್ಲಿ 2017ರ ನಿರೀಕ್ಷಿತ ಜಿಡಿಪಿ ಬೆಳವಣಿಗೆ ಅನುಕ್ರಮವಾಗಿ ಕೇವಲ ಸುಮಾರು ಶೇ. 1.9 ಮತ್ತು ಶೇ. 4.1 ಎಂದು ವಾದಿಸುತ್ತದೆ.

‘ಮೋರ್ ಏಂಜಲ್ಸ್ ದ್ಯಾನ್ ಡೆಮನಸ್’ (ಸಂಜಯ್‌ಬಾರು, ಟಿಒಐ, ನವೆಂಬರ್ 7) ಎನ್ನುವ ಲೇಖನ ಉದಾರೀಕರಣದೊಂದಿಗೆ ನೋಟು ಅಮಾನ್ಯೀಕರಣವನ್ನು ಹೋಲಿಸಿ ನೋಟು ರದ್ದತಿಯ ತತ್‌ಕ್ಷಣದ/ ಕ್ಷಣ ಭಂಗುರ ಪರಿಣಾಮವನ್ನು ವಿವರಿಸುತ್ತದೆ. ‘‘ನಿಜ ಹೇಳಬೇಕೆಂದರೆ, ಈ ವಿಷಯ (ನೋಟು ರದ್ದತಿ)ದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ‘‘ಇದು ತುಂಬ ಕಡಿಮೆ ಅವಧಿ (ಒಂದು ವರ್ಷ)ಯಾಗಿದೆ’’ ಎಂದು ವಾದಿಸುತ್ತದೆ. ನಂತರ, ಸರಕಾರದ ನೀತಿ, ಕಾರ್ಯಕ್ಷಮತೆಯನ್ನು ಸಮರ್ಥಿಸುತ್ತದೆ.

ನೋಟು ರದ್ದತಿ ಯಶಸ್ವಿಯಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಸಾಬೀತು ಪಡಿಸುವ ನಾಲ್ಕು ಲಾಭಗಳನ್ನು ಪಟ್ಟಿ ಮಾಡುವ ಸೌಮ್ಯಕಾಂತಿ ಘೋಷ್ (ಹಿಂದುಸ್ಥಾನ್ ಟೈಮ್ಸ್, ನವೆಂಬರ್ 8) ಕೆಲವು ‘‘ಅಲ್ಪಕಾಲಿಕ ಸೋಲುಗಳು ಅನಿವಾರ್ಯ’’ ಎಂದು ಹೇಳುತ್ತಾರೆ.

ನೋಟು ರದ್ದತಿಯನ್ನು ಸಮರ್ಥಿಸುವ ಎರಡು ರೀತಿಯ ವಿವರಣೆಗಳು ಎದ್ದು ಕಾಣುತ್ತವೆ. ಮೊದಲನೆಯದಾಗಿ, ಸಂದರ್ಭದಿಂದ ಬೇರ್ಪಡಿಸಿದ ಹೋಲಿಕೆಗಳು. ಎರಡನೆಯದಾಗಿ, ರದ್ದತಿಗೆ ಪೂರಕವಾದ ರದ್ದತಿಯನ್ನು ಎತ್ತಿ ಹಿಡಿಯುವ ‘ಸಂಗತಿ’ಗಳನ್ನು ಸಂಖ್ಯೆಗಳಲ್ಲಿ ಹೇಳಲಾಗಿದೆ; ಅನುಕೂಲಕರವಲ್ಲದ ವಿಷಯಗಳನ್ನು ಶಬ್ದಗಳಲ್ಲಿ ವಿವರಿಸಲಾಗಿದೆ. ಉದಾ: ಅಲ್ಪಕಾಲಿಕ ತೊಂದರೆಗಳು/ ನೋವುಗಳು, ತಾತ್ಕಾಲಿಕ ಕಷ್ಟಗಳು ತೀರಾ ಕಡಿಮೆಯಾಗಿರುವ, ಒಂದು ಅವಧಿಯವರೆಗೆ ಮಾತ್ರ ಅನನುಕೂಲ ಇತ್ಯಾದಿ ಇತ್ಯಾದಿ.

ವರ್ತನೆಯಲ್ಲಿ ಬದಲಾವೆ

ನೋಟು ರದ್ದತಿಯು ನಗದು ರಹಿತ (ಕ್ಯಾಶ್‌ಲೆಸ್) ಅರ್ಥವ್ಯವಸ್ಥೆಯ ಪರವಾಗಿ ಜನರ ವರ್ತನೆಯಲ್ಲಿ ಒಂದು ಬದಲಾವಣೆಯನ್ನು ಪ್ರೇರೇಪಿಸಿದೆ ಎಂದು ನವೆಂಬರ್ 8ರಂದು ಪೂರ್ಣ ಪುಟದ ಸರಕಾರಿ ಜಾಹೀರಾತುಗಳು ಡಂಗುರ ಸಾರಿದವು. (ಇಕನಾಮಿಕ್ ಟೈಮ್ಸ್, ನವೆಂಬರ್ 8). ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳು, ಟಾಪ್ ಬ್ಯಾಂಕರ್‌ಗಳು ಕೂಡ ಇಂತಹದೇ ರೀತಿಯ ಹೆಗ್ಗಳಿಕೆಯನ್ನು ಜಾಹೀರು ಪಡಿಸಿದರು. ‘‘2016ರ ನವೆಂಬರ್ 8ನೆ ತಾರೀಕು ನಮ್ಮ ಸ್ಮತಿಯಲ್ಲಿರುವ ನಾವು ನಗದು ರಹಿತ ವ್ಯವಸ್ಥೆಗೆ ಪಾದಾರ್ಪಣೆ ಮಾಡಿದ ದಿನವೆಂದು ದಾಖಲಾಗಿದ್ದರೆ, ಅದೊಂದು ಕೇವಲ ಆರಂಭ ಮಾತ್ರ. ಡಿಜಿಟಲೀಕರಣ ಎಂಬುದು ಒಂದ ದೀರ್ಘಕಾಲೀನ ಪ್ರಕ್ರಿಯೆ ಮತ್ತು ನಾವು ಇನ್ನೂ ತುಂಬ ದೂರ ಸಾಗಬೇಕಾಗಿದೆ’’ (ನಂದನ್ ನಿಲೇಕಣಿ, ಲಿವ್‌ಮಿಂಟ್, ನವೆಂಬರ್ 8).

ವರ್ತನೆಯ ಬದಲಾವಣೆಗಳನ್ನು ಕೆಲವು ವರ್ಷಗಳ ಅವಧಿಯಲ್ಲಿ ಅಳೆಯುವುದು ಸರಿಯಾದ ಕ್ರಮ. ಆದರೆ ನಿಲೇಕಣಿಯವರು ಕೇವಲ ಒಂದು ವರ್ಷದ ದತ್ತಾಂಶಗಳನ್ನಾಧರಿಸಿ ತೀರ್ಮಾನಕ್ಕೆ ಬಂದಿದ್ದಾರೆ. ಈ ಬದಲಾವಣೆಯು ಸರಕಾರದ ಹಿಂಬಾಲಕರು ಹೇಳುವುದಕ್ಕಿಂತ ತುಂಬ ಹೆಚ್ಚು ನಿಧಾನವಾಗಿ ಸಾಗಿದೆ. ನವೆಂಬರ್ 8ರ ‘ಇಕನಾಮಿಕ್ ಟೈಮ್ಸ್’ನಲ್ಲಿ ಪ್ರಕಟವಾದ ಸಮೀಕ್ಷೆಯ ಪ್ರಕಾರ, ಶೇ.63ರಷ್ಟು ಚಿಲ್ಲರೆ ವ್ಯಾಪಾರಿಗಳು ನಗದು ರಹಿತ ವ್ಯವಹಾರಗಳ ಪರವಾಗಿ ಇದ್ದರೆ, (ನೋಟು ರದ್ದತಿಯ ಮೊದಲು ಇದು ಶೇ.31ರಷ್ಟು ಇತ್ತು.) ಈ ಒಲವು ನಿಜವಾದ ನಗದು ರಹಿತ ವ್ಯವಹಾರಗಳು ಕೇವಲ ಶೇ.11ರಷ್ಟು ಆಗಿದ್ದವು.

ಸಾಗದ ದಾರಿ

ನೋಟು ರದ್ದತಿಯ ಅಂತಿಮ ಗುರಿಗಳ ಬಗ್ಗೆ ಹೆಚ್ಚಿನ ವೀಕ್ಷಕರಲ್ಲಿ ಸುಮಾರಾಗಿ ಸಹಮತ ಇದೆಯಾದರೂ ರದ್ದತಿಯ ಸಮಯ ಮತ್ತು ಅದನ್ನು ಅನುಷ್ಠಾನಗೊಳಿಸಿದ ರೀತಿಯನ್ನು ಅವರು ಪ್ರಶ್ನಿಸುತ್ತಾರೆ. ನೋಟು ರದ್ದತಿಗಾಗಿ ತಗಲಿದ ವೆಚ್ಚಗಳು ಮತ್ತು ಈ ವೆಚ್ಚಗಳಿಗಾಗಿ ಬಡವರು ತೆರಬೇಕಾಗಿ ಬಂದ ಭಾರೀ ಬೆಲೆ. ಅದೇನಿದ್ದರೂ, ದೊಡ್ಡ ದೊಡ್ಡ ಚರ್ಚೆಗಳಲ್ಲಿ ಕೆಲವು ಆಳವಾದ ಪ್ರಶ್ನೆಗಳನ್ನು ಯಾರೂ ಕೇಳಲೇ ಇಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಒಂದು ಸರಕಾರವು ಸಂಸತ್ತಿನಲ್ಲಿ ಚರ್ಚೆಗಳನ್ನು ನಡೆಸದೆಯೇ, ತನ್ನನ್ನು ಅಧಿಕಾರಕ್ಕೆ ತಂದ ಜನರ ವರ್ತನೆ ಸ್ವೀಕಾರಾರ್ಹವಲ್ಲ ಮತ್ತು ಆದ್ದರಿಂದ ಅದು ಬದಲಾಯಿಸಲು ತಕ್ಕುದಾಗಿದೆ, ಫಿಟ್ ಆಗಿದೆ ಎಂದು ತನ್ನ ಪಾಡಿಗೆ ತಾನೇ ಹೇಗೆ ನಿರ್ಧರಿಸಲು ಸಾಧ್ಯ ಎಂದು ನಾವು ಕೇಳಲೇ ಇಲ್ಲ. ಹಾಗೆಯೇ, ಕೇಳಲೇ ಬೇಕಾಗಿದ್ದ ಹಲವಾರು ಪ್ರಶ್ನೆಗಳನ್ನು ಒಂದೋ ಕೇಳಲಾಗಲಿಲ್ಲ ಅಥವಾ ಗುಟ್ಟಾಗಿ ಕೇಳಲಾಯಿತು, ಅಮುಖ್ಯಗೊಳಿಸಿ ಕೇಳಲಾಯಿತು.

ಸರಕಾರದ ಒಂದು ನೀತಿಯ ಧೀಮಂತ ಅಡಿಪಾಯ, ನೆಲೆಗಳೇನು? ನೀತಿಯು ಬೀರುವ ಪರಿಣಾಮವನ್ನು ಅಳೆಯಲು ಸಾಧ್ಯವೇ? ಅಳತೆಯ ಆಯ್ಕೆಗಳು ರಾಜಕೀಯ ಪ್ರಕ್ರಿಯೆಗಳಿಂದ ಹೇಗೆ ಪ್ರಭಾವಿತವಾಗುತ್ತವೆ? ಇತ್ಯಾದಿ ಇತ್ಯಾದಿ...

2014ರ ಚುನಾವಣೆಗಳಿಗಿಂತ ಹೆಚ್ಚಾಗಿ 2019ರ ಚುನಾವಣೆಯಲ್ಲಿ ಅಂಕಿಸಂಖ್ಯೆಗಳು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗಲಿವೆ. ಆದ್ದರಿಂದ ನೋಟು ರದ್ದತಿಯ (ಅಂಕಿಸಂಖ್ಯೆಗಳ) ಬಗ್ಗೆ ಇನ್ನಷ್ಟು ಹೆಚ್ಚು ವಿಶ್ಲೇಷಣಾತ್ಮಕವಾದ, ಜಾಗರೂಕವಾದ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ.

ಕೃಪೆ: www.thehoot.org

Writer - ವಿಕಾಸ್ ಕುಮಾರ್

contributor

Editor - ವಿಕಾಸ್ ಕುಮಾರ್

contributor

Similar News

ಜಗದಗಲ
ಜಗ ದಗಲ