ಅಂಕಿತಾ ರೈನಾ ದ್ವಿತೀಯ ಸುತ್ತಿಗೆ ಲಗ್ಗೆ

Update: 2017-11-22 18:19 GMT

 ಮುಂಬೈ, ನ.22: ಮುಂಬೈ ಟೆನಿಸ್ ಓಪನ್‌ನ ಮಹಿಳೆಯ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಎರಡನೆ ಸುತ್ತಿಗೆ ತೇರ್ಗಡೆಯಾದರು.

  ಬುಧವಾರ ಇಲ್ಲಿನ ಸಿಸಿಐ ಕೋರ್ಟ್‌ನಲ್ಲಿ ಒಂದು ಗಂಟೆ, 35 ನಿಮಿಷಗಳ ಕಾಲ ನಡೆದ 125,000 ಡಾಲರ್ ಬಹುಮಾನ ಮೊತ್ತದ ಮೊದಲ ಸುತ್ತಿನ ಪಂದ್ಯದಲ್ಲಿ 293ನೇ ರ್ಯಾಂಕಿನ ಆಟಗಾರ್ತಿ ರೈನಾ 233ನೇ ರ್ಯಾಂಕಿನ ರಶ್ಯಾದ ಎದುರಾಳಿ ವೆರೊನಿಕಾ ಕುಡೆರ್ಮೆಡೊವಾರನ್ನು 7-6(2),6-3 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ನೇರ ಸೆಟ್‌ಗಳಿಂದ ಜಯ ಸಾಧಿಸಿರುವ ಅಹ್ಮದಾಬಾದ್‌ನ 24ರ ಹರೆಯದ ಆಟಗಾರ್ತಿ ರೈನಾ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಆರನೇ ಶ್ರೇಯಾಂಕದ ಪಿಯಾಂಗರ್‌ಟರ್ನ್ ಪ್ಲಿಪುಚ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ 25ರ ಹರೆಯದ ಥಾಯ್ಲೆಂಡ್ ಆಟಗಾರ್ತಿ ಪ್ಲಿಪುಚ್ ಆಸ್ಟ್ರೇಲಿಯದ ಎದುರಾಳಿ, ಆರನೇ ಶ್ರೇಯಾಂಕದ ಲಿಝೆಟ್ ಕ್ಯಾಬ್ರೆರಾರನ್ನು 7-6(4),6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ದೀರ್ಘಸಮಯದಿಂದ ಭಾರತದ ನಂ.1 ಸಿಂಗಲ್ಸ್ ಆಟಗಾರ್ತಿಯಾಗಿರುವ ಅಂಕಿತಾ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ವೈರ್ಲ್ಡ್‌ಕಾರ್ಡ್ ಮೂಲಕ ಟೂರ್ನಿ ಆಡಿದ್ದ ಕರ್ಮನ್‌ಕೌರ್, ಝೀಲ್ ದೇಸಾಯಿ ಹಾಗೂ ಋತುಜಾ ಭೋಂಸ್ಲೆ ಮೊದಲ ಸುತ್ತಿನಲ್ಲಿ ಸೋತಿದ್ದರು.

ಅಂಕಿತಾ ಎರಡನೆ ಬಾರಿ 125,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 2015ರಲ್ಲಿ ಚೀನಾದಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News