ಧೂಳು ತುಂಬಿರುವ ಮನಸ್ಸುಗಳು

Update: 2017-11-22 18:31 GMT

ವಾತಾವರಣವನ್ನು ದಿಢೀರನೆ ಪರಿಶುದ್ಧ ಮಾಡಿಬಿಡುವ ಯಾವ ಮಂತ್ರದಂಡಗಳೂ ಇಲ್ಲ. ನಮ್ಮ ನಗರಗಳನ್ನು ಜೀವಿಸಲು ಯೋಗ್ಯವಾದ ನಗರಗಳನ್ನಾಗಿ ಮಾಡಲು ಬೇಕಾದ ವ್ಯವಸ್ಥಿತವಾದ, ದೀರ್ಘಕಾಲೀನ ಮತ್ತು ತಾಳಿಕೆಯೋಗ್ಯ ಕ್ರಿಯಾಯೋಜನೆಯನ್ನು ರೂಪಿಸುವುದೊಂದೇ ಇದಕ್ಕಿರುವ ಏಕೈಕ ದಾರಿ.

ಹೊಸದಿಲ್ಲಿಯನ್ನು ಹೊಗೆಮಂಜು ಆವರಿಸಿಕೊಳ್ಳುವುದು ವಾರ್ಷಿಕ ವಿದ್ಯಮಾನವೇ ಆಗಿಬಿಟ್ಟಿದೆ; ಹಾಗೆಯೇ ತಾರಕಕ್ಕೇರುವ ಕಳವಳಗಳೂ ಸಹ. ಪ್ರತಿಬಾರಿಯೂ ಇದೊಂದು ಆಪತ್ಕಾಲೀನ ಪರಿಸ್ಥಿತಿಯೆಂದು ನಮಗೆ ಹೇಳಲಾಗುತ್ತದೆ. ಒಂದು ಕಡೆ ದಿಲ್ಲಿಯು ತನ್ನ ಪಕ್ಕದ ರಾಜ್ಯಗಳಾದ ಹರ್ಯಾಣ ಮತ್ತು ಪಂಜಾಬ್‌ಗಳನ್ನು ದೂರಿದರೆ, ಅವೆರಡೂ ರಾಜ್ಯಗಳೂ ದಿಲ್ಲಿಯನ್ನು ದೂರುತ್ತವೆ. ಮತ್ತು ಎಲ್ಲರೂ ಒಟ್ಟು ಸೇರಿ ಕೇಂದ್ರವನ್ನೂ ದೂರುತ್ತಾರೆ ಈ ಮಧ್ಯೆ ದೇಶದ ಆ ಅತ್ಯಂತ ಸುರಕ್ಷಿತ ನಗರದ ಪ್ರತಿಯೊಬ್ಬ ನಾಗರಿಕರೂ ಉಸಿರಿಗಾಗಿ ತೇಕುತ್ತಾ ಜೀವ ಸವೆಸುತ್ತಿದ್ದಾರೆ. ಆ ನಗರದಲ್ಲಿ ಒಳ್ಳೆಯ ಗಾಳಿ ಎಂಬುದೂ ಸಹ ಒಂದು ದೂರದ ಕನಸಾಗಿಬಿಟ್ಟಿದೆ. ಆ ನಗರದಲ್ಲಿ ಬಡವರಿಗೆ, ಎಳೆ ಮಕ್ಕಳಿಗೆ ಮತ್ತು ವೃದ್ಧರಿಗೆ ಇರುವ ಆಯ್ಕೆ ಇಷ್ಟೆ: ಒಂದೋ ಜೀವ ಉಳಿಸಿಕೊಳ್ಳಲು ಉಸಿರಾಡುವುದು ಅಥವಾ ಉಸಿರಾಡಿ ಸಾಯುವುದು. ಈ ಮಾತುಗಳು ನಾಟಕೀಯವಾಗಿವೆ ಎಂದೆನಿಸಿದರೂ ಸತ್ಯ. ಈ ದಾರುಣ ಸತ್ಯವನ್ನು ಹಲವಾರು ಸಂಶೋಧನಾ ವರದಿಗಳು ಹೊರಗೆಡವಿವೆ. ಅದರಲ್ಲಿ ಇತ್ತೀಚಿನದ್ದು ಬ್ರಿಟಿಷ್ ಪತ್ರಿಕೆ ‘ಲ್ಯಾನ್ಸೆಟ್’ ಮಾಡಿದ ಅಧ್ಯಯನ. ಅದರ ಪ್ರಕಾರ 2015ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿ 25 ಲಕ್ಷ ಜನ ಅಕಾಲಿಕ ಸಾವನ್ನಪ್ಪಿದ್ದಾರೆ.

ಭಾರೀ ಹೊಗೆಮಂಜು ದಿಲ್ಲಿಯನ್ನು ಆವರಿಸಿಕೊಂಡಿದ್ದು ನವಂಬರ್ 7ಕ್ಕೆ ಆಗಿರಬಹುದು. ಆದರೆ ಇದು ವರ್ಷಗಳಿಂದಲ್ಲವಾದರೂ ಕೆಲವು ತಿಂಗಳುಗಳಿಂದಲಂತೂ ಅದಕ್ಕೆ ಬೇಕಾದ ಸನ್ನಿವೇಶ ರೂಪುಗೊಳ್ಳುತ್ತಿತ್ತು. 2002ರಲ್ಲೇ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ (ಸಿ.ಎಸ್.ಇ)ನ ಅನಿಲ್ ಅಗರ್ವಾಲ್ ಅವರು ದಿಲ್ಲಿಯ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು ಮತ್ತು ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಡೀಸೆಲ್ ಬದಲಿಗೆ ನೈಸರ್ಗಿಕ ಅನಿಲ (ಸಿಎನ್‌ಜಿ)ದ ಬಳಕೆಯನ್ನು ಕಡ್ಡಾಯ ಮಾಡಲು ಹೋರಾಡಿದ್ದರು. ಆಗಲೇ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟಿನ ಸ್ವರೂಪ ಎಲ್ಲರ ಗಮನಕ್ಕೂ ಬಂದಿತ್ತು. ಆಗ ಯಾವ ಗಂಭೀರ ಕ್ರಮಗಳನ್ನೂ ತೆಗೆದುಕೊಳ್ಳದಿದ್ದುದರಿಂದಲೇ ಈಗ ಆ ನಗರವು ಅನಾಹುತದ ವಲಯವಾಗಿಬಿಡುತ್ತಿದೆ. ಮೆಟ್ರೋ ರೈಲನ್ನು ನಿರ್ಮಿಸಲಾಯಿತಾದರೂ ದಿಲ್ಲಿಯ ವಿಸ್ತಾರವಾದ ರಸ್ತೆಗಳು ವಾಹನಗಳಿಂದ ಕಿಕ್ಕಿರಿಯತೊಡಗಿದವು. ಡೀಸೆಲ್ ಹೊಗೆಯನ್ನು ಹೊರಹಾಕುವ ಟ್ರಕ್ಕುಗಳು ನಗರದ ಮೂಲಕ ಸಂಚರಿಸಿವುದು ಮುಂದುವರಿಯಿತು; ಘನತ್ಯಾಜ್ಯ ವಸ್ತುಗಳನ್ನು ಬಯಲಿನಲ್ಲೇ ಸುಟ್ಟುಹಾಕುವುದು ಮುಂದುವರಿಯಿತು; ಕೈಗಾರಿಕಾ ವಸಾಹತುಗಳು ಉಂಟುಮಾಡುತ್ತಿದ್ದ ಮಾಲಿನ್ಯದ ಮೇಲೆ ನಿಗಾ ಇಡಲಿಲ್ಲ; ನಗರಕ್ಕೆ ಅನತಿದೂರದಲ್ಲಿದ್ದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಗಂಧಕದ ಡಯಾಕ್ಸೈಡ್ ಮತ್ತು ಹಾರುಧೂಳನ್ನು ಉಗಿಯುವುದನ್ನು ಮುಂದುವರಿಸಿದವು; ಮತ್ತು ನೂರಾರು ಡೀಸೆಲ್ ಜನರೇಟರ್‌ಗಳು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದವು. ಇವೆಲ್ಲವೂ ಒಟ್ಟು ಸೇರಿ ಚಳಿಗಾಲದಲ್ಲಿ ಮಾತ್ರವಲ್ಲದೆ ವರ್ಷ ಪೂರ್ತಿ ನಗರದ ಸುತ್ತ ವಿಷದ ಗಾಳಿ ಆವರಿಸಿಕೊಂಡೇ ಇರುವಂತಾಗಿಬಿಟ್ಟಿದೆ ಅದು ಚಳಿಗಾಲದಲ್ಲಿ ಕಣ್ಣಿಗೆಕಾಣುವಂತೆ ಹೊಗೆಮಂಜಾ(ಸ್ಮಾಗ್)ಗುತ್ತಿದೆ.

ಕಳೆದ ವರ್ಷ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ದಿಲ್ಲಿಯ ವಾಯುಮಾಲಿನ್ಯದ ಪ್ರಮಾಣವನ್ನು ವಿವರಿಸುವ ವರದಿಯೊಂದನ್ನು ಬಿಡುಗಡೆ ಮಾಡಿದ್ದರು. ಅದರ ಪ್ರಕಾರ ದಿಲ್ಲಿಯ ಗಾಳಿಯ ಗುಣಮಟ್ಟವು ಚಳಿಗಾಲದಲ್ಲಿ ಮಾತ್ರವಲ್ಲದೆ, ಅಕ್ಕಪಕ್ಕಗಳ ರಾಜ್ಯದಲ್ಲಿ ಬೆಳೆಕೂಳೆಯನ್ನು ರೈತರು ಸುಡುವಂಥ ಕೆಲಸಗಳಲ್ಲಿ ತೊಡಗದ ಬೇಸಿಗೆ ಕಾಲದಲ್ಲೂ ಸಹ ಅತ್ಯಂತ ಕಳಪೆಯೇ ಆಗಿತ್ತು. ಚಳಿಗಾಲದಲ್ಲಿ ಬೆಳೆಕೂಳೆಯ ಸುಡುವಿಕೆಯಿಂದ ವಾತಾವರಣದಲ್ಲಿ ಘನಪದಾರ್ಥಗಳು ಸೇರಿಕೊಂಡು ವಾತಾವರಣವನ್ನು ಮತ್ತಷ್ಟು ಹದಗೆಡಿಸುವುದು ನಿಜವೇ ಆದರೂ ಗಾಳಿಯ ಕಳಪೆ ಗುಣಮಟ್ಟಕ್ಕೆ ಅದೊಂದೇ ಕಾರಣವಲ್ಲ. ಆ ಅಧ್ಯಯನದ ಪ್ರಕಾರ ದಿಲ್ಲಿಯ ವಾತಾವರಣದಲ್ಲಿರುವ ಶೇ.98ರಷ್ಟು ಗಂಧಕದ ಡೈಆಕ್ಸೈಡ್‌ಗೆ ಮತ್ತು ಶೇ.60 ರಷ್ಟು ನೈಟ್ರೋಜನ್ ಆಕ್ಸೈಡ್‌ಗೆ ಸುತ್ತಮುತ್ತಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು, ಕೈಗಾರಿಕಾ ವಸಾಹತುಗಳು, ರೆಸ್ಟೋರೆಂಟುಗಳು ಮತ್ತು ಡೀಸೆಲ್ ಜನರೇಟರ್‌ಗಳು ಸೃಷ್ಟಿಸುತ್ತಿರುವ ಮಾಲಿನ್ಯವೇ ಕಾರಣ. ದಿಲ್ಲಿಯಿಂದ 300 ಕಿ.ಮೀ. ಫಾಸಲೆಯಲ್ಲಿ 13 ಶಾಖೋತ್ಪನ್ನ ಸ್ಥಾವರಗಳು, 20 ದೊಡ್ಡ ಕೈಗಾರಿಕೆಗಳು ಮತ್ತು 25 ಕೈಗಾರಿಕಾ ವಸಾಹತುಗಳಿವೆ. ಈ ಬಹುಪಾಲು ಉದ್ಯಮಗಳು ಹೆಚ್ಚಿನ ಘನ ಸಾಂದ್ರತೆಯುಳ್ಳ ಫರ್ನೆಸ್ ಆಯಿಲ್ ಅನ್ನು ಇಂಧನವಾಗಿ ಬಳಸುತ್ತವೆ. ಅದರ ಬಳಕೆಯು ದಶಲಕ್ಷಕ್ಕೆ 500 ಭಾಗ ಮಾತ್ರ ಗಂಧಕವಿರಬೇಕೆಂಬ ಮಿತಿಯನ್ನು ಉಲ್ಲಂಘಿಸುತ್ತದೆ. ಅದೇ ರೀತಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಉಗುಳುವ ಅನಿಲ ಮತ್ತು ಧೂಳುಗಳು ಸರಿಯಾದ ನಿಯಂತ್ರಣಕ್ಕೆ ಒಳಗಾಗುತ್ತಿಲ್ಲ. ಇದರ ಜೊತೆಗೆ ದಿಲ್ಲಿಯಲ್ಲಿ 9,000 ಸಣ್ಣ ಹೊಟೇಲ್ ಮತ್ತು ರೆಸ್ಟೋರೆಂಟುಗಳಿದ್ದು ಅವು ಕಲ್ಲಿದ್ದನ್ನು ಉರುವಲಾಗಿ ಬಳಸುತ್ತವೆ. ಅಲ್ಲದೆ, ಶೇ.90 ದಿಲ್ಲಿ ನಿವಾಸಿಗಳು ಶುದ್ಧ ಇಂಧನವನ್ನೇ ಬಳಸುತ್ತಿದ್ದರೂ ಇನ್ನುಳಿದ ಶೇ. 10 ಜನರು ಈಗಲೂ ಉರುವಲಿಗೆ ಸೌದೆ, ಒಣಹುಲ್ಲು, ಸೆಗಣಿ ಅಥವಾ ಕಲ್ಲಿದ್ದಲನ್ನು ಬಳಸುತ್ತಾರೆ. ಇದರ ಜೊತೆಗೆ ದಿಲ್ಲಿಯ ರಸ್ತೆಗಳಲ್ಲಿ ಒಂದೇ ಸಮನೇ ಏರುತ್ತಿರುವ ವಾಹನಗಳ ಸಂಖ್ಯೆಯೇ ಅಲ್ಲಿನ ಗಾಳಿಯಲ್ಲಿನ ಶೇ.20ರಷ್ಟು ಘನಪದಾರ್ಥಗಳಿಗೆ ಕಾರಣವಾಗಿವೆ. ಇಂದು ನಮ್ಮೆಲ್ಲ ಚರ್ಚೆಗಳನ್ನು ದಿಲ್ಲಿಯ ಮೇಲೆ ಮಾತ್ರ ಕೇಂದ್ರೀಕರಿಸಿದ್ದರೂ ಭಾರತದ ಬಹುಪಾಲು ನಗರಗಳ ವಾತಾವರಣ ಹೆಚ್ಚೂಕಡಿಮೆ ಇದೇ ರೀತಿಯಲ್ಲಿವೆ. ಅದರಲ್ಲೂ ಉತ್ತರ ಭಾರತ ಅಥವಾ ಈ ಉಪಖಂಡದ ಉತ್ತರ ಭಾಗ ಇದರಿಂದ ವಿಶೇಷವಾಗಿ ಬಾಧೆಗೊಳಗಾಗಿದೆ. ವಾಸ್ತವವಾಗಿ ಭಾರತದ ಮಾಧ್ಯಮಗಳು ದಿಲ್ಲಿಯ ಪರಿಸ್ಥಿತಿಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನದ ಲಾಹೋರಿನ ವಾಯುಮಾನದ ಪರಿಸ್ಥಿತಿ ಇನ್ನೂ ಭೀಕರವಾಗಿತ್ತು. ಹೀಗಾಗಿ ಈ ಸವಾಲನ್ನು ನಾವುಗಳು ಗಡಿಗಳನ್ನು ಮರೆತು ಒಟ್ಟಾಗಿ ಸಹಕಾರದ ಮೂಲಕ ಎದುರಿಸುವ ಅಗತ್ಯವಿದೆ. ಆಗ ಮಾತ್ರ ಗಡಿಯ ಇಕ್ಕೆಲಗಳಲ್ಲೂ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ಹುಡುಕಲು ಸಾಧ್ಯ. ಭಾರತ ಮತ್ತು ಪಾಕಿಸ್ತಾನಗಳು ಇತಿಹಾಸವನ್ನು ಮಾತ್ರವಲ್ಲದೆ ಭೌಗೋಳಿಕತೆಯನ್ನು ಹಂಚಿಕೊಂಡಿವೆ ಮತ್ತು ಭಾರತದ ಉತ್ತರ ಭಾಗದಲ್ಲಿ ನಾವು ಈ ಬಗೆಯ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಗಡಿಯಾಚೆಗಿರುವ ಪಾಕಿಸ್ತಾನದ ನಗರಗಳೂ ಸಹ ಇದೇ ಬಗೆಯ ಬಿಕ್ಕಟ್ಟನ್ನು ಎದುರಿಸುತ್ತಿರುತ್ತವೆ. ಹೀಗೆ ಈ ಸಮಸ್ಯೆ ದೀರ್ಘಕಾಲಿಕವೇ ಹೊರತು ನಿರ್ದಿಷ್ಟ ಋತುಮಾನಕ್ಕೆ ಸೀಮಿತವಾದುದಲ್ಲವೆಂಬುದೂ, ಒಂದು ನಗರಕ್ಕೆ ಮಾತ್ರ ಸೀಮಿತವಾಗಿರದೆ ಪಾಕಿಸ್ತಾನವನ್ನೂ ಒಳಗೊಂಡಂತೆ ಒಂದು ಇಡೀ ಭೂಭಾಗಕ್ಕೆ ಅನ್ವಯವಾಗುವಂಥದ್ದೆಂಬುದು ಸ್ಪಷ್ಟವಾದ ಮೇಲೆ ಇದಕ್ಕೆ ತಕ್ಷಣದ ಪರಿಹಾರವಿಲ್ಲವೆಂಬುದು ನಮ್ಮ ನೀತಿನಿರೂಪಕರಿಗೆ ಅರ್ಥವಾಗಬೇಕು. ಹಾಗಿದ್ದರೂ ಎಷ್ಟೇ ಅರೆಬರೆಯಾಗಿದ್ದರೂ, ಹೆಚ್ಚು ಪರಿಣಾಮಕಾರಿಯಲ್ಲವಾಗಿದ್ದರೂ ಕೆಲವು ತುರ್ತು ಕ್ರಮಗಳನ್ನಂತೂ ತೆಗೆದುಕೊಳ್ಳುವ ಅಗತ್ಯವಿದ್ದೇ ಇದೆ. ಏನನ್ನೂ ಮಾಡದೇ ಇರುವುದಕ್ಕಿಂತ ಸ್ವಲ್ಪವನ್ನಾದರೂ ಮಾಡುವುದು ಮೇಲು. ಆದರೆ ವಾತಾವರಣವು ಸ್ವಲ್ಪಸುಧಾರಿಸಿದ ತಕ್ಷಣ ಈಗಿರುವ ಕಳವಳಗಳೆಲ್ಲವೂ ಕರಗಿ ಮಾಮೂಲಿನಂತಾಗಲು ಬಿಡಬಾರದು. ಏಕೆಂದರೆ ಹಾಗೆ ಮೈಮರೆವು ಮಾಡಿಕೊಂಡು ಬಂದ ಕಾರಣಕ್ಕಾಗಿಯೇ ಇಂದು ಪರಿಸ್ಥಿತಿ ಹೀಗಾಗಿದೆ. ಹೊಗೆಮಂಜಿಲ್ಲದಿದ್ದರೂ ನಾವು ಉಸಿರಾಡುವ ಗಾಳಿಯಲ್ಲಿ ಮಾತ್ರ ನಂಜು ತುಂಬಿಕೊಂಡೇ ಇದೆ. ಜಗತ್ತಿನ ಹಲವಾರು ದೇಶಗಳು ತಮ್ಮ ನಗರಗಳನ್ನು ದೀರ್ಘಕಾಲೀನವಾಗಿ ಪರಿಸರ ತಾಳಿಕೆಯುಳ್ಳ ರೀತಿಯಲ್ಲಿ ಪುನಾರೂಪಿಸಿಕೊಳ್ಳುತ್ತಿರುವ ಹಲವಾರು ಉದಾಹರಣೆಗಳಿವೆ. ಇದು ಭೂ ಬಳಕೆಯನ್ನು ನಿಯಂತ್ರಿಸುವ ಕಾನೂನುಗಳನ್ನು ಒಳಗೊಂಡಂತೆ ಭೂ ನಿಯಂತ್ರಣ ಮಾಡುವ, ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾಗಾಟಗಳಿಗೆ ಆದ್ಯತೆ ಕೊಡುವ, ಬಯಲು ಮತ್ತು ಹಸಿರು ಪ್ರದೇಶಗಳಿಗೆ ಅವಕಾಶ ಕಲ್ಪಿಸುವ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ನಿಯಂತ್ರಿಸುವ ಕ್ರಮಗಳನ್ನು ಒಳಗೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭವಿಷ್ಯದಲ್ಲಿ ನಮ್ಮ ನಗರಗಳನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಪರಿವರ್ತಿಸುವಲ್ಲಿ ನಮ್ಮೆಲ್ಲರ ಹಿತವೂ ಅಡಗಿದೆ ಎಂಬ ಶಿಕ್ಷಣವನ್ನು ಎಲ್ಲಾ ನಾಗರಿಕರಿಗೂ ಕೊಡುವ ಅಗತ್ಯವಿದೆ. ವಾತಾವರಣವನ್ನು ದಿಢೀರನೆ ಪರಿಶುದ್ಧ ಮಾಡಿಬಿಡುವ ಯಾವ ಮಂತ್ರದಂಡಗಳೂ ಇಲ್ಲ. ನಮ್ಮ ನಗರಗಳನ್ನು ಜೀವಿಸಲು ಯೋಗ್ಯವಾದ ನಗರಗಳನ್ನಾಗಿ ಮಾಡಲು ಬೇಕಾದ ವ್ಯವಸ್ಥಿತವಾದ, ದೀರ್ಘಕಾಲೀನ ಮತ್ತು ತಾಳಿಕೆಯೋಗ್ಯ ಕ್ರಿಯಾಯೋಜನೆಯನ್ನು ರೂಪಿಸುವುದೊಂದೇ ಇದಕ್ಕಿರುವ ಏಕೈಕ ದಾರಿ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ