ಮುಲಾಯಂ ಸಿಂಗ್ ಬಂಧನಕ್ಕೆ ವಿಎಚ್‌ಪಿ ಒತ್ತಾಯ

Update: 2017-11-23 13:15 GMT

ಲಕ್ನೊ, ನ.23: ಅಯೋಧ್ಯೆಯಲ್ಲಿ 1990ರಲ್ಲಿ ‘ಕರಸೇವಕರ’ ಮೇಲೆ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಆಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕೆಂದು ವಿಶ್ವಹಿಂದೂ ಪರಿಷದ್ ಒತ್ತಾಯಿಸಿದೆ.

  1990ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸುವಂತೆ ಭದ್ರತಾ ಸಿಬ್ಬಂದಿಗೆ ತಾನು ಆದೇಶಿಸಿದ್ದೆ ಎಂದು ಮುಲಾಯಂ ಹಲವಾರು ಬಾರಿ ಹೇಳಿದ್ದಾರೆ.ಈ ಹೇಳಿಕೆಯನ್ನು ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ರಾಜ್ಯ ಸರಕಾರ ಪರಿಗಣಿಸಿ ಮುಲಾಯಂ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕೆಂದು ವಿಎಚ್‌ಪಿಯ ಮಾಧ್ಯಮ ವಕ್ತಾರ ಶರದ್ ಶರ್ಮ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿರುವ ರಾಮಭಕ್ತರ ಕುಟುಂಬವರ್ಗದವರನ್ನು ಸಂಪರ್ಕಿಸಲಾಗುವುದು ಹಾಗೂ ಮುಲಾಯಂ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಸರಕಾರ ಮತ್ತು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶರ್ಮ ಹೇಳಿದ್ದಾರೆ.

  ಬ್ರಿಟಿಷ್ ಆಡಳಿತದ ಸಂದರ್ಭ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡಯರ್ ಮಾಡಿದ್ದ ದುಷ್ಕೃತ್ಯಕ್ಕೆ ಸಮನಾದ ಕೃತ್ಯವಿದು ಎಂದು ಬಣ್ಣಿಸಿದ ಅವರು, ತನ್ನ ಸರಕಾರ ಉಳಿಸಿಕೊಳ್ಳಲು ಹಾಗೂ ವೋಟ್‌ಬ್ಯಾಂಕ್ ಹೆಚ್ಚಿಸಿಕೊಳ್ಳಲು ಮುಲಾಯಂ ಈ ಕ್ರಮಕ್ಕೆ ಮುಂದಾಗಿದ್ದರು. ಇದೇ ರೀತಿ ಮಾಡುವಂತೆ ಪುತ್ರ ಅಖಿಲೇಶ್ ಯಾದವ್‌ಗೂ ಸಲಹೆ ನೀಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದ ಉಡುಪಿಯಲ್ಲಿ ನ.24ರಿಂದ 26ರವರೆಗೆ ವಿಎಚ್‌ಪಿ ಆಶ್ರಯದಲ್ಲಿ ನಡೆಯಲಿರುವ ‘ಧರ್ಮ ಸಂಸದ್’ನಲ್ಲಿ ರಾಮಜನ್ಮಭೂಮಿ ಪ್ರಕರಣದ ಜೊತೆಗೆ , ಮುಲಾಯಂ ಸಿಂಗ್ ಯಾದವ್ ಒಪ್ಪಿಕೊಂಡಿರುವ ಹೇಯಕೃತ್ಯದ ಕುರಿತೂ ಚರ್ಚೆ ನಡೆಯಲಿದೆ ಎಂದು ಶರದ್ ಶರ್ಮ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News