ದೇಶವನ್ನು ರಾಷ್ಟ್ರೀಯತಾವಾದಿಗಳಿಂದ ರಕ್ಷಿಸಿ: ಗುಜರಾತ್ ಆರ್ಚ್‌ಬಿಷಪ್ ಪತ್ರ

Update: 2017-11-23 17:49 GMT

 ಅಹ್ಮದಾಬಾದ್, ನ.23: ‘ರಾಷ್ಟ್ರೀಯತಾವಾದಿ ಶಕ್ತಿಗಳು ದೇಶವನ್ನು ನಿಯಂತ್ರಣಕ್ಕೆ ಪಡೆದುಕೊಳ್ಳುವ ಹಂತದಲ್ಲಿವೆ. ಗುಜರಾತ್ ರಾಜ್ಯ ವಿಧಾನಸಭೆ ಚುನಾವಣೆಯಿಂದ ಬದಲಾವಣೆ ಸಾಧ್ಯ’ ಎಂದು ಗಾಂಧಿನಗರದ ಆರ್ಚ್‌ಬಿಷಪ್ (ಧರ್ಮಾಧ್ಯಕ್ಷ) ಥೋಮಸ್ ಮಕ್ವಾನ್ ಬರೆದಿರುವ ಮನವಿ ಪತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರತಿಕ್ರಿಯೆ ಲಭ್ಯವಾಗಿದೆ.

ಧರ್ಮಾಧ್ಯಕ್ಷರು ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸಿಲ್ಲವಾದರೂ ಇದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಉಲ್ಲೇಖಿಸಿ ಬರೆದಿರುವ ಪತ್ರದಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಈ ಪತ್ರವನ್ನು ಸಾರ್ವಜನಿಕರನ್ನು ಉದ್ದೇಶಿಸಿ ಬರೆದಿಲ್ಲ. ಇದು ಪ್ರಾರ್ಥನೆ ಸಲ್ಲಿಸಿ ಎಂದು ಹೇಳಿರುವ ಮನವಿ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  ಚರ್ಚ್‌ಗಳು ರಾಜಕೀಯ ವಿಷಯದ ಬಗ್ಗೆ ಪ್ರಸ್ತಾವಿಸುವುದು ಸರಿಯೇ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಹಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಥಾಮಸ್, ಈ ರೀತಿಯ ಪತ್ರವನ್ನು ಈ ಹಿಂದೆಯೂ ಬರೆಯಲಾಗಿದೆ. ಚುನಾವಣೆ ಎದುರಾದಾಗಲೆಲ್ಲಾ ನಾವು ನಮ್ಮ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಅವರಿಗೆ ತಿಳಿಹೇಳುತ್ತೇವೆ ಎಂದಿದ್ದಾರೆ.

 ನವೆಂಬರ್ 21ರಂದು ಬರೆದಿರುವ ಪತ್ರದಲ್ಲಿ , ಈ ಚುನಾವಣೆಯ ಫಲಿತಾಂಶ ಮಹತ್ವದ್ದಾಗಿದ್ದು ದೇಶದ ಮೇಲೆ ದೂರಗಾಮಿ ಪರಿಣಾಮ ಬೀರುವಂತದ್ದಾಗಿದೆ. ದೇಶದ ಪಥವನ್ನು ಇದು ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ . ಅಲ್ಲದೆ ದೇಶದ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿಗೆ ಆಘಾತ ಎದುರಾಗಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಸಾಂವಿಧಾನಿಕ ಹಕ್ಕುಗಳನ್ನು ಧ್ವಂಸ ಮಾಡಲಾಗುತ್ತಿದೆ. ನಮ್ಮ ಚರ್ಚ್, ಸಂಸ್ಥೆಗಳು ಅಥವಾ ಧರ್ಮೀಯರ ಮೇಲೆ ಆಕ್ರಮಣ ನಡೆಯದ ದಿನವೇ ಇಲ್ಲ ಎಂಬಂತಾಗಿದೆ. ಅಲ್ಪಸಂಖ್ಯಾತರಲ್ಲಿ, ಇತರ ಹಿಂದುಳಿದ ವರ್ಗದವರಲ್ಲಿ, ಹಿಂದುಳಿದ ವರ್ಗದವರಲ್ಲಿ ಬಡಜನತೆಯಲ್ಲಿ ಅಭದ್ರತೆಯ ಭಾವನೆ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

  ಭಾರತೀಯ ಸಂವಿಧಾನಕ್ಕೆ ನಿಷ್ಠೆ ಹೊಂದಿರುವ , ಯಾವುದೇ ಪಕ್ಷಪಾತವಿಲ್ಲದೆ ಪ್ರತಿಯೊಬ್ಬ ಮಾನವರನ್ನು ಗೌರವಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದುಬರಲಿ ಎಂದು ಆಶಿಸಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಗುಜರಾತ್ ಬಿಷಪ್‌ರನ್ನು ಕೋರಿದ್ದಾರೆ. ಅಲ್ಲದೆ ಪ್ರಾರ್ಥನೆಗಳ ಮೂಲಕ ನಾವು ನಮ್ಮ ದೇಶವನ್ನು ರಾಷ್ಟ್ರೀಯತಾವಾದಿಗಳಿಂದ ರಕ್ಷಿಸಬಹುದು ಎಂದವರು ಹೇಳಿದ್ದಾರೆ.

ಗುಜರಾತ್ ಮತದಾರರಲ್ಲಿ ಕ್ರಿಶ್ಚಿಯನ್ನರು ಶೇ.0.51ರಷ್ಟು ಪ್ರಮಾಣದಲ್ಲಿದ್ದು ಸಾಂಪ್ರದಾಯಿಕವಾಗಿ ಇವರು ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News