ರಾಜಕಾರಣದ ದಿಕ್ಕು ಬದಲಿಸಿದ ಲಾಲಾ ಲಜಪತ್ ರಾಯ್

Update: 2017-11-23 18:38 GMT

ಭಾಗ-1

ಅಸಹಕಾರ ಚಳವಳಿಯ ಎರಡು ವರ್ಷಗಳ ಅವಧಿಯಲ್ಲಿ, ಓರ್ವ ಉಗ್ರ ರಾಷ್ಟ್ರೀಯವಾದಿಯಾದ ರಾಯ್, ಗಾಂಧೀಜಿಯವರ ಮನಸ್ಸಿಲ್ಲದ ಮನಸ್ಸಿನ ಒಬ್ಬ ಮಿತ್ರರಾಗಿದ್ದರು. ಅವರ ಅಹಿಂಸಾತ್ಮಕ ಚಳವಳಿ ಸೋಲುತ್ತದೆಂದು ಭವಿಷ್ಯ ನುಡಿದಿದ್ದರು. 1922ರ ಫೆಬ್ರವರಿಯಲ್ಲಿ ಚೌರಿಚೌರಾದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 25 ಮಂದಿ ಸತ್ತು, ಆ ಕಾರಣಕ್ಕಾಗಿ ಗಾಂಧೀಜಿ ಚಳವಳಿಯನ್ನು ನಿಲ್ಲಿಸಬೇಕಾಗಿ ಬಂದಾಗ ರಾಯ್ ನುಡಿದ ಭವಿಷ್ಯ ಸರಿ ಎಂದು ಸಾಬೀತಾಯಿತು.

1880ರಿಂದ ತಾನು ವಾಸ್ತವ್ಯವಿದ್ದ ನಗರವಾದ ಲಾಹೋರ್‌ನಲ್ಲಿ 1928ರ ನವೆಂಬರ್ 17ರಂದು ಲಾಲಾ ಲಜಪತ್‌ರಾಯ್ ನಿಧನ ಹೊಂದಿದರು. 1880ರಲ್ಲಿ ಕಾನೂನು ಅಭ್ಯಾಸ ಮಾಡಲು ಅಲ್ಲಿಯ ಪ್ರತಿಷ್ಠಿತ ಸರಕಾರಿ ಕಾಲೇಜನ್ನು ಸೇರಿದಾಗಿನಿಂದ ಅವರು ಲಾಹೋರ್‌ನಲ್ಲಿ ನೆಲೆಸಿದ್ದರು. ಅವರ ಜೀವಿತಾವಧಿಯಲ್ಲಿ ಅವರ ರಾಜಕಾರಣ ಭಾರತದ ರಾಜಕೀಯ ನಕಾಶೆಯನ್ನು ಬದಲಿಸಿದಂತೆಯೇ ಅವರ ಸಾವು ಕೂಡ ಹಲವು ರೀತಿಗಳಲ್ಲಿ ಆ ನಕಾಶೆಯನ್ನು ಬದಲಿಸಿತು.

 ಅವರ ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ಘೋಷಿಸಿದರು. ಆದರೆ ಕೆಲವು ದಿನಗಳ ಹಿಂದೆ ಸೈಮನ್ ಆಯೋಗದ ವಿರುದ್ಧ ಲಾಹೋರ್ ರೈಲು ನಿಲ್ದಾಣದಲ್ಲಿ ಪ್ರತಿಭಟಿಸುತ್ತಿದ್ದಾಗ ಬ್ರಿಟಿಷ್ ಪೊಲೀಸರು ನೀಡಿದ ಹೊಡೆತಗಳಿಂದಾಗಿಯೇ ಅವರ ಸಾವು ಸಂಭವಿಸಿತೆಂದು ವ್ಯಾಪಕವಾಗಿ ನಂಬಲಾಗಿತ್ತು. ದೇಶದಲ್ಲಾಗಿರುವ ಸಾಂವಿಧಾನಿಕ ಸುಧಾರಣೆಗಳ ಬೆಳವಣಿಗೆಯ ಕುರಿತು ವರದಿಮಾಡಲು ಬ್ರಿಟಿಷ್ ಸರಕಾರ ಸೈಮನ್ ಆಯೋಗವನ್ನು ನೇಮಿಸಿತ್ತು. ಆದರೆ ಆಯೋಗದಲ್ಲಿ ಒಬ್ಬನೇ ಒಬ್ಬ ಭಾರತೀಯ ಸದಸ್ಯ ಇರಲಿಲ್ಲವೆಂಬ ಕಾರಣಕ್ಕಾಗಿ ಆಯೋಗವನ್ನು ಟೀಕಿಸಲಾಗಿತ್ತು.

 1919ರಲ್ಲಿ ಜಲಿಯಾನ್ ವಾಲಾಬಾಗ್‌ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಹತ್ಯಾಕಾಂಡ ಮತ್ತು 1920ರಲ್ಲಿ ಅಸಹಕಾರ ಚಳವಳಿಗಾಗಿ ಮಹಾತ್ಮಾಗಾಂಧಿ ನೀಡಿದ ಕರೆಯ ಬಳಿಕ, 1920ರ ದಶಕದ ಆದಿಯಲ್ಲಿ ಆಗ ತಾನೇ ಮೂಡಿಬರುತ್ತಿದ್ದ ರಾಷ್ಟ್ರೀಯವಾದಿ ಹೋರಾಟಕ್ಕೆ ರಾಯ್‌ಯವರ ಸಾವು ಒಂದು ಬಲವಾದ ಹೊಡೆತವಾಗಿತ್ತು. ಅಸಹಕಾರ ಚಳವಳಿಯ ಎರಡು ವರ್ಷಗಳ ಅವಧಿಯಲ್ಲಿ, ಓರ್ವ ಉಗ್ರ ರಾಷ್ಟ್ರೀಯವಾದಿಯಾದ ರಾಯ್, ಗಾಂಧೀಜಿಯವರ ಮನಸ್ಸಿಲ್ಲದ ಮನಸ್ಸಿನ ಒಬ್ಬ ಮಿತ್ರರಾಗಿದ್ದರು. ಅವರ ಅಹಿಂಸಾತ್ಮಕ ಚಳವಳಿ ಸೋಲುತ್ತದೆಂದು ಭವಿಷ್ಯ ನುಡಿದಿದ್ದರು. 1922ರ ಫೆಬ್ರವರಿಯಲ್ಲಿ ಚೌರಿಚೌರಾದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 25 ಮಂದಿ ಸತ್ತು, ಆ ಕಾರಣಕ್ಕಾಗಿ ಗಾಂಧೀಜಿ ಚಳವಳಿಯನ್ನು ನಿಲ್ಲಿಸಬೇಕಾಗಿ ಬಂದಾಗ ರಾಯ್ ನುಡಿದ ಭವಿಷ್ಯ ಸರಿ ಎಂದು ಸಾಬೀತಾಯಿತು.

  ರಾಷ್ಟ್ರೀಯತೆ ಮತ್ತು ಲಾಲ್ ಬಾಲ್ ಪಾಲ್

 ಕಾಂಗ್ರೆಸ್ ಪಕ್ಷವು, ನಿರ್ದಿಷ್ಟವಾಗಿ ಗಾಂಧಿಯ ಆಗಮನದ ಬಳಿಕ, ಬ್ರಿಟಿಷ್ ಭಾರತದ ಹಲವು ಭಾಗಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ಹರಡುತ್ತಿರುವಾಗ, ಪಂಜಾಬ್ ಪ್ರಾಂತದಲ್ಲಿ ಪ್ರಬಲ ನಾಯಕರಾಗಿದ್ದವರು. ರಾಯ್, ಗಾಂಧಿ ರಾಷ್ಟ್ರೀಯ ರಾಜಕೀಯ ಅಖಾಡವನ್ನು ಪ್ರವೇಶಿಸುವ ಹಲವು ವರ್ಷಗಳ ಮೊದಲೇ, ರಾಯ್‌ಯವರು ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್‌ರವರ ಜತೆಗೂಡಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನ ಒಳಗಡೆಯೇ ಉಗ್ರಗಾಮಿಯಾದ, ತೀವ್ರವಾದ ಒಂದು ರಾಷ್ಟ್ರೀಯತೆಗೆ ಅಡಿಪಾಯ ಹಾಕಿದ್ದರು. ‘‘ಲಾಲ್ ಬಾಲ್ ಪಾಲ್’’ ತ್ರಿಮೂರ್ತಿಗಳೆಂದು ಪ್ರಸಿದ್ಧರಾದ ಈ ಮೂವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ತೀವ್ರಗಾಮೀಕರಣಕ್ಕೆ ಕಾರಣೀಭೂತರೆಂದು ಹೇಳಲಾಗಿದೆ.

 ಕಾಂಗ್ರೆಸ್ ಪಕ್ಷದೊಳಗಡೆಯೆ ತೀವ್ರಗಾಮಿಗಳೆಂದು ಕರೆಯಲ್ಪಡುತ್ತಿದ್ದ ‘ಲಾಲ್ ಬಾಲ್ ಪಾಲ್’ ಭಾರತಕ್ಕೆ ಇನ್ನೂ ಹೆಚ್ಚಿನ ಸ್ವಾಯತ್ತತೆ ನೀಡಬೇಕೆಂದು ಹಕ್ಕೊತ್ತಾಯ ಮಾಡಿದರು. ಅಧಿಕಾರದಲ್ಲಿ ಒಂದು ಪಾಲು ಪಡೆಯಲು ಭಾರತೀಯರು ಆಗಿನ್ನೂ ಸಿದ್ಧರಾಗಿಲ್ಲ ಮತ್ತು ತನ್ನ ದೇಶದ ಮೇಲೆ ಹೆಚ್ಚಿನ ನಿಯಂತ್ರಣ ಬಯಸುವ ಮೊದಲು ಭಾರತೀಯರು ತಮ್ಮ ದೇಶದ ಸಾಮಾಜಿಕ ಹಾಗೂ ಧಾರ್ಮಿಕ ಅನಿಷ್ಟಗಳಿಂದ, ಕೆಡುಕುಗಳಿಂದ ತಮ್ಮ ಸಮಾಜವನ್ನು ಸುಧಾರಣೆಮಾಡಬೇಕೆಂದು ಇನ್ನ್ನೊಂದು ಗುಂಪು (ಮಂದಗಾಮಿಗಳು) ವಾದಿಸಿದರು. ಬ್ರಿಟಿಷರು ಮಂದಗಾಮಿಗಳ ಬಗ್ಗೆಯೇ ಒಲವು ಹೊಂದಿದ್ದರೆಂದು ಬೇರೆ ಹೇಳಬೇಕಾಗಿಲ್ಲ. ನಿಜಹೇಳಬೇಕೆಂದರೆ, ‘ಲಾಲ್ ಬಾಲ್ ಪಾಲ್’ ರಂಗದ ಮೇಲೆ ಬರುವವರೆಗೆ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ಪಕ್ಷವನ್ನು ವಸಾಹತುಶಾಹಿಯ ಕರುಣೆ ತುಂಬಿದ ಸ್ವಭಾವದಲ್ಲಿ ನಂಬಿಕೆ ಇಟ್ಟಿದ್ದ ಒಂದು (ಬ್ರಿಟಿಷ್) ಸಾಮ್ರಾಜ್ಯಪರ ಪಕ್ಷವೆಂದು ತಿಳಿಯಲಾಗಿತ್ತು.

1905ರಲ್ಲಿ ಬಂಗಾಲದ ವಿಭಜನೆಯಾದ ಬಳಿಕ ಮಂದಗಾಮಿಗಳು ತಮ್ಮ ಪ್ರಾಬಲ್ಯ ಕಳೆದುಕೊಂಡರು; ಅವರನ್ನು ಬದಿಗೆ ತಳ್ಳಲಾಯಿತು. ವಿಭಜನೆಯಾದಾಗ ಬಂಗಾಳದ ಬಹುಪಾಲು ಮುಸ್ಲಿಂ ಪ್ರದೇಶಗಳನ್ನು, ಪ್ರಧಾನವಾಗಿ ಹಿಂದೂ ಪ್ರಾಬಲ್ಯವಿದ್ದ ಪಶ್ಚಿಮ ಭಾಗಗಳಿಂದ ಪ್ರತ್ಯೇಕಿಸಲಾಯಿತು. ಆಗ ದೇಶಾದ್ಯಂತ ಒಂದು ರಾಷ್ಟ್ರೀಯ ಭಾವಪುಂಜ, ರಾಷ್ಟ್ರೀಯ ಭಾವನೆ ಹರಡಿತು. ಅಲ್ಲದೆ, ಮುಸ್ಲಿಮರು ಬಂಗಾಳದ ವಿಭಜನೆಯ ಪರವಾಗಿಯೂ ಹಿಂದೂಗಳು ಅದರ ವಿರುದ್ಧವಾಗಿಯೂ ಇದ್ದು, ಅದು ಭಾರತೀಯ ಸಮಾಜವನ್ನು ವಿಭಜಿಸುವ ಒಂದು ಬ್ರಿಟಿಷ್ ಒಳಸಂಚು ಎಂದು ತಿಳಿಯಲಾಯಿತು. ಪರಿಣಾಮವಾಗಿ, ವಿಭಜನೆಯ ರಾಜಕಾರಣದ ಕೋಮುಗೊಳಿಸುವಿಕೆಗೆ (ಕಮ್ಯೂನಲೈಜೇಶನ್‌ಗೆ) ಬುನಾದಿ ಹಾಕಿದಂತಾಯಿತು.

ಬಂಗಾಳದ ವಿಭಜನೆಯನ್ನು ವಿರೋಧಿಸುವುದಕ್ಕಾಗಿ, ಲಾಲ್ ಬಾಲ್ ಪಾಲ್‌ರ ನಾಯಕತ್ವದಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸ್ವದೇಶಿ ಚಳವಳಿಯನ್ನು ಆರಂಭಿಸಿತು. ಬ್ರಿಟಿಷ್ ಸರಕುಗಳನ್ನು ಹಾಗೂ ಸೇವೆಗಳನ್ನು ಬಹಿಷ್ಕರಿಸಿ ಬ್ರಿಟಿಷ್ ಸಾಮ್ರಾಜ್ಯವನ್ನು ಆರ್ಥಿಕವಾಗಿ ಬಗ್ಗುಬಡಿಯುವುದು ಮತ್ತು ಆ ಮೂಲಕ ಭಾರತೀಯ ಸರಕುಗಳನ್ನು ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಚಳವಳಿಯ ಉದ್ದೇಶವಾಗಿತ್ತು. ಆ ಚಳವಳಿಯು 1920ರ ದಶಕದ ಅಸಹಕಾರ ಚಳವಳಿಯ ಮುನ್ಸೂಚನೆಯಾಗಿತ್ತು ಮತ್ತು ಅದು ರಾಷ್ಟ್ರೀಯವಾಗಿ ಚಳವಳಿಯನ್ನು ಪ್ರಜಾಸತ್ತಾತ್ಮಕಗೊಳಿಸಲು ಕಾರಣವಾಯಿತು.

ಇದಾದ ಬಳಿಕ ಭಾರತೀಯ ರಾಷ್ಟ್ರೀಯ ಚಳವಳಿಯನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಾಗಲಿಲ್ಲ. 1909ರಲ್ಲಿ, ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ನೀಡುವ ಮಿಂಟೊ-ಮಾರ್ಲೆ ಸುಧಾರಣೆಗಳನ್ನು ಜಾರಿಗೊಳಿಸಲಾಯಿತು. ಮೊದಲ ಮಹಾಯುದ್ಧದ ವೇಳೆ ಹೇರಲಾಗಿದ್ದ ನಿಷೇಧಗಳನ್ನು ಶಾಶ್ವತಗೊಳಿಸಿದ ಹಾಗೂ ವಿಚಾರಣೆ ಇಲ್ಲದೆ ಯಾರನ್ನು ಬೇಕಾದರೂ ಅನಿರ್ದಿಷ್ಟಾವಧಿಯವರೆಗೆ ಬಂಧಿಸಿ ಜೈಲಿನಲ್ಲಿಡಲು ಅವಕಾಶನೀಡುವ ರೌಲತ್ ಕಾಯ್ದೆ 1919ರಲ್ಲಿ ಜಾರಿಗೆ ಬಂತು. ಗಾಂಧೀಜಿ ರಾಷ್ಟ್ರೀಯ ರಾಜಕಾರಣದಲ್ಲಿ ಬಂದಿಳಿಯುವ ವೇಳೆಗೆ, ತಳಸ್ತರದ ಬಹಳಷ್ಟು ಕೆಲಸ ನಡೆದಿತ್ತು.

ರಾಜಕಾರಣದ ಕೋಮುಗೊಳಿಸುವಿಕೆ

20ನೆ ಶತಮಾನದ ಆದಿಭಾಗವು ರಾಷ್ಟ್ರೀಯವಾದಿ ಪ್ರಜ್ಞೆ ವರ್ಧಿಸುವುದಕ್ಕೆ ಸಾಕ್ಷಿಯಾಯಿತಾದರೂ, ಇನ್ನೊಂದೆಡೆ ಅದು ರಾಜಕಾರಣದ ಕೋಮುಗೊಳಿಸುವಿಕೆಯ ಜನನಕ್ಕೂ ಸಾಕ್ಷಿಯಾಯಿತು. ಭಾರತದ ನಗರಗಳಲ್ಲಿ ಬೆಳೆಯುತ್ತಿರುವ ಒಂದು ಮಧ್ಯಮ ವರ್ಗವಿತ್ತು. ಅದು ಬ್ರಿಟಿಷ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಹಾಗೂ ಕೋಮು ಅನನ್ಯತೆಗಳ, ಅಸ್ಮಿತೆಗಳ ತೀವ್ರವಾದ ಒಂದು ಪ್ರಜ್ಞೆ ಹೊಂದಿದ್ದ ಹಿಂದೂ,ಮುಸ್ಲಿಂ, ಸಿಖ್ ಜನ ಸಮುದಾಯವನ್ನು ಒಳಗೊಂಡ ಮಧ್ಯಮವರ್ಗವಾಗಿತ್ತು. ಪಂಜಾಬಿನಲ್ಲಿ ಬ್ರಿಟಿಷ್ ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯ ಕೇಂದ್ರವಾಗಿದ್ದ ಲಾಹೋರ್ ಇದಕ್ಕೆ ಅಪವಾದವಾಗಿರಲಿಲ್ಲ.

ಕೃಪೆ: scroll.in

Writer - ಹಾರೂನ್ ಖಾಲಿದ್

contributor

Editor - ಹಾರೂನ್ ಖಾಲಿದ್

contributor

Similar News

ಜಗದಗಲ
ಜಗ ದಗಲ