'ಧೂಮ್-2' ಶೈಲಿಯಲ್ಲಿ ಮ್ಯೂಸಿಯಂನಿಂದ 2 ಕೋಟಿ ಮೌಲ್ಯದ ಸೊತ್ತು ಕದ್ದು ಸಿಕ್ಕಿಬಿದ್ದರು

Update: 2017-11-24 07:05 GMT

ಹೊಸದಿಲ್ಲಿ, ನ.24: ಬಾಲಿವುಡ್ ಚಿತ್ರ ‘ಧೂಮ್ 2’’ದಿಂದ ಪ್ರಭಾವಿತರಾಗಿ ಇಲ್ಲಿನ ರಾಷ್ಟ್ರೀಯ ಕರಕುಶಲ ಮತ್ತು ಕೈಮಗ್ಗ ವಸ್ತು ಸಂಗ್ರಹಾಲಯದಿಂದ ಎರಡು ಕೋಟಿ ರೂ. ಬೆಲೆಬಾಳುವ 16 ಪ್ರಾಚೀನ ಪಶ್ಮಿಮಿನಾ ಶಾಲುಗಳನ್ನು ಇತ್ತೀಚೆಗೆ ಕದ್ದೊಯ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಿನಯ್ ಪರ್ಮಾರ್ (28), ತರುಣ್ ಹರ್ವೋದಿಯ (25) ಹಾಗೂ ಮೊಹಮ್ಮದ್ ಆದಿಲ್ ಶೇಖ್ (40) ಎಂದು ಗುರುತಿಸಲಾಗಿದೆ.

ವಸ್ತು ಸಂಗ್ರಹಾಲಯದಲ್ಲಿನ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು ಅರಿತಿದ್ದ ಈ ಮೂವರು ಅದರ ಲಾಭ ಪಡೆದು ಈ ಕಳ್ಳತನಕ್ಕೆ ಕೈ ಹಾಕಿದ್ದರೆನ್ನಲಾಗಿದೆ. ಆರೋಪಿ ಆದಿಲ್ ಶೇಖ್ ನನ್ನು ದಿಲ್ಲಿಯ ಓಖ್ಲಾ ಪ್ರದೇಶದಿಂದ ಗುರುವಾರ ಬಂಧಿಸಿದ್ದರೆ, ಇನ್ನಿಬ್ಬರನ್ನು ಎರಡು ವಾರಗಳ ಹಿಂದೆಯೇ ಕೊಲ್ಕತ್ತಾದಲ್ಲಿ ಪೊಲೀಸರು ಬಂಧಿಸಿದ್ದರು.

ವಸ್ತು ಸಂಗ್ರಹಾಲಯದಲ್ಲಿ ಕಳ್ಳತನ ನಡೆದ ಬಗ್ಗೆ ಅಲ್ಲಿನ ಅಧಿಕಾರಿಯೊಬ್ಬರು ಅಕ್ಟೋಬರ್ 31ರಂದು ದೂರು ದಾಖಲಿಸಿದ್ದರು. ಈಗ ವಶಪಡಿಸಿಕೊಳ್ಳಲಾಗಿರುವ ಕಾಶ್ಮೀರಿ ಶಾಲುಗಳು ಸುಮಾರು 200ರಿಂದ 250 ವರ್ಷಗಳಷ್ಟು ಹಳೆಯದಾಗಿವೆ. ಕಳ್ಳತನ ನಡೆಯುವುದಕ್ಕಿಂತ ಮುಂಚೆ ಇಬ್ಬರು ಆರೋಪಿಗಳು ಆಗಾಗ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ಪ್ರಾಚೀನ ವಸ್ತುಗಳ ಬಗ್ಗೆ ಸಂಶೋಧನೆ ನಡೆಸುವವರಂತೆ ಪೋಸು ನೀಡುತ್ತಿದ್ದರೆನ್ನಲಾಗಿದೆ. ಅಕ್ಟೋಬರ್ 22ರಂದು ಅವರಲ್ಲೊಬ್ಬ ಮ್ಯೂಸಿಯಂ ಒಳಗಡೆಯೇ ಅಡಗಿಕೊಂಡಿದ್ದು ನಂತರ ಅದು ಮುಚ್ಚಿದ ನಂತರ ಬೊಬ್ಬೆ ಹೊಡೆದಿದ್ದನೆನ್ನಲಾಗಿದೆ. ಅಲ್ಲಿಂದ ಆತನನ್ನು ರಕ್ಷಿಸಿದ ನಂತರ ಆತ ತನ್ನ ಸಹವರ್ತಿಗಳಿಗೆ ಅಲ್ಲಿನ ಸಿಸಿಟಿವಿ ಕ್ಯಾಮರಾಗಳು ಕಾರ್ಯಾಚರಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದ.

ಬಂಧಿತರು ವಿಚಾರಣೆಯ ವೇಳೆ ತಾವು ಧೂಮ್-2 ಚಿತ್ರದಿಂದ ಪ್ರಭಾವಿತರಾಗಿ ಈ ಕೃತ್ಯವೆಸಗಿದ್ದಾಗಿ ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News