ರಾಜಕಾರಣದ ದಿಕ್ಕು ಬದಲಿಸಿದ ಲಾಲಾ ಲಜಪತ್ ರಾಯ್

Update: 2017-11-24 18:24 GMT

ಭಾಗ-2

1877ರಲ್ಲಿ ದಯಾನಂದ ಸರಸ್ವತಿಯವರು ಲಾಹೋರ್‌ನಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದ್ದರು. ಅದು ಹಿಂದೂ ಧರ್ಮದಲ್ಲಿದ್ದ ಕೆಲವು ಭ್ರಷ್ಟಕಾರಕ ಪ್ರಭಾವಗಳನ್ನು ಕಿತ್ತೆಸೆದು, ಯಾವ ವೇದ ಸಂಸ್ಕೃತಿಯ ಸತ್ವವು ಹಿಂದೂ ಧರ್ಮದ ನಿಜವಾದ ರೂಪವನ್ನು ಪ್ರತಿನಿಧಿಸುತ್ತದೆಂದು ತಾನು ತಿಳಿದಿತ್ತೋ ಆ ಸತ್ವವನ್ನು ಅರಸುವ ಮೂಲಕ ಹಿಂದೂ ಧರ್ಮವನ್ನು ಆಧುನೀಕರಿಸಲು ಪ್ರಯತ್ನಿಸಿತು. ಇಂತಹ ಚಳವಳಿಯನ್ನು ಹಮ್ಮಿಕೊಂಡ ಒಂದು ಸಂಘಟನೆಯಾಗಿದ್ದ ಆರ್ಯ ಸಮಾಜಕ್ಕೆ ಯಾವುದೇ ರಾಜಕೀಯ ಆಕಾಂಕ್ಷೆಗಳಿರಲಿಲ್ಲವಾದರೂ, ಅದರ ಸಿದ್ಧಾಂತವು ರಾಷ್ಟ್ರೀಯತೆಯ ಒಂದು ನಿರ್ದಿಷ್ಟ ಹಿಂದೂಕೃತ ರೂಪವನ್ನು ಪ್ರೇರೇಪಿಸಿತು. ಈ ಹಿಂದೂಕೃತ ರೂಪವು ರಾಷ್ಟ್ರೀಯವಾದಿ ಹೋರಾಟವೆಂದರೆ ಕಳೆದುಹೋದ, ಗತಕಾಲದ ಹಿಂದೂ ವೈಭವದ ಪುನರುತ್ಥಾನ ಅಥವಾ ಪುನರುಜ್ಜೀವನವೆಂದು ಕಲ್ಪಿಸಿಕೊಂಡಿತು. ಆರ್ಯ ಸಮಾಜದ ಸೈದ್ಧಾಂತಿಕ ಚೌಕಟ್ಟಿನಲ್ಲಿ, ಮುಸ್ಲಿಮರನ್ನು ವಿದೇಶೀಯರೆಂದು ಪರಿಗಣಿಸಿ, ಹಿಂದೂ ನಾಗರಿಕತೆಯ ಪತನಕ್ಕೆ ಅವರೇ ಜವಾಬ್ದಾರರೆಂದು ತಿಳಿಯಲಾಯಿತು. ಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಕೋಮು ಅಸ್ಮಿತೆಗಳ ಬಿಸಿ ಏರಿದ ವಾತಾವರಣದಲ್ಲಿ ಮತ್ತು ರಾಜಕಾರಣದ ಕೋಮುಗೊಳಿಸುವಿಕೆಯ ಪರಿಸರದಲ್ಲಿ ಆರ್ಯ ಸಮಾಜದ ಕೆಲವು ಸದಸ್ಯರು ‘ರಂಗೀಲಾರಸೂಲ್’ ‘ರಿಸಾಲಾ ವರ್ತಮಾನ್’ನಂತಹ ಪುಸ್ತಕಗಳನ್ನು ಬರೆಯುವ ಮೂಲಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಕೋಮು ರಾಜಕಾರಣದ ಕಾವು ಇನ್ನಷ್ಟು ಏರುವಂತೆ ಮಾಡಿದರು.

ಲಾಲಾ ಲಜಪತ್ ರಾಯ್‌ವರ ರಾಜಕೀಯ ಜೀವನ ಆರಂಭವಾದದ್ದು ಆರ್ಯ ಸಮಾಜದೊಂದಿಗೆ, ಆರ್ಯ ಸಮಾಜದ ನೆರಳಲ್ಲಿ. ಪದವಿ ಪಡೆದ ಬಳಿಕ ಸ್ವಲ್ಪವೇ ಸಮಯದೊಳಗಾಗಿ, ಅವರು ದಯಾನಂದ ಸರಸ್ವತಿಯವರ ಸಿದ್ಧಾಂತದಿಂದ, ಫಿಲಾಸಫಿಯಿಂದ ಪ್ರಭಾವಿತರಾದರು. ಬ್ರಿಟಿಷರಿಂದ ಸ್ವಾತಂತ್ರ ಪಡೆಯಲು ವೈಭವಪೂರ್ಣವಾದ ಹಿಂದೂ ಚೈತನ್ಯ (ಸ್ಪಿರಿಟ್)ದ ಪುನರುತ್ಥಾನ ಆವಶ್ಯಕವೆಂದು ಅವರು ತಿಳಿದರು. ನಿಜವಾಗಿ, ಮುಹಮ್ಮದ್ ಆಲಿ ಜಿನ್ನಾ ಅಥವಾ ಮುಸ್ಲಿಂ ಲೀಗ್ ಹಿಂದೂಗಳು ಮತ್ತು ಮುಸ್ಲಿಮರು ಭಿನ್ನ ಭಿನ್ನವಾದ ಪ್ರತ್ಯೇಕ ರಾಷ್ಟ್ರಗಳು ಮತ್ತು ಈ ಎರಡು ಸಮುದಾಯಗಳನ್ನು ಪ್ರತ್ಯೇಕಿಸಲು ಭಾರತವು ಭಾರತ ಮತ್ತು ಪಾಕಿಸ್ತಾನವೆಂಬ ಎರಡು ದೇಶಗಳಾಗಿ ವಿಭಜನೆಯಾಗಬೇಕೆಂದು ಹೇಳುವ ಸಾಕಷ್ಟು ಮೊದಲೇ, ಈ ವಾದವನ್ನು ಮಂಡಿಸಿದ್ದವರು ರಾಯ್‌ರವರು. ಅವರಿಗೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಎಂಬುದು ತನ್ನ ರಾಜಕೀಯ ಸಿದ್ಧಾಂತದ ಒಂದು ವಿಸ್ತರಣೆಯಾಗಿತ್ತು. ಅವರ ಮನಸ್ಸಿನಲ್ಲಿ ಹಿಂದೂ ಪುನರುತ್ಥಾನ ಮತ್ತು ಭಾರತದ ಸ್ವಾತಂತ್ರದ ನಡುವೆ ವಿಭಾಜಕ ಗೆರೆ ಇರಲಿಲ್ಲ. ಇವೆರಡು ಪ್ರತ್ಯೇಕ ಘಟಕಗಳಾಗಿರಲಿಲ್ಲ.

ತನ್ನ ಶಿಕ್ಷಣದ ರಾಷ್ಟ್ರೀಕರಣ ಕಾರ್ಯಕ್ರಮದ ಅಂಗವಾಗಿ ರಾಯ್ 1920ರ ದಶಕದ ಆದಿ ಭಾಗದಲ್ಲಿ ಲಾಹೋರ್‌ನಲ್ಲಿ ನ್ಯಾಶನಲ್ ಕಾಲೇಜ್‌ಸ್ಥಾಪಿಸಿದರು. ಭಗತ್ ಸಿಂಗ್ ತನ್ನ ಕಾಮ್ರೆಡ್‌ಗಳಾದ ಸುಖ್‌ದೇವ್, ಯಶ್‌ಪಾಲ್, ರಾಮಕೃಷ್ಣ ಮತ್ತು ಭಗವತಿ ಚರಣ್ ವೋರಾರನ್ನು ಭೇಟಿಯಾದದ್ದು ಇದೇ ಕಾಲೇಜಿನಲ್ಲಿ. ಅವರೆಲ್ಲ ಒಟ್ಟಾಗಿ ‘ನವ್‌ಜವಾನ್ ಭಾರತ್ ಸಭಾ’ ಎಂಬ ಮಾರ್ಕ್ಸಿಸ್ಟ್ ಕ್ರಾಂತಿಕಾರಿ ಪಕ್ಷವನ್ನು ಸ್ಥಾಪಿಸಿದರು.

ಬ್ರಿಟಿಷ್ ಸಂಸ್ಥೆಗಳಿಂದ ದೂರ ಉಳಿಯುತ್ತಿದ್ದ ಯುವ ಜನತೆಯ ಆವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಲಾಲಾ ಲಜಪತ್ ರಾಯ್ ಸ್ಥಾಪಿಸಿದ್ದ ನ್ಯಾಶನಲ್ ಕಾಲೇಜ್, ಲಾಹೋರ್‌ನ ಬ್ರಾಡ್‌ಲಾಫ್ ಹಾಲ್‌ನಲ್ಲಿತ್ತು.

ಭಗತ್‌ಸಿಂಗ್ ಮತ್ತು ನೆಹರೂ

ಲಾಲಾ ಲಜಪತ್‌ರಾಯ್‌ರವರ ರಾಜಕೀಯ ವಿಶ್ವದೃಷ್ಟಿಗೆ ಮೂಲಭೂತವಾಗಿ ವಿರೋಧಿಯಾಗಿದ್ದರೂ, ಭಗತ್‌ಸಿಂಗ್ ಮತ್ತು ಅವರ ಕಾಮ್ರೆಡ್‌ಗಳು ರಾಯ್‌ರವರ ಸಾವನ್ನು ರಾಷ್ಟ್ರೀಯ ಗೌರವದ ಮೇಲೆ ಒಂದು ಕಪ್ಪು ಚುಕ್ಕೆ ಎಂದು ತಿಳಿದರು. ರಾಯ್‌ರವರ ಸಾವಿನ ಒಂದು ತಿಂಗಳ ನಂತರ ಅವರು ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಜೆ.ಪಿ. ಸಾಂಡರ್ಸ್‌ನನ್ನು ಕೊಲೆ ಮಾಡಿದರು. ಯಾವ ಪೊಲೀಸ್ ಕಾರ್ಯಾಚರಣೆಯಲ್ಲಿ ಕಾಲೇಜಿನ ಸಮೀಪವೇ, ರಾಯ್‌ರವರಿಗೆ ಗಾಯವಾಗಿತ್ತೋ, ಆ ಕಾರ್ಯಾಚರಣೆಗೆ ಆಜ್ಞೆ ಮಾಡಿದ್ದ ಪೊಲೀಸ್ ಅಧಿಕಾರಿ ಜೇಮ್ಸ್ ಎ ಸ್ಕಾಟ್ ಎಂದು ತಪ್ಪಾಗಿ ತಿಳಿದು ಅವರು ಜೆ.ಪಿ. ಸಾಂಡರ್ಸ್‌ನನ್ನು ಕೊಲೆ ಮಾಡಿದ್ದರು.

ಭಗತ್‌ಸಿಂಗ್‌ರ ವಿಚಾರಣೆಗಳಲ್ಲಿ ಅವರು ರಾಜಕೀಯ ಪ್ರಚಾರದಲ್ಲಿ ತೊಡಗುತ್ತಿದ್ದರು. ಆ ಮೂಲಕ ಒಂದು ರಾಜಕೀಯ ಶಕ್ತಿಯಾಗಿ ಭಗತ್‌ಸಿಂಗ್ ಆಗಮಿಸಿದಾಗ, ಅವರ ಆಗಮನವು ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಒಂದು ಸ್ಥಿತ್ಯಂತರವನ್ನು ದಾಖಲಿಸಿತು. ಅದು ರಾಜಕೀಯ ಬದಲಾವಣೆಯ ಒಂದು ಮೈಲಿಗಲ್ಲಾಯಿತು.

ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನಲ್ಲಿ ಯುವಕನಾದ ಜವಾಹರಲಾಲ್ ನೆಹರೂ ಮುಂದೆ ಬರುವುದಕ್ಕೂ ಭಗತ್ ಸಿಂಗ್‌ನ ಜನಪ್ರಿಯತೆ ಹಾದಿ ಮಾಡಿಕೊಟ್ಟಿತು. ಓರ್ವ ಕಟ್ಟಾ ಸಮಾಜವಾದಿಯಾಗಿದ್ದ ನೆಹರೂರವರಿಗೆ ಭಾರತದ ಭವಿಷ್ಯವು ಹಿಂದೂ ಪುನರುತ್ಥಾನದ ಜತೆ ತಳಕುಹಾಕಿಕೊಂಡಿರಲಿಲ್ಲ. ಬದಲಾಗಿ ಸಮಾಜವಾದಿ ತತ್ವಗಳಿಗೆ ಆತುಕೊಳ್ಳುವುದರಲ್ಲೇ ಅವರಿಗೆ ಭಾರತದ ಭವಿಷ್ಯವಿತ್ತು. ಹಿಂದೂ ಪುನರುತ್ಥಾನವಾದಿಗಳು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಒಂದು ಭಾಗವಾಗಿ ಉಳಿದಿದ್ದರಾದರೂ, ಅದು ಅನುಕೂಲಕ್ಕಾಗಿ ಮಾಡಿಕೊಂಡ ಒಂದು ವಿವಾಹದಂತಿತ್ತು. ಹಾಗಾಗಿ, ಹಿಂದೂ ಪುನರುತ್ಥಾನವಾದಿಗಳ ಗತಕಾಲದ ಹಿಂದೂ ವೈಭವವನ್ನು ಭಾರತದ ಸ್ವಾತಂತ್ರ ಹೋರಾಟದೊಂದಿಗೆ ಬೆಸೆಯುವ ಅವರ ಉದ್ದೇಶ ಕೈಗೂಡಲಿಲ್ಲ. ನೆಹರೂ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಭಾವೀ ನಾಯಕರಾದ ಬಳಿಕ ಅವರ ಸಮಾಜವಾದಿ ದರ್ಶನ (ವಿಶನ್), ತತ್ವ, ಸಿದ್ಧಾಂತಗಳು ಭಾರತದ ರಾಷ್ಟ್ರೀಯ ಹೋರಾಟದ ರಾಜಕೀಯ ದೃಷ್ಟಿಕೋನದ ಮೇಲೆ, ರಾಜಕೀಯ ನಿಲುವಿನ ಮೇಲೆ ಪ್ರಭಾವ ಬೀರಿದವು.

ಭಾರತದ ನಗರಗಳ ಹಾಗೂ ಹಳ್ಳಿಗಳ ಬೀದಿ ಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಭಗತ್‌ಸಿಂಗ್ ಮೂಲಕ ಮಾರ್ಕ್ಸಿಸ್ಟ್ ಕ್ರಾಂತಿಕಾರಿ ವಿಚಾರಗಳು ಪ್ರಸಾರವಾದವು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉತ್ತುಂಗ ಶಿಖರದತ್ತ ನೆಹರೂರವರ ನಡಿಗೆ ಮತ್ತು ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಭಾವೀ ನಾಯಕನಾಗಿ ಮೂಡಿಬಂದ ಅವರ ವರ್ಚಸ್ಸಿನೊಂದಿಗೆ ತಳಕುಹಾಕಿಕೊಂಡಿರುವ ಈ ಘಟನೆಗಳನ್ನು ತೀವ್ರವಾಗಿಸಿದ್ದು, ಈ ಘಟನೆಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಿದ್ದು ರಾಯ್‌ಯವರ ಮರಣ.

ಕೃಪೆ: scroll.in

Writer - ಹಾರೂನ್ ಖಾಲಿದ್

contributor

Editor - ಹಾರೂನ್ ಖಾಲಿದ್

contributor

Similar News

ಜಗದಗಲ
ಜಗ ದಗಲ