ಸಿರಿಯ ಆಂತರಿಕ ಯುದ್ಧ: 2011ರಿಂದ 3.4 ಲಕ್ಷ ಸಾವು

Update: 2017-11-25 16:55 GMT

ಬೆರೂತ್, ನ. 25: 2011ರಲ್ಲಿ ಸಿರಿಯದಲ್ಲಿ ಆಂತರಿಕ ಯುದ್ಧ ಸ್ಫೋಟಗೊಂಡಂದಿನಿಂದ 3.40 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಹಾಗೂ ಇದರಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ನಾಗರಿಕರು ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಶುಕ್ರವಾರ ಹೇಳಿದೆ.

ಸಿರಿಯ ಸಂಘರ್ಷವನ್ನು ನಿವಾರಿಸಲು ಪ್ರಬಲ ರಾಷ್ಟ್ರಗಳು ಪ್ರಯತ್ನಗಳನ್ನು ನಡೆಸುತ್ತಿರುವಂತೆಯೇ, ಯುದ್ಧಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಏರುತ್ತಿದೆ.

2011ರ ಮಾರ್ಚ್ ಮಧ್ಯ ಭಾಗದಲ್ಲಿ ಸರಕಾರ ವಿರೋಧಿ ಬಂಡಾಯ ಸ್ಫೋಟಿಸಿದಂದಿನಿಂದ ಈ ತಿಂಗಳ ಆರಂಭದವರೆಗೆ ಸಿರಿಯದಲ್ಲಿ ಸಂಭವಿಸಿದ 3,43,511 ಸಾವುಗಳನ್ನು ತಾನು ದಾಖಲಿಸಿರುವುದಾಗಿ ವೀಕ್ಷಣಾಲಯ ತಿಳಿಸಿದೆ.

ಈ ಪೈಕಿ, 19,000 ಮಕ್ಕಳು ಮತ್ತು 12,000 ಮಹಿಳೆಯರು ಸೇರಿದಂತೆ 1,02,618 ಮಂದಿ ನಾಗರಿಕರು.

1,19,000ಕ್ಕೂ ಅಧಿಕ ಮಂದಿ ಸರಕಾರದ ಪರ ಯೋಧರು ಹತರಾಗಿದ್ದಾರೆ. ಈ ಪೈಕಿ, 62,000 ಸಿರಿಯ ಸೈನಿಕರು, ಸಾವಿರಾರು ಮಂದಿ ಸರಕಾರಕ್ಕೆ ನಿಷ್ಠೆ ಹೊಂದಿರುವ ಹೋರಾಟಗಾರರು ಮತ್ತು 1,556 ಮಂದಿ ಲೆಬನಾನ್‌ನ ಹಿಜ್ಬುಲ್ಲಾ ಹೋರಾಟಗಾರರು ಸೇರಿದ್ದಾರೆ.

ಬಂಡುಕೋರ ಗುಂಪುಗಳು ಹಾಗೂ ಅಮೆರಿಕ ಬೆಂಬಲಿತ ಸಿರಿಯನ್ ಡೆಮಾಕ್ರಟಿಕ್ ಪಡೆಗಳ 59,000 ಮಂದಿ ಹತರಾಗಿದ್ದಾರೆ ಎಂದು ವೀಕ್ಷಣಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News