×
Ad

ಈಜಿಪ್ಟ್ ಮಸೀದಿ ದಾಳಿ: ಮೃತರ ಸಂಖ್ಯೆ 305ಕ್ಕೆ

Update: 2017-11-25 22:44 IST

ಕೈರೋ (ಈಜಿಪ್ಟ್), ನ. 25: ಈಜಿಪ್ಟ್‌ನ ಉತ್ತರ ಸಿನೈ ರಾಜ್ಯದ ಮಸೀದಿಯೊಂದರಲ್ಲಿ ಭಯೋತ್ಪಾದಕರು ಶುಕ್ರವಾರ ನಡೆಸಿದ ಭೀಕರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 305ಕ್ಕೇರಿದೆ. ಮೃತರಲ್ಲಿ 27 ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ 128 ಮಂದಿ ಗಾಯಗೊಂಡಿದ್ದಾರೆ.

ಇದು ಈಜಿಪ್ಟ್‌ನ ಆಧುನಿಕ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

ಈ ದಾಳಿಗೆ ಯಾವುದೇ ಗುಂಪು ಹೊಣೆ ವಹಿಸಿಕೊಂಡಿಲ್ಲ.

ಉತ್ತರ ಸಿನೈನ ಪ್ರಮುಖ ನಗರ ಅಲ್ ಆರಿಶ್‌ನ ಪಶ್ಚಿಮದ ಬಿರ್ ಅಲ್-ಆಬಿದ್‌ನಲ್ಲಿರುವ ಅಲ್-ರೌಡಾ ಮಸೀದಿಯಲ್ಲಿ ಜನರು ಪ್ರಾರ್ಥನೆಗಳನ್ನು ಮುಗಿಸುವ ಹೊತ್ತಿನಲ್ಲಿ ಈ ದಾಳಿ ನಡೆದಿದೆ.

ಸುಮಾರು 40 ಬಂದೂಕುಧಾರಿಗಳು ಮಸೀದಿಯ ಹೊರಗೆ ಜೀಪ್‌ಗಳಲ್ಲಿ ಕಾದು ನಿಂತಿದ್ದು ತಪ್ಪಿಸಿಕೊಂಡು ಓಡುತ್ತಿದ್ದ ಜನರ ಮೇಲೆ ವಿವಿಧ ದಿಕ್ಕುಗಳಿಂದ ಗುಂಡು ಹಾರಿಸಿದರು.

ದಾಳಿ ನಡೆದ ಗಂಟೆಗಳ ಬಳಿಕ, ಭದ್ರತಾ ಪಡೆಗಳು ಬಿರ್ ಅಲ್ ಆಬಿದ್‌ನ ಸುತ್ತಲಿರುವ ಗುಡ್ಡಗಾಡು ಪ್ರದೇಶಗಳ ಮೇಲೆ ವಾಯು ದಾಳಿಗಳನ್ನು ನಡೆಸಿದವು ಎಂದು ಸೇನೆ ಹೇಳಿದೆ. ದಾಳಿಯ ವೇಳೆ ವಾಹನಗಳು ಮತ್ತು ಭಯೋತ್ಪಾದಕರ ಅಡಗುದಾಣಗಳನ್ನು ನಾಶಪಡಿಸಲಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News