ಭಾರತೀಯ ಸಂವಿಧಾನ ಒಂದು ಬಹುದೊಡ್ಡ ಜೀವಪರ ಕಾಳಜಿ

Update: 2017-11-25 18:21 GMT

1947 ಜೂನ್ 30ರಂದು ರಾಜ್ಯಾಂಗ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರಪ್ರಸಾದ್ ಮುಂಬೈನ ಪ್ರಧಾನಿ ಜೆ.ಬಿ. ಖೇರ್ ರವರಿಗೆ ಪತ್ರಬರೆದು ಪಾಕಿಸ್ತಾನ ವಿಭಜನೆಯಿಂದ ಅಂಬೇಡ್ಕರರು ಸಂವಿಧಾನ ಸಭೆಯ ಸದಸ್ಯತ್ವ ರದ್ದಾಗಿದ್ದು ನೀವು ಯಾವುದೇ ಕಾರಣ ನೀಡದೆ 1947 ಜುಲೈ 30ರೊಳಗೆ ರಾಜ್ಯಾಂಗ ಸಭೆೆಗೆ ಅವರನ್ನು ಮುಂಬೈ ಕ್ಷೇತ್ರದಿಂದ ಆಯ್ಕೆ ಮಾಡಿ ಕಳುಹಿಸಬೇಕೆಂದು ಪ್ರಾರ್ಥಿಸಿಕೊಂಡರು.

1947 ಡಿ. 17ರಂದು ಡಾ.ಅಂಬೇಡ್ಕರರು ಮಂಡಿಸಿದ ತಮ್ಮ ಅಖಂಡ ಭಾರತ ಪರಿಕಲ್ಪನೆ ಅವರು ರಾಜ್ಯಾಂಗವನ್ನು ರಚಿಸುವ ಅನಿವಾರ್ಯ ತೆಯನ್ನು ಸೃಷ್ಟಿಮಾಡಿತು. ಅಂದು ಅವರು ರಾಜ್ಯಾಂಗ ಪೂರ್ವಸಭೆ ಯಲ್ಲಿ ನೀಡಿದ ರಾಷ್ಟ್ರೀಯ ಸಮಗ್ರ ಕಲ್ಪನೆ ಮತ್ತು ರಾಜ್ಯಾಂಗ ರಚಿಸಿದ ನಂತರ ನ.25 1949 ರಲ್ಲಿ ಮಂಡಿಸಿದ ಐಕ್ಯತೆಯ ಕಲ್ಪನೆ ಗಳು 66 ವರ್ಷಗಳು ಕಳೆದುಹೋಗಿದ್ದರೂ ಇಂಡಿಯಾ ದೇಶಕ್ಕೆ ಪ್ರಸ್ತುತ ವೆನಿಸಿಬಿಟ್ಟಿವೆ. ಅದೇನೆಂದರೆ ರಾಷ್ಟ್ರಗಳ ಭವಿಷ್ಯವನ್ನು ನಿರ್ಧರಿಸುವಾಗ ಜನರ ಘನತೆ, ನಾಯಕರ ಪ್ರತಿಷ್ಠೆ, ಪಕ್ಷಗಳ ಗೌರವಗಳು ಯಾವ ಲೆಕ್ಕಕ್ಕೂ ಬರಬಾರದು. ದೇಶದ ಗೌರವವೇ ಅತ್ಯಂತ ಮಹತ್ವದಾಗಿರಬೇಕು. ಮೊತ್ತಮೊದಲು ಮತ್ತು ಕಟ್ಟಕಡೆಗೂ ನಾವು ಭಾರತೀಯರು, ಯೋಗ್ಯ ಸನ್ನಿವೇಶಗಳು ಕೂಡಿಬಂದಾಗ ಭಾರತ ವಿಶ್ವದ ಶಕ್ತಿಯಾಗುವುದನ್ನು ಯಾರೂ ತಡೆಯಲಾರರು ಎಂಬ ರಾಷ್ಟ್ರ ಪ್ರೇಮವು ರಾಜ್ಯಾಂಗ ಸಭೆೆ ಯಲ್ಲಿ ತಲ್ಲಣ ಉಂಟುಮಾಡಿತು. ಆಗಸ್ಟ್ಟ್ 29 ಅವರನ್ನು ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿತು.

2 ವರ್ಷ 11 ತಿಂಗಳು 18 ದಿನಗಳ 63,96,729 ರೂ. ವೆಚ್ಚದಲ್ಲಿ 11 ಬೈಠಕ್‌ಗಳಾಗಿ 2,473 ತಿದ್ದುಪಡಿಗಳನ್ನು ಒಳಗೊಂಡ 7,635 ತಿದ್ದುಪಡಿಗಳ ವಿಮರ್ಶೆಗಳನ್ನು ಸ್ವೀಕರಿಸಿ 7ಜನರ ಸದಸ್ಯ ಪೀಠವು ಸಂವಿಧಾನವನ್ನು ಸಂಸತ್ತಿನ ಕೈಗಿಟ್ಟಾಗ ಜನವರಿ 26. 1950ರಂದು ಭಾರತವು ನಿಜವಾಗಿ ಸ್ವತಂತ್ರವಾಯಿತೆಂದು ಘೋಷಿಸಲ್ಪಟ್ಟಿತು.

ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಜಾತಿ, ಧರ್ಮ, ವಿವಿಧ ಭಾಷೆ, ವರ್ಣ, ಸಂಸ್ಕಾರಗಳನ್ನು ಒಂದು ಹಿಡಿಯಾಗಿಸಿ ಸ್ವಾತಂತ್ರ ಸಮಾನತೆ, ಸಹೋದರತ್ವದ ತಳಪಾಯದ ಮೇಲೆ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸಿ ಎಲ್ಲಾ ತಾರತಮ್ಯವನ್ನು ಮರೆತು ಛಿ ಠಿಛಿ ಛಿಟಟ್ಝಛಿ ಟ್ಛ ಐ್ಞಜ್ಞಿ ಎಂದು ಹೆಮ್ಮೆಯಿಂದ ಕರೆದುಕೊಂಡಿದ್ದು ಒಂದು ಶ್ಲಾಘನೀಯ ಮತ್ತು ಭಾರತೀಯ ಬೌದ್ಧಿಕತೆಯ ಅನಾವರಣ. ಆದರೆ 66 ವರ್ಷಗಳ ನಂತರವೂ ಭಾರತದ ಆಂತರಿಕ ಸಮಸ್ಯೆಗಳ ಅನಾವರಣ ಸಂವಿಧಾನ ನೀಡಿದ ವೌಲ್ಯಗಳಿಗೆ ಅಪವಾದವಾಗಿವೆ. ಇದೆಲ್ಲ ತಿಳಿದೇ ಡಾ.ಅಂಬೇಡ್ಕರರು ನ.25ರ 1949 ರಂದು ಮುಂದಿನ ತಲೆಮಾರಿಗೆ ಸೂಚನೆ ನೀಡಿದರು.

‘‘ನಾವು ಸ್ವತಂತ್ರವನ್ನೇನೋ ಗಳಿಸಿದ್ದೇವೆ ಆದರೆ ಅದನ್ನು ಉಳಿಸಿ ಕೊಳ್ಳುವ ಆತಂಕವಿದೆ. ಭಾರತವು ಪೂರ್ವದಲ್ಲಿ ಸ್ವತಂತ್ರವಾಗಿಯೇ ಇದ್ದು ನಮ್ಮಳಗಿನ ದ್ರೋಹಿಗಳಿಂದ ಪರತಂತ್ರವಾಯಿತು. ಈಗಲೂ ಕೂಡ ನಮ್ಮೋಳಗೆ ಜಾತಿ ಪಂಥಗಳ ಹಳೆಯ ದ್ವೇಷದಿಂದ ಅಲ್ಲಿ ಅವುಗಳ ಜೊತೆಗೆ ಪರಸ್ಪರ ದ್ವೇಷಕಾರುವ ರಾಜಕೀಯ ಪಕ್ಷಗಳು ಆಂತರಿಕ ವೈರಿಗಳನ್ನು ಸೃಷ್ಟಿಸುವ ಸೂಚನೆಯಿದೆ. ಭಾರತೀಯ ಜನ ಸಮುದಾಯಕ್ಕೆ ದೇಶಕ್ಕಿಂತ ಯಾವಾಗ ಪಕ್ಷ ಮುಖ್ಯವಾಗುವುದೋ ಆಗ ಮತ್ತೊಮ್ಮೆ ಪರತಂತ್ರಗೊಳ್ಳುವ ಆತಂಕವಿದೆ. ಅಂತಹ ದುರ್ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಅಂತಹ ಸಂದರ್ಭ ಬಂದರೆ ನಮ್ಮ ರಕ್ತದ ಕೊನೆಯ ಹನಿ ಇರುವವರೆಗೂ ಸ್ವತಂತ್ರದ ಸಂಕಲ್ಪ ನಮ್ಮ ಗುರಿಯಾಗಿರಬೇಕು.

ಪ್ರಜಾಪ್ರಭುತ್ವದಲ್ಲಿ ದೇಶದ ಶಕ್ತಿಯನ್ನು ಒಬ್ಬರ ಕೈಯಲ್ಲಿ ಇಡಬಾರದು. ಅತ್ಯಂತ ಉತ್ತಮ ಶ್ರೇಷ್ಠ ಎನಿಸಿಕೊಳ್ಳುವ ವ್ಯಕ್ತಿಗೂ ನಮ್ಮೆಲ್ಲ ಸ್ವಾತಂತ್ರವನ್ನು ಒಪ್ಪಿಸಬಾರದು. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತದೆ. ಡೆನಿಯಲ್ ಓ ಕೆವಲ್ ಹೇಳಿದಂತೆ. ಯಾವುದೇ ವ್ಯಕ್ತಿ ಕೃತಜ್ಞತೆ ಹೆಸರಿನಲ್ಲಿ ತನ್ನ ಪ್ರತಿಷ್ಠೆಯನ್ನು ಪಣಕ್ಕೆ ಇಡುವುದಿಲ್ಲ. ಯಾವುದೇ ಸ್ತ್ರೀ ಕೃತಜ್ಞತೆಗೆ ತನ್ನ ಶೀಲವನ್ನು ಕಳೆದುಕೊ ಳ್ಳುವುದಿಲ್ಲ ಮತ್ತು ಯಾವುದೇ ರಾಷ್ಟ್ರ ತನ್ನ ಸ್ವಾತಂತ್ರವನ್ನು ಕೃತಜ್ಞತೆಗೆ ಬಿಟ್ಟು ಕೊಡುವುದಿಲ್ಲ. ಈ ಎಚ್ಚರಿಕೆಯ ಮಾತು ಬೇರೆಲ್ಲ ದೇಶಗಳಿಗಿಂತಭಾರತಕ್ಕೆ ಹೆಚ್ಚು ಅನ್ವಯಿಸುತ್ತದೆ. ಭಕ್ತಿ ಮತ್ತು ವ್ಯಕ್ತಿ ಪೂಜೆ ಪ್ರಭಾವ ಇಲ್ಲಿನ ರಾಜಕೀಯದಲ್ಲಿರುವಷ್ಟು ಜಗತ್ತಿನ ಇನ್ಯಾವ ದೇಶದಲ್ಲಿಯೂ ಇಲ್ಲ. ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿ ಪೂಜೆಯೂ ಅವನತಿಯ ಮಾರ್ಗವಾಗಿ ಕಟ್ಟಕಡೆಯಲ್ಲಿ ಈ ಕೃತಜ್ಞತೆ ಭಾವ ನಿರಂಕುಶತೆಗೆ ಈ ದೇಶವನ್ನು ಒಯ್ಯುತ್ತದೆ.

ಇಲ್ಲಿ ನಾವು ಗಮನಿಸಬೇಕಾದ್ದು ರಾಜಕೀಯ ಪ್ರಭುತ್ವದಿಂದಲೇ ಮಾತ್ರ ದೇಶ ಅಭಿವೃದ್ಧಿಯಾಗುವುದಿಲ್ಲ. ಸಾಂಸ್ಕೃತಿಕ ಪರಿಚಲನೆಯ ಜೊತೆಗೆ ಸಾಮಾಜಿಕ ಪ್ರಭುತ್ವ ಏರ್ಪಡಿಸಬೇಕು. ಸಾಮಾಜಿಕ ಪ್ರಭುತ್ವದ ಅರ್ಥವೆಂದರೆ ಸ್ವಾತಂತ್ರ ಸಮಾನತೆ ಮತ್ತು ಬಂಧುತ್ವದಿಂದ ಕೂಡಿದ ಜೀವನ ಶೈಲಿ. ಸ್ವಾತಂತ್ರ ಸಮಾನತೆ ಮತ್ತು ಬಂಧುತ್ವ ಒಂದೊಂದೂ ಪ್ರತ್ಯೇಕ ಎಂಬಂತೆ ನಾವೆಂದೂ ನೋಡಬಾರದು. ಇವು ಮೂರು ಸಹ ಒಂದಾಗಿ ಇರಬೇಕು. ಸ್ವಾತಂತ್ರ ವಿಲ್ಲದ ಸಮಾನತೆ, ಸಮಾನತೆ ಇಲ್ಲದ ಸ್ವಾತಂತ್ರ ಈ ಎರಡೂ ಇಲ್ಲದ ಬಂಧುತ್ವ ಪ್ರಜಾಪ್ರಭುತ್ವದ ಮಾರಕ ಬೆಳವಣಿಗೆ’’.

ಡಾ. ಅಂಬೇಡ್ಕರರು ನೀಡಿದ ಈ ಸಂದೇಶಗಳು ಇವತ್ತಿನ ಭಾರತೀಯ ಪರಿಸ್ಥಿತಿಗೆ ಶುದ್ಧೀಕರಣಗಳಾಗಿವೆ. ರಾಷ್ಟ್ರೀಯ ಪಕ್ಷಗಳಲ್ಲಿನ ಕಾದಾಟ, ವಿಭಿನ್ನ ಆಲೋಚನೆ, ಆಂತರಿಕ ಕಲಹಗಳು, ದೇಶದ ಜನತೆಯನ್ನು ಜಾತಿ ಧರ್ಮದ ಆಧಾರದ ಮೇಲೆ ಒಡೆಯುತ್ತಿರುವ ಈ ಪರಿಸ್ಥಿತಿ ಯಲ್ಲಿ ಸರಕಾರಗಳು ಚಿಂತಿಸಿ ಆತ್ಮಾವಲೋಕಿಸಿಕೊಳ್ಳಬೇಕಿದೆ. ರಾಜಕೀಯಕೇಂದ್ರಗಳಾಗುತ್ತಿರುವ ಮಠ, ಮಂದಿರ, ಮಸೀದಿ, ಚರ್ಚ್‌ಗಳು, ಅದರ ಮುಖ್ಯಸ್ಥರುಗಳಿಗೆ ಪ್ರಜಾಪ್ರಭುತ್ವದ ಒಳ ಹೂರಣಗಳ ಅರಿವಿನ ದೀಕ್ಷೆಯಾಗಬೇಕಿದೆ. ಸಮಾಜದೊಳಗಿನ ಜಾತಿ, ಧರ್ಮ, ಮತಗಳ ವಿಷ ಬೀಜಗಳು ನಾಶವಾಗಿ ಸಮಾನತೆಯ, ಸಾರ್ಥಕತೆಯ ಬಂಧುತ್ವದ ಆಶಾಕಿರಣಗಳು ಒಡಮೂಡಬೇಕಿದೆ. ಇಲ್ಲದಿದ್ದಲ್ಲಿ ಸಂವಿಧಾನ ಜಾರಿಯಾಗಿ 66 ವರ್ಷಗಳು ಕಳೆದಿದ್ದರೂ ಮತಭೇದ, ಅಸ್ಪಶ್ಯತೆ, ಶ್ರೇಷ್ಠ-ಕನಿಷ್ಠ ಬಡವ-ಬಲ್ಲಿದ, ಲಿಂಗತಾರತಮ್ಯ, ಬಡತನ, ನಿರುದ್ಯೋಗದಿಂದ ಭಾರತ ನರಳಬೇಕಿದೆ. ಈ ಗಣರಾಜ್ಯದಂದು ನಾವು ಬದಲಾಗಬೇಕಾದ ಪರಿಸ್ಥಿತಿ ಇದೆ.

 ಭಾರತದ ಜನತೆಗೆ ನಾವು ಒಂದು ರಾಷ್ಟ್ರವೆನಿಸುವುದು ತುಂಬಾ ಕಷ್ಟಕರ. 21ನೇ ಶತಮಾನದಲ್ಲೂ ಸಾಮಾಜಿಕ ಮತ್ತು ಮನಶಾಸ್ತ್ರೀಯ ಅರ್ಥದಲ್ಲಿ ನಾವು ಒಂದು ರಾಷ್ಟ್ರವಾಗಿಲ್ಲ. ಇಲ್ಲಿ ಜಾತಿಗಳಿವೆ. ಜಾತಿಯು ರಾಷ್ಟ್ರವಿರೋಧಿಯಾಗಿದೆ. ಸಾಮಾಜಿಕ ಜೀವನದಲ್ಲಿ ಅದು ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ. ಜಾತಿ-ಜಾತಿಗಳಲ್ಲಿ ಮತ್ಸರ ದ್ವೇಷ ಹುಟ್ಟುಹಾಕುತ್ತದೆ. ಹೀಗಾಗಿ ಜಾತಿ ರಾಷ್ಟ್ರವಿರೋಧಿಯಾಗಿದೆ. ಅಷ್ಟಾದರೂ ನಮಗೆ ಒಂದು ರಾಷ್ಟ್ರವನ್ನು ರೂಪಿಸಬೇಕಾದಲ್ಲಿ ಈ ಎಲ್ಲಾ ಕಠಿಣತೆಗಳನ್ನು ಗೆಲ್ಲಬೇಕಾಗುತ್ತದೆ. ಕಾರಣ ಒಂದು ರಾಷ್ಟ್ರ ವಾದಾಗಲೇ ಬಂಧುತ್ವದ ಭಾವನೆ ಬರುತ್ತದೆ. ಬಂಧುತ್ವವಿಲ್ಲದ ಸಮಾನತೆ ಮತ್ತು ಸ್ವಾತಂತ್ರವೆನ್ನುವುದು ಕೇವಲ ತೋರಿಕೆಯದು ಮಾತ್ರವಾಗಬಹುದು. ಒಡೆದ ಮನೆ ಹೆಚ್ಚು ದಿನಗಳ ಕಾಲ ಉಳಿಯದು ಎಂದು ಅಬ್ರಹಾಂ ಲಿಂಕನನ ಮಾತನ್ನು ನಾವು ನೆನಪಿಸಬೇಕಾಗುತ್ತದೆ. ಭಾರತವು ಸಮಾನತೆಯ ಉಸಿರಾಡುವಂತೆ ಕಟ್ಟುವುದು ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಡಾ. ಅಂಬೇಡ್ಕರ್‌ರ ಪ್ರಾರಂಭಿಕ ಭಾಷಣವು ರಾಜ್ಯಾಂಗದಲ್ಲಿ ಅವರನ್ನು ಉಳಿಸುವಂತೆ ಮಾಡಿದ ಹಾಗೆಯೇಅವರ ಕೊನೆಯ ರಾಷ್ಟ್ರಭ್ಯುದಯದ ಭಾಷಣವು ಸಂವಿಧಾನವನ್ನು ಉಳಿಸುವುದು ನಮ್ಮ ಜವಾಬ್ದಾರಿ.

ಇತ್ತೀಚೆಗೆ ಸಂವಿಧಾನದ ಬಗ್ಗೆ ಅಸಂಬದ್ದ ಹೇಳಿಕೆಯೊಂದರ ಬಗ್ಗೆ ಮಾತನಾಡಬೇಕಾಗಿದೆ. ನನ್ನ ದೃಷ್ಟಿಯಲ್ಲಿ ಇದು ಅಮಾನ ವೀಯ ಕ್ರೌರ್ಯದ ಅನಾವರಣವಾಗಿದೆ. ಜೀವಪರ ಕಾಳಜಿಯ ವಿರುದ್ಧದ ಧ್ವನಿಯಾಗಿದೆ ಮತ್ತೆ ಈ ನೆಲದಲ್ಲಿ ಅಸಮಾನತೆಯನ್ನು ಬಯಸುವ ಮನಸ್ಥಿತಿ ಯಾಗಿದೆ. ಮತ್ತೆ ಶೋಷಣೆಗೆ ಮರುಹುಟ್ಟು ನೀಡುವ ಮನಸ್ಥಿತಿಯೊಂದು ಈ ಹೇಳಿಕೆ ಯನ್ನು ಪುಷ್ಟಿಕರಿಸುತ್ತದೆ. ಈ ನೆಲದೊಳಗೆ ನಾವು ಬದುಕುಳಿಯಲು ನಮ್ಮ ನೆರವಿಗೆ ಒಂದು ಅಸ್ತ್ರಬೇಕಿದೆ ಆ ಮಹಾನ್ ಅಸ್ತ್ರವೇ ಈ ಸಂವಿಧಾನ. ಎಂಬ ಸಾಮಾನ್ಯ ತಿಳುವಳಿಕೆ ಮಾನವೀಯ ಪ್ರಜ್ಞೆ ನಮ್ಮೆಲ್ಲರಿಗೂ ಅತ್ಯಗತ್ಯ.

ಈ ನೆಲದಲ್ಲಿ ಸಂವಿಧಾನ ಅತ್ಯಧಿಕ ರಕ್ಷಣೆ ನೀಡಿದ್ದು ಎಲ್ಲ ಸಮುದಾಯಗಳ ಶೋಷಿತರಿಗೆ. ಅದರಲ್ಲೂ ದೊಡ್ಡಸಮುದಾಯಗಳ ದೌರ್ಜನ್ಯದಿಂದ ಈ ನೆಲದ ಸಣ್ಣ ಸಮುದಾಯಗಳಿಂದ ರಕ್ಷಣೆ ನೀಡ ಲ್ಪಟ್ಟಿದ್ದು, ಇಂದು ದೊಡ್ಡಸಮುದಾಯಗಳು ತಮ್ಮಿಂದ ಶೋಷಿಸಲ್ಪಟ್ಟ ಸಣ್ಣ ಸಮುದಾಯಗಳ ಮೇಲೆ ಪ್ರತಿಕಾರಕ್ಕೆ ನಿಂತಿದ್ದಾರೆ.

ಜೀವಪರ ಕಾಳಜಿಯನ್ನೆ ತನ್ನ ಅಂತರಂಗದಲ್ಲಿ ಅಡಗಿಸಿಕೊಂಡಿ ರುವ ಸಂವಿಧಾನದ ಬಗ್ಗೆ ಸಾರ್ವ ಜನಿಕವಾಗಿ ಮಾತನಾಡಿ ಅಗೌರವಿಸುವುದು ಎಷ್ಟು ಸರಿ?. ಸಂವಿಧಾನವನ್ನು ಅಗೌರವದಿಂದ ನೋಡಿದರೆ ಅದು ದೇಶವನ್ನು ಅಗೌರವಿಸಿದಂತೆ ಅಲ್ಲವೇ? ನಮ್ಮ ಬದುಕಿಗೆ ಒಂದುನೆರವು ಬೇಕು. ಆ ಬಹುದೊಡ್ಡ ನೆರವೇ ಸಂವಿಧಾನ ಎಂಬ ಸಾಮಾನ್ಯ ಪ್ರಜ್ಞೆ ನಮಗಿರಬೇಕಲ್ಲವೇ. ನಮತೆ ಸೋದರತೆ ಭ್ರಾತೃತ್ವವು ಬದುಕಿನ ಬಹುದೊಡ್ಡ ತತ್ವಗಳಾದ ಮೇಲೆ ಈ ನೆಲದಲ್ಲಿ ಈ ತತ್ವಗಳನ್ನು ಪ್ರತಿಸ್ಥಾಪಿಸಿದ ಸಂವಿಧಾನ ಈ ತತ್ವಗಳ ಜೊತೆಗೆ ನಮ್ಮ ಬದುಕಿನ ಬಹುದೊಡ್ಡ ಅಂಗವಲ್ಲವೇ.

Writer - ಮಲ್ಕುಂಡಿ ಮಹಾದೇವಸ್ವಾಮಿ

contributor

Editor - ಮಲ್ಕುಂಡಿ ಮಹಾದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ