ರಣಜಿ ಟ್ರೋಫಿ ಪಂದ್ಯ: ಕುಸಿದ ವಿನಯ್ ಪಡೆಗೆ ಮಯಾಂಕ್-ಪಾಂಡೆ ನೆರವು

Update: 2017-11-25 18:26 GMT

ಹೊಸದಿಲ್ಲಿ, ನ.25: ಮಯಾಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ ಅವರ ಆಕರ್ಷಕ ಶತಕದ ಸಹಾಯದಿಂದ ಕರ್ನಾಟಕ ತಂಡ ಇಲ್ಲಿ ಆರಂಭಗೊಂಡ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಉತ್ತಮ ಮೊತ್ತ ದಾಖಲಿಸಿದೆ.

ಇಲ್ಲಿನ ಕರ್ನಲ್ ಸಿಂಗ್ ಸ್ಟೇಡಿಯಂನಲ್ಲಿ ಆರಂಭಗೊಂಡ ರಣಜಿ ಪಂದ್ಯದಲ್ಲಿ ದಿನದಾಟದಂತ್ಯಕ್ಕೆ 89.2 ಓವರ್‌ಗಳಲ್ಲಿ 6ವಿಕೆಟ್ ನಷ್ಟದಲ್ಲಿ 355 ರನ್ ಗಳಿಸಿದೆ.

ವಿಕೆಟ್ ಕೀಪರ್ ಸಿಎಂ ಗೌತಮ್ 25 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ದ್ವಿಶತಕದ ಕಡೆಗೆ ಹೆಜ್ಜೆ ಇರಿಸಿದ್ದ ಅಗರವಾಲ್ 173 ರನ್ ಗಳಿಸಿ ವಿನೀತ್ ಧುಲಾಪ್ ಎಸೆತದಲ್ಲಿ ಮಹೇಶ್ ರಾವತ್‌ಗೆ ಕ್ಯಾಚ್ ನೀಡಿ ನಿರ್ಗಮಿಸುತ್ತಿದ್ದಂತೆ ಮೊದಲ ದಿನದ ಆಟ ಕೊನೆಗೊಂಡಿತು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ದಾಂಡಿಗ ರವಿಕುಮಾರ ಸಮರ್ಥ(0) ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕರಣ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಸಮರ್ಥ್‌ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

8 ಓವರ್‌ಗಳಲ್ಲಿ ತಂಡದ ಸ್ಕೋರ್ 19ಕ್ಕೆ ತಲುಪಿದಾಗ ತಂಡದ ಮೂರು ವಿಕೆಟ್‌ಗಳು ಪತನಗೊಂಡಿತು. ಡೆಗಾ ನಿಶ್ಚಲ್(4) ಮತ್ತು ಕರುಣ್ ನಾಯರ್(10) ಅವರು ಮನೀಷ್ ರಾವ್ ಓವರ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಮನೀಷ್ ಪಾಂಡೆ ನಾಲ್ಕನೇ ವಿಕೆಟ್‌ಗೆ 265 ರನ್‌ಗಳ ಜೊತೆಯಾಟ ನೀಡಿದರು. ಪಾಂಡೆ ಶತಕ (108) ದಾಖಲಿಸಿ ನಿರ್ಗಮಿಸಿದರು.ಅವರು ಔಟಾದ ಬಳಿಕ ಸ್ಟುವರ್ಟ್ ಬಿನ್ನಿ(23) ಅವರು 5ನೆ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡಿದರು. ರೈಲ್ವೇಸ್ ತಂಡದ ಮನೀಷ್ ರಾವ್ 65ಕ್ಕೆ 2, ಕರಣ್ ಠಾಕೂರ್ ವಿನೀತ್ ಧುಲಾಪ್, ಅಂಬಿಕೇಶ್ವರ ಮಿಶ್ರಾ, ವಿದ್ಯಾಧರ್ ಕಾಮತ್ ತಲಾ 1 ವಿಕೆಟ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್ ವಿವರ

ಕರ್ನಾಟಕ 89.2 ಓವರ್‌ಗಳಲ್ಲಿ 355/6( ಮಯಾಂಕ್ ಅಗರವಾಲ್ 173, ಮನೀಷ್ ಪಾಂಡೆ 108; ಮನೀಷ್ ರಾವ್ 65ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News