‘ಮನ್ ಕಿ ಬಾತ್’ನಲ್ಲಿ ವಿಕಲಾಂಗ ಬಾಲಕನಿಗೆ ಶಹಬ್ಬಾಸ್ ಎಂದ ಪ್ರಧಾನಿ
ಹೊಸದಿಲ್ಲಿ, ನ.26: ತನ್ನ ಗ್ರಾಮವನ್ನು ಬಯಲುಶೌಚ ಮುಕ್ತ ಮಾಡುವ ಜವಾಬ್ದಾರಿಯನ್ನು ಹೊತ್ತು ಅದರಲ್ಲಿ ಯಶಸ್ವಿಯಾದ 8 ವರ್ಷ ವಿಕಲಾಂಗ ಬಾಲಕನಿಗೆ ಪ್ರಧಾನಿ ಮೋದಿ ತನ್ನ 38ನೆ ಮನ್ ಕಿ ಬಾತ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಕುಮ್ಹಾರಿ ಗ್ರಾಮದವನಾದ ತುಶಾರ್ ತನ್ನ ಗ್ರಾಮವನ್ನು ಬಯಲುಶೌಚ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿದ್ದ. ಈ ಗ್ರಾಮದ ಬಹುತೇಕ ಜನರು ಕೃಷಿ ಮತ್ತು ಕೂಲಿ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಹಿಂದಿನಿಂದಲೂ ಇಲ್ಲಿ ಬಯಲುಶೌಚ ಸಾಮಾನ್ಯವಾಗಿತ್ತು.
ಈ ಬಗ್ಗೆ ಅರಿವು ಮೂಡಿಸಿದ ತುಶಾರ್ ಆಂದೋಲನವೊಂದನ್ನು ಆರಂಭಿಸಿದ. ಹುಟ್ಟಿನಿಂದಲೇ ಮೂಗ ಹಾಗು ಕಿವುಡನಾದ ಈತ ಬೆಳಗ್ಗೆ 5 ಗಂಟೆಗೆ ಎದ್ದು ವಿಶಲ್ ಮೂಲಕ ಗ್ರಾಮಸ್ಥರನ್ನು ಎಚ್ಚರಿಸುತ್ತಿದ್ದ. ವಿಶಲ್ ಅನ್ನೇ ತನ್ನ ಆಯುಧವನ್ನಾಗಿ ಮಾಡಿಕೊಂಡಿದ್ದ. ಪ್ರತಿಯೊಂದು ಮನೆಗೆ ತೆರಳಿ ವಿಶಲ್ ಹಾಕಿ ಅಥವಾ ಬಾಗಿಲು ಬಡಿದು ಜನರನ್ನು ಎಚ್ಚರಿಸುವ ಮೂಲಕ ಬಯಲುಶೌಚದ ಬಗ್ಗೆಯೂ ಎಚ್ಚರಿಸುವ ಪ್ರಯತ್ನ ಮಾಡಿದ್ದ.
ಪ್ರತಿದಿನ 30ರಿಂದ 40 ಮನೆಗಳಿಗೆ ಭೇಟಿ ನೀಡುತ್ತಿದ್ದ ತುಶಾರ್ ಯಾರಾದರೂ ಬಯಲುಶೌಚ ಮಾಡುತ್ತಿದ್ದರೆ ಅವರು ಅದನ್ನು ನಿಲ್ಲಿಸುವವರೆಗೂ ವಿಶಲ್ ಹೊಡೆಯುತ್ತಿದ್ದ. ಕುಮ್ಹಾರಿ ಗ್ರಾಮವನ್ನು ಬಯಲುಶೌಚ ಮುಕ್ತ ಮಾಡಲು ತುಶಾರ್ ಮಾಡುತ್ತಿರುವ ಆಂದೋಲನ ಹಾಗು ಆತನ ಧೈರ್ಯಕ್ಕೆ ಪ್ರಧಾನಿ ಮೋದಿ ಶಹಬ್ಬಾಸ್ ಎಂದಿದ್ದಾರೆ. ತುಶಾರ್ ನ ಕೆಲಸವು ಗ್ರಾಮಸ್ಥರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು ಹಾಗು ಗ್ರಾಮವು ಬಯಲುಶೌಚ ಮುಕ್ತವಾಗುತ್ತದೆ ಎನ್ನುವ ಭರವಸೆ ಮೂಡಿಸಿತು ಎಂದು ಪ್ರಧಾನಿ ಹೇಳಿದ್ದಾರೆ.
ತುಶಾರ್ ನ ಈ ಕಾರ್ಯಕ್ಕೆ ಜಿಲ್ಲಾಡಳಿತ ಕೂಡ ಕೈಜೋಡಿಸಿತ್ತು. 2017ರ ಜನವರಿ 26ರಂದು ಕುಮ್ಹಾರಿ ಗ್ರಾಮವನ್ನು ‘ಬಯಲುಶೌಚ ಮುಕ್ತ ಗ್ರಾಮ’ ಎಂದು ಘೋಷಿಸಲಾಯಿತು.