ಕೇರಳದ ಶಾಲಾ ಕಾಲೇಜುಗಳಲ್ಲಿ ದಲಿತ ಶಿಕ್ಷಕರು ಹೊರಗೆ

Update: 2017-11-26 18:31 GMT

ಮುಂದುವರಿದ ಸಮುದಾಯಗಳಲ್ಲಿರುವ ಬಡವರಿಗೆ ನೌಕರಿಗಳನ್ನು ಮೀಸಲಿಡುವ ಕೇರಳ ಸರಕಾರದ ನಿರ್ಧಾರ, ಆಳುವ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕೆಲವು ಶಾಸಕರೂ ಸೇರಿದಂತೆ ಹಿಂದುಳಿದ ವರ್ಗಗಳ ನಾಯಕರ ಹಾಗೂ ಬುದ್ಧಿಜೀವಿಗಳ ಅಕ್ರೋಶಕ್ಕೆ ಕಾರಣವಾಗಿದೆ. ಅವರು ಸರಕಾರದ ಈ ಮೀಸಲಾತಿ ಕ್ರಮವನ್ನು ಒಂದು ಹಿಮ್ಮುಖ ಹೆಜ್ಜೆ ಎಂದು ಟೀಕಿಸಿದ್ದಾರೆ ಮತ್ತು ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ಶಿಕ್ಷಕರಿಗೆ ಹುದ್ದೆಗಳನ್ನು ಮೀಸಲಿಡಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಮೊತ್ತಮೊದಲಾಗಿ ಈಡೇರಿಸದಿರುವುದಕ್ಕಾಗಿ ಸರಕಾರವನ್ನು ಟೀಕಿಸಿದ್ದಾರೆ.
ನಾರ್ ಸರ್ವಿಸ್ ಸೊಸೈಟಿಯಂತಹ ಮೇಲು ಜಾತಿಯ ಹಿಂದೂ ಸಂಘಟನೆಗಳು ಸರಕಾರದ ಧೈರ್ಯದ ನಿರ್ಧಾರ ವನ್ನು ಬೆಂಬಲಿಸಿವೆ. ಅದೇನಿದ್ದರೂ ಈ ನಿರ್ಧಾರವನ್ನು ಅನುಷ್ಠಾನಿಸಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇ ಕಾಗುತ್ತದೆ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಸರಕಾರವು ಈ ತಿದ್ದುಪಡಿ ತರುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ಮೀಸಲಾತಿಯಿಲ್ಲ

ಕೇರಳ ಸರಕಾರವು ದಲಿತರಿಗೆ ಸರಕಾರಿ ನೌಕರಿಗಳಲ್ಲಿ ಶೇ.10 ಮೀಸಲಾತಿ ನೀಡಿದೆ. ಪರಿಣಾಮವಾಗಿ, ಸರಕಾರ ನಡೆಸುವ ಕಾಲೇಜುಗಳಲ್ಲಿರುವ 2,335 ಶಿಕ್ಷಕರಲ್ಲಿ 298 ಮಂದಿ ದಲಿತರು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರವೇ ಶಿಕ್ಷಕರ ವೇತನ ಹಾಗೂ ನಿರ್ವಹಣಾ ಅನುದಾನ ನೀಡುತ್ತದಾದರೂ, ಅವುಗಳು ಅಲ್ಲಿ ಮೀಸಲಾತಿ ನೀತಿಯನ್ನು ಪಾಲಿಸಬೇಕಾಗಿಲ್ಲ. ಕೇರಳದಲ್ಲಿ 238 ಕಲಾ ಹಾಗೂ ವಿಜ್ಞಾನ ಕಾಲೇಜುಗಳಿವೆ. ಇವುಗಳಲ್ಲಿ ಕೇವಲ 58 ಕಾಲೇಜುಗಳು ಮಾತ್ರ ಸರಕಾರಿ ಕಾಲೇಜುಗಳು. ಉಳಿದ ಕಾಲೇಜುಗಳಲ್ಲಿ 120 ಕಾಲೇಜುಗಳು ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಂಘಟನೆಗಳಿಂದ ನಡೆಸಲ್ಪಡುವವುಗಳು, ಮತ್ತು 60 ಕಾಲೇಜುಗಳು ನಾರ್ ಸರ್ವಿಸ್ ಸೊಸೈಟಿ, ಶ್ರೀ ನಾರಾಯಣ ಟ್ರಸ್ಟ್ ಹಾಗೂ ದೇವಸ್ವಂ ಬೋರ್ಡ್‌ನಿಂದ ನಡೆಸಲ್ಪಡುವ ಕಾಲೇಜುಗಳು. ಸೊಸೈಟಿಯು ಮೇಲು ಜಾತಿಯ ಹಿಂದೂ ನಾರ್‌ಗಳನ್ನು ಪ್ರತಿನಿಧಿಸಿದರೆ, ಟ್ರಸ್ಟ್ ಹಿಂದುಳಿದ ಈಳವ ಸಮುದಾಯವನ್ನು ಪ್ರತಿನಿಧಿಸುತ್ತದೆ. ದೇವಸ್ವಂ ಬೋರ್ಡ್ ರಾಜ್ಯದ ದೇವಸ್ಥಾನಗಳ ಆಡಳಿತ ನಡೆಸುವ ಒಂದು ಸರಕಾರಿ ಸಂಸ್ಥೆಯಾಗಿದೆ.

ಅದೇ ರೀತಿಯಾಗಿ, ರಾಜ್ಯದ ಬಹುಪಾಲು ಶಾಲೆಗಳು ಖಾಸಗಿ ಆಡಳಿತಕ್ಕೊಳಪಟ್ಟಿವೆ. ನ್ಯಾಶನಲ್ ಯುನಿವರ್ಸಿಟಿ ಆಫ್ ಎಜುಕೇಶನ್ ಪ್ಲಾನಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಶನ್ 2016ರಲ್ಲಿ ನಡೆಸಿದ ಒಂದು ಸಮಿಕ್ಷೆಯ ಪ್ರಕಾರ, ಕೇರಳದ ಒಟ್ಟು ಶಾಲೆಗಳ ಕೇವಲ ಶೇ. 27.31ರಷ್ಟು ಶಾಲೆಗಳು ಮಾತ್ರ ಶಿಕ್ಷಣ ಇಲಾಖೆಯ ಅಧೀನದಲ್ಲಿವೆೆ; ಉಳಿದವುಗಳು ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳು. ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ದಲಿತ ಶಿಕ್ಷಕರ ಸಂಖ್ಯೆ ತೀರಾ ಕಡಿಮೆ ಇದೆ. ಅಲ್ಲಿರುವ 7,199 ಶಿಕ್ಷಕರಲ್ಲಿ ಕೇವಲ 11 ಶಿಕ್ಷಕರು ಮಾತ್ರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದವರು, ಅಂದರೆ ಒಟ್ಟು ಶಿಕ್ಷಕರಲ್ಲಿ ಕೇವಲ 0.15% ಮಾತ್ರ ದಲಿತರು. ಶಾಲೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗಿಲ್ಲ. ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ರುವ ಶಿಕ್ಷಕರಲ್ಲಿ ಶೇ.5.31ರಷ್ಟು ಶಿಕ್ಷಕರು, ಅಂದರೆ ಒಟ್ಟು 2,65,644 ಶಿಕ್ಷಕರಲ್ಲಿ ಕೇವಲ 12,883 ಮಂದಿ ಶಿಕ್ಷಕರು ಮಾತ್ರ ದಲಿತ ಶಿಕ್ಷಕರು.

ಬದಲಾವಣೆಗೆ ತಡೆ ಎಲ್ಲ ಸರಕಾರಿ ಅನುದಾನಿತ, ಅಲ್ಪಸಂಖ್ಯಾತರಲ್ಲದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಬೋಧಕ ಮತ್ತು ಬೋಧಕೇತರ ನೌಕರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಖಾತರಿಯಾಗಿ ನೀಡುವಂತೆ ತಮ್ಮ ತಮ್ಮ ಆಧಿನಿಯಮಗಳಲ್ಲಿ ತಿದ್ದುಪಡಿ ಮಾಡಿಕೊಳ್ಳುವಂತೆ ವಿಶ್ವವಿದ್ಯಾನಿಲಯಗಳಿಗೆ ಕೇರಳ ಹೈಕೋರ್ಟ್ 2015ರ ಮೇ ತಿಂಗಳಲ್ಲಿ ನಿರ್ದೇಶನ ನೀಡಿತು. ನ್ಯಾಯಾಲಯವು ಪ್ರಕರಣವನ್ನು ಆಲಿಸುತ್ತಿರುವಾಗ, ವಿಶ್ವವಿದ್ಯಾನಿಲಯ ಅನುದಾನ ಆಯೋಗವು ನ್ಯಾಯಾಲಯದಲ್ಲಿ ಅಫಿದಾವಿತ್ ಸಲ್ಲಿಸಿ ರಾಜ್ಯದ ವಿಶ್ವವಿದ್ಯಾನಿಲಯಗಳು ಮತ್ತು ಅವುಗಳ ಅಧೀನಕ್ಕೊಳಪಟ್ಟ, ಅಫಿಲಿಯೇಟೆಡ್ ಕಾಲೇಜುಗಳು ರಾಜ್ಯಗಳ ಮೀಸಲಾತಿ ನೀತಿಯನ್ನು ಅನುಸರಿಸಬೇಕೆಂದು ಹೇಳಿತು. ಆದರೆ 2015ರ ಜೂನ್ ತಿಂಗಳಲ್ಲಿ ಖಾಸಗಿ ಆಡಳಿತ ಮಂಡಳಿಗಳು ಆ ಆಜ್ಞೆಯ ವಿರುದ್ಧ ತಡೆಯಾಜ್ಞೆ ತಂದದ್ದರಿಂದ ಹೈಕೋರ್ಟ್ ಆಜ್ಞೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಪ್ರಕರಣವು ನ್ಯಾಯಾಲಯದಲ್ಲಿರುವ ವರೆಗೆ ಸರಕಾರ ಏನು ಮಾಡಲೂ ಸಾಧ್ಯವಿಲ್ಲವೆಂದು ಶಿಕ್ಷಣ ಸಚಿವ ರವೀಂದ್ರನಾಥ್ ಹೇಳಿದ್ದಾರೆ. ಶಿಕ್ಷಕ ಹುದ್ದೆಗಳಲ್ಲಿ ದಲಿತರಿಗೆ ನೌಕರಿ ನೀಡಲು ಸರಕಾರ ಬದ್ಧವಾಗಿದೆ; ಆದರೆ ಈಗ ನಿರ್ಧಾರ ತೆಗೆದುಕೊಳ್ಳುವುದು ನ್ಯಾಯಾಲಯದ ಕೈಯಲ್ಲಿದೆ ಎಂದಿದ್ದಾರೆ ಅವರು.

ನಾರ್ ಸರ್ವಿಸ್ ಸೊಸೈಟಿ (ಎಂಇಎಸ್) ಮತ್ತು ಶ್ರೀ ನಾರಾಯಣ ಟ್ರಸ್ಟ್ 2015ರ ಕೋರ್ಟಿನ ತೀರ್ಪಿನ ವಿರುದ್ಧ ತಡೆಯಾಜ್ಞೆ ಪಡೆದಿದ್ದವು.

18 ಕಲಾ ಹಾಗೂ ವಿಜ್ಞಾನ ಕಾಲೇಜುಗಳನ್ನು ನಡೆಸುತ್ತಿರುವ ಮುಸ್ಲಿಂ ಎಜುಕೇಶನ್ ಸೊಸೈಟಿ ತಾನು ಎಸ್ಸಿ, ಎಸ್ಟಿಗಳಿಗೆ ಶೇ.10ರಷ್ಟು ಮೀಸಲಾತಿ ನೀಡಲು ಸಿದ್ಧ ಎಂದು ಹೇಳಿದೆ. ಅದು ನ್ಯಾಯಾಲಯದ ಆಜ್ಞೆಯನ್ನು ಪ್ರಶ್ನಿಸಿಲ್ಲ, ಎಂದಿದ್ದಾರೆ ಎಂಇಎಸ್‌ನ ಅಧ್ಯಕ್ಷ ಫಝಲ್ ಗಫೂರ್.

ಪ್ರತಿಭೆಗೆ ಕೊರತೆ ಇಲ್ಲ

ನೌಕರಿಗಾಗಿ ದಲಿತರು ಮೀಸಲಾತಿ ಬೇಕೆಂದು 2010ರಿಂದ ಚಳವಳಿ ನಡೆಸುತ್ತಿದ್ದಾರೆ. ಏಯ್ಡೆಡ್ ಸೆಕ್ಟರ್ ರಿಸರ್ವೇಶನ್ ಅಜಿಟೇಶನ್ ಕಮಿಟಿ ಎಂಬ ಬ್ಯಾನರ್‌ನ ಅಡಿಯಲ್ಲಿ ಅವರು ಸಂಘಟಿತ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ಸರಕಾರಗಳು ದಲಿತರಿಗೆ ನ್ಯಾಯ ಒದಗಿಸಲು ಈ ನಿಟ್ಟಿನಲ್ಲಿ ಏನನ್ನೂ ಮಾಡಿಲ್ಲ, ಎನ್ನುತ್ತಾರೆ ಕಮಿಟಿಯ ಕನ್ವೀನರ್ ಒ.ಪಿ.ರವೀಂದ್ರನ್. ಅವರ ಪ್ರಕಾರ ಸರಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಹುದ್ದೆಗಳಿಂದ ದಲಿತರನ್ನು ಹೇಗೆ ವ್ಯವಸ್ಥಿತವಾಗಿ ಹೊರಗಿಡಲಾಗಿದೆ ಎಂಬುದನ್ನು ಅಂಕಿಸಂಖ್ಯೆಗಳೇ ಹೇಳುತ್ತವೆ.

ಶಿಕ್ಷಕರ ಹುದ್ದೆಗಳಿಗೆ ದಲಿತ ಅಭ್ಯರ್ಥಿಗಳ ಕೊರತೆ ಇಲ್ಲ. 10,000ಕ್ಕಿಂತಲೂ ಹೆಚ್ಚು ದಲಿತರು ಶಿಕ್ಷಕರ ಹುದ್ದೆಗಳಿಗಾಗಿ ಕಾಯುತ್ತಿದ್ದಾರೆ. ಅವರಲ್ಲಿ 8,000 ಮಂದಿ ಈಗಾಗಲೇ ವಿಶ್ವವಿದ್ಯಾನಿಲಯ ಅನುದಾನ ಆಯೋಗ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
‘ಆ್ಯಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಫಾರ್ ವಿಮೆನ್ಸ್ ರೈಟ್ಸ್’ನ ಮ್ಯಾನೇಜರ್ ರೇಖಾರಾಜ್ ಹೇಳುವಂತೆ, ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ದಲಿತರ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಆದರೆ ಸಮಸ್ಯೆಯನ್ನು ಬಗೆಹರಿಸುವ ಕುರಿತು ಯಾರೂ ಚಿಂತಿತರಾಗಿಲ್ಲ.
ಒ.ಪಿ.ರವೀಂದ್ರನ್ ಹೇಳುವ ಪ್ರಕಾರ, ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಜನ ಇಷ್ಟರವರೆಗೆ 20,000ಕ್ಕೂ ಹೆಚ್ಚು ದಲಿತರ ನೌಕರಿ ಅವಕಾಶಗಳನ್ನು ಕಸಿದುಕೊಂಡಿದ್ದಾರೆ.
ಮುಂದುವರಿದ ಸಮುದಾಯಗಳಲ್ಲಿರುವ ಬಡವರಿಗೆ ಮೀಸಲಾತಿ ನೀಡುವ ಬಗ್ಗೆ ಹೇಳುವು ದಾದರೆ, ಕೇರಳದಲ್ಲಿ ಮೇಲ್ಜಾತಿಯ ಹಿಂದೂಗಳು ಮೀಸಲಾತಿಗಾಗಿ ಎಂದೂ ಬೀದಿಗಳಿದಿಲ್ಲ. ಆದರೆ ನಾವು ಒಂದು ಸಾಂವಿಧಾನಿಕ ಹಕ್ಕಿಗಾಗಿ ಆಗ್ರಹಿಸಿ ಹಲವಾರು ವರ್ಷಗಳಿಂದ ಬೀದಿಗಿಳಿದು ಹೋರಾಟ ನಡೆಸಿದ್ದೇವೆ. ಆದರೆ ಸರಕಾರ ನಮ್ಮ ಅಸ್ತಿತ್ವವನ್ನೇ ಕಡೆಗಣಿಸಿಟ್ಟಿದೆ ಎನ್ನುತ್ತಾರೆ ರವೀಂದ್ರನ್.

ಕೃಪೆ: scroll.in

Writer - ಟಿ.ಎ. ಅಮೀರುದ್ದೀನ್

contributor

Editor - ಟಿ.ಎ. ಅಮೀರುದ್ದೀನ್

contributor

Similar News

ಜಗದಗಲ
ಜಗ ದಗಲ